More

    ರಾಜಕಾರಣಿಗಳಿಗಿಲ್ಲ ಜನಪರ ಕಾಳಜಿ

    ತಾಳಗುಪ್ಪ: ರಾಜಕೀಯ ಪಕ್ಷಗಳು ಚುನಾವಣೆಗಿಂತ ಮೊದಲು ಒಂದು ನೀತಿ, ನಂತರ ಒಂದು ನೀತಿ ಅನುಸರಿಸುತ್ತಾ ಬಂದಿರುವುದು ರೈತರ ಸಂಕಷ್ಟಗಳಿಗೆ ಕಾರಣವಾಗಿದೆ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಹೇಳಿದರು.

    ರೈತ ಸಂಘದ 76ನೇ ಸಂಸ್ಥಾಪನಾ ದಿನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಪ್ಪು ದಿನದಲ್ಲಿ ಮಾತನಾಡಿ, ಕಾನೂನು ತಿದ್ದುಪಡಿ ಮಾಡುವುದು ರಾಜಕಾರಣಿಗಳು ತಮ್ಮ ಆಸ್ತಿ ರಕ್ಷಣೆಗೆ ಹೊರತೂ ಜನಪರ ಕಾಳಜಿಯಿಂದಲ್ಲ ಎಂದು ದೂರಿದರು.
    ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತರು, ಚಕ್ರಾ, ವರಾಹಿ, ಸಾವೆಹಕ್ಲು ನಿರಾಶ್ರಿತರು, ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಸಂತ್ರಸ್ತರ ವಿಚಾರದಲ್ಲಿ ಸರ್ಕಾರ ಮತ್ತು ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷೃಖಂಡನೀಯ. ಈ ಸಂಬಂಧ 1973ರಲ್ಲಿ ರದ್ದಾಗಿದ್ದ ಟಾಸ್ಕ್ಫೋರ್ಸ್‌ನ್ನು ಪುನಾರಚನೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಅಸಹಕಾರ ಹಾಗೂ ಸಾಗರ ತಾಲೂಕಿನ ಕಂದಾಯ ಇಲಾಖೆಯ ಕಚೇರಿಗಳಲ್ಲಿ ರೈತರ ಭೂಮಿಗೆ ಸಂಬಂಧಿಸಿದ ಕಡತಗಳು ನಾಪತ್ತೆ ಆಗುತ್ತಿರುವುದನ್ನು ಖಂಡಿಸಿ, ಸರ್ಕಾರದ ಆದೇಶದ ಪ್ರಕಾರ ರೈತರ ಕೆಲಸಗಳನ್ನು ಮಾಡದ ಅಧಿಕಾರಿಗಳ ನಡೆಯನ್ನು ಖಂಡಿಸಿ ಸಂಭ್ರಮದಿಂದ ಆಚರಿಸಬೇಕಾಗಿದ್ದ ಸಂಸ್ಥಾಪನಾ ದಿನವನ್ನು ಕಪ್ಪು ದಿನವಾಗಿ ಆಚರಿಸಲಾಗುತ್ತಿದೆ. ಈ ಮೂಲಕ ಸರ್ಕಾರ ಮತ್ತು ಜನಪ್ರತಿನಿಧಿಗಳ ತಲುಪುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
    ಹಿಂದುಳಿದ ಜನ ಜಾಗೃತಿ ವೇದಿಕೆಯ ತೀ.ನಾ.ಶ್ರೀನಿವಾಸ ಮಾತಾನಾಡಿ, ಇವತ್ತಿನ ರಾಜಕಾರಣಿಗಳು ನಾಚಿಕೆ ಪಡಬೇಕು. ಕೇವಲ ಅಧಿಕಾರದ ವ್ಯಾಮೋಹವನ್ನಷ್ಟೆ ನಾವು ಕಾಣಬಹುದಾಗಿದೆ. ತಮ್ಮ ಆಸ್ತಿಯ ಸಂರಕ್ಷಣೆಯಲ್ಲಿ ಮುಳುಗಿರುವ ರಾಜಕಾರಣಿಗಳು ಗೋಪಾಲಗೌಡ ಅವರಂತಹ ರಾಜಕಾರಣಿಗಳನ್ನು ನೆನಪು ಮಾಡಿಕೊಂಡು ರಾಜಕಾರಣ ಕಲಿಯಬೇಕು. ಕನಿಷ್ಠ ಹಕ್ಕುಪತ್ರ ಕೊಡಲು ಯೋಗ್ಯತೆ ಇಲ್ಲದೆ ಇರುವ ಸರ್ಕಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಶ್ರೀಕರ್, ರವಿ ಕುಮಾರ್, ಚಂದ್ರಶೇಖರ ಗೂರಲಕೆರೆ, ರಾಜು ಪವಾರ್, ಶಶಿಕಾಂತ ಪಡಸಲಗಿ, ಪ್ರಕಾಶ್ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts