ಸಂಡೂರು: ಪ್ರತಿ ತಿಂಗಳು ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆಯ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ವೈದ್ಯಾಧಿಕಾರಿ ಡಾ.ಸಾದಿಯಾ ಹೇಳಿದರು.
ತಾಲೂಕಿನ ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜನಸಂಖ್ಯೆ ನಿಯಂತ್ರಣ ಜಾಗೃತಿ ಮತ್ತು ಲ್ಯಾಪರೊಸ್ಕೋಪಿಕ್ ಶಸ್ತ್ರ ಚಿಕಿತ್ಸೆ ಕುರಿತು ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಗುರುವಾರ ಮಾತನಾಡಿದರು. ಕುಟುಂಬಕ್ಕೆ ಎರಡು ಮಕ್ಕಳ ಸಾಕು ಎಂಬ ಸ್ವಂತ ನಿರ್ಧಾರ ತೆಗೆದುಕೊಳ್ಳುವುದರೊಳಗೆ ಮೂರು ನಾಲ್ಕು ಮಕ್ಕಳಾಗಿರುತ್ತವೆ. ಇದನ್ನು ತಪ್ಪಿಸಲು ಜನರಿಗೆ ಅರಿವು ಮೂಡಿಸಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಈ ಪಾಕ್ಷಿಕದಲ್ಲಿ ಕಾಪರ್ ಟಿ ಅಳವಡಿಕೆ, ಮಾಲಾ ಮತ್ತು ಛಾಯ ಮಾತ್ರೆ ಸೇವನೆಗೆ ಮಹಿಳೆಯರ ಮನವೊಲಿಸುವಿಕೆ, ಹಾಗೂ ಅಂತರ ಚುಚ್ಚು ಮದ್ದು ನೀಡಿಕೆ ಮತ್ತು ಪುರುಷರ ಶಸ್ತ್ರ ಚಿಕಿತ್ಸೆ ಎನ್‌ಎಸ್‌ವಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಣ ಅತ್ಯವಶ್ಯಕ
ಯಶವಂತನಗರ, ಕೋಡಿಹಳ್ಳಿ, ಅಂತಾಪುರ, ಕೋಡಾಲು, ಸಂಡೂರಿನಲ್ಲಿ 17 ಫಲಾನುಭವಿಗಳು ಶಸ್ತ್ರ ಚಿಕಿತ್ಸೆಗೆ ಒಳಗಾದರು. ಪ್ರಸೂತಿ ತಜ್ಞೆ ಡಾ.ರಜಿಯಾ ಬೇಗಂ, ಶಸ್ತ್ರ ಚಿಕಿತ್ಸಕರಾದ ಡಾ.ರವೀಂದ್ರ ಕನಕೇರಿ, ಡಾ.ಗೋಪಾಲ್‌ರಾವ್, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆ ಬಸಮ್ಮ, ಎರ‌್ರೆಮ್ಮ, ಮೆಘನಾ, ರಾಜೇಶ್ವರಿ, ಭಾರತಿ, ಲತಾ, ಹನುಮಂತಮ್ಮ, ಶಿವಲಿಂಗಮ್ಮ, ವಸಂತಲಕ್ಷ್ಮೀ, ನಾಗಮ್ಮ, ಶುಶ್ರೂಷಕರಾದ ಶ್ರೀಧರ್, ಲಕ್ಷ್ಮೀ, ಹುಲಿಗೆಮ್ಮ, ರೇಷ್ಮಾ, ಗೀತಾ, ಸಹಾಯಕರಾದ ಮುಕ್ಕಣ್ಣ, ಮಂಜನಾಥ್, ಶಿವಕುಮಾರ್, ರತ್ನಮ್ಮ ಇತರರಿದ್ದರು.