More

    ವಿಜಯಮಾಲೆಗೆ ಸಮಬಲ ಪೈಪೋಟಿ: ಬಿಜೆಪಿ ಟಿಕೆಟ್​ಗಾಗಿ ಹೊಸಬರ ಹಂಬಲ..

    ಮುಂಗಾರು ಮಳೆ ಅಬ್ಬರದಲ್ಲೂ ವಿಜಯಪುರ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ಇಮ್ಮಡಿಗೊಳ್ಳುತ್ತಿದೆ! ಸದ್ಯ ಎಂಟು ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ, ಮೂರು ಕಾಂಗ್ರೆಸ್, ಒಂದು ಜೆಡಿಎಸ್ ಹಿಡಿತದಲ್ಲಿವೆ. ನಾಗಠಾಣ ಎಸ್​ಸಿ ಮೀಸಲು ಕ್ಷೇತ್ರ ಹಾಗೂ ಸಿಂದಗಿ ಹೊರತುಪಡಿಸಿ ಇನ್ನುಳಿದ 6 ಕ್ಷೇತ್ರಗಳಲ್ಲಿ ‘ಪಾಟೀಲ’ರೇ ಅಧಿಕಾರದಲ್ಲಿದ್ದು, ಮುಂಬರುವ ಚುನಾವಣೆಯಲ್ಲೂ ಅವರೇ ಅಖಾಡಕ್ಕಿಳಿಯುವುದು ಖಚಿತ. ಎದುರಾಳಿ ಯಾರು? ಎಂಬುದೇ ಸದ್ಯದ ಕುತೂಹಲ. ಕಾಂಗ್ರೆಸ್ ‘ಲೀಡರ್ ಬೇಸ್ಡ್’, ಬಿಜೆಪಿ ‘ಕೇಡರ್ ಬೇಸ್ಡ್’ ಪಕ್ಷ. ಕಾಂಗ್ರೆಸ್ ನಾಯಕರು ಯಾವುದೇ ಪಕ್ಷ ಹಾಗೂ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲುವ ಉಮೇದಿನಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಪಕ್ಷವೇ ಗೆಲುವಿನ ಮಾನದಂಡ. 2018ರ ಚುನಾವಣೆಯಲ್ಲಿ 2 ಕ್ಷೇತ್ರ(ನಾಗಠಾಣ, ಸಿಂದಗಿ)ದಲ್ಲಿ ಜಯಗಳಿಸಿ ಮೂರರಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಜೆಡಿಎಸ್​ನಿಂದ ಈ ಬಾರಿ ಪ್ರಮುಖ ನಾಯಕರು ವಿಮುಖರಾಗಿದ್ದಾರೆ. ಆಮ್ ಆದ್ಮಿ ಸಕ್ರಿಯವಾಗಿದೆ.

    | ಪರಶುರಾಮ ಭಾಸಗಿ ವಿಜಯಪುರ

    ಧರ್ಮಾಧಾರಿತ ಕ್ಷೇತ್ರ ವಿಜಯಪುರ ನಗರ

    ವಿಜಯಮಾಲೆಗೆ ಸಮಬಲ ಪೈಪೋಟಿ: ಬಿಜೆಪಿ ಟಿಕೆಟ್​ಗಾಗಿ ಹೊಸಬರ ಹಂಬಲ..ಬಿಜೆಪಿ ಆಂತರಿಕ ಪ್ರತಿಪಕ್ಷ ನಾಯಕ ಎಂದೇ ಖ್ಯಾತಿ ಪಡೆದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿನಿಧಿಸುವ ವಿಜಯಪುರ ನಗರ ಕ್ಷೇತ್ರ ಧರ್ವಧಾರಿತ ಚುನಾವಣೆಗೆ ಮುನ್ನುಡಿ ಬರೆಯುವಂಥದ್ದು. ಮುಸ್ಲಿಂ ಮತಗಳೇ ಬೇಡವೆಂದು ಸಾರಾಸಗಟು ತಳ್ಳಿ ಹಾಕಿ ಅಧಿಕಾರಕ್ಕೆ ಬಂದವರು ಯತ್ನಾಳ. ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಲೇ ಅಧಿಕಾರವಧಿ ಮುಗಿಸುತ್ತಾ ಬಂದಿರುವ ಯತ್ನಾಳರು ಮತ್ತೊಮ್ಮೆ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿರುವುದೇನೋ ಸರಿ. ಅವರ ನಡವಳಿಕೆ ಸಹಿಸಿಕೊಂಡ ಪಕ್ಷ ಟಿಕೆಟ್ ನೀಡುತ್ತದಾ? ಎಂಬುದೇ ಅನುಮಾನ. ಟಿಕೆಟ್ ವಂಚಿತಗೊಂಡರೂ ಪಕ್ಷದಲ್ಲಿಯೇ ಇದ್ದು ನಿಷ್ಠೆ ಮೆರೆದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ ಟಿಕೆಟ್ ರೇಸ್​ನಲ್ಲಿದ್ದಾರೆ. ಕಾಂಗ್ರೆಸ್​ನಲ್ಲಿ ಹಮೀದ್ ಮುಶ್ರೀಫ್ ಮತ್ತೊಂದು ಅವಧಿಗೆ ಸ್ಪರ್ಧಿಸಲು ಸಜ್ಜಾಗಿದ್ದರೂ ಕಳೆದ ಬಾರಿ ಟಿಕೆಟ್ ವಂಚಿತ ಮಕ್ಬುಲ್ ಬಾಗವಾನ್​ಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಬಿಜೆಪಿ ಅಥವಾ ಕಾಂಗ್ರೆಸ್​ನ ಟಿಕೆಟ್ ವಂಚಿತರು ಜೆಡಿಎಸ್ ಮೊರೆ ಹೋಗುವುದು ಸಾಮಾನ್ಯ.

    ಬಬಲೇಶ್ವರದಲ್ಲಿ ಎಂಬಿಪಿ ಪಾರಮ್ಯ

    ವಿಜಯಮಾಲೆಗೆ ಸಮಬಲ ಪೈಪೋಟಿ: ಬಿಜೆಪಿ ಟಿಕೆಟ್​ಗಾಗಿ ಹೊಸಬರ ಹಂಬಲ..ಹೈವೋಲ್ಟೇಜ್ ಕ್ಷೇತ್ರ ಬಬಲೇಶ್ವರದಲ್ಲಿ ಎಂ.ಬಿ. ಪಾಟೀಲರದ್ದೇ ಪಾರಮ್ಯ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಸಾಧಿ್ವ ನಿರಂಜನ ಜ್ಯೋತಿ ಅಂಥ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬಂದರೂ ಸೋತಿಲ್ಲ ಎಂಬುದು ಎಂ.ಬಿ. ಪಾಟೀಲರ ಹೆಗ್ಗಳಿಕೆ. ಲಿಂಗಾಯತ ಕೋಟಾದಡಿ ಸಿಎಂ ರೇಸ್​ನಲ್ಲೂ ಇದ್ದಾರೆ. ಇದೇ ಈ ಬಾರಿಯ ಪ್ಲಸ್ ಮತ್ತು ಮೈನಸ್ ಕೂಡ. ಹ್ಯಾಟ್ರಿಕ್ ಸೋಲುಂಡಿರುವ ವಿಜುಗೌಡ ಪಾಟೀಲ ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ, ಪರ್ಯಾಯ ನಾಯಕತ್ವ ಸೃಷ್ಟಿ ಮಾಡುತ್ತಿರುವ ಸಂಘ ಪರಿವಾರದ ನಾಯಕರು ಅದೇ ಸಮುದಾಯದ ಉಮೇಶ ಕೋಳಕೂರ ಅವರನ್ನು ತೆರೆಮರೆಯಲ್ಲಿ ಸನ್ನದ್ಧಗೊಳಿಸುತ್ತಿದ್ದಾರೆ. ಗುರುಲಿಂಗಪ್ಪ ಅಂಗಡಿ ಸಹ ಟಿಕೆಟ್​ಗೆ ಬಲವಾದ ಬೇಡಿಕೆ ಇರಿಸಿದ್ದಾರೆ. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಇಲ್ಲಿ ಕಣಕ್ಕಿಳಿಸಿದರೆ ಹೇಗೆ? ಎಂಬ ಚರ್ಚೆಯೂ ನಡೆದಿದೆ. ಏತನ್ಮಧ್ಯೆ ಶಾಸಕ ಶಿವಾನಂದ ಪಾಟೀಲ ತಮ್ಮ ಕ್ಷೇತ್ರ ಮರಳಿ ಕೊಡಿಸುವಂತೆ ಕಾಂಗ್ರೆಸ್ ಹೈಕಮಾಂಡ್​ಗೆ ದುಂಬಾಲು ಬಿದ್ದಿದ್ದಾರಂತೆ.

    ಬಸವಭೂಮಿಯಲ್ಲಿ ವೈಯಕ್ತಿಕ ಬಲ

    ವಿಜಯಮಾಲೆಗೆ ಸಮಬಲ ಪೈಪೋಟಿ: ಬಿಜೆಪಿ ಟಿಕೆಟ್​ಗಾಗಿ ಹೊಸಬರ ಹಂಬಲ..ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡರೂ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಕಳೆದ ಬಾರಿ ಪ್ರಯಾಸಕರ (3186 ಮತಗಳ ಅಂತರ) ಗೆಲುವು ಸಾಧಿಸಿದ್ದಾರೆ. ಶಿವಾನಂದ ಪಾಟೀಲ ಈ ಬಾರಿ ಕ್ಷೇತ್ರ ಮತ್ತು ಪಕ್ಷ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಒಮ್ಮೆ ಬಬಲೇಶ್ವರ ಕ್ಷೇತ್ರದತ್ತ ಚಿತ್ತ ಹರಿಸಿದರೆ ಮತ್ತೊಮ್ಮೆ ವಿಜಯಪುರ ನಗರ ಕ್ಷೇತ್ರಕ್ಕೆ ಬರುವ ಮಾತುಗಳನ್ನಾಡುತ್ತಿದ್ದಾರೆ. ಕ್ಷೇತ್ರ ಮತ್ತು ಪಕ್ಷ ಬದಲಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದ ಅಪ್ಪುಗೌಡ ಪಾಟೀಲ ಮನಗೂಳಿ ಈ ಬಾರಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯಿಂದ ಟಿಕೆಟ್ ವಂಚಿತಗೊಂಡು ಜೆಡಿಎಸ್​ಗೆ ಸೇರ್ಪಡೆಯಾಗಿ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮತ್ತೆ ಸ್ವಪಕ್ಷದತ್ತ ಮುಖ ಮಾಡಿದ್ದು, ಈ ಬಾರಿ ಅಪ್ಪುಗೌಡ ಹಾಗೂ ಬೆಳ್ಳುಬ್ಬಿ ಮಧ್ಯೆ ಟಿಕೆಟ್ ಪೈಪೋಟಿ ಏರ್ಪಟ್ಟಿದೆ.

    ದೇವರ ಹಿಪ್ಪರಗಿಯಲ್ಲಿ ಹೊಸ ಅಲೆ

    ವಿಜಯಮಾಲೆಗೆ ಸಮಬಲ ಪೈಪೋಟಿ: ಬಿಜೆಪಿ ಟಿಕೆಟ್​ಗಾಗಿ ಹೊಸಬರ ಹಂಬಲ..ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಪರ ಆಡಳಿತ ವಿರೋಧಿ ಅಲೆ ಕಂಡು ಬರುತ್ತಿದೆ. ಹೀಗಾಗಿ ಪ್ರತಿಸ್ಪರ್ಧಿ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಉಮೇದಿನಲ್ಲಿದ್ದಾರೆ. ಕಳೆದ ಬಾರಿ ಕೇವಲ 3663 ಮತಗಳಿಂದ ಸೋತಿರುವ ಜೆಡಿಎಸ್​ನ ರಾಜುಗೌಡ ಈ ಬಾರಿ ಅನುಕಂಪದ ಅಲೆಯಲ್ಲಿದ್ದಾರೆ. ಕಾಂಗ್ರೆಸ್​ನಿಂದ ಜಿಲ್ಲೆಯ ಒಂದು ಕ್ಷೇತ್ರವನ್ನಾದರೂ ಮಹಿಳೆಗೆ ಮೀಸಲಿಡುವ ಲೆಕ್ಕಾಚಾರ ಇರುವುದರಿಂದ ಜಿಪಂ ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ ಆಗಲೇ ಅಖಾಡ ಸಿದ್ಧಗೊಳಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದ ಮೂಲಕ ಸಮಾಜ ಸೇವೆ ಕೈಗೊಂಡಿರುವ ಡಾ.ಪ್ರಭುಗೌಡ ಪಾಟೀಲ ಸ್ಪರ್ಧಿಸಬೇಕೆಂಬ ಕೂಗು ಬಲಗೊಂಡಿದೆ. ಮಾಜಿ ಶಾಸಕ ಶರಣಪ್ಪ ಸುಣಗಾರ ಸಹ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.

    ಸಿಂದಗಿಯಲ್ಲಿ ಯಾರ ಜಿಂದಗಿ?

    ವಿಜಯಮಾಲೆಗೆ ಸಮಬಲ ಪೈಪೋಟಿ: ಬಿಜೆಪಿ ಟಿಕೆಟ್​ಗಾಗಿ ಹೊಸಬರ ಹಂಬಲ..ಜೆಡಿಎಸ್ ಶಾಸಕ ದಿ. ಎಂ.ಸಿ. ಮನಗೂಳಿ ಅವರಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ರಮೇಶ ಭೂಸನೂರ ವಿಜೇತರಾಗಿದ್ದಾರೆ. ದಿ. ಮನಗೂಳಿ ಕುಟುಂಬವನ್ನು ಕಾಂಗ್ರೆಸ್ ಹೈಜಾಕ್ ಮಾಡಿ ಅವರ ಪುತ್ರ ಅಶೋಕ ಮನಗೂಳಿ ಅವರನ್ನು ಅಭ್ಯರ್ಥಿಯಾಗಿಸಿದರೂ ಕ್ಷೇತ್ರದಲ್ಲಿ ಅನುಕಂಪದ ಆಟ ನಡೆಯಲಿಲ್ಲ. ಉಪ ಚುನಾವಣೆ ಸಂದರ್ಭ ಬಿಜೆಪಿ ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿವೆ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಹಾಗೂ ತಳವಾರ-ಪರಿವಾರ ಸಮುದಾಯದ ಮೀಸಲಾತಿ ಬೇಡಿಕೆ ಈವರೆಗೂ ಈಡೇರಲಿಲ್ಲ. ಇದೀಗ ಅದರ ಬಿಸಿ ತಟ್ಟತೊಡಗಿದೆ. ಅಲ್ಲದೆ, ಉಪ ಚುನಾವಣೆಯಲ್ಲಿ ಆಡಳಿತ ಪಕ್ಷದ ಪ್ರತಿಷ್ಠೆಯಾಗಿದ್ದ ಭೂಸನೂರ ಗೆಲುವು ಈ ಬಾರಿ ಔಚಿತ್ಯ ಕಳೆದುಕೊಳ್ಳುತ್ತಿದೆ. ಇನ್ನು ಕಾಂಗ್ರೆಸ್​ನಿಂದ ಮಾಜಿ ಶಾಸಕ ಶರಣಪ್ಪ ಸುಣಗಾರ ಹಾಗೂ ಮುಖಂಡ ವಿಠಲ ಕೋಳೂರ ಟಿಕೆಟ್ ರೇಸ್​ನಲ್ಲಿದ್ದಾರೆ. ಜೆಡಿಎಸ್​ನಿಂದ ಮತ್ತೆ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸುವ ಚರ್ಚೆ ನಡೆದಿದೆ.

    ಮುದ್ದೇಬಿಹಾಳದಲ್ಲಿ ನಡಹಳ್ಳಿ ನಾಡಗೌಡ

    ವಿಜಯಮಾಲೆಗೆ ಸಮಬಲ ಪೈಪೋಟಿ: ಬಿಜೆಪಿ ಟಿಕೆಟ್​ಗಾಗಿ ಹೊಸಬರ ಹಂಬಲ..ಮುದ್ದೇಬಿಹಾಳದಲ್ಲಿ ಸತತ ಗೆಲುವಿನಿಂದ ಬೀಗುತ್ತಿದ್ದ ನಾಡಗೌಡರ ರಾಜಕಾರಣದ ವೇಗಕ್ಕೆ ಬ್ರೇಕ್ ಹಾಕಿದವರು ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ. ಈ ಬಾರಿ ಮತ್ತೆ ಬಿಜೆಪಿಯಿಂದಲೇ ಸ್ಪರ್ಧಿಸುತ್ತಿದ್ದಾರೆ. ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಬಣ ಹಾಗೂ ಶಾಸಕ ನಡಹಳ್ಳಿ ಬಣದ ನಡುವಿನ ಜಗಳ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಕಾಂಗ್ರೆಸ್​ನಿಂದ ಪರಾಭವಗೊಂಡ ಮಾಜಿ ಸಚಿವ ಸಿ.ಎಸ್. ನಾಡಗೌಡ ಮತ್ತೊಂದು ಅವಧಿಗೆ ಸ್ಪರ್ಧಿಸಲು ಸಜ್ಜಾಗಿದ್ದಾರಾದರೂ ಈ ಮೊದಲಿದ್ದ ವರ್ಚಸ್ಸು ಈಗಿಲ್ಲ. ಹೀಗಾಗಿ ಟಿಕೆಟ್​ಗಾಗಿ ಹೊಸಬರ ಪೈಪೋಟಿ ಹೆಚ್ಚಿದೆ. ಹಾಲುಮತ ಸಮಾಜಕ್ಕೆ ಅವಕಾಶ ನೀಡಲು ಒಂದು ಬಣ ಆಗಲೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಕಳೆದ ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿ ಕಳಪೆ ಪ್ರದರ್ಶನ ನೀಡಿದ್ದ ಮಂಗಳಾದೇವಿ ಬಿರಾದಾರ ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿದ್ದು ಈ ಬಾರಿ ಅಭ್ಯರ್ಥಿ ಬದಲಾವಣೆ ಸಾಧ್ಯತೆ ಇದೆ.

    ಇಂಡಿಯಲ್ಲಿ ಪಾಟೀಲರ ಪೈಪೋಟಿ

    ವಿಜಯಮಾಲೆಗೆ ಸಮಬಲ ಪೈಪೋಟಿ: ಬಿಜೆಪಿ ಟಿಕೆಟ್​ಗಾಗಿ ಹೊಸಬರ ಹಂಬಲ..ಇಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಎರಡು ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆಯ ಹುಮ್ಮಸ್ಸಿನಲ್ಲಿದ್ದಾರೆ. ಜೆಡಿಎಸ್​ನ ಬಿ.ಡಿ. ಪಾಟೀಲ ಅನುಕಂಪದ ಅಲೆಯಲ್ಲಿದ್ದರೆ, ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಅಖಾಡ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಪ್ರಭಾವಿಗಳಾದ ಶೀಲವಂತ ಉಮರಾಣಿ, ಶಿವಯೋಗಪ್ಪ ನೇದಲಗಿ ಕೂಡ ಕಮಲ ಟಿಕೆಟ್​ಗಾಗಿ ಕಸರತ್ತು ನಡೆಸಿದ್ದಾರೆ. ಕಳೆದ ಬಾರಿ ಟಿಕೆಟ್ ವಂಚಿತಗೊಂಡರೂ ಪಕ್ಷದ ಜವಾಬ್ದಾರಿಗಳನ್ನು ನಿಭಾಯಿಸಿ ನಿಷ್ಠೆ ತೋರಿರುವ ಶೀಲವಂತ ಉಮರಾಣಿ ಬೆನ್ನಿಗೆ ಈ ಬಾರಿ ಸಂಘ ಪರಿವಾರದ ಮುಖಂಡರು ನಿಂತಿದ್ದಾರೆ. ಕಾಸುಗೌಡ ಬಿರಾದಾರ ಸಹ ಆಕಾಂಕ್ಷಿ.

    ನಾಗಠಾಣದಲ್ಲಿ ಚವ್ಹಾಣ್ ವರ್ಚಸ್ಸು

    ವಿಜಯಮಾಲೆಗೆ ಸಮಬಲ ಪೈಪೋಟಿ: ಬಿಜೆಪಿ ಟಿಕೆಟ್​ಗಾಗಿ ಹೊಸಬರ ಹಂಬಲ..ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ಕ್ಷೇತ್ರ ಸದ್ಯ ಜೆಡಿಎಸ್ ತೆಕ್ಕೆಯಲ್ಲಿದ್ದು, ಶಾಸಕ ಡಾ. ದೇವಾನಂದ ಚವ್ಹಾಣ್ ವೈಯಕ್ತಿಕ ವರ್ಚಸ್ಸಿನ ಮೇಲೆ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸವಾಲಿನ ಮಧ್ಯೆಯೂ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು ಜನರ ಒಲವಿದೆ. ಕಳೆದ ಬಾರಿ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಗೋಪಾಲ ಕಾರಜೋಳಗೆ ಇದೀಗ ಕುಟುಂಬ ರಾಜಕಾರಣದ ಬಿಸಿ ತಟ್ಟುತ್ತಿದೆ. ಹೀಗಾಗಿ ಸಂಸದ ರಮೇಶ ಜಿಗಜಿಣಗಿ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆ ಕುತೂಹಲ ಕೆರಳಿಸಿದೆ. ಕಾಂಗ್ರೆಸ್​ನಿಂದ ಮತ್ತೆ ವಿಠಲ ಕಟಕಧೋಂಡ ಹಾಗೂ ಮಾಜಿ ಶಾಸಕ ರಾಜು ಆಲಗೂರ ಹೆಸರು ಕೇಳಿ ಬರುತ್ತಿದೆ.

    ಕಾಮನ್​ವೆಲ್ತ್​ ಗೇಮ್ಸ್​ ಮುಕ್ತಾಯ; ಭಾರತಕ್ಕೆ 4ನೇ ಸ್ಥಾನ: ಗಳಿಸಿದ ಪದಕಗಳ ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts