More

    ಪ್ರಸಾದ್ ಪಾರ್ಥಿವ ಶರೀರ ತರಲು ಒತ್ತಾಯ

    ಚಾಮರಾಜನಗರ: ಅನಾರೋಗ್ಯದಿಂದ ನಿಧನರಾದ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ನಗರದಲ್ಲಿ ಸೋಮವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ನಗರದ ಶ್ರೀಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿ ಬಳಗ, ರಂಗವಾಹಿನಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಸಂಘರ್ಷ ಸಮಿತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಮಾತನಾಡಿ, ಸರಳ, ಸಜ್ಜನಿಕೆ ರಾಜಕಾರಣಿಯಾಗಿದ್ದ ವಿ.ಶ್ರೀನಿವಾಸಪ್ರಸಾದ್ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಕಾಲ ರಾಜಕೀಯ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಗೆ ಅವರದೆಯಾದ ಕೊಡುಗೆ ನೀಡಿದ್ದಾರೆ. ನನ್ನನ್ನು ಸಂಸದರಾಗಿ ಆಯ್ಕೆ ಮಾಡಿದ ಮತದಾರರಿಗೆ ಹೆಮ್ಮೆಪಡುವ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಅವರು ನಿರಂತರವಾಗಿ ಹೇಳುತ್ತಿದ್ದರು. ಹಾಗಾಗಿ ಜಿಲ್ಲಾಡಳಿತ, ಸರ್ಕಾರ ಸಂಸದರ ಪಾರ್ಥಿವ ಶರೀರವನ್ನು ಚಾಮರಾಜನಗರಕ್ಕೆ ತಂದು ಜನರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

    ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಅವರು ಸುದೀರ್ಘ ಸೇವೆ ಸಲ್ಲಿಸಿದ್ದರು. ಅವರು ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಬುದ್ಧನ ಅನುಯಾಯಿಯಾಗಿ ಜೀವನದುದ್ದಕ್ಕೂ ಅವರ ಸಿದ್ಧಾಂತ ಪಾಲಿಸಿದರು. ಅವರ ಅಗಲಿಕೆ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

    ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಕೆ.ಎಂ.ನಾಗರಾಜು, ಮುಖಂಡರಾದ ಆಲೂರುಮಲ್ಲು, ಬಸವನಪುರ ರಾಜಶೇಖರ್, ಶ್ರೀನಿವಾಸಗೌಡ, ಲಕ್ಷ್ಮೀ ನರಸಿಂಹ ಸಂಸದರ ಸಾಧನೆ ಕುರಿತು ಮಾತನಾಡಿದರು. ದಲಿತ ಹಿರಿಯ ಮುಖಂಡರಾದ ಎಂ.ಎಸ್.ಮಾದಯ್ಯ, ನಗರಸಭಾ ಸದಸ್ಯೆ ಕುಮುದಾ ಕೇಶವಮೂರ್ತಿ, ಡಿಎಸ್‌ಎಸ್ ಸಂಚಾಲಕ ಸಿ.ಎಂ.ಶಿವಣ್ಣ, ಆಲೂರು ನಾಗೇಂದ್ರ, ನಾಗಬಸವಣ್ಣ, ರಾಮಸಮುದ್ರ ಬಂಗಾರು, ನಾಗರಾಜು, ಪಣ್ಯದಹುಂಡಿ ರಾಜು, ಗಣೇಶ್‌ಪ್ರಸಾದ್, ಶಿವರಾಜ್, ರಮೇಶ್, ಮಹದೇವಸ್ವಾಮಿ, ಸಿದ್ದಶೆಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts