More

    ದೇವಸ್ಥಾನದಲ್ಲೇ ಕದ್ದು, ಕಳ್ಳನನ್ನು ಪತ್ತೆ ಮಾಡಿ ಎಂದು ದೂರಿತ್ತ ಅರ್ಚಕ; ಹುಂಡಿಹಣ ಕದ್ದ ತಿಂಗಳ ಬಳಿಕ ಸಿಕ್ಕಿಬಿದ್ದ..

    ದಾಬಸ್‌ಪೇಟೆ: ದೇಗುಲದ ಹುಂಡಿ ಹಣ ತೆರೆಯಲು ಸಮ್ಮತಿಸದ ದೇಗುಲದ ಸಮಿತಿ ವಿರುದ್ಧ ಅಸಮಾಧಾನಗೊಂಡ ಅರ್ಚಕನೊಬ್ಬ ಹುಂಡಿಗೆ ಕನ್ನಹಾಕಿ ಇದೀಗ ಜೈಲುಪಾಲಾಗಿದ್ದಾನೆ. ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ನಾರಾಯಣಪುರದ ಶ್ರೀಲಕ್ಷ್ಮೀನರಸಿಂಹ ದೇವಾಲಯದಲ್ಲಿ ಸೆ.9ರಂದು ನಡೆದಿದ್ದ ಹುಂಡಿಕಳವು ಪ್ರಕರಣ ಸಂಬಂಧ ಅರ್ಚಕ ರಂಗನಾಥ್ (52) ಹಾಗೂ ಸಹಚರ ಲಕ್ಷ್ಮೀನಾರಾಯಣ್ (50) ಎಂಬುವರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

    ಕಳ್ಳನನ್ನು ಹಿಡಿಯಲು ಆರೋಪಿಯಿಂದಲೇ ದೂರು: ಲಕ್ಷ್ಮೀ ನರಸಿಂಹ ದೇಗುಲದಲ್ಲಿ ತಿಂಗಳ ಹಿಂದೆ ಹುಂಡಿಯಲ್ಲಿದ್ದ 1.5 ಲಕ್ಷ ರೂ. ಕಳವಾಗಿತ್ತು. ಈ ಸಂಬಂಧ ಆರೋಪಿ ಅರ್ಚಕನೇ ಕಳ್ಳನನ್ನು ಹಿಡಿಯುವಂತೆ ಠಾಣೆಯಲ್ಲಿ ದೂರು ದಾಖಲಿಸಿದ್ದ.

    ಕಳವಿಗೆ ಸಂಚು: ಎರಡು ವರ್ಷದಿಂದ ಹುಂಡಿ ಹಣ ಎಣಿಕೆ ಮಾಡಿರಲಿಲ್ಲ. ಕೆಲವು ದಿನಗಳ ಹಿಂದೆ ಅರ್ಚಕರು ಹುಂಡಿ ತೆರೆಯಲು ಮುಂದಾಗಿದ್ದರು. ಅದಕ್ಕೆ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಆಗ ಸುಮ್ಮನಾಗಿದ್ದ ಅರ್ಚಕ ಕೆಲ ದಿನಗಳ ಬಳಿಕ ಹುಂಡಿ ಕಳವಿಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

    ಸಹಚರನೊಂದಿಗೆ ಡೀಲ್: ಕಳ್ಳತನ ಮಾಡಿದ ಹಣದಲ್ಲಿ 20 ಸಾವಿರ ನೀಡುವುದಾಗಿ ಸಹಚರ ಲಕ್ಷ್ಮೀನಾರಾಯಣನಿಗೆ ಭರವಸೆ ನೀಡಿದ್ದ, ಆದರೆ ಹಣ ಕೊಟ್ಟಿರಲಿಲ್ಲ. ಇದರಿಂದ ಬೇಸತ್ತ ಲಕ್ಷ್ಮೀನಾರಾಯಣ್ ಸ್ನೇಹಿತರಾದ ಸೋಮು ಹಾಗೂ ನರಸಿಂಹಮೂರ್ತಿ ಬಳಿ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದ. ಇದನ್ನು ಸ್ನೇಹಿತರು ಮೊಬೈಲ್‌ಫೋನ್​ನಲ್ಲಿ ರೆಕಾರ್ಡ್ ಮಾಡಿಕೊಂಡು ಗ್ರಾಮಸ್ಥರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.

    ತನಿಖೆಯಲ್ಲಿ ಸತ್ಯಾಂಶ ಬಯಲು: ಆರೋಪಿಗಳಿಬ್ಬರನ್ನು ಠಾಣೆಗೆ ಕರೆತಂದ ದಾಬಸ್‌ಪೇಟೆ ಪೊಲೀಸರು ತನಿಖೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಪುನೀತ್​ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸಂಗತಿ: ‘ಗಂಧದಗುಡಿ’ ಜೊತೆಗೇ ‘ಅಪ್ಪು ಕಪ್’ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts