More

    ನ್ಯಾಯಾಂಗದ ಮೇಲೆ ಪಟ್ಟಭದ್ರರಿಂದ ಒತ್ತಡ; ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದ ಪ್ರಮುಖರು

    ನವದೆಹಲಿ: ನ್ಯಾಯಾಂಗದ ಮೇಲಿನ ಒತ್ತಡ, ನ್ಯಾಯಾಲಯಗಳ ಮಾನಹಾನಿ ವಿರುದ್ಧ ಆಕ್ರೋಶದ ದ್ವನಿ ಸ್ಪೋಟಿಸಿದೆ. ಸುಪ್ರೀಂಕೋರ್ಟ್​ನ ಹಿರಿಯ ವಕೀಲ, ಕಾನೂನು ತಜ್ಞ, ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಮನನ್ ಮಿಶ್ರಾ ಸೇರಿದಂತೆ 600ಕ್ಕೂ ಹೆಚ್ಚು ವಕೀಲರನ್ನೊಳಗೊಂಡ ಗುಂಪೊಂದು ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ. ಪಟ್ಟಭದ್ರ ಹಿತಾಸಕ್ತಿಗಳ ಗುಂಪು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದ್ದು, ಹಳೆ ರಾಜಕೀಯ ಅಜೆಂಡಾ ಮತ್ತು ಕ್ಷುಲ್ಲಕ ತರ್ಕಗಳನ್ನಿಟ್ಟುಕೊಂಡು ನ್ಯಾಯಾಲಯಗಳ ಮಾನಹಾನಿ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ರಾಜಕೀಯ ಪ್ರಕರಣಗಳಲ್ಲಿ, ಅದರಲ್ಲೂ ವಿಶೇಷವಾಗಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಈ ಒತ್ತಡದ ತಂತ್ರಗಳು ಅತ್ಯಂತ ಸ್ಪಷ್ಟವಾಗಿ ಎದ್ದುಕಾಣುತ್ತಿದೆ.

    ಇಂತಹಾ ತಂತ್ರಗಾರಿಕೆಗಳು ನಮ್ಮ ನ್ಯಾಯಾಲಯಗಳಿಗೆ ಹಾನಿಯುಂಟುಮಾಡುತ್ತಿವೆ ಮತ್ತು ಪ್ರಜಾಪ್ರಭುತ್ವದ ರಚನೆಗೇ ಧಕ್ಕೆ ತರುತ್ತವೆ ಎಂದು ಮಾರ್ಚ 26ರಂದು ಸುಪ್ರೀಂಕೋರ್ಟ್ ಸಿಜೆಐಗೆ ಸಲ್ಲಿಸಲಾದ ಪತ್ರದಲ್ಲಿ ತಿಳಿಸಲಾಗಿದೆ.

    ಚಾರ್ಜ್​ಶೀಟ್: ನ್ಯಾಯಾಂಗಕ್ಕೆ ಬೆದರಿಕೆ – ರಾಜಕೀಯ ಮತ್ತು ವೃತ್ತಿಪರರ ಒತ್ತಡದಿಂದ ನ್ಯಾಯಾಂಗದ ರಕ್ಷಣೆಯ ಅಗತ್ಯ ಎಂಬ ಶೀರ್ಷಿಕೆ ಹೊಂದಿರುವ ಈ ಪತ್ರವನ್ನು ದೇಶದ ಕೆಲ ವಕೀಲರನ್ನು ಗುರಿಯಾಗಿಸಿ ಬರೆಯಲಾಗಿದೆ ಎಂದು ಹೇಳಲಾಗಿದೆ. ಈ ವಕೀಲರು ಹಗಲು ರಾಜಕಾರಣಿಗಳನ್ನು ಸಮರ್ಥಿಸಿಕೊಳ್ಳುತ್ತಾರೆ ಮತ್ತು ರಾತ್ರಿ ವೇಳೆ ಮಾಧ್ಯಮದ ಮೂಲಕ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಲಾಗಿದೆ. ಒಟ್ಟಾರೆ 600 ವಕೀಲರು ಪತ್ರದಲ್ಲಿ ಸಹಿ ಮಾಡಿದ್ದಾರೆ. ಪತ್ರದಲ್ಲಿ ಯಾವುದೇ ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸದಿದ್ದರೂ, ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಭ್ರಷ್ಟಾಚಾರದ ಹಲವು ಉನ್ನತ ಮಟ್ಟದ ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯಗಳು ವಿಚಾರಣೆ ನಡೆಸುತ್ತಿರುವ ಸಮಯದಲ್ಲಿ ಈ ಪತ್ರ ಸಿಜೆಐಗೆ ತಲುಪಿದೆ.

    ಪಟ್ಟಭದ್ರರ ವರ್ತನೆಗಳು ನ್ಯಾಯಾಂಗದ ಕಾರ್ಯನಿರ್ವಹಣೆಯನ್ನು ನಿರೂಪಿಸುವ ನಂಬಿಕೆ ಮತ್ತು ಸಾಮರಸ್ಯದ ವಾತಾವರಣವನ್ನು ಹಾಳು ಮಾಡುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಕ್ಷೀಣಿಸುತ್ತಿದೆ. ನ್ಯಾಯಪೀಠವನ್ನು ಫಿಕ್ಸ್ ಮಾಡುವ ನಿರೂಪಣೆಯನ್ನೂ ಈ ಗುಂಪು ತೇಲಿಬಿಡುತ್ತಿರುವುದು ನ್ಯಾಯಾಲಯಗಳ ಗೌರವ ಮತ್ತು ಘನತೆ ಮೇಲಿನ ದಾಳಿ ಎಂದು ಪತ್ರದಲ್ಲಿ ಖಂಡಿಸಲಾಗಿದೆ. ಈ ಗುಂಪಿನ ಕಾರ್ಯಗಳು ಸೂಕ್ಷ್ಮ ಪರಿಶೀಲನೆಯಾಗಬೇಕು. ದೇಶ ಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಈ ಪಟ್ಟಭದ್ರರ ಗುಂಪು ಅತ್ಯಂತ ಕಾರ್ಯಶೀಲತೆಯಿಂದ ಒತ್ತಡ ಹೇರುವ ಯತ್ನ ಮಾಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲೂ ಸುಳ್ಳು ಹರಡುವ ಮೂಲಕ ತಮ್ಮ ಮೂಗಿನ ನೇರಕ್ಕೆ ಅಭಿಪ್ರಾಯ ರೂಪಿಸುವ ತಂತ್ರವನ್ನೂ ಹೆಣೆಯಲಾಗುತ್ತದೆ ಎಂದು ಆರೋಪಿಸಲಾಗಿದೆ.

    ಕಾಂಗ್ರೆಸ್ ಕಿವಿ ಹಿಂಡಿದ ಮೋದಿ: ಈ ಪತ್ರದ ವಿಚಾರ ಪ್ರಸ್ತಾಪಿಸುತ್ತಲೇ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇತರರನ್ನು ಗದರಿಸುವುದು, ಬೆದರಿಕೆ ಹಾಕುವುದು ಕಾಂಗ್ರೆಸ್​ನ ಹಳೆಯ ಸಂಸ್ಕೃತಿ. ಐದು ದಶಕಗಳ ಹಿಂದೆ ಕಾಂಗ್ರೆಸ್​ನವರು ಬದ್ಧ ನ್ಯಾಯಾಂಗಕ್ಕಾಗಿ ಕರೆ ನೀಡಿದ್ದರು. ಆದರೆ, ಕೇವಲ ತಮ್ಮ ಸ್ವಾರ್ಥಕ್ಕಾಗಿ ನಾಚಿಕೆಯಿಲ್ಲದೆ ಬೇರೆಯವರ ಬದ್ಧತೆಯನ್ನು ನಿರೀಕ್ಷಿಸುತ್ತಾರೆ. ರಾಷ್ಟ್ರದ ಕುರಿತ ಯಾವುದೇ ಬದ್ಧತೆ ಅವರಿಗೆ ಬೇಕಾಗಿಲ್ಲ. ದೇಶದ 140 ಕೋಟಿ ಜನತೆ ಅವರನ್ನು ತಿರಸ್ಕರಿಸಿರುವುದು ಅಚ್ಚರಿ ಏನಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಪತ್ರ ಬರೆದ ಪ್ರಮುಖರು: ವಕೀಲರಾದ ಆದೀಶ್ ಅಗರ್ವಾಲ್, ಚೇತನ್ ಮಿತ್ತಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್, ಕರ್ನಾಟಕದ ಉದಯ್ ಹೊಳ್ಳ, ಸ್ವರೂಪಮಾ ಚತುರ್ವೆದಿ.

    ಪತ್ರದ ಸಾರಾಂಶ

    • ಇಂತಹ ವರ್ತನೆ ಮರುಕಳಿಸುತ್ತಲೇ ಇದೆ
    • ಕುತಂತ್ರಗಳಿಂದ ಕೋರ್ಟ್ ರಕ್ಷಿಸಬೇಕು
    • ಸುಪ್ರೀಂಕೋರ್ಟ್ ಸೂಕ್ತ ಕ್ರಮ ಕೈಗೊಳ್ಳಲಿ
    • ಸುಮ್ಮನಿದ್ದರೆ ಹಾನಿಕಾರಕರ ಶಕ್ತಿ ಹೆಚ್ಚಳ
    • ಮೌನವಾಗಿರಲು ಇದು ಸಮಯವಲ್ಲ
    • ಈಗ ನಿಮ್ಮ ನಾಯಕತ್ವ ನಿರ್ಣಾಯಕ
    • ಎಲ್ಲ ನ್ಯಾಯಮೂರ್ತಿಗಳು ಒಟ್ಟಾಗಬೇಕು
    • ನಿಮ್ಮೆಲ್ಲರ ಮಾರ್ಗದರ್ಶನ ಸಿಗಬೇಕು
    • ಕೋರ್ಟ್ ಬಲಗೊಳಿಸುವ ನಂಬಿಕೆ ಇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts