More

    ರೈತ ಪ್ರತಿಭಟನೆ ಹಿಂದೆ ದಲ್ಲಾಳಿಗಳ ಷಡ್ಯಂತ್ರ

    ರೈತ ಪ್ರತಿಭಟನೆ ಹಿಂದೆ ದಲ್ಲಾಳಿಗಳ ಷಡ್ಯಂತ್ರ

    ಕೃಷಿ ಸುಧಾರಣಾ ಕಾನೂನುಗಳಿಂದ ರೈತರಿಗೆ ಮುಕ್ತ ಮಾರುಕಟ್ಟೆಗೆ ಹೋಗುವ ಅವಕಾಶ ಸೃಷ್ಟಿಯಾಗಿದ್ದು, ಬೇರೆ ಯಾವುದೇ ಸರ್ಕಾರಕ್ಕೆ ಸಾಧ್ಯವಾಗದ ರೈತಪರ ಕಾನೂನನ್ನು ಎನ್​ಡಿಎ ಸರ್ಕಾರ ಜಾರಿಗೆ ತಂದಿದೆ. ದಲ್ಲಾಳಿಗಳು ಹಾಗೂ ಸ್ವಹಿತಾಸಕ್ತಿಯುಳ್ಳ ಕೆಲ ಶಕ್ತಿಗಳು ರೈತರ ಹಾದಿ ತಪ್ಪಿಸಿವೆ. ಇದಕ್ಕೆಲ್ಲಾ ನಾವು ಶರಣಾಗುವುದಿಲ್ಲ ಎನ್ನುವುದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ ಸಚಿವ ಪ್ರಲ್ಹಾದ ಜೋಷಿ ಸ್ಪಷ್ಟ ನುಡಿ. 22 ದಿನಗಳಿಂದ ದೇಶದಲ್ಲಿ ಭಾರೀ ಸದ್ದು ಮಾಡಿರುವ ರೈತ ಪ್ರತಿಭಟನೆ ಹಾಗೂ ಕೇಂದ್ರದ ನಿಲುವುಗಳ ಬಗ್ಗೆ ಅವರು ವಿಜಯವಾಣಿ ಜತೆ ಮಾತನಾಡಿದ್ದಾರೆ.

    | ರಾಘವ ಶರ್ಮ ನಿಡ್ಲೆ ನವದೆಹಲಿ

    ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕು ಎಂಬುದು ರೈತರ ಪಟ್ಟು. ಅದು ಸಾಧ್ಯವಿಲ್ಲ ಎನ್ನುತ್ತಿದೆ ಕೇಂದ್ರ ಸರ್ಕಾರ. ಬಿಕ್ಕಟ್ಟು ಶಮನದ ಮಾರ್ಗ ಯಾವುದು?

    ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ (ಎಪಿಎಂಸಿ) ನಿಬಂಧನೆಗಳನ್ನು ತೆಗೆದುಹಾಕಿ ರೈತರಿಗೆ ಮುಕ್ತ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದೆವು. ಅದನ್ನು ಜಾರಿಗೆ ತಂದಿದ್ದೇವೆ. ರೈತರ ಹಿತಾಸಕ್ತಿ ಕಾಪಾಡಲು ಕಾನೂನು ಹೇಗೆ ನೆರವಾಗಲಿದೆ ಎಂಬುದನ್ನು ಮನದಟ್ಟು ಮಾಡುತ್ತಿದ್ದೇವೆ. ಕಾಂಗ್ರೆಸ್ ಪ್ರಣಾಳಿಕೆಯೂ ಇದನ್ನು ಪ್ರಸ್ತಾಪಿಸಿತ್ತು. 130 ಕೋಟಿ ಜನಸಂಖ್ಯೆಯ ದೇಶದಲ್ಲಿ 30-40 ಸಾವಿರ ಪ್ರತಿಭಟನಾಕಾರರನ್ನು ಸೇರಿಸಿ ಸರ್ಕಾರದ ವಿರುದ್ಧ ಘೊಷಣೆ ಕೂಗಿಸುವುದು ಕಷ್ಟದ ಕೆಲಸವೇನಲ್ಲ. ಕೃಷಿ ಕ್ಷೇತ್ರದ ಸುಧಾರಣೆಗೆ ಕಾನೂನನ್ನೇ ಮಾಡಬಾರದು ಎಂದರೆ ಒಪ್ಪಲಾದೀತೆ?

    ಅಂದರೆ ಪ್ರತಿಭಟನಾಕಾರರು ರೈತರಲ್ಲ ಎಂಬುದು ನಿಮ್ಮ ಮಾತಿನ ಅರ್ಥವೇ?

    ರೈತರು ಹೌದೋ ಅಲ್ಲವೋ ಎಂಬ ಚರ್ಚೆಗೆ ನಾನು ಇಳಿದಿಲ್ಲ. 130 ಕೋಟಿ ಜನರಲ್ಲಿ 70 ಕೋಟಿ ಮಂದಿ ಕೃಷಿ ಆಧರಿಸಿ ಜೀವನ ನಡೆಸುತ್ತಿದ್ದಾರೆ. ಅವರಲ್ಲಿ 30 ಸಾವಿರ ಮಂದಿ ‘ನೀವು ಕಾನೂನನ್ನೇ ಮಾಡುವ ಹಾಗಿಲ್ಲ’ ಅಂದರೆ ಹೇಗೆ? ಪ್ರಜಾಪ್ರಭುತ್ವದಲ್ಲಿ ಕಾನೂನು ರೂಪಿಸುವುದು ಒಂದು ಪ್ರಕ್ರಿಯೆ. ನಾವು ಮಾಡಿದ ಕಾನೂನುಗಳು ತಪ್ಪಾಗಿದ್ದರೆ ತೀರ್ಮಾನ ಮಾಡಲು ಜನರಿಗೆ ಪ್ರತಿ 5 ವರ್ಷಕ್ಕೊಮ್ಮೆ ಅವಕಾಶವಿದ್ದೇ ಇದೆ. ನೀವು ಸಂಖ್ಯಾಬಲವನ್ನೇ ನೋಡುವುದಾದರೆ, ಈ ಕಾನೂನಿನ ಸುಗ್ರೀವಾಜ್ಞೆ ಬಳಿಕ ಬಿಹಾರ ಸೇರಿ ಅನೇಕ ಕಡೆ ಚುನಾವಣೆಗಳು ನಡೆದಿವೆ ಮತ್ತು ಬಿಜೆಪಿ ಮುನ್ನಡೆ ಸಾಧಿಸಿದೆ. ಇದು ಜನವಿರೋಧಿ ಕಾನೂನಾಗಿದ್ದರೆ ಮತದಾರ ನಮ್ಮನ್ನು ತಿರಸ್ಕರಿಸಬೇಕಿತ್ತಲ್ಲವೇ? ಈ ಪ್ರತಿಭಟನೆಗಳ ಹಿಂದೆ ದಲ್ಲಾಳಿಗಳ ಷಡ್ಯಂತ್ರವಿರುವುದು ಸ್ಪಷ್ಟ.

    ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಕುರಿತು ಸರ್ಕಾರದ ಲಿಖಿತ ಭರವಸೆ ಬೇಕೆನ್ನುತ್ತಿದ್ದಾರೆ ರೈತರು…

    ಎಂಎಸ್​ಪಿ ಬಗ್ಗೆ ಲಿಖಿತವಾಗಿ ಭರವಸೆ ನೀಡಲು ಕೇಂದ್ರ ಒಪ್ಪಿದೆ. ರೈತರಿಂದ ವಸೂಲು ಮಾಡಿ ಎಪಿಎಂಸಿ ನಡೆಸಬೇಕು ಎನ್ನುವುದು ದಲ್ಲಾಳಿಗಳ ಧೋರಣೆ. ಆದರೆ, ಹೊಸ ಕಾನೂನಿನ ಮೂಲಕ 8-10% ಕಮಿಷನ್ ಪಡೆದು ಮಧ್ಯವರ್ತಿಗಳು ಹಣ ಲೂಟಿ ಹೊಡೆಯುವುದಕ್ಕೆ ಸರ್ಕಾರ ಕಡಿವಾಣ ಹಾಕಿದೆ. ಇನ್ನು ಕೇರಳದಲ್ಲಿ ಎಪಿಎಂಸಿಯೇ ಇಲ್ಲ. ಅಲ್ಲಿ ಇಲ್ಲದ ವ್ಯವಸ್ಥೆ ದೇಶದ ಬೇರೆಡೆ ಬೇಕು ಎಂದು ಎಡಪಕ್ಷದವರು ದಿಲ್ಲಿಗೆ ಬಂದು ಪ್ರತಿಭಟನೆ ನಡೆಸುವುದರ ಉದ್ದೇಶವೇನು? ರೈತರ ಉತ್ಪನ್ನದ ಮೂಲ ವೆಚ್ಚದ ಜತೆಗೆ ಸರ್ಕಾರ ಹೆಚ್ಚುವರಿಯಾಗಿ 50% ವೆಚ್ಚ ನಿಗದಿ ಮಾಡಬೇಕೆಂಬ ಸ್ವಾಮಿನಾಥನ್ ವರದಿಯನ್ನು ಯಾರಾದರೂ ಅನು ಷ್ಠಾನಗೊಳಿಸಲು ಯತ್ನಿಸಿದ್ದಾರೆ ಎಂದರೆ ಅದು ಮೋದಿ ಸರ್ಕಾರ ಮಾತ್ರ. ಇದು ನಾನಲ್ಲ; ಸ್ವತಃ ಸ್ವಾಮಿನಾಥನ್ ಅವರೇ ಹೇಳಿರುವುದು.

    ಕೃಷಿ ಕಾನೂನುಗಳ ಜಾರಿ ಮುನ್ನ ಸಂಬಂಧ ಪಟ್ಟವರೊಂದಿಗೆ ರ್ಚಚಿಸದೆ ಮತ್ತು ಕರೊನಾ ಮಹಾಮಾರಿ ಮಧ್ಯೆ ತರಾತುರಿಯಲ್ಲಿ ಸಂಸತ್ತಿನ ಅನುಮೋದನೆ ಪಡೆದುಕೊಂಡಿದ್ದೇಕೆ?

    ಕೃಷಿ ಕಾನೂನಿನ ಸುಗ್ರೀವಾಜ್ಞೆ ಮೇ ತಿಂಗಳಲ್ಲಿ ಜಾರಿಯಾಯ್ತು ಮತ್ತು ಸೆಪ್ಟೆಂಬರ್​ವರೆಗೆ ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆ ಗಳಾಗಿವೆ. ನಂತರ ಎರಡೂ ಸದನಗಳಲ್ಲಿ ನಾಲ್ಕೈದು ತಾಸು ಚರ್ಚೆ ನಡೆದಿದೆ. ಅದಿರಲಿ, ಇಂಥದ್ದೊಂದು ಕಾನೂನು ಬೇಕು ಎಂದು ಬೇರೆ ಬೇರೆ ಸಂದರ್ಭಗಳಲ್ಲಿ ಬಹುತೇಕ ರಾಜಕೀಯ ಪಕ್ಷಗಳು ಪ್ರತಿಪಾದಿಸಿವೆ. ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಿಎಂ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಸಮಿತಿ ಎಪಿಎಂಸಿಯಿಂದ ರೈತರನ್ನು ಮುಕ್ತ ಮಾಡಲು ಹೇಳಿತ್ತು. ಎಪಿಎಂಸಿ ವಿರುದ್ಧ ರಾಹುಲ್ ಗಾಂಧಿ ಹೇಳಿಕೆಯಿದೆ. ಮಾಜಿ ಕೃಷಿ ಸಚಿವ ಶರದ್ ಪವಾರ್, ಕಾಂಗ್ರೆಸ್ ನಾಯಕ, ಕಾನೂನು ಪಂಡಿತ ಕಪಿಲ್ ಸಿಬಲ್ ಸಂಸತ್ತಿನಲ್ಲೇ ಎಪಿಎಂಸಿ ವಿರುದ್ಧ ಮಾತನಾಡಿದ್ದಾರೆ. ಅವರೆಲ್ಲ ಹೇಳಿದ್ದನ್ನೆ ನಾವು ಜಾರಿ ಮಾಡಿದ್ದು. ಕಾಂಗ್ರೆಸ್ ಸೇರಿ ಕೆಲ ರಾಜಕೀಯ ಪಕ್ಷಗಳ ಮಾನಸಿಕತೆ – ‘ನಾವು ಮಾಡಿದರೆ ಸರಿ, ಮೋದಿ ಮಾಡಿದರೆ ತಪ್ಪು’ ಎಂಬಂತಿದೆ! ಪಂಜಾಬ್ ಮತ್ತು ಹರ್ಯಾಣದ ಮುಗ್ಧ ರೈತರನ್ನು ಕೇಂದ್ರದ ವಿರುದ್ಧ ಎತ್ತಿಕಟ್ಟಲಾಗುತ್ತಿದೆಯಷ್ಟೇ.

    ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ಋಣ ತೀರಿಸಲು ಕೇಂದ್ರ ಇಂಥ ಕಾನೂನುಗಳನ್ನು ತರುತ್ತಿದೆ ಎಂಬ ಆರೋಪಕ್ಕೇನು ಹೇಳುತ್ತೀರಿ?

    ಕೇರಳದಲ್ಲಿ ಅದಾನಿ, ಅಂಬಾನಿಗಳ ನೆರವಿಗೋಸ್ಕರ ಎಪಿಎಂಸಿ ತಂದಿಲ್ಲವೇ? ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರುವ ಮುನ್ನವೇ ಎಪಿಎಂಸಿಗಳಿಗೆ ಪ್ರೋತ್ಸಾಹ ಕಡಿಮೆಯಿತ್ತು. ಅಂದರೆ ಮಾಜಿ ಸಿಎಂ ಸಿದ್ದರಾಮಯ್ಯ ಅದಾನಿ, ಅಂಬಾನಿಗೆ ನೆರವಾಗಿದ್ದಾರೆ ಎನ್ನಬೇಕೆ? ಅಥವಾ ಮೋದಿ ಪ್ರಧಾನಿಯಾದ ಮೇಲೆ ಅದಾನಿ, ಅಂಬಾನಿ ಉದ್ಯಮ ಆರಂಭಿಸಿದ್ದೇ? ಇಂತಹ ಪೊಳ್ಳುವಾದಗಳಿಂದ ವಿಪಕ್ಷಗಳ ಬಂಡವಾಳ ಬಯಲಾಗುತ್ತಿದೆಯಷ್ಟೇ.

    ಅಂದರೆ ನಿಮ್ಮ ವಾದದ ಅರ್ಥ ರೈತರು ಸಮೂಹ ಸನ್ನಿಗೊಳಗಾಗಿದ್ದಾರೆ ಎಂದೇ?

    ಹಾಗಲ್ಲ.. ಆದರೆ 2-3 ರಾಜ್ಯಗಳ ಪ್ರಭಾವಿ ಶಕ್ತಿಗಳು ರೈತರ ದಾರಿತಪ್ಪಿಸಿವೆ. ಈ ಕಾನೂನಿನ ಪ್ರತಿ ಅಂಶದ ಬಗ್ಗೆಯೂ ವಿಸõತ ಚರ್ಚೆಗೆ ಸಿದ್ಧ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರೊಂದಿಗಿನ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಚರ್ಚೆಗೆ ಬರದೆ ಕೂತರೆ, ಒತ್ತಡಕ್ಕೆ ಮಣಿದು ಸರ್ಕಾರ ಕಾನೂನು ರದ್ದುಗೊಳಿಸಬಹುದು ಎಂದು ಯಾರೂ ಅಂದುಕೊಳ್ಳಬೇಕಿಲ್ಲ. ತಿದ್ದುಪಡಿಗೆ ಸಿದ್ಧರಿದ್ದೇವೆ. ಆದರೆ, ಕಾನೂನಿನ ರದ್ದತಿ ಸಾಧ್ಯವೇ ಇಲ್ಲ.

    ಆಹಾರ ಧಾನ್ಯಗಳ ದಾಸ್ತಾನು, ಸಾಗಣೆ ಮೇಲೆ ಸರ್ಕಾರದ ಹಿಡಿತ ತಪ್ಪಲಿದೆ ಎಂಬ ಆತಂಕವಿದೆಯಲ್ಲ?

    ತಪ್ಪಲೇಬೇಕು. ಸರ್ಕಾರದ ಹಿಡಿತ ಇದರ ಮೇಲೆ ಇರಲೇ ಬಾರದು. ಅಗತ್ಯ ಸರಕು ಸಾಗಣೆ ಕಾಯ್ದೆ ಬ್ರಿಟಿಷ್ ಕಾಲದಲ್ಲಿ ಜಾರಿಯಾಗಿದ್ದು. ಅಂದು ಬ್ರಿಟಿಷರು ತಮಗೇನು ಬೇಕೋ ಅದನ್ನ ಇಂಗ್ಲೆಂಡ್​ಗೆ ಕೊಂಡೊಯ್ಯುತ್ತಿದ್ದರು. ಸ್ವಾತಂತ್ರ್ಯ ಬಂದ ಬಳಿಕವೂ ಆಹಾರದಲ್ಲಿ ಕೊರತೆಯಿದ್ದ ಕಾರಣ ದಾಸ್ತಾನಿನ ಮೇಲೆ ನಿರ್ದಿಷ್ಟ ನಿರ್ಬಂಧ ಹೇರಲಾಗಿತ್ತು. ಈಗೇಕೆ ಈ ನಿರ್ಬಂಧ ವಿರಬೇಕು? ತನ್ನ ಅಗತ್ಯಕ್ಕೆ ತಕ್ಕಂತೆ ರೈತ ಮುಕ್ತವಾಗಿ ಎಲ್ಲಿ ಬೇಕಾದರೂ ಉತ್ಪನ್ನಗಳನ್ನು ಮಾರಿಕೊಳ್ಳಲಿ. ಆ ಸ್ವಾತಂತ್ರ್ಯ ನೀಡಿದರೆ ವಿಪಕ್ಷಗಳಿಗೇಕೆ ಉರಿ? ಬಹಳಷ್ಟು ಕೃಷಿ ತಜ್ಞರು ಸುಧಾರಣಾ ಕಾನೂನನ್ನು ಬೆಂಬಲಿಸಿದ್ದಾರೆ. 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂಬ ಸದುದ್ದೇಶ ಹಾಗೂ ಅವರನ್ನು ಪರಾವಲಂಬನೆಯಿಂದ ಸ್ವಾವಲಂಬಿ ಮತ್ತು ಸ್ವತಂತ್ರರನ್ನಾಗಿಸಬೇಕೆಂದೇ ಈ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

    ಕಾನೂನಿನಿಂದ ಸಣ್ಣ ರೈತನಿಗೆ ತೊಂದರೆ ಇದೆ ಎಂಬ ವಾದವಿದೆಯಲ್ಲ?

    ಕಾನೂನಿನಲ್ಲಿ ಸಮಸ್ಯೆ ಪರಿಹಾರಕ್ಕೆ ಎಲ್ಲ ಮಾರ್ಗಸೂಚಿ ನೀಡಲಾಗಿದೆ. ರೈತರ ಭೂಮಿಯನ್ನು ಯಾರೂ ವಶಪಡಿಸಿ ಕೊಳ್ಳಲು ಸಾಧ್ಯವಿಲ್ಲ. ತನ್ನ ಆಯ್ಕೆಯ ಮಾರುಕಟ್ಟೆ ಅಥವಾ ಖಾಸಗಿ ಖರೀದಿದಾರನನ್ನು ರೈತ ಆಯ್ದುಕೊಳ್ಳಬಹುದು. ಖಾಸಗಿ ವ್ಯಕ್ತಿಗಳು ದರ ಒಪ್ಪಂದದ ಪ್ರಕಾರವೇ ರೈತರಿಂದ ಉತ್ಪನ್ನ ಖರೀದಿ ಮಾಡಬೇಕು. ನ್ಯಾಯಾಲಯದಲ್ಲಿ ಬಿಕ್ಕಟ್ಟು ಶಮನಕ್ಕೆ ಸಂಬಂಧಿಸಿದಂತೆ ರೈತರು ಬಯಸುತ್ತಿರುವ ತಿದ್ದುಪಡಿ ಮಾಡಲು ನಾವು ಸಿದ್ಧರಿದ್ದೇವೆ.

    ರೈತರ ಆದಾಯ ದ್ವಿಗುಣ ಎಂಬ ಮಾತು ಆಕರ್ಷಕವಾಗಿದೆ. ಈ ಕಾನೂನಿನಿಂದ ಅದು ಸಾಧ್ಯವೇ?

    ಎಪಿಎಂಸಿಗಳಲ್ಲಿ ದಲ್ಲಾಳಿಗಳು ಆಡಿದ್ದೇ ಆಟ. ದರವನ್ನು ಅವರೇ ನಿಗದಿ ಮಾಡುತ್ತಾರೆ. ರೈತ ವಿಧಿಯಿಲ್ಲದೆ ಅವರು ಹೇಳಿದ ಕನಿಷ್ಠ ದುಡ್ಡಿಗೆ ಉತ್ಪನ್ನಗಳನ್ನ ಮಾರಾಟ ಮಾಡಬೇಕು. ಆದರೆ ರೈತರಿಗೆ ಮುಕ್ತ ಮಾರುಕಟ್ಟೆಗೆ ಹೋಗುವ ಅವಕಾಶ ಸೃಷ್ಟಿಯಾಗಿದೆ. ಹಾಗಂತ ನಾವು ಎಪಿಎಂಸಿಗಳನ್ನ ಬಂದ್ ಮಾಡುತ್ತಿಲ್ಲವಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts