More

    ಮಕ್ಕಳ ರಕ್ಷಣಾ ನೀತಿ ಸಿದ್ಧಪಡಿಸಿ

    ಗದಗ: ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಸಮಗ್ರ ರಕ್ಷಣಾ ನೀತಿಯನ್ನು ಸಿದ್ಧಪಡಿಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿ ತ್ರೖೆಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ 82 ಪ್ರಕರಣಗಳು ಇತ್ಯರ್ಥವಾಗಿದ್ದು, ಉಳಿದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು ಎಂದರು.

    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವಿನಾಶಲಿಂಗ ಗೋಟಖಿಂಡಿ ಮಾತನಾಡಿ, ಬಾಲನ್ಯಾಯ ನಿಧಿ ಯೋಜನೆಯಡಿ ಇಬ್ಬರು ಫಲಾನುಭವಿಗಳಿಗೆ, ವಿಶೇಷ ಪಾಲನಾ ಯೋಜನೆಯಡಿ 399 ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. 3 ಮಕ್ಕಳು ವಿಶೇಷ ದತ್ತು ಕೇಂದ್ರಕ್ಕೆ ಹೊಸದಾಗಿ ದಾಖಲಾಗಿದ್ದು ಒಂದು ಮಗುವನ್ನು ಹೈದರಾಬಾದ್​ನ ದಂಪತಿಗೆ ದತ್ತು ನೀಡಲಾಗಿದೆ. 2 ಮಕ್ಕಳನ್ನು ದತ್ತುಪೂರ್ವ ಪೋಷಕತ್ವಕ್ಕೆ ನೀಡಲಾಗಿದೆ ಎಂದರು.

    ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ. ಮಾತನಾಡಿ, ಜಿಲ್ಲೆಯ 122 ಗ್ರಾಮ ಪಂಚಾಯಿತಿಗಳಲ್ಲಿ 41 ಗ್ರಾಮ ಪಂಚಾಯಿತಿಗಳು ಮಕ್ಕಳ ಸ್ನೇಹಿ ಗ್ರಾಮಸಭೆಗಳನ್ನು ಆಯೋಜಿಸಿದ್ದು, ಪ್ರತಿ ತಾಲೂಕಿನಲ್ಲಿ ಆಯ್ದ 2 ಗ್ರಾಮ ಪಂಚಾಯಿತಿಗಳಲ್ಲಿ ಮಾದರಿ ಮಕ್ಕಳ ಗ್ರಾಮ ಸಭೆ ಆಯೋಜಿಸಬೇಕು ಎಂದು ಸೂಚಿಸಿದರು.

    ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸುವುದು. ಸಮನ್ವಯ ಹಾಗೂ ಸಹಭಾಗಿತ್ವ ಸಭೆ ಬಾಲಕಿಯರ ಬಾಲಮಂದಿರ ಹೊಸ ಕಟ್ಟಡ ನಿರ್ಮಾಣ ಪ್ರಗತಿ, ಮಕ್ಕಳ ಸ್ನೇಹಿ ನ್ಯಾಯಾಲಯ ಕಾಮಗಾರಿ ಪ್ರಗತಿ ಇತರೆ ವಿಷಯಗಳು ಪ್ರಗತಿ ಪರಿಶೀಲನಾ ಕುರಿತು ರ್ಚಚಿಸಲಾಯಿತು.

    ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್ ಎ., ಮಕ್ಕಳ ಕಲ್ಯಾಣಾಧಿಕಾರಿ ಕಿರಣ ಕಾಂಬ್ಳೆ, ಮಂಜುನಾಥ ಬಮ್ಮನಕಟ್ಟಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಿ.ಎಸ್ ಬೊಮ್ಮನಹಳ್ಳಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಗಂಧದ, ಬಾಲನ್ಯಾಯ ಮಂಡಳಿಯ ಸಮನ್ವಯಾಧಿಕಾರಿ ಐ.ಕೆ. ಮಣಕವಾಡ, ಚನ್ನಪ್ಪ ಚನ್ನಪ್ಪನವರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts