More

    ಅಭಿವೃದ್ಧಿಯಲ್ಲಿ ಸಂಪೂರ್ಣ ಹಿಂದುಳಿದಿರುವ ಕೊಪ್ಪಳ ಜಿಲ್ಲೆಯ ಗಡಿಗ್ರಾಮ ಮುರ್ಲಾಪುರ

    ವಿಜಯವಾಣಿ ವಿಶೇಷ ಅಳವಂಡಿ
    ಸ್ವಾತಂತ್ರೃ ಬಂದು ಹಲವು ದಶಕಗಳೇ ಕಳೆದೋಗಿದ್ದು, ಹಲವು ಗ್ರಾಮಗಳು ಅಭಿವೃದ್ಧಿಯತ್ತ ಮುಖಮಾಡಿವೆ. ಆದರೆ, ಮುರ್ಲಾಪುರ ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ, ಸ್ವಾತಂತ್ರೃ ಪೂರ್ವದಲ್ಲಿದ್ದಂತಹ ಪರಿಸ್ಥಿತಿಯ ಚಿತ್ರಣ ನೆನಪಾಗದೇ ಇರದು.

    ಕೊಪ್ಪಳ ಜಿಲ್ಲೆಯ ಗಡಿ ಗ್ರಾಮವಾದ ಮುರ್ಲಾಪುರ, ಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿದೆ. ಸುಮಾರು 800 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಗ್ರಾಮಸ್ಥರು ದಿನನಿತ್ಯ ಪರದಾಡುವಂತಾಗಿದೆ.

    ಮುರ್ಲಾಪುರ ಗ್ರಾಮದಿಂದ ಕೇವಲ ಮೂರ‌್ನಾಲ್ಕು ಕಿಮೀ. ಅಂತರದಲ್ಲಿ ಗದಗ ಜಿಲ್ಲೆಯ ಮುಂಡರಗಿ ನಗರವಿದೆ. ಕೊಪ್ಪಳ ತಾಲೂಕು ಕೇಂದ್ರ 35 ಕಿಮೀ. ದೂರವಿದೆ. ಹೀಗಾಗಿ ಮುರ್ಲಾಪುರ ಗ್ರಾಮಸ್ಥರು ವಾಣಿಜ್ಯ, ವಹಿವಾಟು, ಆಸ್ಪತ್ರೆ, ಶಾಲಾ-ಕಾಲೇಜುಗಳಿಗೆ ಮುಂಡರಗಿ ನಗರವನ್ನು ಅವಲಂಬಿಸಿದ್ದಾರೆ.

    ಗ್ರಾಮದಲ್ಲಿ 1ರಿಂದ 7ನೇ ತರಗತಿವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. 61 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಮಕ್ಕಳಿಗೆ ಆಟದ ಮೈದಾನ ಕೊರತೆ ಇದೆ.

    ಗ್ರಾಮದ ಸ್ವಚ್ಛತೆಗೆ ಗ್ರಾಪಂನಿಂದ ಯಾವುದೇ ಸಿಬ್ಬಂದಿ ನೇಮಿಸಿಲ್ಲ. ಹೀಗಾಗಿ ಇಡೀ ಗ್ರಾಮ ಅನೈರ್ಮಲ್ಯತೆಯ ತಾಣವಾಗಿದ್ದು, ಚರಂಡಿಗಳು ತ್ಯಾಜ್ಯ ತುಂಬಿಹೋಗಿವೆ. ರಸ್ತೆ ಮೇಲೆ ನೀರು ನಿಂತು ಕೆಸರುಮಯವಾಗಿದ್ದು, ಸೊಳ್ಳೆಗಳು ಹೆಚ್ಚಳದಿಂದ ಗ್ರಾಮಸ್ಥರಲ್ಲಿ ರೋಗ ಭೀತಿ ಕಾಡುತ್ತಿದೆ.

    ಶುದ್ಧ ನೀರಿನ ಘಟಕ ಸ್ಥಗಿತ: ಗ್ರಾಮಕ್ಕೆ ನೀರು ಪೂರೈಸಲು ಓವರ್‌ಹೆಡ್ ಟ್ಯಾಂಕ್ ಇಲ್ಲ. ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಕುಡಿಯಲು ಶುದ್ಧ ಕುಡಿಯುವ ನೀರು ಸಿಗಲೆಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ. ಆದರೆ, ಆ ಘಟಕ ಕಾರ್ಯನಿರ್ವಹಿಸಿದ್ದಕ್ಕಿಂತ ಬಂದ್ ಆಗಿದ್ದೇ ಹೆಚ್ಚು. ಕಳೆದೆರಡ್ಮೂರು ವರ್ಷದಿಂದ ಈ ಘಟಕ ಚಾಲನೆಯಲ್ಲಿ ಇಲ್ಲದ್ದರಿಂದ ಜನರು ಕುಡಿಯುವ ನೀರಿಗಾಗಿ ಕೃಷಿಹೊಂಡ, ಕೆರೆಕುಂಟೆಗಳನ್ನು ಅವಲಂಬಿಸಿದ್ದಾರೆ. ಕೆಲವರು ಶುದ್ಧ ಕುಡಿಯುವ ನೀರಿಗಾಗಿ ಪಕ್ಕದ ಘಟ್ಟಿರಡ್ಡಿಹಾಳ ಗ್ರಾಮ ಅಥವಾ ಮುಂಡರಗಿ ನಗರಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ನೀರು ಪೂರೈಸಲಾಗುತ್ತಿದ್ದರೂ ಅನಿಯಮಿತವಾಗಿದೆ. ಗ್ರಾಮದಲ್ಲಿ ಕೊಳವೆ ಬಾವಿ ಮೂಲಕ ನೀರು ಪೂರೈಕೆಗೆ ಗ್ರಾಪಂ ವ್ಯವಸ್ಥೆ ಮಾಡಿದೆ. ಆದರೆ, ಈ ನೀರನ್ನು ಪೂರೈಸಲು ಗ್ರಾಮದಲ್ಲಿ ನೀರುಗಂಟಿ ಇಲ್ಲ ಹಾಗೂ ಈ ನೀರು ಉಪ್ಪುಮಿಶ್ರಿತವಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ.

    ಊರೊಳಗಿಲ್ಲ ನೆಟ್‌ವರ್ಕ್: ಜಗತ್ತು ತಾಂತ್ರಿಕವಾಗಿ ಅತ್ಯಂತ ವೇಗವಾಗಿ ಓಡುತ್ತಿದೆ. ಈಗ ಎಲ್ಲೆಡೆ ಮೊಬೈಲ್ ಬಳಕೆ ಸಾಮಾನ್ಯವಾಗಿದೆ. ಆದರೆ, ಈ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡ ಸರಿಯಾಗಿಲ್ಲ. ಗ್ರಾಮದಲ್ಲಿನ ಯಾರನ್ನಾದರು ಸಂಪರ್ಕಿಸಬೇಕಾದರೆ ಗ್ರಾಮದ ಸುಮಾರು ಮೂರ‌್ನಾಲ್ಕು ಜನರ ಮೊಬೈಲ್ ಸಂಖ್ಯೆಯನ್ನು ಇಟ್ಟುಕೊಂಡಿರಬೇಕು. ಅಂದರೆ ಗ್ರಾಮದ ಹೊರಗೆ ಬಂದವರಿಗೆ ಮೊಬೈಲ್ ನೆಟ್‌ವರ್ಕ್ ಸಿಗುತ್ತದೆ. ಅವರಿಗೆ ಕರೆ ಮಾಡಿ, ತಮಗೆ ಬೇಕಾದವರಿಗೆ ಫೋನ್ ಮಾಡಲು ತಿಳಿಸಬೇಕು. ನಂತರ ಅವರು ಮನೆಯ ಮೇಲೆ ಅಥವಾ ಗ್ರಾಮದ ಹೊರಕ್ಕೆ ಬಂದು ಫೋನ್ ಮಾಡಬೇಕಾದ ಸ್ಥಿತಿ ಇದೆ.

    ಮುರ್ಲಾಪುರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿ ಗ್ರಾಮಸ್ಥರಿಗೆ ನೀರು ಪೂರೈಸಲಾಗುವುದು. ಹಾಗೂ ಗ್ರಾಮದಲ್ಲಿ ಸ್ವಚ್ಛತೆ ಮಾಡಲು ನೌಕರ ಹಾಗೂ ನೀರುಗಂಟಿ ಇಲ್ಲ. ಈ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಕೊಳ್ಳಲಾಗುವುದು.
    ರತ್ನವ್ವ ಕಂಬಳಿ, ಹಟ್ಟಿ ಗ್ರಾಪಂ ಪಿಡಿಒ

    ಗ್ರಾಮದಲ್ಲಿ ನೀರು ಪೂರೈಕೆ ಸರಿಯಾಗಿಲ್ಲ. ಬೋರ್‌ವೆಲ್‌ನಿಂದ ಪೂರೈಸುವ ನೀರಿನಲ್ಲಿ ಉಪ್ಪುಮಿಶ್ರಣವಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಗ್ರಾಮದಲ್ಲಿ ಒಎಚ್‌ಟಿ ಟ್ಯಾಂಕ್ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ನೀರಿಗಾಗಿ ಮುಂಡರಗಿ ಅಥವಾ ಪಕ್ಕದ ಹಳ್ಳಿಗೆ ತೆರಳಬೇಕು.
    ಅಂದಾನಗೌಡ ಪೊಲೀಸ್ ಪಾಟೀಲ, ಗ್ರಾಮಸ್ಥ, ಮುರ್ಲಾಪುರ

    ಗ್ರಾಮದಿಂದ ಮುಂಡರಗಿ ಹಾಗೂ ಕವಲೂರಿಗೆ ತೆರಳುವ ಸಂಪೂರ್ಣ ಹಾಳಗಿದೆ. ಮಳೆ ಬಂದರೆ ಸಂಚಾರ ಕಷ್ಟವಾಗಲಿದೆ. ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಸಹ ಸರಿಯಾಗಿ ಬರುತ್ತಿಲ್ಲ. ಗ್ರಾಮ ಪಂಚಾಯಿತಿಯವರು ಗ್ರಾಮದಲ್ಲಿ ನೀರುಗಂಟಿ, ಸ್ವಚ್ಛತಾಗಾರರನ್ನು ನೇಮಿಸಬೇಕು.
    ಸುರೇಶ ಚನ್ನಳ್ಳಿ, ಗ್ರಾಮಸ್ಥ, ಮುರ್ಲಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts