More

    ಸಾವು ತಡೆಗಟ್ಟುವಲ್ಲಿ ಪ್ರಧಾನಿ ವಿಫಲ ; ಶಾಸಕ ಡಾ.ಜಿ.ಪರಮೇಶ್ವರ್ ಆರೋಪ

    ಕುಣಿಗಲ್ : ಪ್ರಧಾನಿ ಮೋದಿಯವರೇ ನೀವು ಗಡ್ಡ ಬಿಟ್ಟಿರುವುದು, 14 ಲಕ್ಷ ರೂಪಾಯಿ ವೆಚ್ಚದ ಸೂಟ್ ಹಾಕಿರುವುದಕ್ಕೆ ನಮ್ಮ ಆಕ್ಷೇಪ ಹಾಗೂ ತಕರಾರಿಲ್ಲ. ಆದರೆ, ಕರೊನಾದಿಂದ ಸಾಯುತ್ತಿರುವ ಜನರ ರಕ್ಷಣೆ ಮಾಡುವಲ್ಲಿ ವಿಫಲಗೊಂಡಿದ್ದೀರಾ ಎಂದು ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಟೀಕಿಸಿದರು.

    ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಸೋಮವಾರ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ, ಕರೊನಾ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರೊನಾ 2ನೇ ಅಲೆ ಬರುವುದನ್ನು ಮನಗಂಡ ವಿಶ್ವದ ಹಲವು ರಾಷ್ಟ್ರಗಳ ಅಲ್ಲಿನ ಪ್ರಧಾನಿ, ರಾಷ್ಟ್ರಪತಿಗಳು ವ್ಯಾಕ್ಸಿನ್, ಔಷಧದ ಬಗ್ಗೆ ಅಲ್ಲಿನ ವಿಜ್ಞಾನಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಂಡಿದ್ದರು. ಆದರೆ, ನಮ್ಮ ದೇಶದಲ್ಲಿ ಜನ ಬೀದಿಯಲ್ಲಿ ಸಾಯುತ್ತಿದ್ದರೂ ನಾವು ಕರೊನಾ ಗೆದ್ದಿದ್ದೇವೆ ಎಂದು ಆರೂವರೆ ಕೋಟಿ ವ್ಯಾಕ್ಸಿನ್‌ನನ್ನು ವಿದೇಶಗಳಿಗೆ ನೀಡಿ ವಿಶ್ವ ನಾಯಕರೆನಿಸಿಕೊಳ್ಳಲು ಹೊರಟ್ಟಿದ್ದೀರಾ? ಆ ವ್ಯಾಕ್ಸಿನ್ ನೀಡಿದರೆ ಎಷ್ಟೋ ಜನರ ಪ್ರಾಣ ಉಳಿಯುತ್ತಿತ್ತು, ಈಗ ಜನರು ಹಣ ನೀಡಿ ಲಸಿಕೆ ಪಡೆದುಕೊಳ್ಳುವಂತಹ ಹಾಗೂ ಉಚಿತ ವ್ಯಾಕ್ಸಿನ್‌ಗಾಗಿ ಸಾಲುಗಟ್ಟಿ ನಿಲ್ಲುವ ಸನ್ನಿವೇಶ ಸೃಷ್ಟಿಸಿದವರು ನೀವು ಎಂದು ಆಕ್ರೋಶ ವ್ಯಕ್ತಪಡಿಸಿದರು.

    20 ವೈದ್ಯರ ನೇಮಕ: ಸಿದ್ಧಾರ್ಥ ಮೆಡಿಕಲ್ ಕಾಲೇಜಿನ 20 ವೈದ್ಯರನ್ನು ಕುಣಿಗಲ್ ತಾಲೂಕಿಗೆ ಕಳುಹಿಸಿಕೊಡುವೆ, ಸೋಂಕಿತರ ಸೇವೆಗೆ ಅವರನ್ನು ಬಳಸಿಕೊಳ್ಳುವಂತೆ ಶಾಸಕ ಡಾ.ರಂಗನಾಥ್‌ಗೆ ಪರಮೇಶ್ವರ್ ನಿರ್ದೇಶಿಸಿದರು.

    ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಇಂದಿರಾಗಾಂಧಿ ಕಾಲದಲ್ಲಿ ಉಳುವವನೇ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ, ಬಡವರಿಗೆ ಮೂಲಸೌಲಭ್ಯ ಇತ್ತು. ಆದರೆ ಪ್ರಧಾನಿ ಮೋದಿ ಕಾಲದಲ್ಲಿ ಜನರು ಮೂಗು, ಬಾಯಿ ಮುಚ್ಚಿಕೊಂಡು ಮನೆಯಲ್ಲಿ ಇರುವಂತಹ ಹಾಗೂ ಬಡವರು ಬೀದಿ ಪಾಲು ಆಗಿರುವಂತ ಅಚ್ಛೇದಿನ್ ದಿನ್ ಬಂದಿದೆ ಎಂದು ವ್ಯಂಗ್ಯವಾಡಿದರು.
    ಶಾಸಕ ಡಾ.ರಂಗನಾಥ್ ಮಾತನಾಡಿ, ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ 500 ಮಂದಿಗೆ ಕರೊನಾ ಲಸಿಕೆ ನೀಡಲಾಗುತ್ತಿದೆ. ಆದರೆ, ಲಸಿಕೆ ಹಾಕಿಸಿಕೊಳ್ಳಲು ಸಾವಿರಾರು ಮಂದಿ ಬಂದಿರುವುದರಿಂದ ಮುಂದಿನ ಶನಿವಾರ 1500 ಮಂದಿಗೆ ಲಸಿಕೆ ಖರೀದಿಸಿ ಹಾಕಲಾಗುವುದೆಂದು ಹೇಳಿದರು.

    ಡಿಸಿಸಿ ಅಧ್ಯಕ್ಷ ರಾಮಕೃಷ್ಣಯ್ಯ, ರಾಜ್ಯ ಒಕ್ಕಲಿಗ ಸಂಘದ ಜಂಟಿ ಕಾರ್ಯದರ್ಶಿ ರಾಮಚಂದ್ರಯ್ಯ, ಪುರಸಭಾ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ರಂಗಸ್ವಾಮಿ, ಜಯಲಕ್ಷ್ಮಿ, ರೂಪಿಣಿ, ದೇವರಾಜ್, ಶ್ರೀನಿವಾಸ್, ಮಾಜಿ ಅಧ್ಯಕ್ಷ ರೆಹಮಾನ್ ಷರ್ೀ, ಉಪಾಧ್ಯಕ್ಷ ಅಬ್ದುಲ್ ಅಮೀದ್, ಸದಸ್ಯ ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗಣ್ಣಗೌಡ, ವೆಂಕಟರಾಮು, ಮುಖಂಡರಾದ ಕೆಂಪಿರೇಗೌಡ, ಬೇಗೂರು ನಾರಾಯಣ್ ಇದ್ದರು.

    ಅಧಿಕಾರ ಶಾಶ್ವತವಲ್ಲ: 21 ಲಕ್ಷ ಕೋಟಿ ರೂಪಾಯಿ ಪರಿಹಾರದ ಪ್ಯಾಕೇಜ್ ಪ್ರಧಾನಿ ಘೋಷಿಸಿದರು. ಜನರನ್ನು ತಮ್ಮಗಳ ಖಾತೆ ಎಷ್ಟು ಹಣ ಬರಬಹುದೆಂದು ಲೆಕ್ಕ ಹಾಕುತ್ತಿದ್ದರು, ಲೆಕ್ಕ ಹಾಕುವುದರಲ್ಲಿ ನಾನೂ ಒಬ್ಬನಾಗಿದ್ದೇನೆ. ಆದರೆ ಪ್ಯಾಕೇಜ್ ಘೋಷಣೆ ಮಾಡಿ 15 ತಿಂಗಳು ಕಳೆದರೂ ಈವರೆಗೂ ಜನರ ಖಾತೆಗೆ ಒಂದು ನಯಾ ಪೈಸೆ ಬಂದಿಲ್ಲ, ಜನರು ಬದುಕಿದ್ದಾರೋ, ಸತ್ತಿದ್ದಾರೋ ಎಂದು ಕೇಳುತ್ತಿಲ್ಲ, ನ್ಯಾಯಾಲಯದ ಆದೇಶದ ಮೇಲೆ 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಲಸಿಕೆ ಹಾಕಲಾಗುತ್ತಿದೆ. ಜನರಿಗೆ ಉದ್ಯೋಗ, ಊಟ, ಬಟ್ಟೆ ಭೀಕರ ಪರಿಸ್ಥಿತಿ ಎದರಿಸುತ್ತಿದ್ದಾರೆ. ಜನರಿಗೆ ಸುಳ್ಳು ಹೇಳುತ್ತಾ ಅಧಿಕಾರ ನಡೆಸುತ್ತಿದ್ದಾರೆ, ಆ ಅಧಿಕಾರ ಎಂದೂ ಶಾಶ್ವತವಲ್ಲ. ಜನರು ಮುಂದಿನ ದಿನದಲ್ಲಿ ಮೋದಿ ಅವರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಎಚ್ಚರಿಸಿದರು.

    ದುರಾಡಳಿತ : ರಾಜ್ಯದಲ್ಲಿ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ, ಆರೋಗ್ಯ ಸಚಿವರು, ಕಂದಾಯ ಸಚಿವರು ಹಾಗೂ ಗೃಹ ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ, ಸಚಿವರಲ್ಲಿ ಹೊಂದಾಣಿಕೆ ಇಲ್ಲ, ಭ್ರಷ್ಟಾಚಾರ ತಾಂಡವಾಡುತ್ತಿದೆ, ಇಂತಹ ದುರಾಡಳಿತ ಸರ್ಕಾರವನ್ನು ಎಂದೂ ನೋಡಿಲ್ಲ, ಇಬ್ಬರು ಜಿಲ್ಲಾಧಿಕಾರಿಗಳು ಗಲಾಟೆ ಮಾಡಿಕೊಂಡು ಚಾಮರಾಜನಗರದಲ್ಲಿ 38 ಮಂದಿಯನ್ನು ಬಲಿ ತೆಗೆದುಕೊಂಡಿದ್ದಾರೆ, ಇದಕ್ಕೆ ಸರ್ಕಾರದ ವೈಲ್ಯವೇ ಕಾರಣವೆಂದು ಶಾಸಕ ಡಾ.ಜಿ.ಪರಮೇಶ್ವರ್ ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts