More

    ಗೊಂದಲದಲ್ಲಿ ಖಾಸಗಿ ಬಸ್ ಸಂಚಾರ: ಸಂಘಟನೆಗಳಿಂದ ತೆರಿಗೆ ವಿನಾಯಿತಿ, ಟಿಕೆಟ್ ದರ ಹೆಚ್ಚಳ ಬೇಡಿಕೆ

    ಮಂಗಳೂರು/ಉಡುಪಿ: ಹೆಚ್ಚಿದ ಡೀಸೆಲ್ ದರ, ಅಧಿಕ ನಿರ್ವಹಣಾ ವೆಚ್ಚ, ಖಾಸಗಿ ವಾಹನ ಅವಲಂಬಿಸಿರುವ ಜನ, ತೆರಿಗೆ ಭಾರ, ಸರಿದೂಗದ ಟಿಕೆಟ್ ದರ, ಕೋವಿಡ್ -19 ನಿರ್ಬಂಧ ಮತ್ತಿತರ ಪ್ರತಿಕೂಲ ವಾತಾವರಣದಲ್ಲಿ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಬೇಕೇ, ಬೇಡವೇ ಎಂಬ ಗೊಂದಲದಲ್ಲಿವೆ.
    ಉಡುಪಿ ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅನುಮತಿ ಇದ್ದರೂ ಕರಾವಳಿ ಬಸ್ ಮಾಲೀಕರ ಸಂಘದ ಅಧೀನದಲ್ಲಿರುವ 4 ಖಾಸಗಿ ಬಸ್ಸುಗಳು ಮಾತ್ರ ಉಡುಪಿ-ಕುಂದಾಪುರ ಸಂಚಾರ ಆರಂಭಿಸಿವೆ. ಕೆನರಾ ಬಸ್ ಮಾಲೀಕರ ಸಂಘಟನೆಯ ಅಧೀನದ ಬಸ್‌ಗಳು ರಸ್ತೆಗೆ ಇಳಿದಿಲ್ಲ. ದ.ಕ. ಜಿಲ್ಲೆಯಲ್ಲಿ ಅನುಮತಿ ಲಭಿಸಿದರೂ ಬಸ್ ಸಂಚಾರ ಆರಂಭಿಸುವ ಬಗ್ಗೆ ಸ್ಪಷ್ಟತೆ ಲಭಿಸಿಲ್ಲ.

    ‘ಬಸ್‌ಗಳ ದುರಸ್ತಿಗೆ ತಲಾ 1 ಲಕ್ಷ ರೂ. ಖರ್ಚು ಬರಬಹುದು. ಶೇ.50 ಪ್ರಯಾಣಿಕರೊಂದಿಗೆ ಬಸ್ ಓಡಿಸುವುದು ಅಸಾಧ್ಯ. ಡೀಸೆಲ್ ದರಕ್ಕೆ ಅನುಗುಣವಾಗಿ ಟಿಕೆಟ್ ದರ ಪರಿಷ್ಕರಿಸಬೇಕು. ನಿತ್ಯ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಿದ್ದಕ್ಕೆ ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿಗೆ ಅನುದಾನ ನೀಡಿದೆ. ಖಾಸಗಿ ಬಸ್‌ಗಳೂ ರಿಯಾಯಿತಿ ನೀಡುತ್ತಿವೆ. ನಮಗೆ 2 ತ್ರೈಮಾಸಿಕ ತೆರಿಗೆ ವಿನಾಯಿತಿ ನೀಡಬೇಕು’ ಎಂದು ಕೆನರಾ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಒತ್ತಾಯಿಸಿದ್ದಾರೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಗೆ ಪರವಾನಗಿ ಸರೆಂಡರ್ ಮಾಡಿರುವ ಬಸ್ ಮಾಲೀಕರು ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ಬಸ್ ಓಡಿಸುವ ಸ್ಥಿತಿಯಲ್ಲಿ ಇಲ್ಲ. ಆರು ತಿಂಗಳ ತೆರಿಗೆ ವಿನಾಯಿತಿ ಘೋಷಿಸಬೇಕು ಎನ್ನುವುದು ಪ್ರಮುಖ ಬೇಡಿಕೆ. ಸರ್ಕಾರದ ಕರೊನಾ ಮಾರ್ಗಸೂಚಿ ಪ್ರಕಾರ ಬಸ್‌ಗಳಲ್ಲಿ ಶೇ.50 ಪ್ರಯಾಣಿಕರಷ್ಟೇ ಪ್ರಯಾಣಿಸಬೇಕು. ಹೀಗೆ ಮಾಡಿದರೆ ಬಸ್ ಓಡಿಸುವುದು ಕಷ್ಟ ಎಂದು ಮಂಗಳೂರು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹೇಳುತ್ತಾರೆ.

    ನಾಳೆ ಮೂಡುಬಿದಿರೆಯಲ್ಲಿ ಸಭೆ: ಪ್ರತಿಕೂಲ ವಾತಾವರಣದಲ್ಲಿ ಬಸ್ ಉದ್ಯಮ ಮುಂದುವರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಜೂನ್ 24ರಂದು ಮೂಡುಬಿದಿರೆಯಲ್ಲಿ ಕೆನರಾ ಬಸ್ ಮಾಲೀಕರ ಒಕ್ಕೂಟ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಖಾಸಗಿ ಸಿಟಿ ಹಾಗೂ ಸರ್ವೀಸ್ ಬಸ್ ಮಾಲೀಕರ ಸಭೆ ಕರೆಯಲಾಗಿದೆ. ಆರು ತಿಂಗಳ ತೆರಿಗೆ ವಿನಾಯಿತಿ ಬೇಡಿಕೆ, ಬಸ್ ಪ್ರಯಾಣ ದರ ಏರಿಕೆ ಮತ್ತು ಕೋವಿಡ್ -19 ನಿರ್ಬಂಧದ ಮಧ್ಯೆ ಬಸ್ ಸಂಚಾರ ನಿರ್ವಹಣೆ ಕುರಿತು ಮುಖ್ಯ ವಿಷಯ ಚರ್ಚೆಯಾಗಲಿದೆ.

    ಡೀಸೆಲ್ ದರ 93 ರೂ. ತಲುಪಿದೆ. ಪ್ರಯಾಣ ದರ ಪರಿಷ್ಕರಣೆ ಸಹಿತ ಕೆಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ. ಈಡೇರಿಸುವ ಭರವಸೆ ದೊರೆತಿದೆ. ಈಡೇರಿಸಿದರಷ್ಟೇ ಬಸ್ ಸಂಚಾರ ಆರಂಭಿಸಲು ಸಾಧ್ಯ.
    – ರಾಜವರ್ಮ ಬಲ್ಲಾಳ್, ಅಧ್ಯಕ್ಷ, ಕೆನರಾ ಬಸ್ ಮಾಲೀಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts