More

    31ರಿಂದ ಪೋಲಿಯೋ ಲಸಿಕಾ ಕಾರ್ಯಕ್ರಮ ; ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್ ಮಾಹಿತಿ

    ಕೋಲಾರ : ಜಿಲ್ಲೆಯಾದ್ಯಂತ ಜ. 31ರಿಂದ ಮೂರು ದಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್ ಹೇಳಿದರು.

    ಪೋಲಿಯೋ ನಿರ್ಮೂಲನೆಯಲ್ಲಿ ಭಾರತ ಗಣನೀಯ ಪ್ರಗತಿ ಸಾಧಿಸಿದೆ. 2011ರ ಜನವರಿಯಿಂದ ಯಾವುದೇ ಹೊಸ ಪೋಲಿಯೋ ಪ್ರಕರಣ ಕಂಡು ಬಂದಿಲ್ಲ. ಭಾರತ ದೇಶವು ವಿಶ್ವ ಆರೋಗ್ಯ ಸಂಸ್ಥೆಯಿಂದ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಪೋಲಿಯೋ ನಿರ್ಮೂಲನೆ ಪ್ರಮಾಣ ಪತ್ರವನ್ನು 2014ರ ಮಾ.27ರಂದು ಪಡೆದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    2020ರ ಜನವರಿಯಲ್ಲಿ ನಡೆದ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 1,62,332 ಮಕ್ಕಳಿಗೆ ಲಸಿಕೆ ನೀಡಿ ಶೇ.104 ಪ್ರಗತಿ ಸಾಧಿಸಲಾಯಿತು. ಈ ವರ್ಷ ಪೋಲಿಯೋ ಕಾರ್ಯಕ್ರಮದಡಿ 1,57,125 ಮಕ್ಕಳಿಗೆ 743 ಬೂತ್‌ಗಳಲ್ಲಿ, 46 ತಂಡಗಳಲ್ಲ್ಲಿ, 1 ಮೊಬೈಲ್ ತಂಡದೊಂದಿಗೆ ಮೊದಲನೇ ದಿನ ಬೂತ್‌ನಲ್ಲಿ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ನಂತರದ 2-3 ದಿನಗಳಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ 3,58,398 ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 1913 ಗಂಡಾಂತರ ಪ್ರದೇಶ ಗುರುತಿಸಿದ್ದು ಮಕ್ಕಳಿಗೆ ಪೋಲಿಯೋ ಹನಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ವಿಜಯಕುಮಾರಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಪೋಲಿಯೋ ನಿರ್ಮೂಲನೆ ಅಂಗವಾಗಿ ಈ ವರ್ಷ ಒಂದು ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜನವರಿ 31ರಿಂದ ನೀಡಲಾಗುತ್ತಿದೆ. ಈ ಕಾರ್ಯಕ್ರಮದ ಮೊದಲನೇ ದಿನ ಪೋಲಿಯೋ ಬೂತ್‌ಗಳಲ್ಲಿ ಹಾಗೂ ನಂತರದ 2-3 ದಿನಗಳಲ್ಲಿ ಮನೆ-ಮನೆ ಭೇಟಿ ಮೂಲಕ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿ ಸೇರಿ ಒಟ್ಟು 3160 ಲಸಿಕೆದಾರರು ಕಾರ್ಯನಿರ್ವಹಿಸಲಿದ್ದಾರೆ. 163 ಮೇಲ್ವಿಚಾರಕರು ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್‌ರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಾಭಿವೃದ್ಧಿ ಮತ್ತು ಇತರ ಇಲಾಖೆ ಹಾಗೂ ಎನ್‌ಜಿಒಗಳು ಪಾಲ್ಗೊಳ್ಳಲಿದ್ದಾರೆ ಎಂದರು.  ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್ ಕುಮಾರ್, ಕೋಲಾರ ತಾಲೂಕು ಆರೋಗ್ಯಾಧಿಕಾರಿ ರಮ್ಯಾ ದೀಪಿಕಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts