More

    ಪ್ರಾಚಾರ್ಯ ಸುನೀಲ್ ಪ್ಯಾಟ್ರಿಕ್ ಮುಂದುವರಿಕೆಗೆ ಆಗ್ರಹ

    ಕೊಪ್ಪ: ಪಟ್ಟಣ ಹೊರ ವಲಯದ ಸಂತ ನೋಬರ್ಟ್ ವಿದ್ಯಾ ಸಂಸ್ಥೆ ಪ್ರಾಚಾರ್ಯ ಸುನೀಲ್ ಪ್ಯಾಟ್ರಿಕ್ ಅವರನ್ನು ಹುದ್ದೆಯಲ್ಲಿ ಮುಂದುವರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ಕೆಲ ಪಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಸುನೀಲ್ ಪ್ಯಾಟ್ರಿಕ್ ಅವರನ್ನು ಪ್ರಾಚಾರ್ಯ ಸ್ಥಾನದಿಂದ ಗುರುವಾರ ಬಿಡುಗಡೆಗೊಳಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು ಸಂಸ್ಥೆ ವಿರುದ್ಧ ಪ್ರತಿಭಟಿಸಿದರು. ಸುನಿಲ್ ಪ್ಯಾಟ್ರಿಕ್ ಅವರನ್ನು ಪ್ರಾಚಾರ್ಯರಾಗಿ ಮುಂದುವರಿಸುವಂತೆ ಒತ್ತಾಯಿಸಿದರು. ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದ ಸುದ್ದಿ ತಿಳಿದ ಪಾಲಕರು ಸಂಸ್ಥೆ ಆವರಣಕ್ಕೆ ಆಗಮಿಸಿದರು. ಕೆಲ ಪಾಲಕರು ಪ್ರಾಚಾರ್ಯರ ಪರವಾಗಿ, ಮತ್ತಷ್ಟು ಪಾಲಕರು ಆಡಳಿತ ಮಂಡಳಿ ಪರ ಘೋಷಣೆ ಕೂಗಿದರು. ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
    ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಎಸ್‌ಎಸ್‌ಎಲ್‌ಸಿ ಕೆಲ ವಿದ್ಯಾರ್ಥಿಗಳು ಮಧ್ಯವಾರ್ಷಿಕ ಪರೀಕ್ಷೆಗೆ ಹಾಜರಗದೆ ಪ್ರತಿಭಟನೆ ನಡೆಸಿದರು. ನಂತರ ಪಾಲಕರು, ಆಡಳಿತ ಮಂಡಳಿ ಮನವೊಲಿಸಿದ ನಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.
    ನಂತರ ಕಾಲೇಜು ಸಭಾಂಗಣದಲ್ಲಿ ಪಾಲಕರ ಜತೆಯಲ್ಲಿ ಸಂಸ್ಥೆ ಮುಖ್ಯಸ್ಥರು ಸಭೆ ನಡೆಸಿ ಪಾಲಕರ ಅಭಿಪ್ರಾಯ ಸಂಗ್ರಹಿಸಿದರು. ಬಹುತೇಕ ಪಾಲಕರು ಸುನೀಲ್ ಪ್ಯಾಟ್ರಿಕ್ ಅವರನ್ನು ಪುನಃ ಪ್ರಾಚಾರ್ಯರಾಗಿ ನೇಮಿಸಿ ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಸಂಸ್ಥೆಯು ಎರಡು ದಿನಗಳ ಕಾಲಾವಕಾಶವನ್ನು ಪಾಲಕರ ಬಳಿ ಕೇಳಿದೆ.
    ಕಾಲೇಜು ಆವರಣದಲ್ಲಿರುವ ವಸತಿ ಶಾಲೆಯಲ್ಲಿ ವ್ಯವಸ್ಥೆ ಸರಿಯಿಲ್ಲ, ಕೆಲವರ ನಡವಳಿಕೆ ಸರಿಯಿಲ್ಲ ಎಂದು ಪಾಲಕರ ಬಳಿ ದೂರು ಹೇಳಿರುವ ವಿದ್ಯಾರ್ಥಿಗಳು ಪಟ್ಟಣದ ಪಿಜಿಯಲ್ಲಿ ವಾಸವಿದ್ದು ಕಾಲೇಜಿಗೆ ತೆರಳುತಿದ್ದಾರೆ. ಸುಮಾರು ಆರು ವಿದ್ಯಾರ್ಥಿಗಳು ಪಿಜಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
    ಸಂಸ್ಥೆ ಮುಖ್ಯಸ್ಥ ಸೆಲ್ಲು ಜೆಕೂಬ್ ಮದ್ಯ ಸೇವಿಸಿ ಹಾಸ್ಟೆಲ್‌ಗೆ ಬಂದು ಹೊಡೆಯುತ್ತಾರೆ. ಅನುಚಿತವಾಗಿ ವರ್ತನೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಓದಿನಲ್ಲಿ ಹಿಂದೆ ಇರುವವರ ಸಮಸ್ಯೆಗಳನ್ನು ಕೇಳಿದ್ದೇವೆ. ಅದನ್ನೇ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಸುನಿಲ್ ಪ್ಯಾಟ್ರಿಕ್ ಪ್ರಭಾರ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ರೆಸ್ಯೂಮ್ ಮತ್ತು ನೀಡಿರುವ ದಾಖಲೆಗಳಿಗೆ ತಾಳೆ ಬರಲಿಲ್ಲ. ಆದ್ದರಿಂದ ಪ್ರಾಚಾರ್ಯರ ಹುದ್ದೆಯಿಂದ ಕೈ ಬಿಡಲಾಗಿದೆ ಎಂದು ಸೆಲ್ಲು ಜೆಕೂಬ್ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts