More

    ದುರಸ್ತಿ ನೆಪದಲ್ಲಿ ಮೂಲೆ ಸೇರಿದ ಸಿಟಿ ಸ್ಕಾೃನ್

    ಲಿಂಗಸುಗೂರು: ಪಟ್ಟಣದಲ್ಲಿನ ತಾಲೂಕು ಆಸ್ಪತ್ರೆಯ ಸಿಟಿ ಸ್ಕಾೃನ್ ಯಂತ್ರಕ್ಕೆ ಗ್ರಹಣ ಹಿಡಿದಿದೆ. ಹೀಗಾಗಿ ರೋಗಿಗಳು ಪರದಾಡುವಂತಾಗಿದೆ.
    ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2013-14 ನೇ ಸಾಲಿನ ಮತ್ತು ತಾಪಂನ 2014-15 ನೇ ಸಾಲಿನ ಬಿಆರ್‌ಜಿಎಫ್ ಹಾಗೂ ಜಿಪಂನ 2 ಕೋಟಿ ರೂ.ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸಿಟಿ ಸ್ಕಾೃನ್ ಯಂತ್ರ ಸ್ಥಾಪಿಸಲಾಗಿತ್ತು. ಇದರಿಂದ ತಾಲೂಕು ಹಾಗೂ ನೆರೆಯ ತಾಲೂಕುಗಳ ರೋಗಿಗಳಿಗೆ ಅನುಕೂಲವಾಗಿತ್ತು.

    ಇದನ್ನೂ ಓದಿ: ಸಿಟಿ ಸ್ಕ್ಯಾನ್ ಗೆ ಹೆಚ್ಚು ದರ ಪಡೆದರೆ ಕಾನೂನು ಕ್ರಮ: ಡಿಎಚ್‌ಒ

    ಆದರೆ, 2022ರಲ್ಲಿ ಯಂತ್ರದ ಲಾರ್ಜ್ ಸೈಜ್ ಟ್ಯೂಬ್ ಸಮಸ್ಯೆಯಿಂದಾಗಿ ಸ್ಕಾೃನಿಂಗ್ ವರದಿ ಬರುತ್ತಿಲ್ಲ. ಸ್ಮಾಲ್ ಸೈಜ್ ಟ್ಯೂಬ್ ಸ್ಕಾೃನ್ ವರದಿ ಮಾತ್ರ ಬರುತ್ತಿದೆ. ಅದರ ಆಧಾರದ ಮೇಲೆ ವೈದ್ಯರು ರೋಗಿಗಳ ಸ್ಥಿತಿಗತಿ ಸಂಗ್ರಹಿಸುತ್ತಿದ್ದಾರೆ. ಹೆಚ್ಚಿನ ರೋಗ ತಪಾಸಣೆಗೆ ಯಂತ್ರದ ದುರಸ್ತಿ ಅಗತ್ಯವಿದೆ.

    ರೋಗಿಗಳ ಸಂಖ್ಯೆ ಹೆಚ್ಚಳದಿಂದಾಗಿ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದಕ್ಕೆ ತಕ್ಕಂತೆ 16 ರಿಂದ 32 ಸೈಜ್‌ನ ಹೊಸ ಆಧುನಿಕ ಮಾದರಿಯ ಸಿಟಿ ಸ್ಕಾೃನ್ ಯಂತ್ರದ ಅವಶ್ಯವಿದೆ. ಆಸ್ಪತ್ರೆಯ ಸಿಟಿ ಸ್ಕಾೃನ್ ಯಂತ್ರ ಕಾರ್ಯನಿರ್ವಹಣೆಗೆ ನಾಲ್ಕು ಜನ ತಂತ್ರಜ್ಞರ ಪೈಕಿ ಕೇವಲ ಒಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ.

    ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪ

    ಶಾಸಕ ಮಾನಪ್ಪ ವಜ್ಜಲ್ ವಿಧಾನ ಮಂಡಲ ಅಧಿವೇಶನದಲ್ಲಿ ಜು.6 ರಂದು ಸಿಟಿ ಸ್ಕಾೃನ್ ಯಂತ್ರದ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. 10 ವರ್ಷಗಳ ಹಿಂದೆ ಖರೀದಿಸಿರುವ ಸಿಟಿ ಸ್ಕ್ಯಾನ್ ಯಂತ್ರ ಹಳೆಯದಾಗಿದ್ದು, ಈಗ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ಪಾವತಿಸುವಂತಾಗಿದೆ. ಹೊಸದಾಗಿ ಸಿಟಿ ಸ್ಕಾೃನ್ ಯಂತ್ರ ಅಳವಡಿಸಲು ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಪ್ರಶ್ನೆ ಕೇಳಿದ್ದರು.

    ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಉಚಿತ ರೋಗ ಪತ್ತೆ ಸೇವೆಗಳ ಕಾರ್ಯಕ್ರಮದ ಮಾರ್ಗಸೂಚಿ ಅನ್ವಯ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಉಚಿತ ಸಿಟಿ ಸ್ಕಾೃನ್ ಸೇವೆ ಒದಗಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಉತ್ತರ ನೀಡಿದ್ದಾರೆ.

    ಸಿಟಿ ಸ್ಕಾೃನ್ ಯಂತ್ರ ಕೆಟ್ಟಿರುವುದರಿಂದ ರೋಗಿಗಳು ಜಿಲ್ಲಾ ಕೇಂದ್ರ ಅಥವಾ ಖಾಸಗಿ ತಂತ್ರಜ್ಞರ ಮೊರೆ ಹೋಗುವಂತಾಗಿದೆ. ಹೊಸ ಯಂತ್ರ ಅಳವಡಿಸಿ ಬಡ ರೋಗಿಗಳಿಗೆ ಅನುಕೂಲ ಕಲ್ಪಿಸಬೇಕು.
    ನಾಗರಾಜ ಮಸ್ಕಿ
    ರೋಗಿ, ಲಿಂಗಸುಗೂರು

    ಹತ್ತು ವರ್ಷ ಹಳೆಯದಾದ ಸಿಟಿ ಸ್ಕಾೃನ್ ಯಂತ್ರ ದುರಸ್ತಿಗೆ ಬಂದಿದೆ. ಲಾರ್ಜ್ ಸ್ಕಾೃನ್ ಟ್ಯೂಬ್ ಬದಲಾವಣೆ ಮಾಡಬೇಕಿದೆ. ರಿಪೇರಿ ಆಗದಿದ್ದರೆ ಹೊಸ ಯಂತ್ರ ಅಳವಡಿಸಲು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
    ಡಾ.ರುದ್ರಗೌಡ ಪಾಟೀಲ್
    ವೈದ್ಯಾಧಿಕಾರಿ, ಲಿಂಗಸುಗೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts