More

    ಅರ್ಜಿ ಸಲ್ಲಿಸಿದ ಎಲ್ಲರಿಗೂ ವಿದ್ಯುತ್ ಸಂಪರ್ಕ ಖಚಿತ, ಕೆಇಆರ್‌ಸಿಯಿಂದ ಶೀಘ್ರ ಆದೇಶ: ಸಿಎಂ ಭರವಸೆ

    ಬೆಂಗಳೂರು: ರಾಜ್ಯದಲ್ಲಿ ಯಾವುದೇ ವ್ಯಕ್ತಿ ಎಂತಹ ಪ್ರದೇಶದಲ್ಲಿಯಾದರೂ ಮನೆ ನಿರ್ಮಿಸಿಕೊಂಡು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದರೆ, ತಕ್ಷಣವೇ ಸಂಪರ್ಕ ಕಲ್ಪಿಸುವ ಆದೇಶ ಜಾರಿಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ವಸಂತನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 53ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ ಅವಧಿಯಲ್ಲಿ ಗಾಳಿ, ನೀರು, ಮನೆ ಎಷ್ಟು ಅಗತ್ಯವೋ ಅದೇ ರೀತಿ ವಿದ್ಯುತ್ ಕೂಡ ಅಗತ್ಯವಾಗಿದೆ. ಒಬ್ಬ ವ್ಯಕ್ತಿ ಬಡಾವಣೆ, ವಸತಿ ಪರಿವರ್ತಿತ ನಿವೇಶನ, ಕಂದಾಯ ಭೂಮಿ, ಕೊಳೆಗೇರಿ ಅಥವಾ ಯಾವುದೇ ಪ್ರದೇಶಗಳಲ್ಲಿ ಮನೆ ಅಥವಾ ಗುಡಿಸಲು ನಿರ್ಮಿಸಿಕೊಂಡಿದ್ದರೂ ಅವರು ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಬಹುದು.

    ಆಗ ವಿದ್ಯುತ್ ನಿಗಮವು ಸ್ಥಳೀಯ ಆಡಳಿತ ಸಂಸ್ಥೆಗಳು, ವಸತಿ ಇಲಾಖೆ, ಇನ್ನಿತರ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರಗಳನ್ನು ತರುವಂತೆ ಅರ್ಜಿದಾರರನ್ನು ಅಲೆದಾಡಿಸದೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈ ಕುರಿತು ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗ (ಕೆಇಆರ್‌ಸಿ)ದಿಂದ ಶೀಘ್ರ ಆದೇಶ ಹೊರಡಿಸಬೇಕು. ಇದಕ್ಕೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಇದಕ್ಕೆ ಅಡ್ಡಿಪಡಿಸಬಾರದು ಎಂದು ಸೂಚಿಸಿದರು.

    ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್

    ರಾಜ್ಯದಲ್ಲಿ ರೈತರು ಬಳಸುವ 10 ಎಚ್‌ಪಿ ಮೋಟರ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಯೋಜನೆಯನ್ನು ಕಾಫಿ ಬೆಳೆಗಾರರಿಗೂ ವಿಸ್ತರಣೆ ಮಾಡಲಾಗುತ್ತಿದ್ದು, ಅವರೂ 10 ಎಚ್‌ಪಿ ಮೋಟರ್‌ವರೆಗೂ ಉಚಿತ ವಿದ್ಯುತ್ ಪಡೆಯಬಹುದು. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯುನಿಟ್ ವಿದ್ಯುತ್ ಬಳಕೆವರೆಗೂ ಉಚಿತ ವಿದ್ಯುತ್ ನೀಡಲಾಗುತ್ತದೆ. ಒಟ್ಟಾರೆ, ರಾಜ್ಯದಲ್ಲಿ ವಾರ್ಷಿಕ 14 ಸಾವಿರ ಕೋಟಿ ರೂ. ಸಬ್ಸಿಡಿ ನೀಡಲಾಗುತ್ತಿದೆ. ಕಳೆದ ವರ್ಷ ಹೆಸ್ಕಾಂ ಮೂಲಕ ವಿದ್ಯುತ್ ನಿಗಮಕ್ಕೆ 5 ಸಾವಿರ ಕೋಟಿ ರೂ. ಅನುದಾನ ಕೊಡಲಾಗಿದೆ. ಜತೆಗೆ, ಸಾಲದ ಸುಳಿಯಿಂದ ಹೊರತರುವ ಉದ್ದೇಶದಿಂದ 2 ಸಾವಿರ ಕೋಟಿ ರೂ. ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಈ ವೇಳೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಶ್ರೀಕರ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್. ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.

    ರಾಜ್ಯದಲ್ಲಿ 750 ಮೆ. ವ್ಯಾಟ್ ವಿದ್ಯುತ್ ಉತ್ಪಾದನೆಯಿಂದ 8,700 ಮೆ. ವ್ಯಾಟ್ ಉತ್ಪಾದನೆವರೆಗೆ ತಲುಪಿದ್ದೇವೆ. ಸರ್ಕಾರ ಹೈಬ್ರಿಡ್ ಪಾರ್ಕ್, ಸ್ಟೋರೇಜ್ ಕೇಂದ್ರ ಆರಂಭದಂತಹ ದೂರದೃಷ್ಟಿ ಯೋಜನೆ ಕೈಗೊಂಡಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜು ಕಾರ್ಯವನ್ನು ವಿದ್ಯುತ್ ನಿಗಮ ಸಮರ್ಪಕವಾಗಿ ನಿರ್ವಹಿಸುತ್ತಿದೆ.

    | ವಿ. ಸುನೀಲ್ ಕುಮಾರ್ ಇಂಧನ ಸಚಿವ

    ಎರಡು ಇಲಾಖೆ ಆರ್ಥಿಕ ಸುಧಾರಣೆಗೆ ಸಮಿತಿ

    ರಾಜ್ಯದಲ್ಲಿ 1970ರ ದಶಕದಲ್ಲಿ ಜಲವಿದ್ಯುತ್‌ನಿಂದ ಆರಂಭವಾದ ವಿದ್ಯುತ್ ಉತ್ಪಾದನೆ ಈಗ ಉಷ್ಣ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ಮತ್ತು ಅಣು ವಿದ್ಯುತ್ ಸೇರಿ ಹಲವು ವಿಧಗಳಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ, ಹಿಂದಿನ ಸರ್ಕಾರಗಳು ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಕಂಡುಬಂದ ಸಣ್ಣ ಸಮಸ್ಯೆಗಳನ್ನು ಆಗಿಂದಾಗಲೆ ಪರಿಹರಿಸದೆ ಬೆಟ್ಟದಂತೆ ಮಾಡಿಬಿಟ್ಟಿವೆ. ಈಗ ಸರ್ಕಾರ 14 ಸಾವಿರ ಕೋಟಿ ರೂ. ಸಬ್ಸಿಡಿ ನೀಡುವ ಹಂತಕ್ಕೆ ತಲುಪಿದ್ದು, ದೊಡ್ಡ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಿಂದ ವಿದ್ಯುತ್ ನಿಗಮ ಮತ್ತು ಸಾರಿಗೆ ನಿಗಮಗಳ ಆರ್ಥಿಕ ಸುಧಾರಣೆಗೆ ಸಮಿತಿಗಳನ್ನು ರಚಿಸಲಾಗಿತ್ತು. ಈಗಾಗಲೇ ಸಮಿತಿಗಳಿಂದ ವರದಿ ಸಲ್ಲಿಕೆಯಾಗಿದ್ದು, ಅದನ್ನು ಅಧ್ಯಯನ ಮಾಡಿ ಅಧಿವೇಶನದ ಮುಂದಿಟ್ಟು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

    ಖಾಸಗಿಯವರಿಂದ ಪಿಎಸ್‌ಬಿ ಆರಂಭಕ್ಕೆ ಕಾಯ್ದೆ

    ರಾಜ್ಯದಲ್ಲಿ ಸರ್ಕಾರದಿಂದ ಈಗಾಗಲೇ ಶರಾವತಿ ಬಳಿ ವಿದ್ಯುತ್ ಸಂಗ್ರಹಣಾ ಘಟಕ (ಪಿಎಸ್‌ಬಿ) ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಅದೇ ರೀತಿ ಖಾಸಗಿಯವರು ಕೂಡ ಪಿಎಸ್‌ಬಿ ಆರಂಭಿಸಲು ಅನುಕೂಲ ಆಗುವಂತೆ ಕಾಯ್ದೆಯೊಂದನ್ನು ಜಾರಿಗೆ ತರಲಾಗುತ್ತದೆ. ಇದರಿಂದ ರಾಜ್ಯಕ್ಕೆ ಅಗತ್ಯವಿದ್ದಷ್ಟು ವಿದ್ಯುತ್ ಲಭ್ಯವಾಗುವ ಜತೆಗೆ, ಇತರೆ ರಾಜ್ಯಗಳಿಗೂ ಮಾರಾಟ ಮಾಡಬಹುದು. ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ದೇಶದ ಶೇ.43 ವಿದ್ಯುತ್ ಇಲ್ಲಿ ಉತ್ಪಾದಿಸಲಾಗುತ್ತಿದೆ. ಜಾಗತಿಕವಾಗಿ ಯಾವುದೇ ಹೊಸ ತಂತ್ರಜ್ಞಾನಗಳು ಬಂದರೂ ಅವುಗಳನ್ನು ಕರ್ನಾಟಕದಲ್ಲಿ ಅಳವಡಿಕೆ ಮಾಡಿಕೊಳ್ಳಲಾಗುತ್ತದೆ. ಈಗ ಸಮುದ್ರ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಹಸಿರು ನಿಶಾನೆ ಕೊಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಜೀವ ಉಳಿಸಲು ಹೋಗಿ ಪ್ರಾಣ ಕಳ್ಕೊಂಡ್ರು!: ಟೋಲ್​ ಗೇಟ್​ನಲ್ಲಿ ಆ್ಯಂಬುಲೆನ್ಸ್ ಪಲ್ಟಿ, ಮೂವರು ಸ್ಥಳದಲ್ಲೇ ಸಾವು..

    ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts