More

    ಹಣ್ಣಿನ ರಾಜನಿಗೆ ಕುತ್ತು ತಂದ ಅಕಾಲಿಕ ಮಳೆ

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ

    ತಾಲೂಕಿನಾದ್ಯಂತ ನಾಲ್ಕೈದು ದಿನಗಳಿಂದ ಸುರಿದ ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ಮಾವಿನ ಗಿಡದಲ್ಲಿನ ಹೂ, ಹೀಚು ರೋಗಬಾಧೆಯಿಂದ ನೆಲಕಚ್ಚುತ್ತಿವೆ. ಇದರಿಂದಾಗಿ ಉತ್ತಮ ಫಸಲಿನ ನಿರೀಕ್ಷೆ ಹುಸಿಯಾಗಿದೆ.

    ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಲಕ್ಷ್ಮೇಶ್ವರ/ ಶಿರಹಟ್ಟಿ ತಾಲೂಕಿನಲ್ಲಿ 350 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಲಕ್ಷ್ಮೇಶ್ವರ ತಾಲೂಕಿನ ಲಕ್ಷ್ಮೇಶ್ವರ, ಬಾಲೇಹೊಸೂರು, ದೊಡ್ಡೂರು, ಉಂಡೇನಹಳ್ಳಿ, ಶ್ಯಾಬಳಾ, ರಾಮಗೇರಿ, ಸೂರಣಗಿ ಮೊದಲಾದೆಡೆ ಮಾವು ಬೆಳೆಯಲಾಗಿದೆ. ತಾಲೂಕಿನಲ್ಲಿ ನದಿ, ಕೆರೆ, ಕಾಲುವೆ ಇತರ ನೀರಾವರಿ ಮೂಲ ಇಲ್ಲದಿದ್ದರೂ ಕೊಳವೆಬಾವಿ ನೀರು ನಂಬಿ ರೈತರು ಮಾವು, ಚಿಕ್ಕು, ಪೇರಲ, ತೆಂಗು, ನಿಂಬೆ, ಹೂ, ಕರಿಬೇವು ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

    ಇತ್ತೀಚಿನ ನಾಲ್ಕಾರು ವರ್ಷಗಳಲ್ಲಿ ಮಳೆ ಕಡಿಮೆಯಾಗಿ ಅಂತರ್ಜಲ ಪಾತಾಳ ಕಂಡ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ರೈತರು ಹರಸಾಹಸ ಮಾಡಿ ಬೆಳೆ ಉಳಿಸಿಕೊಂಡಿದ್ದಾರೆ. ಈ ವರ್ಷ ಉತ್ತಮ ಮಳೆ, ಅಂತರ್ಜಲ ಮಟ್ಟ ಹೆಚ್ಚಳ, ಚಳಿಗಾಲದ ಪೂರಕ ವಾತಾವರಣದಿಂದ ಮಾವಿನ ಮರದಲ್ಲಿ ಹೂ, ಹೀಚು ತುಂಬಿದ್ದನ್ನು ಕಂಡು ರೈತರು ಖುಷಿಯಾಗಿದ್ದರು. ಆದರೀಗ ಕಾಡಿಗೆ, ಬೂದು ರೋಗದಿಂದ ಹೂವು, ಹೀಚು ನೆಲಕ್ಕುರುಳುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಬೆಳೆ ಕೈಗೆಟುಕುವುದು ಕಷ್ಟ.

    ನಾಲ್ಕೈದು ವರ್ಷಗಳಿಂದ ಮಳೆ ಕೊರತೆ ನಡುವೆಯೂ ಕಷ್ಟಪಟ್ಟು ಬೆಳೆ ಕಾಪಾಡಿದ್ದೇವೆ. ಖುಷ್ಕಿ ಜಮೀನಿನಲ್ಲಿ ಈ ವರ್ಷ ಅತಿವೃಷ್ಟಿಯಿಂದ ಸಾಕಷ್ಟು ಹಾನಿ ಅನುಭವಿಸಿದ್ದೇವೆ. 6 ಎಕರೆ ಜಮೀನಿನಲ್ಲಿ ಮಾವಿನಿಂದ ಈ ವರ್ಷ ಉತ್ತಮ ಬೆಳೆ ಬರುವ ನಿರೀಕ್ಷೆಯಿತ್ತು. ಆದರೆ, ಅಕಾಲಿಕ ಮಳೆ ಎಲ್ಲವನ್ನೂ ಕಿತ್ತುಕೊಂಡಿದೆ.

    | ರಾಜು ಅಂದಲಗಿ, ಸುರೇಶ ಕುರ್ಡೆಕರ, ತೇಜಸ್ ಕುಲಕರ್ಣಿ, ಮಾವು ಬೆಳೆಗಾರರು

    ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ಮಾವಿನ ಬೆಳೆಯಲ್ಲಿ ರಸಹೀರುವ ಕೀಟಗಳ ಸಂಖ್ಯೆ ಹೆಚ್ಚಾಗುತ್ತವೆ. ಹೂ ಕಪ್ಪಾಗಿ, ಒಣಗಿ. ಬೂದು, ಚುಕ್ಕಿ ರೋಗಕ್ಕೆ ತುತ್ತಾಗುತ್ತವೆ. ಅದರಿಂದ ಹೂ, ಹೀಚು ಉದುರುತ್ತಿವೆ. ಇಮಿಡಾಕ್ಲೋಪ್ರಿಡ್ 3 ಎಂಎಲ್, 10 ಗ್ರಾಂ ಕಾರ್ಬನ್ ಡೈಜಿಮ್ 30 ಎಂಎಲ್ ಬೇವಿನ ಎಣ್ಣೆ, ಅಂಟು ದ್ರಾವಣವನ್ನು 10 ಲೀಟರ್ ನೀರಿಗೆ ಬೆರೆಸಿ ವಾರಕ್ಕೊಮ್ಮೆಯಂತೆ 2 ಬಾರಿ ಸಿಂಪಡಿಸಬೇಕು. ವಾರದ ನಂತರ 50 ಗ್ರಾಂ ಮ್ಯಾಂಗ್ಯೋ ಸ್ಪೆಷಲ್ ದ್ರಾವಣವನ್ನು 10 ಲೀಟರ್ ನೀರಿಗೆ ಬೆರೆಸಿ ವಾರಕ್ಕೊಮ್ಮೆಯಂತೆ 2 ಬಾರಿ ಸಿಂಪಡಿಸಬೇಕು. ಇದರಿಂದ ಕೀಟ, ರೋಗ ನಿಯಂತ್ರಣವಾಗಿ ಉತ್ತಮ ಫಸಲು ಬರಲು ಸಾಧ್ಯವಾಗುತ್ತದೆ.

    | ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts