More

    ರೈಲು ಬೋಗಿಯಾದ ಮೀನಾಡಿ ಶಾಲೆ

    ಪ್ರವೀಣ್‌ರಾಜ್ ಕೊಯಿಲ, ಕಡಬ

    ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಮೀನಾಡಿ ಸರ್ಕಾರಿ ಪ್ರಾಥಮಿಕ ಶಾಲೆ ರೈಲು ಬೋಗಿಯಾಗಿ ಬದಲಾಗಿದೆ. ಶಾಲೆಯ ಗೋಡೆಗೆ ರೈಲು ಬೋಗಿಯಂತೆ ಚಿತ್ತಾರ ಬಿಡಿಸಿ ಸುಂದರಗೊಳಿಸಲಾಗಿದೆ.

    ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ದಾನಿಗಳ ನೆರವಿನಿಂದ ನಡೆಯುತ್ತಿದ್ದು, ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಈ ರೀತಿ ಬಣ್ಣ ಬಳಿಯಲಾಗಿದೆ. ಇದಕ್ಕೆ ಮೀನಾಡಿ ಎಕ್ಸ್‌ಪ್ರೆಸ್ ಎಂದು ಹೆಸರಿಟ್ಟಿದ್ದು, ಕೊಠಡಿಯ ಒಳಗಡೆ ನಲಿಕಲಿಗೆ ಸಂಬಂಧಿಸಿದ ಚಿತ್ರ ಮೂಡಿಸಲಾಗುತ್ತಿದೆ.
    ಇಂಜಿನ್‌ನಲ್ಲಿ ಎಜುಕೇಶನ್ ಎಕ್ಸ್‌ಪ್ರೆಸ್ ಎಂದು ನಮೂದಿಸಿದ್ದು, ಒಂದೊಂದು ಬೋಗಿಗೆ ತರಗತಿಯ ಸಂಖ್ಯೆ, ಶಾಲೆಯ ಡಿಐಎಸ್‌ಇ ಕೋಡ್ ಬರೆಯಲಾಗಿದೆ. ಕಡಬದ ಲಕ್ಷ್ಮೀ ಆರ್ಟ್ಸ್‌ನ ಲಕ್ಷ್ಮೀಶ ಹಾಗೂ ಮಾಧವ ಎಂಬುವರ ಕೈಚಳಕದಿಂದ ಮೀನಾಡಿ ಎಕ್ಸ್‌ಪ್ರೆಸ್ ಮೂಡಿಬಂದಿದೆ. ಈಗ ಶಾಲೆಗೆ ಭೇಟಿ ನೀಡುವ ಮಕ್ಕಳು ರೈಲು ಮಾದರಿಯ ಸುಂದರ ಚಿತ್ರ ಕಂಡು ಪುಳಕಿತರಾಗಿದ್ದು, ಮಕ್ಕಳ ಪಾಲಕರು ಶಾಲೆಯ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಖುಷಿ ಪಡುತ್ತಾರೆ.

    60 ವರ್ಷ ಪೊರೈಸಿರುವ ಈ ಶಾಲೆಯು ವಜ್ರಮಹೋತ್ಸವ ಸಂಭ್ರಮ ಸಿದ್ಧತೆಯಲ್ಲಿದೆ. ಕರೊನಾ ಕಾರಣದಿಂದ ಸದ್ಯ ಕಾರ್ಯಕ್ರಮ ಮುಂದೂಡಲ್ಪಟ್ಟಿದ್ದು, ಇಲಾಖೆ ಅನುಮತಿ ನೀಡಿದ ಬಳಿಕ ಮಹೋತ್ಸವ ಸಂಭ್ರಮ ಕಾರ್ಯಕ್ರಮ ನಡೆಸಲಾಗುವುದು ಎನ್ನುತ್ತಾರೆ ಮುಖ್ಯಶಿಕ್ಷಕರು.

    ಅಭಿವೃದ್ಧಿ ಕೆಲಸ
    ಈಗಾಗಲೇ ಮೀನಾಡಿ ಸರ್ಕಾರಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಶಾಲೆಯು ಉತ್ತಮ ಕಲಿಕಾ ಕೊಠಡಿ, ಶೌಚಗೃಹ ಅಕ್ಷರ ದಾಸೋಹ ಕಟ್ಟಡ ಹೊಂದಿದೆ. ಈ ಶಾಲೆಯಲ್ಲಿ ಕಳೆದ ವರ್ಷ 10 ಇದ್ದ ವಿರ್ದ್ಯಾಥಿಗಳ ಸಂಖ್ಯೆ ಈ ಭಾರಿ 12ಕ್ಕೆ ಏರಿಕೆಯಾಗಿದೆ. ಇನ್ನೂ 5 ಮಕ್ಕಳು ಸೇರ್ಪಡೆಯಾಗಲಿದ್ದಾರೆ ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕ ಗೋವಿಂದ ನಾಯಕ್.

    ಮೀನಾಡಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಈ ಭಾಗದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕೆಂಬ ಉದ್ದೇಶದಿಂದ ರೈಲು ಬೋಗಿ ಮಾದರಿ ಬಣ್ಣ ಬಳಿಯಲಾಗಿದೆ.
    ಪುತ್ತುಕುಂಞಿ ಎಸ್‌ಡಿಎಂಸಿ ಅಧ್ಯಕ್ಷ ಸ.ಕಿ.ಪ್ರಾ.ಶಾಲೆ ಮೀನಾಡಿ

    ಕೇರಳ ಶಾಲೆಯೊಂದಕ್ಕೆ ರೈಲು ಬೋಗಿ ಮಾದರಿ ಬಣ್ಣ ಬಳಿದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿದು, ನಮ್ಮ ಶಾಲೆಗೂ ಅದೇ ಮಾದರಿಯ ಯೋಜನೆ ರೂಪಿಸಿ, ಮಕ್ಕಳನ್ನು ಸೆಳೆಯುವ ಪ್ರಯತ್ನ ನಡೆಸಲಾಗಿದೆ.
    ಗೋವಿಂದ ನಾಯಕ್, ಮೀನಾಡಿ ಶಾಲೆ ಮುಖ್ಯ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts