More

    ಮಾರುಕಟ್ಟೆಯಲ್ಲಿ ಮಾಸ್ಕ ಮರೆತ ಮಂದಿ

    ಬೆಳಗಾವಿ: ಕರೊನಾ ಸೋಂಕು ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಕಾಪಾಡುವುದೊಂದೇ ಅಸ್ತ್ರ ಎಂದು ಸರ್ಕಾರ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರು ಮಾತ್ರ ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

    ಬಹುತೇಕರು ಮುನ್ನೆಚ್ಚರಿಕೆ ವಹಿಸದೇ ಮಾರುಕಟ್ಟೆ ಪ್ರದೇಶದಲ್ಲಿ ಸೇರುತ್ತಿದ್ದು, ಜನಜಂಗುಳಿಯ ದೃಶ್ಯ ಕರೊನಾ ಕುರಿತಾಗಿ ಮತ್ತಷ್ಟು ಆತಂಕ ಹೆಚ್ಚಿಸುತ್ತಿದೆ. ಕುಂದಾನಗರಿಯ ಮಾರುಕಟ್ಟೆ ಪ್ರದೇಶಗಳು ಎಂದಿನಂತೆ ಜನದಟ್ಟಣೆಯಿಂದ ಕೂಡಿರುತ್ತಿದೆ. ಸದ್ಯ ಕರೊನಾ ವೈರಸ್ ಬೆಂಬಿಡದ ಭೂತದಂತೆ ಕಾಡುತ್ತಿರುವ ಸಂಗತಿ ತಿಳಿದಿದ್ದರೂ ಮಾಸ್ಕ್ ಧರಿಸದೆ, ದೈಹಿಕ ಅಂತರವನ್ನೂ ಕಾಪಾಡಿಕೊಳ್ಳದೆ ಬಿಂದಾಸ್
    ಆಗಿ ವ್ಯಾಪಾರ ಪ್ರಕ್ರಿಯೆಯಲ್ಲಿ ತಲ್ಲೀನರಾಗಿರುವುದು ಸಾಮಾನ್ಯವಾಗಿದೆ.

    ಗಂಟಲಿಗೆ ಮಾಸ್ಕ್!: ನಗರದ ಕಾಂದಾ ಮಾರುಕಟ್ಟೆ, ಖಡೇಬಜಾರ್ ಪ್ರದೇಶಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ಮಾಸ್ಕ್ ಧರಿಸಿದ್ದರೂ ಸಹ ಸರಿಯಾಗಿ ಮೂಗು, ಬಾಯಿ ಮುಚ್ಚಿಕೊಳ್ಳದೆ ಗಂಟಲಿಗೆ ಹಾಕಿಕೊಂಡು ಅಲೆಯುತ್ತಿದ್ದಾರೆ. ಬಹುತೇಕ ವ್ಯಾಪಾರಸ್ಥರು ಮಾಸ್ಕ್ ಧರಿಸದೆ ಕೂಗಿ ಕೂಗಿ ಗ್ರಾಹಕರನ್ನು ಕರೆದು ವ್ಯಾಪಾರ ನಡೆಸುತ್ತಿದ್ದಾರೆ.

    ದಂಡ ವಸೂಲಿ: ಇನ್ನು ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಧರಿಸದವರ ಹಾಗೂ ಅಂತರ ಕಾಪಾಡಿಕೊಳ್ಳದವರ ವಿರುದ್ಧ ಪೊಲೀಸರು, ನಗರದಲ್ಲಿ ಪಾಲಿಕೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿತ್ಯ 600ಕ್ಕೂ ಅಧಿಕ ಜನರಿಗೆ ದಂಡ ವಿಧಿಸುತ್ತಿದ್ದಾರೆ. ಆದರೂ, ಜನ ಹಳ್ಳಿಗಳಲ್ಲಿ ನಡೆಯುವ ವಾರದ ಸಂತೆಯಲ್ಲಿ ಕರೊನಾ ಸೋಂಕಿನ ಭಯವೇ ಇಲ್ಲದ ರೀತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

    ಜಾನುವಾರುಗಳ ಜಾತ್ರೆಯಲ್ಲಿಲ್ಲ ಜಾಗೃತಿ: ದಿನಸಿ ಹಾಗೂ ತರಕಾರಿ ಮಾರುಕಟ್ಟೆಗಳಲ್ಲಷ್ಟೇ ಅಲ್ಲದೆ, ಜಿಲ್ಲೆಯ
    ವಿವಿಧೆಡೆ ನಡೆಯುವ ಜಾನುವಾರುಗಳ ಸಂತೆಗಳಲ್ಲೂ ಈ ಅಜಾಗೃತೆ ಕಾಣುತ್ತಿದೆ. ಸೋಮವಾರದಂದು ಕಿತ್ತೂರಿನಲ್ಲಿ ಹಾಗೂ ಮಂಗಳವಾರ ಎಂ.ಕೆ.ಹುಬ್ಬಳ್ಳಿಯಲ್ಲಿ ಜರುಗುವ ಜಾನುವಾರುಗಳ ಜಾತ್ರೆಯಲ್ಲೂ ಕರೊನಾ ನಿಯಂತ್ರಣ ಕ್ರಮ ಕಣ್ಮರೆಯಾಗಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಜಾನುವಾರುಗಳ ಖರೀದಿ ಹಾಗೂ ಮಾರಾಟಕ್ಕೆ ಬರುವ ರೈತರಲ್ಲಿ ಬಹುತೇಕರು ಮಾಸ್ಕ್ ಧರಿಸುತ್ತಿಲ್ಲ. ಅಷ್ಟೇ ಅಲ್ಲ, ಖರೀದಿ ಸಮಯದಲ್ಲಿಯೂ ಜಾನುವಾರಗಳ ಹಲ್ಲು ನೋಡುವಾಗಲೂ ಯಾರೊಬ್ಬರೂ ಕೈಗವಸು ಹಾಕಿಕೊಳ್ಳದೆ ಒಬ್ಬರ ನಂತರ ಒಬ್ಬರು ಹಾಗೆಯೇ ಪರೀಕ್ಷಿಸುತ್ತಿದ್ದಾರೆ. ಇದರಿಂದಾಗಿ ಜಾನುವಾರುಗಳಿಗೂ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ.

    ಬಸ್‌ಗಳಲ್ಲಿ ಸಂಚಾರ.. ತರುತ್ತಿದೆ ಸಂಚಕಾರ

    ಮೂರು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಈ ಜಿಲ್ಲೆಯಲ್ಲಿ ಇತ್ತೀಚೆಗೆ ಗೋವಾ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಮತ್ತೆ ಪುನಾರಂಭಗೊಂಡಿದೆ. ಆರಂಭದಲ್ಲಿ ಎಲ್ಲ ವಾಹನಗಳಿಗೂ ಸೋಂಕು ನಿವಾರಣ ದ್ರಾವಣ ಸಿಂಪಡಿಸಿ, ಪ್ರಯಾಣಿಕ ದೈಹಿಕ ಅಂತರ ಕಾಪಾಡುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಇದೀಗ ಯಾವುದೇ ದ್ರಾವಣ ಸಿಂಪಡಿಸುತ್ತಿಲ್ಲ ಜತೆಗೆ ವಾಹನಗಳಲ್ಲಿ ಹಿಂದಿನಂತೆಯೇ ಪ್ರಯಾಣಿಕರು ಕುಳಿತುಕೊಳ್ಳುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಸೋಂಕಿಗೆ ಚಿಕಿತ್ಸೆ ಪಡೆದ ಬಹುತೇಕರು ಅದೇ ಬಸ್‌ಗಳಲ್ಲಿಯೇ ತಮ್ಮೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದರಿಂದಾಗಿ ಇನ್ನಷ್ಟು ಜನರಿಗೆ ಕರೊನಾ ವೈರಸ್ ಹರಡುವ ಸಾಧ್ಯತೆ ಇದೆ.

    ಆರಂಭದಿಂದಲೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಪಾಲಿಕೆ ಸಿಬ್ಬಂದಿ ಕಂಡಾಗ ಮಾಸ್ಕ್ ಧರಿಸಿ, ಮತ್ತೆ ಮುಂದೆ ಹೋದಂತೆ ಮಾಸ್ಕ್ ತೆಗೆಯುವುದು ಕಂಡು ಬಂದಿದೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ತಪ್ಪದೇ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜನನಿಬೀಡ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ದಂಡ ವಿಧಿಸುವ ಮೂಲಕ ತಿಳಿವಳಿಕೆ ಮೂಡಿಸಲಾಗುವುದು.
    | ಕೆ.ಎಚ್. ಜಗದೀಶ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ

    ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವವರು ಕುಟುಂಬದವರ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಕಳೆದ ಹಲವು ದಿನಗಳಿಂದಲೂ ಗ್ರಾಮೀಣ ವ್ಯಾಪ್ತಿಯಲ್ಲಿ ಕರೊನಾ ನಿಯಂತ್ರಣಕ್ಕಾಗಿ ಅನುಸರಿಸಬೇಕಿದ್ದ ಮಾರ್ಗಸೂಚಿ ಉಲ್ಲಂಘಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿ, ದಂಡ ವಿಧಿಸಲಾಗುತ್ತಿದೆ.
    | ಲಕ್ಷ್ಮಣ ನಿಂಬರಗಿ ಪೊಲೀಸ್ ವರಿಷ್ಟ, ಬೆಳಗಾವಿ ಜಿಲ್ಲೆ

    | ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts