More

    ವಿಶ್ವ ಪಾರಂಪರಿಕ ತಾಣದಲ್ಲಿ ಅಸ್ವಚ್ಛತೆ

    ಬೇಲೂರು: ಬೇಲೂರು ಪಟ್ಟಣದ ಕೆಲ ಅಂಗಡಿ, ಮುಂಗಟ್ಟುಗಳು ಹಾಗೂ ಮೆಡಿಕಲ್ ಶಾಪ್‌ಗಳ ವರ್ತಕರು ಕಸವನ್ನು ರಸ್ತೆ ಪಕ್ಕದಲ್ಲಿ ಎಲ್ಲೆಂದರಲ್ಲಿ ತಂದು ಹಾಕುವ ಮೂಲಕ ಅಸ್ವಚ್ಛತೆಗೆ ಕಾರಣರಾಗುತ್ತಿದ್ದು, ಅಂತಹವರ ವಿರುದ್ಧ ಪುರಸಭೆ ಕಠಿಣ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

    ಬೇಲೂರು ಪಟ್ಟಣ ವಿಶ್ವ ವಿಖ್ಯಾತ ಪ್ರವಾಸಿ ತಾಣ. ಜತೆಗೆ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ದೇಗುಲದಲ್ಲಿನ ಸುಂದರ ಶಿಲ್ಪಕಲೆಯನ್ನು ವೀಕ್ಷಿಸಿ ಪಟ್ಟಣವನ್ನು ಸುತ್ತಾಡಿಕೊಂಡು ಬರುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಪುರಸಭೆಯಿಂದ ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಪಟ್ಟಣದ ಸ್ವಚ್ಛತೆಗೆ ಮುಂದಾಗುವುದರ ಜತೆಗೆ ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಕಸ ಸಂಗ್ರಹಣೆಗಾಗಿ ಆಟೋ ಟಿಪ್ಪರ್‌ಗಳನ್ನು ಸಹ ಬಿಟ್ಟು ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ.

    ಆದರೆ ಅಂಗಡಿಗಳು ಹಾಗೂ ಕೆಲ ಮೆಡಿಕಲ್ ಸ್ಟೋರ್‌ಗಳ ವರ್ತಕರು ರಾತ್ರಿ ಲೇಟಾಗಿ ಬಾಗಿಲು ಮುಚ್ಚಿ ಕಸವನ್ನೆಲ್ಲ ರಸ್ತೆ ಬದಿಗೆ ಹಾಕಿ ಹೋಗುತ್ತಿರುವುದು ಹೆಚ್ಚಾಗತೊಡಗಿದೆ. ಈ ರೀತಿ ಆದರೆ ಪುರಸಭೆ ಸಿಬ್ಬಂದಿ ಸ್ವಚ್ಛಗೊಳಿಸಿ ಹೋದ ನಂತರ ಕಸ ಹಾಕಿದರೆ ಪುನಃ ಬೆಳಗ್ಗೆ ಪೌರ ಕಾರ್ಮಿಕರು ಬಂದು ಗುಡಿಸಬೇಕು. ಅಲ್ಲಿವರೆಗೆ ಯಾರೂ ಕಸ ಗುಡಿಸುವುದಿಲ್ಲ. ಇದರಿಂದಾಗಿ ಎಲ್ಲೆಂದರಲ್ಲಿ ಕಸದ ರಾಶಿ ರಸ್ತೆಯಲ್ಲಿ ಬಿದ್ದಿರುತ್ತದೆ. ಮಳೆ ಬಂದ ಸಂದರ್ಭ ಕಸವೆಲ್ಲ ಮಳೆ ನೀರಿನೊಂದಿಗೆ ಬೆರೆತು ಹರಿದು ಹಂಚಿ ಹೋಗಿರುತ್ತದೆ. ಇದರಿಂದ ಬೆಳಗ್ಗೆ ಪೌರ ಕಾರ್ಮಿಕರು ಹೆಚ್ಚಿನ ಶ್ರಮದಿಂದ ಕಸ ಗುಡಿಸಿ ಸ್ವಚ್ಛಗೊಳಿಸುವಂತಾಗಿದೆ.

    ಮತ್ತೆ ಕೆಲ ವರ್ತಕರು ಪೌರ ಕಾರ್ಮಿಕರು ಗುಡಿಸಿ ಸ್ವಚ್ಛಗೊಳಿಸಿ ಹೋದ ನಂತರ ಕಸವನ್ನು ರಸ್ತೆ ಪಕ್ಕಕ್ಕೆ ಸುರಿಯುವುದರಿಂದ ಅಸ್ವಚ್ಛತೆಗೆ ಕಾರಣವಾಗುತ್ತಿದೆ. ಆದ್ದರಿಂದ ಪಟ್ಟಣದ ರಸ್ತೆ ಅಕ್ಕಪಕ್ಕದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಪುರಸಭೆ ಕಠಿಣ ಕ್ರಮಕ್ಕೆ ಮುಂದಾದರೆ ಪೌರಕಾರ್ಮಿಕರ ಶ್ರಮಕ್ಕೆ ಬೆಲೆ ಕೊಟ್ಟಂತ್ತಾಗುತ್ತದೆ ಮತ್ತು ಪಟ್ಟಣವನ್ನು ಅಂದವಾಗಿಟ್ಟಂತೆಯೂ ಆಗುತ್ತದೆ ಎಂಬುದು ಪರಿಸರ ಪ್ರೇಮಿಗಳ ಮತ್ತು ಸಾರ್ವಜನಿಕರ ಒತ್ತಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts