ಬ್ಯಾಡಗಿ: ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯ ಮೂಲಕ ಬದಲಾವಣೆ ತರಲಿದ್ದು, ಶಿಕ್ಷಣ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸಹಕಾರ ನೀಡುತ್ತಿದ್ದಾರೆ. ದೇಶದಲ್ಲಿಯೇ ಮಾದರಿ ಶಿಕ್ಷಣ ಪದ್ಧತಿಯನ್ನು ಜಾರಿ ಮಾಡುತ್ತೇವೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕದರಮಂಡಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಹಳೇ ವಿದ್ಯಾರ್ಥಿಗಳಿಂದ ನಿರ್ವಿುಸಿದ 6 ನೂತನ ಕೊಠಡಿಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕದರಮಂಡಲಗಿ ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಂಘ 1.16 ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ಕಟ್ಟಡ ನಿರ್ವಿುಸಿದ್ದಾರೆ. ಎಲ್ಕೆಜಿ ಹಾಗೂ ಯುಕೆಜಿ ಆರಂಭಿಸಿ ಮೂವರು ಶಿಕ್ಷಕರಿಗೆ ವೇತನವನ್ನು ಖಾಸಗಿಯಾಗಿ ನೀಡುತ್ತಿರುವುದು ರಾಜ್ಯಮಟ್ಟದಲ್ಲಿ ಗಮನಸೆಳೆದಿದೆ. ಮುಖ್ಯಮಂತ್ರಿ ಜತೆ ಈ ವಿಷಯ ರ್ಚಚಿಸಿದ್ದು, ರಾಜ್ಯಮಟ್ಟದಲ್ಲಿ ಎಲ್ಲ ಶಾಲೆಗಳಲ್ಲಿ ಇಂತಹ ವ್ಯವಸ್ಥೆ ಜಾರಿಗೊಳಿಸಲು ಸಹಕಾರ ನೀಡಲಾಗುವುದು. ಹಳೆಯ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಹೊಸ ಯೋಜನೆ ತರೋಣ ಎಂದಿದ್ದಾರೆ ಎಂದು ತಿಳಿಸಿದರು.
ಉಸ್ತುವಾರಿ ಮಂತ್ರಿ ಶಿವಾನಂದ ಪಾಟೀಲ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಶ್ರಮದಿಂದ ನೂತನ ಕಟ್ಟಡ ನಿರ್ವಿುಸಿದ್ದು, ಸರ್ಕಾರಕ್ಕಿಂತಲೂ ಮಿಗಿಲಾದ ಕಾರ್ಯವಾಗಿದೆ. ದೇಶವೇ ಗಮನಸೆಳೆಯುವ ಸಾಧನೆ ಗ್ರಾಮದಲ್ಲಿ ನಡೆದಿದೆ. ರಾಜ್ಯದ ಹಿಂದಿನ ಎಲ್ಲ ಮುಖ್ಯಮಂತ್ರಿಗಳು ಒಂದೊಂದು ಯೋಜನೆ ಜಾರಿಗೆ ತಂದಿದ್ದು, ದೇಶದಲ್ಲಿ ಕರ್ನಾಟಕ ಶೈಕ್ಷಣಿಕ ಸಾಧನೆಯಲ್ಲಿ ಮುಂದಿದೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ, ಶಾಲೆ ಉನ್ನತಿಗೆ ಕೊಡುಗೆ ನೀಡಬೇಕು ಎಂದರು.
ಶಾಸಕ ಬಸವರಾಜ ಶಿವಣ್ಣನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೊಠಡಿ ಉದ್ಘಾಟಿಸಿ ಕಾರು ಏರಿದ ಸಿಎಂ
ಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ನೋಡಬೇಕು, ಭಾಷಣ ಕೇಳಬೇಕೆಂದು ವೇದಿಕೆಯಲ್ಲಿ ಬೆಳಗ್ಗೆಯಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು. ಊರಿಗೆ ಬಂದ ದೊರೆಯನ್ನು ನೋಡಲು ಸಾವಿರಾರು ಜನ ಕಾಯುತ್ತ ಕುಳಿತಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲಾ ಕೊಠಡಿ ಉದ್ಘಾಟಿಸಿ, ಕ್ಷಣಾರ್ಧದಲ್ಲಿ ಕಾರು ಏರಿ ಹೊರಟೇ ಬಿಟ್ಟರು.
ಧಿಕ್ಕಾರ ಕೂಗಿದ ರೈತ ಮುಖಂಡರು
ರಾಣೆಬೆನ್ನೂರು ತಾಲೂಕು ರೈತ ಮುಖಂಡರು ಆಗಮಿಸಿ, ಮುಖ್ಯಮಂತ್ರಿ ಕದರಮಂಡಲಗಿ ಗ್ರಾಮಕ್ಕೆ ಆಗಮಿಸುವ ಮುನ್ನ ಮನವಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಸಿಎಂಗೆ ಮನವಿ ನೀಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಸೋಮಣ್ಣ ಬೇವಿನಮರದ, ಪದ್ಮಶ್ರೀ ಪುರಸ್ಕೃತ ಹರೇಕಲ್ಲ ಹಾಜಬ್ಬ, ಉದ್ಯಮಿ ಪ್ರಕಾಶ ಪಟ್ಟಣಶೆಟ್ಟಿ, ಕನ್ನಪ್ಪ ಛತ್ರದ, ಪ್ರಕಾಶ ಹುಳಬುತ್ತಿ, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ನಾಯ್ಕರ, ಸುಮಂಗಲಾ ಪಟ್ಟಣಶೆಟ್ಟಿ, ತುಳಸವ್ವ ಕಾಳೇರ, ಗದಿಗೆಯ್ಯ ಹಿರೇಮಠ, ಹೆಗ್ಗೇಶ ಕೋಳೂರು, ಮಂಜುಳಾ ಜಾಲಣ್ಣನವರ, ಡಿ.ಬಿ. ಕುಸಗೂರು, ಪ್ರಕಾಶ ಕೊರಮರ ಇತರರಿದ್ದರು.