More

    ಸುಶಿಕ್ಷಿತರಲ್ಲೇ ಹೆಚ್ಚಿನ ಮೌಢ್ಯಾಚರಣೆ

    ಶಿವಮೊಗ್ಗ: ಶಿಕ್ಷಿತರಲ್ಲೇ ಹೆಚ್ಚಿನ ಮೌಢ್ಯಾಚರಣೆ, ದುರಾಸೆ ಪ್ರವೃತ್ತಿಗಳು, ಅಸಮಾನತೆಯ ಮನೋಭಾವನೆಗಳು ಹೆಚ್ಚುತ್ತಿವೆ. ಈ ಕಾಲಘಟ್ಟದಲ್ಲಿ ಪ್ರೊ. ಬಿ.ಕೃಷ್ಣಪ್ಪ ಅವರಂತಹ ಹೋರಾಟಗಾರರ ಅವಶ್ಯಕತೆಯಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

    ಕುವೆಂಪು ವಿವಿಯಲ್ಲಿ ಪ್ರೊ. ಬಿ.ಕೃಷ್ಣಪ್ಪ ಅಧ್ಯಯನ ಕೇಂದ್ರದಿಂದ ಗುರುವಾರ ಏರ್ಪಡಿಸಿದ್ದ ‘ದಲಿತ ಚಳವಳಿ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ದಲಿತರು ದೇವಾಲಯಗಳ ಬದಲಿಗೆ ಸಂಸತ್ತು, ಶಾಸನಸಭೆಗಳಿಗೆ ಪ್ರವೇಶಿಸಬೇಕೆಂದು ಪ್ರೊ. ಬಿ.ಕೃಷ್ಣಪ್ಪ ಹರಿಹರ, ಚಿತ್ರದುರ್ಗಗಳಲ್ಲಿ ನಡೆದ ಚಳವಳಿಗಳ ವೇದಿಕೆಯಲ್ಲೇ ಕರೆಕೊಟ್ಟಿದ್ದರು ಎಂದು ನೆನಪಿಸಿಕೊಂಡರು.

    ಡಿಎಸ್​ಎಸ್ ಶಿವಮೊಗ್ಗ ವಿಭಾಗದ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಮೀಸಲಾತಿ ಹೋರಾಟಗಳು, ಮುಕ್ತ ಅಭಿವ್ಯಕ್ತಿ, ಜನಸಾಮಾನ್ಯರ ಆಹಾರ ಮತ್ತು ವೈಯಕ್ತಿಕ ಆಯ್ಕೆಗಳನ್ನು ನಿಯಂತ್ರಿಸಲು ಹಲವು ಶಕ್ತಿಗಳು ಯತ್ನಿಸುತ್ತಿವೆ ಎಂದು ದೂರಿದರು.

    ಪ್ರೊ.ಬಿ.ಕೃಷ್ಣಪ್ಪ ಹಲವು ಸಾಮಾಜಿಕ ಹೋರಾಟಗಳನ್ನು ಸಂಘಟಿಸಿದವರು. ದಲಿತ ವ್ಯಕ್ತಿಗಳ ಕೊಲೆ ವಿರುದ್ಧ, ಅತ್ಯಾಚಾರಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಚಂದ್ರಗುತ್ತಿ ಬೆತ್ತಲೆ ಸೇವೆ ರದ್ದು, ಸಿದ್ಲಿಪುರದ ಭೂಹೋರಾಟ ಸೇರಿದಂತೆ ಅಸ್ಪೃಶ್ಯತೆ ವಿರುದ್ಧ ಸತತ ಹೋರಾಟ ನಡೆಸಿದ್ದರು ಎಂದು ಹೇಳಿದರು.

    ಪ್ರಭುತ್ವ ಇಂದು ದಲಿತರು ಹಾಗೂ ಜನಸಾಮಾನ್ಯರನ್ನು ದಮನಿಸುವ ಕೆಲಸಕ್ಕೆ ಮುಂದಾಗಿವೆ. ಪ್ರೊ.ಭಗವಾನ್​ರ ವಿಚಾರಗಳನ್ನು ವೈಚಾರಿಕವಾಗಿ ಎದುರಿಸದೇ ಮಸಿ ಬಳಿದು ಸಂವಿಧಾನಕ್ಕಿಂತ ಧರ್ಮ ಮುಖ್ಯ ಎನ್ನಲಾಗುತ್ತಿದೆ. ದಲಿತ ಅಸ್ಮಿತೆಯ ಮೂಲವಾದ ದಲಿತ ಪದವನ್ನೇ ಸರ್ಕಾರಿ ಪದಕೋಶದಿಂದ ತೆಗೆದು ಹಾಕುವ ಆದೇಶ ಹೊರಡಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ವಿಶ್ವವಿದ್ಯಾಲಯಗಳಲ್ಲಿರುವ ಪ್ರೊ.ಬಿ.ಕೃಷ್ಣಪ್ಪ, ಜಗಜೀವನ್​ರಾಂ, ಬಸವಣ್ಣ, ಅಂಬೇಡ್ಕರ್ ಅಧ್ಯಯನ ಪೀಠಗಳು ಕ್ಯಾಂಪಸ್​ನಿಂದ ಹೊರಬಂದು ಸಮಾಜದಲ್ಲಿನ ಹಲವು ಶೋಷಣೆಗಳ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

    ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಕಣ್ಣನ್, ಪ್ರೊ.ಬಿ.ಕೃಷ್ಣಪ್ಪ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಶಿವಾನಂದ ಕೆಳಗಿನಮನಿ, ಕನ್ನಡ ಭಾರತಿ ವಿಭಾಗದ ಪ್ರೊ. ಪ್ರಶಾಂತ ನಾಯಕ ಇತರರರಿದ್ದರು.

    ಸಮಾಜ ಉದ್ಧರಿಸಬೇಕಾದ ಸ್ವಾಮೀಜಿಗಳು ಮೀಸಲಾತಿ ಹೋರಾಟಗಳಿಗೆ ಇಳಿದಿದ್ದಾರೆ. ಸರ್ಕಾರವನ್ನು ಟೀಕಿಸಿದರೆ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗುತ್ತದೆ. ಯಾವ ಆಹಾರವನ್ನು ತಿನ್ನಬೇಕು, ಯಾರನ್ನು ಪ್ರೀತಿಸಬೇಕು ಎಂಬುದನ್ನು ಕಾನೂನುಗಳ ಮೂಲಕವೇ ನಿಯಂತ್ರಿಸಲಾಗುತ್ತಿದೆ. ಇದೆಲ್ಲವೂ ಕಳವಳಕಾರಿ ಸಂಗತಿ.

    | ಎಂ.ಗುರುಮೂರ್ತಿ, ಡಿಎಸ್​ಎಸ್ ಸಂಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts