ಕರೊನಾ ಹಿಮ್ಮೆಟ್ಟಿಸುವುದಕ್ಕೆ ಬೆಂಗಳೂರು ಪೊಲೀಸ್ ತಮ್ಮದೇ ರೀತಿಯಲ್ಲಿ ಹಲವು ದಿನಗಳಿಂದ ಕೆಲಸ ಮಾಡುತ್ತಲೇ ಬಂದಿದ್ದಾರೆ. ಕರೊನಾ ಸೋಂಕಿನ ಕುರಿತಾಗಿ ತಮ್ಮದೇ ರೀತಿಯಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಕರೊನಾ ಹಾಡಿನಲ್ಲೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ತಮ್ಮ ಫೋರ್ಸ್ ಜತೆಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ‘ಓಂ’ ಹವಾ!
ಈಗ ಸೋಷಿಯಲ್ ಮೀಡಿಯಾದಲ್ಲಿ ಅದನ್ನು ಮುಂದುವರೆಸಲಾಗಿದೆ. ಈ ಬಾರಿ ಜನಪ್ರಿಯ ಕನ್ನಡ ಚಿತ್ರಗಳ ಪೋಸ್ಟರ್‌ಗಳನ್ನು ಉಪಯೋಗಿಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಪೋಸ್ಟರ್ ಬಳಸಿಕೊಳ್ಳಲಾಗಿದ್ದು, ಇಲ್ಲಿ ಸುದೀಪ್ ಅವರ ಮುಖಕ್ಕೆ ಮಾಸ್ಕ್ ಹಾಕಲಾಗಿದೆ. ಈ ಮೂಲಕ ಮಾಸ್ಕ್‌ನ ಅವಶ್ಯಕತೆ ಎಷ್ಟಿದೆ ಎಂದು ಹೇಳಲಾಗಿದೆ.
ಸುದೀಪ್ ಅವರ ಫೋಟೋ ಜತೆಗೆ, ‘ಕರೊನಾ ವೈರಸ್ ವಿಲಗೊಳಿಸಲು ನಮಗೆ ಜಾಣ್ಮೆ ಹಾಗೂ ಶಕ್ತಿಯ ಅವಶ್ಯಕತೆ ಇದೆ. ಮಾಸ್ಕಪ್ ಬೆಂಗಳೂರು, ಕರೊನಾ ಬಂಧಿಸಿ’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಆರು ಭಾಷೆಗಳಿಗೆ ರೀಮೇಕ್ ಆಗಿತ್ತು ಅಣ್ಣಾವ್ರ ಈ ಸಿನಿಮಾ!
ಇನ್ನು ಉಪೇಂದ್ರ ಅಭಿನಯದ ‘ಬುದ್ಧಿವಂತ 2’ ಚಿತ್ರದ ಪೋಸ್ಟರ್ ಸಹ ಈ ನಿಟ್ಟಿನಲ್ಲಿ ಬಳಸಿಕೊಳ್ಳಲಾಗಿದೆ. ‘ಸಾಂಕ್ರಾಮಿಕ ರೋಗ ಹರಡಿದ ಸಂದರ್ಭದಲ್ಲಿ, ನಕಲಿ ಸುದ್ದಿಗಳು ಸಹ ಇದರಷ್ಟೇ ಮಾರಕವಾಗಬಹುದು. ಜಾಣ್ಮೆ ತೋರಿಸಿ, ಕರೊನಾ ಬಂದಿಸಿ’ ಎಂಬ ಸಂದೇಶ ನೀಡಲಾಗಿದೆ.
ಒಟ್ಟಿನಲ್ಲಿ ಕರೊನಾ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಬೆಂಗಳೂರು ನಗರ ಪೊಲೀಸ್ ಸಾಕಷ್ಟು ಶ್ರಮವಹಿಸುತ್ತಿದ್ದು, ಅದನ್ನು ಸರಿಯಾಗಿ ಪಾಲಿಸಿದಲ್ಲಿ, ಅವರ ಶ್ರಮ ಸಾರ್ಥಕವಾಗಲಿದೆ.