More

    ಸಿದ್ಧೇಶ್ವರ ಜಾತ್ರೆ ಅದ್ದೂರಿ ಆಚರಣೆಗೆ ಸಿದ್ಧತೆ, ಈ ಬಾರಿ ವಿಶೇಷ ಏನು ಗೊತ್ತಾ?

    ವಿಜಯಪುರ: ಉತ್ತರ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲೊಂದಾದ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ಜ. 12 ರಿಂದ ಅದ್ದೂರಿಯಾಗಿ ಆರಂಭಗೊಳ್ಳಲಿದೆ ಎಂದು ಶ್ರೀ ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

    ಕಳೆದ ಮೂರು ವರ್ಷಗಳಿಂದ ಕರೊನಾದಿಂದಾಗಿ ಜಾತ್ರೆಗೆ ಮಂಕು ಕವಿದಿತ್ತು. ಕಳೆದ ವರ್ಷ ಪೂಜ್ಯ ಸಿದ್ಧೇಶ್ವರ ಶ್ರೀಗಳ ಅಗಲಿಕೆಯಿಂದಾಗಿ ಆಚರಿಸಲಾಗಲಿಲ್ಲ. ಹೀಗಾಗಿ ಈ ಬಾರಿ ಅತ್ಯಂತ ಸಂಭ್ರಮ ಹಾಗೂ ಸಡಗರಿಂದ ಆಚರಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಜ. 12 ರಂದು ಸಿದ್ಧೇಶ್ವರ ದೇವಸ್ಥಾನದಲ್ಲಿ ನಂದಿ ಧ್ವಜ ಹಾಗೂ ಗೋಮಾತೆಯ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಳ್ಳುವ ನಂದಿ ಧ್ವಜ ಹಾಗೂ ಗೋಮಾತೆ ಮೆರವಣಿಗೆ ಅಟಲ್ ಬಿಹಾರಿ ವಾಜಪೇಯಿ ರಸ್ತೆ ಮಾರ್ಗವಾಗಿ ಸಾಗಿ ಮರಳಿ ದೇವಸ್ಥಾನಕ್ಕೆ ಆಗಮಿಸಲಿದೆ. ಚತುರ್ಮುಖ ಗಣಪತಿಗೆ ಪಂಚಾಮೃತ ಅಭಿಷೇಕ ಜರುಗಲಿದೆ. ಜ.13 ರಂದು ಮಧ್ಯಾಹ್ನ 12.30 ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ವೈಭವದ ನಂದಿ ಧ್ವಜಗಳ ಉತ್ಸವ ನಡೆಯಲಿದೆ. ಶ್ರೀ 770 ಅಮರ ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ನಡೆಯಲಿದೆ. ಅದೇ ದಿನ ರಾತ್ರಿ 8 ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

    ಜ.14 ರಂದು ಮಧ್ಯಾಹ್ನ 12.30 ಕ್ಕೆ ಅಕ್ಷತಾರ್ಪಣೆ ಭೋಗಿ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಸಿದ್ಧರಾಮನ ಯೋಗದಂಡಕ್ಕೆ ಅಕ್ಷತೆ ಹಾಗೂ ವಿಧಿ-ವಿಧಾನಗಳೊಡನೆ ಚರಿತ್ರೆ ಓದುವ ನಂತರ ನಂದಿ ಧ್ವಜಗಳ ಉತ್ಸವ ನಡೆಯಲಿದೆ. ಅದೇ ದಿನ ರಾತ್ರಿ 8 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜ.15 ರಂದು ಮಧ್ಯಾಹ್ನ ಸಂಕ್ರಮಣ ಆಚರಣೆ, ನಂದಿ ಧ್ವಜಗಳ ಮೆರವಣಿಗೆ ಹಾಗೂ ಹೋಮ-ಹವನಗಳು ಹಾಗೂ ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಉತ್ಸವ ನಡೆಯಲಿದ್ದು, ಅದೇ ದಿನ ರಾತ್ರಿ 8 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

    ಜ.16 ರಂದು ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ಜ.17 ರಂದು ದೇವಾಲಯದ ಆವರಣದಲ್ಲಿ ಭಾರ ಎತ್ತುವ ಸ್ಪರ್ಧೆ ನಡೆಯಲಿದ್ದು, ಅನೇಕ ಭಾಗಗಳಿಂದ ಬರುವ ಜಟ್ಟಿಗಳು ತಮ್ಮ ಸಾಹಸ ಪ್ರದರ್ಶನ ಮಾಡಲಿದ್ದಾರೆ. ಜ.18 ರಂದು ಎಸ್.ಎಸ್. ಹೈಸ್ಕೂಲ್ ಮೈದಾನದಲ್ಲಿ ಜಂಗಿ-ನಿಖಾಲಿ ಕುಸ್ತಿ ಪಂದ್ಯಾವಳಿಗಳು ಜರುಗಲಿವೆ ಎಂದು ವಿವರಿಸಿದರು.

    ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಮಾತನಾಡಿ, ಜಾನುವಾರು ಜಾತ್ರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ನೆರವೇರಲಿದೆ. ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ಮತ್ತಿತರರ ರಾಜ್ಯಗಳಿಂದ ಜಾನುವಾರು ಆಗಮಿಸಲಿವೆ. ಆಕರ್ಷಕ ಜಾನುವಾರವಿಗೆ ಸೂಕ್ತ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದರು.

    ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಗುರು ಗಚ್ಚಿನಮಠ ಮಾತನಾಡಿದರು. ಉಪಾಧ್ಯಕ್ಷ ಸಂ.ಗು. ಸಜ್ಜನ, ಸದಾನಂದ ದೇಸಾಯಿ, ಬಸವರಾಜ ಸೂಗೂರ, ಮಲ್ಲಿಕಾರ್ಜುನ ಸಜ್ಜನ, ಶಿವಾನಂದ ನೀಲಾ, ರಾಘವ ಅಣ್ಣಿಗೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts