ಸದಾ ಜಿಜ್ಞಾಸುವಾಗಿದ್ದ ‘ಪ್ರಾಚೀನ ಜ್ಞಾನ’ ಅಂಕಣದ ಅನಂತ ವೈದ್ಯ ಜ್ಞಾನಾನಂತದಲ್ಲಿ ಲೀನ

blank
  •  ನಾರಾಯಣ ಯಾಜಿ, ಸಾಲೇಬೈಲು

“ಒಂದು ನಾಲ್ಕು ವರ್ಷಗಳಾದರೂ ಬದುಕಬೇಕು ಹೇಳಿ ಇದ್ದು” ಇದು ಕೆಲ ದಿನಗಳ ಹಿಂದೆ ಅನಂತ ವೈದ್ಯರು ನನಗೆ ಫೋನಿನಲ್ಲಿ ಹೇಳಿದ ಮಾತು. ಅದಾಗ ತಾನೇ ಗುಣಮುಖರಾಗಿ ಆಸ್ಪತ್ರೆಯ ವಾಸದಿಂದ ಮನೆಗೆ ಬಂದಿದ್ದರು. ಅವರ ಮಗಳು ಕವಿತಾ “ಅಪ್ಪ ಹೋಗ್ಬಿಟ್ಟ್” ಎನ್ನುವ ಮೆಸೇಜನ್ನು ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಹಾಕಿದಾಗ ಅವರೊಡನೆ ಕಳೆದ ದಿನಗಳು, ಮಾತನಾಡುತ್ತಿರುವ ವಿಷಯಗಳೆಲ್ಲವೂ ನೆನಪಾಗಿ ಮನಸ್ಸು ಭಾರವಾಯಿತು. ಅರವತ್ತೊಂಭತ್ತು ವಯಸ್ಸು ಸಾಯುವ ಕಾಲವಂತೂ ಆಗಿರಲಿಲ್ಲ.

ಅನಂತ ವೈದ್ಯರಿಗೆ ಬದುಕಬೇಕೆನ್ನುವ ಬಯಕೆ ಮೋಜಾಟಕ್ಕಲ್ಲವಾಗಿತ್ತು. ಅವರಿಗೆ ತಾನು ಇನ್ನೂ ಅನೇಕ ಪುಸ್ತಕಗಳನ್ನು ಓದಬೇಕು, ಮತ್ತು ಹಾಗೆ ಓದಿದ ಕೃತಿಗಳ ಕುರಿತು ಬರೆಯಬೇಕು ಎನ್ನುವ ತೀರದ ಜ್ಞಾನ ದಾಹವಿತ್ತು. ಕನ್ನಡ, ಇಂಗ್ಲೀಷ್, ಸಂಸ್ಕೃತ ಈ ಎಲ್ಲಾ ಭಾಷೆಯ ಸಾಹಿತ್ಯಗಳನ್ನು ಅವರು ಸವಿಯುತ್ತಾ ಅದರ ಸಾರಸ್ಯವನ್ನು ಸಾಹಿತ್ಯಾಸಕ್ತರೊಂದಿಗೆ ಹಂಚಿಕೊಳ್ಳುವುದು ಅವರ ಹವ್ಯಾಸ. ಅನಂತ ವೈದ್ಯರೆಂದರೆ ಹೀಗೆ ಎಂದು ಒಂದು ನಿರ್ದಿಷ್ಟ ತತ್ತ್ವದಲ್ಲಿ ಕಟ್ಟಿಹಾಕಿ ಹೇಳುವುದು ಕಷ್ಟ.

ಇದನ್ನೂ ಓದಿ: ಮುಂದಿನ ವಾರ ಬೆಳ್ಳಿ ತೆರೆಗೆ ಅಪರೂಪದ ಆ್ಯಕ್ಷನ್ ಚಿತ್ರ ಡೈಮಂಡ್ ಕ್ರಾಸ್

ಸಾಹಿತ್ಯ, ಸಂಗೀತ, ತಾಳಮದ್ದಳೆ, ವಿಮರ್ಶೆ, ಒಳ್ಳೆಯ ಓದುಗ, ಪುಸ್ತಕ ಸಂಗ್ರಹಕಾರ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ಅವರ  ಪ್ರೌಢಿಮೆ ಎದ್ದು ಕಾಣುತ್ತಿತ್ತು. ಇಂದು ಸಾಂಸ್ಕೃತಿಕ ಲೋಕ ಅವರನ್ನು ಗುರುತಿಸುವುದು ಅವರೋರ್ವ ಪಂಡಿತ ವರ್ಗಕ್ಕೆ ಸೇರಿದ ತಾಳಮದ್ದಳೆಯ ಅರ್ಥದಾರಿಗಳೆಂಬುದಾಗಿ. ಆದರೆ ಕನ್ನಡದ ಪತ್ರಿಕೆಯ ಓದುಗರು ಅವರನ್ನು ಗುರುತಿಸುವುದು ಅವರು ವಿಜಯವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದ  “ಪಾಚೀನ ಜ್ಞಾನ”  ಅಂಕಣದಿಂದಾಗಿ.

ಇವರ ಅಂಕಣದಲ್ಲಿ ವೇದ, ಉಪನಿಷತ್ತು, ಮಹಾಕಾವ್ಯಗಳಲ್ಲಿ ಹುದುಗಿರುವ ಪ್ರಾಚೀನರ ವಿಜ್ಞಾನ ಮತ್ತು ಅವರ ಬೌದ್ಧಿಕ ಮಟ್ಟದ ಎತ್ತರದ ಕುರಿತು ವಿವರವಾಗಿ ಬರೆಯುತ್ತಿದ್ದರು. ಅಂಕಣವನ್ನು ಬರೆಯುವುದೆಂದರೆ ಅದೊಂದು ಸವಾಲು; ಪ್ರತಿ ಕ್ಷಣವೂ ಹೊಸ ವಿಷಯಗಳ ಕುರಿತು ಆಲೋಚಿಸಬೇಕು. ನಿರಂತರ ಅಧ್ಯಯನ ಬೇಕು. ಜತೆಗೆ ಪಾಮರರಿಗೆ ಆಸಕ್ತಿ ಹುಟ್ಟುವಂತೆ ಬರೆಯಬೇಕು. ಈ ಗುಣ ಅನಂತ ವೈದ್ಯರಲ್ಲಿ ಇತ್ತು. ಅವರು ಬಲಿ ಮತ್ತು ಮಾಯನ್ ಲೋಕದ ಕುರಿತು ಬರೆದಿರುವ ಸಂಗತಿಗಳಾಗಲಿ, ಹರಪ್ಪಾ ನಾಗರೀಕತೆಯ ಕಾಲದ ವಿಶೇಷತೆಯ ಕುರಿತು ಬರೆದಿರುವ ಅಥವಾ ರಾಮಾಯಣದಲ್ಲಿ ಪ್ರಸ್ತಾಪವಿರುವ ಹಾರುವ ತಂತ್ರಜ್ಞಾನದ ಕುರಿತಾದ ಬರಹಗಳಲ್ಲಿ ನಾವರಿಯದ ಅನೇಕ ಗೂಢತೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಿದ್ದರು. ಅದಕ್ಕೆ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ತಾರ್ಕಿಕ ಅಂತ್ಯವನ್ನು ಕೊಡುತ್ತಿದ್ದರು.

ಇದನ್ನೂ ಓದಿ: ಖಾಸಗಿ ಶಾಲಾ-ಕಾಲೇಜ್, ಶಿಕ್ಷಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ; ರುದ್ರಪ್ಪ ಲಮಾಣಿ

ಅರ್ಥಗಾರಿಕೆಯಲ್ಲಿ ಮಾತಿನ ಪ್ರವಾಹವನ್ನೇ ಹರಿಸುತ್ತಿದ್ದ ಅವರು ತಮ್ಮ ಅಂಕಣದಲ್ಲಿ ಮಾತ್ರ ಶಬ್ಧಗಳನ್ನು ಮಿತವಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಬಳಸುತ್ತಿದ್ದರು. ಅಂಕೋಲಾ ತಾಲೂಕಿನ ಆದರೆ ಯಲ್ಲಾಪುರಕ್ಕೆ ಹತ್ತಿರವಿರುವ ವೈದ್ಯ ಹೆಗ್ಗಾರಿನ ಆಡ್ಯಸ್ಥ ಕುಟುಂಬ ಇವರದ್ದು. ಇವರ ತಂದೆ ಮಹಾಬಲೇಶ್ವರ ವೈದ್ಯರು. ಇವರ ಅಣ್ಣಂದಿರಾದ ಅಣ್ನಯ್ಯ ಮತ್ತು ಸುಬ್ರಾಯ ವೈದ್ಯ ಇಬ್ಬರೂ ಕೃಷಿಯೊಟ್ಟಿಗೆ ಅರ್ಥಗಾರರೂ ಆಗಿದ್ದರು. ಇವರ ಮನೆಯಲ್ಲಿ ಪ್ರತೀ ವರ್ಷ ಅನಂತವೃತದಂದು ನಡೆಯುವ ತಾಲಮದ್ದಳೆ ಒಂದು ಪ್ರತಿಷ್ಠಿತ ಕೂಟವಾಗಿರುತ್ತಿತ್ತು.

ಇಂಥ ಪರಿಸರದಲ್ಲಿ ಬೆಳೆದ ವೈದ್ಯರಿಗೆ ಅರ್ಥಗಾರಿಕೆಯ ಕುರಿತು ಸಹಜವಾಗಿಯೇ ಆಸಕ್ತಿ ಬೆಳೆಯಿತು. ಅದರೊಟ್ಟಿಗೆ ಅವರು ಎಂ.ಎ. ಮಾಡಲು ಧಾರವಾಡಕ್ಕೆ ಹೋದಾಗ ಅಲ್ಲಿನ ಸಾಹಿತಿಗಳ ಒಡನಾಟದ ಮೂಲಕವಾಗಿ ಅವರಿಗೆ ಪಂಪ, ರನ್ನ, ನಾರಣಪ್ಪ ಕುರಿತು ಆಸಕ್ತಿ ಮೂಡಿತು. ಅವರೆಲ್ಲರ ಅಧ್ಯಯನಕ್ಕಾಗಿ ತನ್ನನ್ನು ತೊಡಗಿಸಿಕೊಂಡರು. ಖ್ಯಾತ ವಿದ್ವಾಂಸರಾದ ನಾರಾಯಣಾಚಾರ್ಯರ ಒಡನಾಟದಲ್ಲಿ ಮಹಾಕಾವ್ಯ ಮತ್ತು ಪುರಾಣಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದರು. ಅವರು ಪಠ್ಯಪುಸ್ತಕಕ್ಕೆ ತಮ್ಮನ್ನು ಸೀಮಿತಗೊಳಿಸದೇ ಸಾಹಿತ್ಯದ ವಿಶಾಲ ಸಾಗರದಲ್ಲಿ ವಿಹರಿಸಿದರು.

ಇದನ್ನೂ ಓದಿ: ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ 784 ಕೋಟಿ ಅನುದಾನ

ಮೊದಲಿಂದಲೂ ಸ್ವಾಭಿಮಾನಿಯಾದ ಅವರಿಗೆ ಇದೇ ಕಾರಣಕ್ಕಾಗಿ ಕಾಲೇಜಿನಲ್ಲಿ ಅಧ್ಯಾಪಕರಾಗುವ ಅವಕಾಶದಿಂದ ವಂಚಿತರಾಗಬೇಕಾಯಿತು. ಆದರೆ ಅದಕ್ಕೆ ಕುಗ್ಗದೇ ಮುದ್ರಣಾಲಯ, ಕಂಟ್ರಾಕ್ಟ, ಜೆಸಿಬಿ ಹೀಗೆ ಹಲವು ಮಾರ್ಗಗಳಲ್ಲಿ ತೊಡಗಿಕೊಂಡರು. ಅದೇ ಹೊತ್ತಿನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನಿರಂತರವಾಗಿ ರಾಮಾಯಣದ ಮೇಲೆ ಬರೆಯುತಿದ್ದರು. ಆದರೆ ಇವರ ಪ್ರತಿಭೆ ಬೆಳೆಕಿಗೆ ಬಂದಿರುವುದು ಇವರು ಶೇಣಿ ಗೋಪಾಲಕೃಷ್ಣ ಭಟ್ಟರ ಬಳಗಕ್ಕೆ ಸೇರಿದಾಗ.

ಶೇಣಿ ಸಾಮಗ, ಡಾ. ಪ್ರಭಾಕರ ಜೋಷಿಯವರನ್ನೆಲ್ಲ ಯಲ್ಲಾಪುರ ಭಾಗಕ್ಕೆ ಕರೆಯಿಸಿ ತಾಳಮದ್ದಳೆಯನ್ನು ಸಂಘಟಿಸುವುದು ಇವರ ನೆಚ್ಚಿನ ಹವ್ಯಾಸವಾಯಿತು. ಶೇಣಿಯವರನ್ನು ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಬೆಳಗ್ಗೆ ಅವರಲ್ಲಿ ರಾತ್ರಿ ನಡೆದ ತಾಳಮದ್ದಳೆಯ ವಿಮರ್ಶೆ ನಡೆಸುತ್ತಿದ್ದರು. ಶೇಣಿಯವರು ಹಿಂದಿನ ರಾತ್ರಿ ವಿಜ್ರಂಭಿಸಿದ ಪಾತ್ರಗಳ ಎದುರು ಪಾತ್ರಧಾರಿಯಾಗಿ ಹಗಲಿನಲ್ಲಿ ಇವರ ಮನೆಯಲ್ಲಿ ಅವರ ಸಂಗಡ ಚರ್ಚೆ, ತರ್ಕ ನಡೆಸಿತ್ತಿದ್ದರು. ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ಶೇಣಿಯವರದ್ದು ಪಟ್ಟುಗಾರಿಕೆಯ ಮಾತುಗಳು.

ಇದನ್ನೂ ಓದಿ: ನಾಳೆ ದಕ್ಷಿಣ ಕನ್ನಡ, ಉಡುಪಿ ಶಾಲಾ ಕಾಲೇಜುಗಳಿಗೆ ರಜೆ

ಭಾವಪೂರ್ಣವಾಗಿಯೂ ಶೇಣಿಯವರು ಪ್ರಖ್ಯಾತರು. ಇನ್ನು ಅವರ ಎದುರಾಳಿಯಾದ ಸಾಮಗರದ್ದು ತರ್ಕ ಪ್ರಧಾನ ಅರ್ಥಗಾರಿಕೆ. ದೇರಾಜೆ ಸೀತಾರಾಮಯ್ಯನವರದ್ದು ಇದಕ್ಕಿಂತ ಭಿನ್ನವಾಗಿ ಕಥನಕಟ್ಟುವ ಕ್ರಿಯೆ. ಹೀಗೆ ಈ ಮೂವರೂ ಇವರ ಅಭಿಮಾನದ  ಅರ್ಥಗಾರರಾಗಿದ್ದರು. ಉತ್ತರ ಕನ್ನಡದ ಬುಚ್ಚನ್ ನಾರಾಯಣ ಶಾಸ್ತ್ರಿಗಳೂ ಸಹ ವೇದೋಪನಿಷತ್ತನಿ ಪಾಂಡಿತ್ಯದ ಅರ್ಥವನ್ನು ಹೇಳುತ್ತಿದ್ದರು. ಅವರಿಗೂ ಇವರಿಗೆ ಗುರುವಾದರು. ಡಾ. ಎಂ ಪ್ರಭಾಕರ ಜೋಷಿ ಇವರ ಆತ್ಮೀಯರಾಗಿದ್ದರು.

ಕಡತೋಕಾ ಮಂಜುನಾಥ ಭಾಗವತರು ಇವರ ನೆಚ್ಚಿನ ಭಾಗವತರಾಗಿದ್ದರು. ಕಡತೋಕಾ ಭಾಗವತರಿಗೆ ಹೊಸಬರನ್ನು ತಾಳಮದ್ದಳೆಯ ಕ್ಷೇತ್ರಕ್ಕೆ ತರುವ ಹುಮ್ಮಸ್ಸು. ಹಾಗಾಗಿ ಇವರು ನಿಧಾನವಾಗಿ ದೊಡ್ಡ ಕೂಟಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಜನಪ್ರಿಯತೆಯೆನ್ನುವುದು ಎದುರಾಳಿಯ ಮೇಲೆ ಎಸೆಯುವ ಪಟ್ಟುಗಳಲ್ಲಿದೆ ಎನ್ನುವುದರತ್ತ ಅವರು ಆಕರ್ಷಿತರಾದರು. ಇದು ಶೇಣಿ ಮಾರ್ಗವಾಗಿತ್ತು. ಹಾಗಾಗಿ ತನ್ನಲ್ಲಿರುವ  ಪಾಂಡಿತ್ಯವನ್ನು ಅರ್ಥಗಾರಿಕೆಯಲ್ಲಿ ಬಳಸತೊಡಗಿದರು. ಪ್ರಸಂಗದಲ್ಲಿನ ಮತ್ತು ಮೂಲ ಮಹಾಕಾವ್ಯಗಳಲ್ಲಿನ ಒಳಸುಳಿಗಳನ್ನು ಅನೇಕ ಗೂಢವನ್ನು ಎತ್ತಿ ಎದುರಾಳಿಯಮೇಲೆ ಪ್ರಶ್ನೆಗಳನ್ನು ಎಸೆಯತೊಡುತ್ತಿದ್ದರು.

ಇದನ್ನೂ ಓದಿ: ಪತ್ರಕರ್ತರ ಸಂಘದಿಂದ ಇಂದು ಬೆಂಗಳೂರಿನಲ್ಲಿ ಮಹಿಪಾಲರೆಡ್ಡಿ ಅವರಿಗೆ ಸತ್ಕಾರ

ಇವರ ಅರ್ಥಗಾರಿಕೆಯಲ್ಲಿ ಲಘು ಹಾಸ್ಯ ಮತ್ತು ಎದುರಿನ ಪಾತ್ರದ ದೌರ್ಬಲ್ಯವನ್ನು ಬಯಲು ಮಾಡುವ ಚಾಕಚಕ್ಯತೆ ಎರಡೂ ಇದ್ದವು.  ತಾಳಮದ್ದಳೆಯ ಗಡುಚಿನ ಅರ್ಥಧಾರಿ ಎನ್ನುವ ಅಪವಾದಕ್ಕೆ ಇವರು ಗುರಿಯಾಗಬೇಕಾಯಿತು. ಇನ್ನೊಂದೆಂದರೆ  ಇವರಿಗೆ ಗುಂಪುಗಾರಿಕೆಯ ಮಾಡಿ ಗೊತ್ತಿರಲಿಲ್ಲ. ಹಾಗಾಗಿ ತಾಳಮದ್ದಳೆಯಿಂದ ಸ್ವಲ್ಪ ದೂರವಿಟ್ಟರು. ಅದೇ ಕಾಲಕ್ಕೆ ಇವರನ್ನು ಅಂಕಣಕಾರರನ್ನಾಗಿಸಿದ್ದು, ಮೊದಲು ಸಂಯುಕ್ತ ಕರ್ನಾಟಕ, ನಂತರದಲ್ಲಿ ವಿಜಯವಾಣಿ. ವಿಜಯವಾಣಿಯ “ಪ್ರಾಚೀನ ಜ್ಞಾನ” ಅಂಕಣ ರಾಜ್ಯದಾದ್ಯಂತ ಇವರಿಗೆ ಅಭಿಮಾನಿಗಳನ್ನು ಸೃಷ್ಟಿಸಿತು. ಜನಮಾದ್ಯಮ ಪತ್ರಿಕೆಯಲ್ಲಿಯೂ ಇವರು ನಿರಂತರವಾಗಿ ಅಂಕಣವನ್ನು ಬರೆದಿದ್ದಾರೆ.

ಸಾಹಿತ್ಯದಲ್ಲಿ ಮಾತ್ರ ಇವರದ್ದು ನವಿರುತನ. ನಾರಾಯಣಾಚಾರ್ಯರನ್ನು ಗುರುಗಳೆಂದು ಭಾವಿಸಿದ್ದರು. ಪುರಾಣದ ಲೋಕವನ್ನು ನೋಡುವ ದೃಷ್ಟಿಯಲ್ಲಿ ಅವರನ್ನು ಅನುಸರಿಸಿದರು. ಆದರೆ ತನ್ನ ಸ್ವಂತಿಕೆಯನ್ನು ಛಾಪಿಸಿದರು. ರಾಮಾಯಣದ ಸುಮಿತ್ರೆಯ ಕುರಿತು ಒಂದು ಕೃತಿ ರಚನೆ ಮಾಡುಬೇಕೆಂದಿದ್ದರು. ಈ ವಿಷಯದಲ್ಲಿ ನಮ್ಮಿಬರ ನಡುವ ಸಾಕಷ್ಟು ಚರ್ಚೆಗಳಾಗಿದ್ದವು. ಹಂಪಿಯ ಯಾಜಿ ಪ್ರಕಾಶನ ಇವರ ಕೃತಿಗಳನ್ನು ಪ್ರಕಟಿಸಲು ಸಿದ್ಧರಾಗಿದ್ದರು. ಯಕ್ಷಗಾನದ ಮೊದಲ ಮಾಸಪತ್ರಿಕೆ “ಯಕ್ಷರಂಗ” ವನ್ನು ಕಡತೋಕಾ ಮಂಜುನಾಥ ಭಾಗವತರ ಜೊತೆ ಅನೇಕ ವರ್ಷಗಳ ಕಾಲ ಇವರ ವಿಜಯಶ್ರೀ ಮುದ್ರಣಾಲಯದಲ್ಲಿ ಪ್ರಕಟಿಸಿ ಯಕ್ಷಗಾನಕ್ಕೆ ಒಂದು ಸಾಹಿತ್ಯಿಕ ಚಿಂತನೆಯನ್ನು ಕೊಟ್ಟವರು ಇವರು.

ಇದನ್ನೂ ಓದಿ: ಅರಣ್ಯದಲ್ಲಿ ಅವಧಿ ಮೀರಿದ ತಿನಿಸುಗಳ ರಾಶಿ ಸುರಿದಿರುವುದಕ್ಕೆ ಆಕ್ರೋಶ; ರಾತ್ರೋ ರಾತ್ರಿ ಗ್ರಾಮಸ್ಥರ ಪ್ರತಿಭಟನೆ

ತಮ್ಮ ಗುರು ಶೇಣಿಯವರ ಅರ್ಥಗಾರಿಕೆಯ ಕುರಿತು ಇವರು “ಜ್ಞಾನಯಜ್ಞ” ಶೇಣಿಯವಾ ಚಿಂತನೆಗಳನ್ನು ಅರಿಯಲು  ಇರುವ ಒಂದು ಮಹತ್ವದ ಕೃತಿ.  ರಾಮಾಯಣದ ಮೇಲೆ ಇವರು ಬರೆದ “ಪಾದುಕಾ ಪ್ರಧಾನ” ಭರತನ ಮತ್ತು ರಾಮನ ಹಾಗೂ ಅಯೋಧ್ಯೆಯ ಆಗಿನ ಘಟನೆಗಳ ಕುರಿತು ಜಿಜ್ಞಾಸತ್ವಕ್ಕೆ ತೊಡಗ್ಸುವ ಕೃತಿಯಾಗಿದೆ. ವೈದ್ಯರು ಪಾತ್ರಗಳನ್ನು ನೋಡುವ ಸೂಕ್ಷ್ಮದೃಷ್ಟಿ ಅಚ್ಚರಿ ಮೂಡಿಸುತ್ತದೆ. ಅವರು ಕೈಕೇಯಿಗೆ ಭರತನ ಮೇಲಿರುವ ಪ್ರೀತಿಯನ್ನು  “ಮಾತೃ ಗಂಧಿನಿ” ಎಂದಿದ್ದರು. ವಾತ್ಸಲ್ಯವೆನ್ನುವುದು ಹೃದಯ ಮೂಲ. ಗಂಧಿನಿಯೆನ್ನುವುದು ಬಾಹ್ಯಕ್ಕೆ ಅಂಟಿಸಿಕೊಳ್ಳುವುದು. ನಾವು ಮೈಗೆ ಗಂಧವನ್ನು ಲೇಪಿಸಿಕೊಳ್ಳುವಂತೆ.

ಅವಳಿಗೆ ಭರತನ ಮೇಲೆ ಏಕಾ ಏಕಿ ಪ್ರೀತಿ ಮೂಡಿರುವುದು ಅವಳ ಈ ಗುಣಗಳಿಂದಾಗಿ. ವಾಲ್ಮೀಕಿ ಕೈಕೆಯನ್ನು “ಆತ್ಮಕಾಮಿ ಸದಾಚಂಡಿ” ಎಂದು ವರ್ಣಿಸಿದ್ದಾನೆ. ಸ್ವಸಮ್ಮೋಹಿತಳಾಗಿರುವವಳಲ್ಲಿ ಮಾತೃವಾತ್ಸಲ್ಯ ಮೂಡುವುದಿಲ್ಲ ಎನ್ನುವುದನ್ನು ಅವರು ಈ ಮೂಲಕ ಹೇಳಿದ್ದರು. ಇದು ಅವರು ಮಹಾಕಾವ್ಯವನ್ನು ಅವಲೋಕಿಸಿದ ರೀತಿಯಾಗಿತ್ತು. ಇಂತಹ ಅನೇಕ ಶಬ್ದಗಳೆಲ್ಲವೂ ಸಾಹಿತ್ಯದ ಕೃತಿಗಳಾಗಿ ದಾಖಲಾಗಬೇಕಾಗಿತ್ತು. ವೇದಮೂರ್ತಿ ಸೂರಾಲು ದೇವಿಪ್ರಸಾದ ತಂತ್ರಿಗಳು ಇವರ ನೆಚ್ಚಿನ ವಿದ್ವಾಂಸರಾಗಿದ್ದರು.

ಇದನ್ನೂ ಓದಿ: ಮಣಿಪುರದಲ್ಲಿ ಶಾಂತಿ ಕಾಪಾಡುವಲ್ಲಿ ಬಿಜೆಪಿ ವಿಫಲ

ಬುಚ್ಚನ ಶಾಸ್ತ್ರಿಗಳು ಮತ್ತು ನಾರಾಯಣಾಚಾರ್ಯರಿಂದ ಬಿಟ್ಟು ಹೋದ ಭಾಗಗಳನ್ನು ಅವರ ಹತಿರ ಚರ್ಚೆ ಮಾಡುತ್ತಿದ್ದರು.  ಆದರೆ  ಇತ್ತೀಚೆಗೆ ಅವರ ಆರೋಗ್ಯ ತುಂಬಾ ಕೆಡುತ್ತಿತ್ತು. ತನ್ನ ಅಪ್ರಕಟಿತ ಕೃತಿಗಳನ್ನು ಪ್ರಕಟಿಸಬೇಕು ಎಂದುಕೊಂಡಿದ್ದರು. ವಿಧಿ ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಸೆಳೆದೊಯ್ದು ಬಿಟ್ಟಿತು.

ಇವರ ಪತ್ನಿ ವಿಜಯಶ್ರೀ  ತನ್ನ ಗಂಡನಿಗೆ ಸದಾ ಒತ್ತಾಸೆಯಾಗಿ ನಿಂತವರು. ಹೆಣ್ಣುಮಕ್ಕಳು ಕವಿತಾ ಮತ್ತು ಸಂಗೀತಾ ಇಬ್ಬರೂ ಗಲ್ಫ್ ದೇಶದಲ್ಲಿ ಇದ್ದರೂ ಸಾಹಿತ್ಯವನ್ನು ರಚನೆಯಲ್ಲಿ ತೊಡಗಿದ್ದಾರೆ. ಮಗ ಕಿರಣ ಬೆಂಗಳೂರಿನಲ್ಲಿ ಎಂಜಿನಿಯರ್. ಸದಾ ಜಿಜ್ಞಾಸುವಾಗಿದ್ದ ವೈದ್ಯರು ಅದರ ಅಂತಿಮ ಹಂತವಾದ ಅನಂತದಲ್ಲಿ ಲೀನವಾಗಿಬಿಟ್ಟರು. ಕನ್ನಡ ಸಾರಸ್ವತದ ವಿದ್ವಾಂಸರೋರ್ವರನ್ನು ಕಳೆದುಕೊಂಡೆವು.  (ಲೇಖಕರು ವಿದ್ವಾಂಸರು, ಯಕ್ಷಗಾನ ಕಲಾವಿದರು)

ಒಂದೇ ಕೈಯಲ್ಲಿ ಸಿಕ್ಸರ್ ಸಿಡಿಸಿ ರಿಷಭ್ ಪಂತ್‌ಗೆ ಧನ್ಯವಾದ ತಿಳಿಸಿದ ಇಶಾನ್ ಕಿಶನ್

Share This Article

ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!

Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…

ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble

Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…