More

    ಬ್ರೇಕ್ ಬಳಿಕ ಖಾಸಗಿ ಬಸ್ ಸಂಚಾರ ಶುರು

    ಮಂಗಳೂರು/ಉಡುಪಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳ ಬಳಿಕ ಉಭಯ ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಸೋಮವಾರ ಪುನರಾರಂಭಗೊಂಡಿದ್ದು, ಮೊದಲ ದಿನ ‘ಪರವಾಗಿಲ್ಲ’ ಎನ್ನುವ ಸ್ಪಂದನೆ ವ್ಯಕ್ತವಾಗಿದೆ.
    ಮಂಗಳೂರು, ಉಡುಪಿ ನಗರಗಳಲ್ಲಿ ಸಿಟಿ ಬಸ್, ಇತರ ಮಾರ್ಗಗಳಲ್ಲಿನ ಸರ್ವೀಸ್, ಮಂಗಳೂರಿನಿಂದ ಉಡುಪಿ, ಕುಂದಾಪುರ, ಮೂಡುಬಿದಿರೆ, ಕಾರ್ಕಳ, ಪುತ್ತೂರು, ಉಡುಪಿಯಿಂದ ಕಾರ್ಕಳ, ಕುಂದಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಹೆಬ್ರಿ ಮತ್ತಿತರ ಮಾರ್ಗಗಳ ಎಕ್ಸ್‌ಪ್ರೆಸ್-ಸರ್ವೀಸ್ ಬಸ್‌ಗಳ ಪೈಕಿ ಶೇ.30ರಷ್ಟು ರಸ್ತೆಗಿಳಿದಿವೆ.
    ಬೆಳಗ್ಗೆ 8 ಗಂಟೆಯವರೆಗೆ ಬಸ್‌ಗಳಲ್ಲಿ ಅಷ್ಟಾಗಿ ಪ್ರಯಾಣಿಕರು ಇರಲಿಲ್ಲ. 8.30ರಿಂದ 10 ಹಾಗೂ ಸಾಯಂಕಾಲ 5ರಿಂದ 7ರವರೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಉದ್ಯೋಗ, ವ್ಯಾಪಾರಕ್ಕೆ ತೆರಳುವವರು ಹೆಚ್ಚಾಗಿ ಬಸ್ ನೆಚ್ಚಿಕೊಂಡಿದ್ದರು. ಕೆಲವು ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಗ್ರಾಮಾಂತರ ಭಾಗದಲ್ಲಿ ವಿರಳವಾಗಿತ್ತು ಎಂದು ನಿರ್ವಾಹಕರು ತಿಳಿಸಿದ್ದಾರೆ.

    ಮಂಗಳೂರು ನಗರದಲ್ಲಿ 325 ಸಿಟಿ ಬಸ್‌ಗಳಿದ್ದು, ಸುಮಾರು 125 ಸೋಮವಾರ ರಸ್ತೆಗಿಳಿದಿವೆ. ಉಡುಪಿಯ 85 ಸಿಟಿ ಬಸ್‌ಗಳಲ್ಲಿ 25 ಸಂಚಾರ ಆರಂಭಿಸಿವೆ. ಇನ್ನುಳಿದವು ಹಂತ ಹಂತವಾಗಿ ಕಾರ್ಯಾರಂಭಿಸಲಿವೆ. ಮಂಗಳೂರಿನಲ್ಲಿ ರೂಟ್ ನಂ.15 ಸೇರಿದಂತೆ ಕೆಲವು ಬಸ್‌ಗಳು ರಸ್ತೆ ತೆರಿಗೆ ಪಾವತಿಸುವುದಕ್ಕೆ ಸರ್ವರ್ ಸಮಸ್ಯೆಯಾಗಿರುವುದರಿಂದ ಒಂದೆರಡು ದಿನದಲ್ಲಿ ಶುರುವಾಗಬಹುದು. ಸಾರಿಗೆ ಇಲಾಖೆಗೆ ಈವರೆಗೆ ಸರೆಂಡರ್ ಆಗಿರುವ ಈ ಬಸ್‌ಗಳನ್ನು ತೆರಿಗೆ ಪಾವತಿಸಿ ಬಿಡಿಸಿಕೊಳ್ಳಬೇಕಾಗುತ್ತದೆ.

    ಬದಲಾದ ದರ: ಬಸ್ ಮಾಲೀಕರ ಬಹುವರ್ಷದ ಬೇಡಿಕೆಯಾಗಿದ್ದ ಪ್ರಯಾಣ ದರ ಏರಿಕೆಯೂ ಸೋಮವಾರದಿಂದಲೇ ಅನ್ವಯವಾಗಿದೆ. ಶೇ.15ರಷ್ಟು ದರ ಏರಿಕೆ ಮಾಡಲಾಗಿದೆ. ಕ್ಯಾಷ್‌ಲೆಸ್ ಕಾರ್ಡ್ ವ್ಯವಸ್ಥೆಗೂ ಬಸ್ ಮಾಲೀಕರು ಮುಂದಾಗಿದ್ದು, ಕೆಲವು ಬಸ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ.

    ಅಂತರ, ಸ್ಯಾನಿಟೈಸರ್ ಕೊರತೆ: ಹೆಚ್ಚಿನ ಪ್ರಯಾಣಿಕರು ಮಾಸ್ಕ್ ಧರಿಸಿದ್ದರು. ದಟ್ಟಣೆ ಅವಧಿಯಲ್ಲಿ ಕೆಲವು ರೂಟ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಅಂತರ ಕಾಪಾಡುವುದು ಕಷ್ಟವಾಗಿದ್ದು, ಸೀಟಿನಲ್ಲಿ ಇಬ್ಬಿಬ್ಬರು ಕೂತಿರುವುದಷ್ಟೇ ಅಲ್ಲದೆ ನಿಂತುಕೊಂಡು ಪ್ರಯಾಣಿಸಿದರು. ಕೆಲವು ಬಸ್‌ಗಳಲ್ಲಿ ಸ್ಯಾನಿಟೈಸರ್ ನೀಡಲಾಗುತ್ತಿತ್ತು, ಕೆಲವು ಬಸ್‌ಗಳಲ್ಲಿ ಖಾಲಿಯಾಗಿತ್ತು. ಇನ್ನು ಬಸ್‌ಗಳನ್ನು ಪ್ರತೀ ಟ್ರಿಪ್ ಬಳಿಕ ಸ್ಯಾನಿಟೈಸ್ ಮಾಡಬೇಕೆಂಬ ಸೂಚನೆ ಇದೆ. ಆದರೆ ಇದು ಕಾರ್ಯಸಾಧ್ಯವಲ್ಲ. ಬೆಳಗ್ಗೆ ಟ್ರಿಪ್‌ಗೆ ಮೊದಲು ಹಾಗೂ ಟ್ರಿಪ್ ಮುಗಿಸಿದ ಬಳಿಕ ಎರಡು ಬಾರಿ ಸ್ಯಾನಿಟೈಸ್ ಮಾಡುವುದಕ್ಕೆ ಕೆಲವು ಮಾಲೀಕರು ವ್ಯವಸ್ಥೆ ಮಾಡಿಕೊಂಡಿದ್ದಾರೆ. ದೂರದ ಊರುಗಳಿಗೆ ಹೋಗುವ ಬಸ್‌ಗಳಲ್ಲಿ ಅಂತರ ಕಾಪಾಡುವುದು ಸುಲಭ. ಆದರೆ ನಗರದೊಳಗೆ ಅಲ್ಲಲ್ಲಿ ನಿಲುಗಡೆ ಇರುವ ಸಿಟಿ- ಲೋಕಲ್ ಬಸ್‌ಗಳಲ್ಲಿ ಕಷ್ಟ ಎಂದು ಬಸ್ ನೌಕರರು ಹೇಳುತ್ತಿದ್ದರು.

    ಬಾನೆಟ್ ಮೇಲೂ ಸಂಚಾರ
    ಪಡುಬಿದ್ರಿ: ಉಡುಪಿ-ಮಂಗಳೂರು ನಡುವೆ 45 ನಿಮಿಷಕ್ಕೊಂದರಂತೆ ಎಕ್ಸ್‌ಪ್ರೆಸ್ ಬಸ್‌ಗಳು ಸಂಚರಿಸಿವೆ. ಈ ಮಾರ್ಗದಲ್ಲಿ ಕೆಲ ದಿನಗಳ ಹಿಂದೆಯೇ ಕೆಎಸ್‌ಆರ್‌ಟಿಸಿ ಬಸ್ ಹೋಗುತ್ತಿದ್ದರೂ ಬೆರಳೆಣಿಕೆ ಮಂದಿಯಷ್ಟೇ ಪ್ರಯಾಣಿಸುತ್ತಿದ್ದರು. ಖಾಸಗಿ ಬಸ್ ಆರಂಭಿಸಿದ ದಿನ ಜನ ಬೆಳಗ್ಗೆಯಿಂದ ಸ್ಥಳಾವಕಾಶವಿಲ್ಲದಿದ್ದರೂ ಬಾನೆಟ್ ಬಾಕ್ಸ್ ಮೇಲೂ ಕುಳಿತು ಪ್ರಯಾಣಿಸಿದರು. ನಿಯಮ ಮೀರಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಅನ್ನು ಹೆಜಮಾಡಿ ಚೆಕ್‌ಪೋಸ್ಟ್ ಬಳಿ ಪೊಲೀಸರು ತಡೆದು ನಿರ್ವಾಹಕರ ಬಳಿ ಕೇಳಿದಾಗ ಅವರಿಗೆ ಆ ಬಗ್ಗೆ ಮಾಹಿತಿಯೇ ಇರಲಿಲ್ಲ.

    ಮೊದಲ ದಿನ ಸೀಮಿತ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸಿವೆ. ಪೀಕ್ ಅವರ್‌ನಲ್ಲಿ ಒಂದಷ್ಟು ಜನರಿದ್ದರು, ಉಳಿದಂತೆ 4-5 ಜನರಷ್ಟೇ ಇದ್ದರು. ಆದರೆ ಇದು ಆರಂಭ, ಒಂದು ವಾರದಲ್ಲಿ ಸ್ಥಿತಿ ಉತ್ತಮಗೊಳ್ಳುವ ನಿರೀಕ್ಷೆ ಇದೆ.
    – ದಿಲ್‌ರಾಜ್ ಆಳ್ವ, ದ.ಕ ಬಸ್ ಮಾಲೀಕರ ಸಂಘದ ಅಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts