More

    ಪ್ಲವ ಸಂವತ್ಸರ.. ಏನು-ಎತ್ತ?: ಈ ಸಂವತ್ಸರದಲ್ಲಿ ಕಷ್ಟಗಳು ನೀರಿನಂತೆ ಹರಿದು ಹೋಗಲಿ..

    ಪ್ಲವ ಸಂವತ್ಸರ.. ಏನು-ಎತ್ತ?: ಈ ಸಂವತ್ಸರದಲ್ಲಿ ಕಷ್ಟಗಳು ನೀರಿನಂತೆ ಹರಿದು ಹೋಗಲಿ..2021ರ ಏಪ್ರಿಲ್ 13ರ ಪಾಡ್ಯದಂದು ಚಾಂದ್ರಮಾನದ ಆಧಾರದಲ್ಲಿ ಪ್ಲವ ನಾಮ ಸಂವತ್ಸರ ಆರಂಭವಾಗಲಿದೆ. ಏಪ್ರಿಲ್ 14ರಂದು ಮೇಷಕ್ಕೆ ಸೂರ್ಯ ಆಗಮಿಸುವ ಕಾರಣ ಅಂದು ಸೌರಮಾನ ಯುಗಾದಿ ಸಂಭವಿಸಲಿದೆ. ಮಂಗಳವಾರ ಚಾಂದ್ರಮಾನ ಯುಗಾದಿ ಇರುವುದರಿಂದ ಸಂವತ್ಸರಾಧಿಪತಿ ಕುಜ, ಆತನ ಮೂಲಸ್ವರೂಪ ಸುಬ್ರಹ್ಮಣ್ಯ. ಸೌರಮಾನದ ಪ್ರಕಾರ ಬುಧ ಸಂವತ್ಸರಾಧಿಪತಿಯಾಗುತ್ತಾನೆ. ಆದರೆ, ಋಷಿಗಳು, ಗ್ರಂಥಕರ್ತೃಗಳು, ವಿದ್ವಜ್ಜನರು ಚಾಂದ್ರಮಾನವನ್ನೆ ಆಚರಿಸಿ, ಅಂಗಾರಕನೇ ರಾಜ, ಬುಧ ಮಂತ್ರಿ ಎಂದು ಹೇಳಿದ್ದಾರೆ.

    | ರಾಜಗುರು ಬಿ.ಎಸ್. ದ್ವಾರಕಾನಾಥ್ ಸಿಎಂಡಿ, ಇಚ್ಛಾ ಫರ್ಟಿಲಿಟಿ ಸೊಲ್ಯೂಷನ್ಸ್ ಆ್ಯಂಡ್​ ಡಯಾಗ್ನಸ್ಟಿಕ್ಸ್, ಕೋರಮಂಗಲ

    ರಾಷ್ಟ್ರ ಅಗ್ರಗಣ್ಯ ಸ್ಥಾನಕ್ಕೆ

    ಪ್ಲವ ಎಂದರೆ ಹರಿಯುವ ನೀರು. ವಿಕಾರಿ, ವಿಳಂಬಿ ಹಾಗೂ ಶಾರ್ವರಿ ಸಂವತ್ಸರದಲ್ಲಿ ಭಾರತಕ್ಕೆ ಒದಗಿಬಂದ ತೊಂದರೆಗಳು, ಸಮಸ್ಯೆಗಳು ಈ ಸಂವತ್ಸರದಲ್ಲಿ ನೀರಿನಂತೆ ಹರಿದು ದೂರಾಗುತ್ತವೆ. ಆದರೆ ಕರೊನಾ ಸೋಂಕನ್ನು ತಡೆಯಲು ಕೇಂದ್ರದ ಸೂಚನೆಯಂತೆ ಎಲ್ಲ ರಾಜ್ಯಗಳು ಕೆಲ ತಾತ್ಕಾಲಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯವಿದೆ. ಕುಂಭಕ್ಕೆ ತೆರಳಿದ್ದ ಗುರು ಸೆ. 15ಕ್ಕೆ ಮಕರಕ್ಕೆ ಮರಳುತ್ತಾನೆ. ಅದು ಅಷ್ಟೊಂದು ಒಳ್ಳೆಯ ಸೂಚನೆ ಅಲ್ಲ. ಜನರು ಶಿಸ್ತಿನಿಂದ ಇರಬೇಕು, ನಮಗೆ ನಂಬಿಕೆ ಇರುವ ದೇವರಲ್ಲಿ ಪ್ರಾರ್ಥಿಸಬೇಕು. ಲಕ್ಷ್ಮೀನರಸಿಂಹನ ಪ್ರಾರ್ಥನೆ ಮನುಸೂಕ್ತದಲ್ಲಿದೆ. ಅದನ್ನು ಪಾರಾಯಣ ಮಾಡಿದರೆ ಮತ್ತೂ ಶ್ರೇಯಸ್ಕರ. ಈ ಸಂವತ್ಸರ ಪಾಪವನ್ನು ತೊಳೆಯುತ್ತದಾದರೂ ಇದು ಸಮತೋಲನದ ಸಂವತ್ಸರ. ಏಳಿಗೆ ಏನಿದ್ದರೂ ಮುಂದಿನ ಶುಭಕ್ರಮ ಸಂವತ್ಸರದಲ್ಲೆ. ಆರ್ಥಿಕ, ಔಷಧ, ರಾಜಕೀಯ ಕ್ಷೇತ್ರಗಳಲ್ಲಿ ಹೊಸ ಮುಖಗಳು ಆಗ ಪ್ರವರ್ಧಮಾನಕ್ಕೆ ಬರಲಿವೆ, ರಾಷ್ಟ್ರ ಅಗ್ರಗಣ್ಯ ಸ್ಥಾನಕ್ಕೆ ಏರುತ್ತದೆ.

    ರಾಜಕಾರಣಿಗಳಿಗೆ ನೆಮ್ಮದಿಯಿಲ್ಲ

    ದೇಶಾದ್ಯಂತ ರಾಜ್ಯಗಳನ್ನು ಆಳುತ್ತಿರುವ ನಾಯಕರು ದುರ್ಬಲರಾಗಿ ರಾಜಕೀಯವನ್ನು ಬಿಡುವ ಪರಿಸ್ಥಿತಿ ಬರುತ್ತದೆ. ಮಂಗಳವಾರ ಯುಗಾದಿ ಆಗಮಿಸಿರುವುದರಿಂದ ರಾಜಕಾರಣಿಗಳಿಗೆ ನೆಮ್ಮದಿಯಿಲ್ಲ. ಚಿಂತೆ, ಸ್ವಾರ್ಥ, ಅಸಮಾಧಾನ ಮುಂದುವರಿಯುತ್ತದೆ. ಗುರು ಮುಂದಕ್ಕೆ ಹೋಗಿ ನಾಲ್ಕು ತಿಂಗಳಲ್ಲಿ ತಮಿಳುನಾಡು, ಕೇರಳ, ಪುದುಚೆರಿ, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದೆ. 2024ರ ಚುನಾವಣೆವರೆಗೂ ನರೇಂದ್ರ ಮೋದಿಯವರಿಗೆ ಬಲಿಷ್ಠ ಪ್ರತಿಪಕ್ಷ ಇರುವುದಿಲ್ಲ. ನಂತರ ಪ್ರತಿಪಕ್ಷ ಪ್ರಬಲವಾಗುತ್ತದಾದರೂ 2028ರವರೆಗೂ ಅವರೇ ರಾಷ್ಟ್ರವನ್ನು ಆಳುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಜನರ ಕೈ ಹಿಡಿಯಬೇಕು. ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯಿಂದ ಜನ ಕಂಗಾಲಾಗಿದ್ದು, ದರ ಕಡಿಮೆ ಮಾಡುವಲ್ಲಿ ಮೋದಿಯವರೇ ಮಧ್ಯಪ್ರವೇಶಿಸಬೇಕು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುತ್ತದೆ. ಆದರೆ ಮಮತಾ ಬ್ಯಾನರ್ಜಿಯವರೇ ಮುಖ್ಯಮಂತ್ರಿ ಆಗುತ್ತಾರೆ. ಕೇರಳ, ತಮಿಳುನಾಡು, ಅಸ್ಸಾಂನಲ್ಲಿ ಬಿಜೆಪಿಗೆ ಕಷ್ಟವಿದೆ. ಉತ್ತರ ಪ್ರದೇಶ ಚುನಾವಣೆಯಲ್ಲೂ ಬಿಜೆಪಿಗೆ ಕಷ್ಟವಾಗಲಿದೆ. ತೆಲಂಗಾಣದಲ್ಲಿ ರಾಜಕೀಯ ಅಸ್ಥಿರತೆ, ಆಂಧ್ರಪ್ರದೇಶದಲ್ಲಿ ಎಲ್ಲವೂ ಸರ್ಕಾರ ಅಂದುಕೊಂಡಂತೆ ನಡೆಯುವುದಿಲ್ಲ. ಪಂಜಾಬ್, ಹರ್ಯಾಣಗಳಲ್ಲಿ ಕಾಂಗ್ರೆಸ್ ಬಲ ಪಡೆದುಕೊಳ್ಳುತ್ತದೆ. ಆರ್ಥಿಕತೆಯ ಕ್ಷೇತ್ರದಲ್ಲಿ, ಈ ವರ್ಷ ಜಿಎಸ್​ಟಿ ಉತ್ತಮ ಸಂಗ್ರಹವಾಗುತ್ತದೆ. ಆರ್ಥಿಕ ಬಲ ಹೆಚ್ಚುತ್ತದೆ. ಆಮದು ಮತ್ತು ರಫ್ತಿನ ವಿಸ್ತಾರ ಹೆಚ್ಚಿಸುವ ಪ್ರಯತ್ನಗಳು ಆಗಬೇಕು.

    ಎಳ್ಳು, ಬೆಲ್ಲ, ಜೇನು ಬೆಲೆ ಹೆಚ್ಚಳ

    ಚಂದ್ರ ರಸಾಧಿಪತಿ. ಹಾಗಾಗಿ ನೀರಿನ ಅಂಶಗಳುಳ್ಳ ಎಳ್ಳು, ಬೆಲ್ಲ, ಜೇನು, ಹಾಲು, ಮೊಸರು, ಸಕ್ಕರೆಯಂತಹ ವಸ್ತುಗಳ ಬೆಲೆ ಈ ವರ್ಷ ತುಸು ಏರಿಕೆ ಆಗಲಿದೆ. ಆದರೆ ಚಂದ್ರನಿಂದ ಪ್ರಜೆಗಳ ಆರೋಗ್ಯ ಉತ್ತಮವಾಗುತ್ತದೆ. ಚಂದ್ರ, ಶಿವನ ಶಿರದ ಮೇಲಿರುವುದರಿಂದ, ಶಿವನ ಪ್ರಾರ್ಥನೆ ಒಳಿತು.

    ಚಿನ್ನ, ಬಟ್ಟೆ ದರ ಇಳಿಕೆ

    ಈ ವರ್ಷದ ವಿಶೇಷವೆಂದರೆ ಶುಕ್ರ ನಿರಸಾಧಿಪತಿ. ಕರ್ಪರ, ಅಗರು, ಗಂಧ, ಚಿನ್ನ, ಬಟ್ಟೆ ಬೆಲೆಗಳಲ್ಲಿ ಅಗಾಧ ಇಳಿಕೆ ಆಗುತ್ತದೆ. ಏಪ್ರಿಲ್ 5ರಂದು ಗುರು ಸಂಚಾರ ಬದಲಿಸಿ ಮಕರದಿಂದ ಕುಂಭಕ್ಕೆ ಚಲಿಸುತ್ತಿದ್ದಾನೆ. ಆಗ ಗುರುವಿನ ನಿಜತ್ವ ಹೋಗುತ್ತದೆ. ಆದರೆ ಏಪ್ರಿಲ್ ಅಂತ್ಯದ ನಂತರ, ದೈವಾತ್ಮಕ ಸೃಷ್ಟಿಯಾಗಿರುವ ಕೋವಿಡ್ ಸೋಂಕು ಇಳಿಮುಖದತ್ತ ಸಾಗುತ್ತದೆ. ಎಲ್ಲರೂ ಲಸಿಕೆ ತೆಗೆದುಕೊಳ್ಳೋಣ, ನಿಯಮ ಪಾಲಿಸೋಣ.

    ಗ್ರಹಣ ಬಾಧೆ ಇಲ್ಲ

    ಈ ವರ್ಷ ಮೇ 26ರಂದು ಚಂದ್ರಗ್ರಹಣ ಸಂಭವಿಸಲಿದೆಯಾದರೂ ಅದು ಅಗರ್ತಲಾ, ದೀಸ್​ಪುರ, ಕೊಹಿಮಾ, ಪಶ್ಚಿಮ ಬಂಗಾಲದಂತಹ ಈಶಾನ್ಯ ಪ್ರದೇಶಗಳಲ್ಲಷ್ಟೆ ಗೋಚರಿಸುತ್ತದೆ. ಇನ್ನು, ಜೂ.10ರ ಸೂರ್ಯ ಗ್ರಹಣ, ನ.19ರ ಚಂದ್ರಗ್ರಹಣ ಹಾಗೂ ಡಿ.4ರ ಸೂರ್ಯಗ್ರಹಣಗಳು ಭಾರತದಲ್ಲಿ ಗೋಚರವಾಗದ ಕಾರಣಕ್ಕೆ ಯಾವ ಗ್ರಹದೋಷವೂ ಇರುವುದಿಲ್ಲ. ಆದರೆ ಗ್ರಹಣ ದೋಷದಿಂದ ತತ್ತರಿಸುವ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಅರಬ್ ದೇಶಗಳು ಭಾರತದ ಅವಲಂಬನೆಗೆ ಒಳಪಡುತ್ತವೆ.

    ನ್ಯಾಯದ ಮನೆ ಮುಕ್ತವಾಗಿರಲಿ

    ಶನಿಯು ಧರ್ಮ ಆಚರಣೆ ಮಾಡುವುವರನ್ನಷ್ಟೆ ಕಾಪಾಡುತ್ತಾನೆ. ನ್ಯಾಯಾಂಗ ಹಾಗೂ ಆರ್ಥಿಕತೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಬಾರದು. ನ್ಯಾಯಾಧೀಶರು ನೀಡುವ ತೀರ್ಪನ್ನು ಚರ್ಚೆಗೆ ಒಳಪಡಿಸುವಂತಾಗಬಾರದು. ಮಕರ- ಕುಂಭಾಧಿಪತಿ ಧರ್ಮ ಕರ್ವಧಿಪತಿ ಶನಿಯಾಗಿರುತ್ತಾರೆ. ನ್ಯಾಯಾಂಗದಲ್ಲಿರುವ ಹುದ್ದೆಗಳನ್ನು ಪೂರ್ಣ ಭರ್ತಿ ಮಾಡಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ವ್ಯವಹಾರದಲ್ಲೂ ಸರ್ಕಾರ ಮಧ್ಯಪ್ರವೇಶಿಸಬಾರದು. ಎರಡೂ ಸಂಸ್ಥೆಗಳಿಂದ ಅಗತ್ಯ ಸಲಹೆ, ಸೂಚನೆ ಪಡೆಯಬಹುದೇ ಹೊರತು, ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬಾರದು.

    ರಕ್ಷಣಾ ಬಜೆಟ್ ಹೆಚ್ಚಿಸಬೇಕು

    ಚೀನಾಕ್ಕೆ ದೊಡ್ಡ ಆಪತ್ತು ಕಾದಿದೆ. ನೇಪಾಳದಲ್ಲಿ ಸ್ಥಿರ ಸರ್ಕಾರವಿಲ್ಲ, ಪಾಕಿಸ್ತಾನ ಆರ್ಥಿಕತೆ ಕುಸಿತದಿಂದ ನಷ್ಟ, ಸಾವುನೋವು ಕಾಣುತ್ತದೆ. ಅಮೆರಿಕ ಸುಧಾರಣೆಯತ್ತ ಹೆಜ್ಜೆಯಿಡುತ್ತದಾದರೂ ಚೇತರಿಕೆ ಗೋಚರಿಸಲು 2023ರವರೆಗೆ ಕಾಯಬೇಕು. 2023ರ ನಂತರ ಭಾರತ ವಿಶ್ವ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬರುತ್ತದೆ. ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ನೆಲ ಚೀನಾ ಕಪಿಮುಷ್ಟಿಗೆ ಸಿಲುಕಿ ನೆಲೆ ಕಳೆದುಕೊಳ್ಳುತ್ತವೆ. ಚೀನಾವನ್ನು ಎಚ್ಚರಿಕೆಯಿಂದ ಎದುರಿಸಲು ಅಮೆರಿಕದಿಂದ ಮಾತ್ರ ಸಾಧ್ಯ. ಮಾನಸ ಸರೋವರ ಅತ್ಯಂತ ಪವಿತ್ರ ಸ್ಥಳವಾಗಿದ್ದು, ಜನರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಬೇಕು. ಜನರ ಸಂಚಾರದಿಂದ ಅಸಮತೋಲನವುಂಟಾಗಿ ಹಿಮಾಲಯ ಕುಸಿಯುವ ಅಪಾಯವಿದೆ. ಪಾಕಿಸ್ತಾನದಲ್ಲಿ ಅಶಾಂತಿ ತಲೆದೋರುವುದರಿಂದ ಭಾರತೀಯ ಸೇನೆ ಎಚ್ಚರಿಕೆಯಿಂದ ಇರಬೇಕು. ಭಾರತ ರಕ್ಷಣಾ ಬಜೆಟ್ ಮೊತ್ತವನ್ನು ಭಾರತ ಹೆಚ್ಚಳ ಮಾಡಬೇಕು.

    ಅಮಿತ್ ಷಾಗೆ ಅವಕಾಶ ಕಾಂಗ್ರೆಸ್​ನಲ್ಲಿ ಬದಲಾವಣೆ

    2024ರಲ್ಲಿ ನರೇಂದ್ರ ಮೋದಿಯವರು ಛಲದಿಂದ ಕೂಡಿದ ಪ್ರಯಾಣ ಮುಂದುವರಿಸುತ್ತಾರೆ. ರಾಷ್ಟ್ರಪ್ರೇಮದಲ್ಲಿ ಭಾರತವನ್ನು ಮುನ್ನಡೆಸುವ ವಿಚಾರದಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಷಾ ಕಂಕಣಬದ್ಧರಾಗಿದ್ದಾರೆ. 2023ರಿಂದ ಸದೃಢ ಭಾರತ ಕಟ್ಟುವ ಸಲುವಾಗಿ ಮೋದಿಯವರೇ ಮುಂದಿನ ನಾಯಕತ್ವ ಘೋಷಣೆ ಮಾಡುತ್ತಾರೆ. ಅಮಿತ್ ಷಾ ಅವರಿಗೆ ಹಸ್ತಾಂತರ ಆಗಲಿದೆ. 2022ರ ವೇಳೆಗೆ ವಿರೋಧ ಪಕ್ಷವು ಪುನರ್ಜನ್ಮ ಪಡೆದು ವಂಶಾಡಳಿತದಿಂದ ದೂರಾಗಿ ಹೊಸ ಮುಖಕ್ಕೆ ಅವಕಾಶ ನೀಡಲಾಗುತ್ತದೆ. ಚುನಾವಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ಒಂದು ಪಕ್ಷದಿಂದ ಜಯಿಸಿದ ನಂತರ ಐದು ವರ್ಷ ಅದೇ ಪಕ್ಷದಲ್ಲಿರಬೇಕು. ನಡುವೆ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ತೆರಳಿದರೂ, ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರಕೂಡದು. ವಂಶಪಾರಂಪರ್ಯ ಆಡಳಿತಕ್ಕೆ ಕಡಿವಾಣ ಹಾಕುವಂತೆ ಕಾನೂನು ಜಾರಿ ಮಾಡಬೇಕು. 70 ವರ್ಷಕ್ಕೆ ಕಡ್ಡಾಯ ನಿವೃತ್ತಿ ವಿಧಿಸಬೇಕು.

    ಉತ್ತಮ ಮಳೆ

    ಈ ವರ್ಷ ಎಲ್ಲ ತೀರ್ಥ ಕ್ಷೇತ್ರಗಳ ನದಿಗಳೂ ಸ್ವಚ್ಛವಾಗಿ, ತುಂಬಿ ಹರಿಯಲಿವೆ. ಕೆಲವು ಭಾಗಗಳಲ್ಲಿ ಅಪಾಯ ಎನ್ನುವುದನ್ನು ಹೊರತುಪಡಿಸಿ ಬಹುತೇಕ ಉತ್ತಮ ಮಳೆಯಾಗಲಿದೆ.

    ವಿದೇಶ ಸಂಚಾರ ನಿರ್ಬಂಧಿಸಿ

    ಗುರುವು ಮಕರದಿಂದ ಕುಂಭಕ್ಕೆ, ಮತ್ತೆ ಮಕರಕ್ಕೆ ಸಂಚರಿಸುವುದರಿಂದ, ದೇಶದೊಳಗೆ ಸೋಂಕಿನ ಆತಂಕವಿರುವುದಿಲ್ಲ. ಆದರೆ ಅನ್ಯ ದೇಶಗಳಿಂದ ಸೋಂಕು ಹರಡುವ ಭೀತಿ ಇದೆ. ಹಾಗಾಗಿ ವಿದೇಶಿ ವಿಮಾನಗಳ ಸಂಚಾರದ ಮೇಲೆ ನಿಗಾ ಇರಬೇಕು, ನಿರ್ಬಂಧಿಸಿದರೂ ಉತ್ತಮ. ಏಪ್ರಿಲ್​ನಲ್ಲಿ ಎಲ್ಲ ಸಮಾರಂಭಗಳನ್ನು ರದ್ದುಪಡಿಸಿ, ಆರೋಗ್ಯ ಕಾಪಾಡುವತ್ತ ಗಮನ ಹರಿಸಬೇಕು.

    ರಾಜ್ಯ ರಾಜಕೀಯದಲ್ಲಿ ಅಸ್ಥಿರತೆ

    ಏಪ್ರಿಲ್ 5ರ ವೇಳೆಗೆ ರಾಜ್ಯ ರಾಜಕೀಯದಲ್ಲಿ ಸಂಕಷ್ಟ ಎದುರಾಗುತ್ತದೆ; ಯುವತಿಯೊಬ್ಬರ ವಿಚಾರದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತದೆ ಎಂದು ಈ ಹಿಂದಿನ ಲೇಖದಲ್ಲಿ ಎಚ್ಚರಿಸಲಾಗಿತ್ತು. ಇದೀಗ ಯುವತಿಯೊಬ್ಬರ ವಿಚಾರದ ಜತೆಗೆ ಸರ್ಕಾರದ ಆಡಳಿತ ಪಕ್ಷದಲ್ಲಿ ಆಂತರಿಕವಾಗಿಯೂ ಗೊಂದಲಗಳು ಭುಗಿಲೆದ್ದಿವೆ. ಮುಖ್ಯಮಂತ್ರಿಯವರಿಗೆ ಇಲ್ಲಿಯವರೆಗೆ ಗುರುವಿನ ರಕ್ಷಣೆ ಇತ್ತು, ಏ. 5ರ ನಂತರ ಅದು ಇರುವುದಿಲ್ಲ. ಸ್ಥಾನಪಲ್ಲಟ ಮಾಡುತ್ತಾನೆ ಅಥವಾ ಇದ್ದ ಸ್ಥಾನದಲ್ಲಿ ನೆಮ್ಮದಿ ಕಸಿಯುತ್ತಾನೆ. ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆ, ಸರ್ಕಾರದ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ಮೂಲಕ ಜನಮನ ಒಲಿಸಿಕೊಳ್ಳುವತ್ತ ಹೆಜ್ಜೆ ಇಟ್ಟರೆ ಸಂಕಷ್ಟ ದೂರವಾಗಬಹುದು.

    ಮಳೆಯಿಂದ ಹಾನಿ

    ಗುರು ಮಕರಕ್ಕೆ ವಾಪಸಾದಾಗ ಉತ್ತರ ಭಾರತದಲ್ಲಿ ಪ್ರವಾಹ, ಚಂಡಮಾರುತ, ರೈಲ್ವೆ ದುರಂತ, ಭೂಕಂಪನಕ್ಕೆ ಕಾರಣವಾಗುತ್ತದೆ. ಅಗ್ನಿ ಅವಘಡ ಹೆಚ್ಚುತ್ತದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಒಡಿಶಾ, ಉತ್ತರಾಖಂಡ, ಉತ್ತರ ಪ್ರದೇಶ ಮುಂತಾದೆಡೆ ನದಿಗಳು ಉಕ್ಕಿಹರಿದು ಬೆಳೆ, ಪಶು ನಷ್ಟವಾಗುತ್ತದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಮುಂತಾದೆಡೆ ಮಳೆಯಿಂದ ಹಾನಿಯಾಗುವ ಸಾಧ್ಯತೆಯಿದೆ. ಬೆಳೆ- ಮಳೆ ಸಂರಕ್ಷಿಸುವ ಸಸ್ಯಾಧಿಪ ಶನಿ ಆಗಿರುವುದರಿಂದ ಹುರುಳಿ, ಉದ್ದು, ಹೆಸರಿನಂತಹ ಕೆಲವು ಧಾನ್ಯಗಳ ಉತ್ಪತ್ತಿ ಹೆಚ್ಚುತ್ತದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತಪ್ಪಿದರೆ ರಾಷ್ಟ್ರವ್ಯಾಪಿ ರೈತರ ಹೋರಾಟ ತೀವ್ರವಾಗಿ, ಕೇಂದ್ರ ಸರ್ಕಾರಕ್ಕೆ ತೊಂದರೆ ಉಂಟಾಗಬಹುದು. ಗುರುವು ಶನಿ ಮನೆಯಲ್ಲಿರುವುದರಿಂದ ಎಲ್ಲ ರಾಜ್ಯಗಳೂ ಸೂಕ್ಷ್ಮತೆಯಿಂದ ವ್ಯವಹರಿಸಬೇಕು. ರಾಷ್ಟ್ರದ ಅಖಂಡತೆಗೆ ಅಪಾಯವಾಗಲು ಕೇಂದ್ರ ಸರ್ಕಾರ ಅವಕಾಶ ನೀಡಬಾರದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts