More

    ಗ್ರಾಮಾಂತರ ಪೊಲೀಸರಿಗೆ ಕರೆಂಟ್ ಕಾಟ!

    ಹಲವು ಠಾಣೆಗಳಲ್ಲಿ ಯುಪಿಎಸ್ ಬ್ಯಾಟರಿ ರಿಪೇರಿ

    ಟಾರ್ಚ್ ಬೆಳಕಿನಲ್ಲಿ ಕಾನೂನು ಪಾಲನೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ದಿನದ 24 ಗಂಟೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯನಿರ್ವಹಿಸುವ ಪೊಲೀಸರಿಗೆ ಕರೆಂಟ್ ಕಾಟ ಶುರುವಾಗಿದೆ. ಗ್ರಾಮಾಂತರ ಜಿಲ್ಲೆಯ ಹಲವು ಠಾಣೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ.
    ಆರೇಳು ತಿಂಗಳಿಂದ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆಯ ಹಲವು ಪೊಲೀಸ್ ಠಾಣೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಮೊಬೈಲ್ ಟಾರ್ಚ್‌ಗಳು ಆನ್ ಆಗುತ್ತಿವೆ. ಗಂಟೆಗಟ್ಟಲೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುವುದರಿಂದ ದೂರುದುಮ್ಮಾನಗಳನ್ನು ಹೊತ್ತು ತರುವ ಸಾರ್ವಜನಿಕರೊಂದಿಗೆ ಸರಿಯಾದ ಸಂವಹನ ನಡೆಸುವುದು ಕಷ್ಟವಾಗಿದೆ.

    ಠಾಣೆಗಳಲ್ಲಿ ಯುಪಿಎಸ್ ಬ್ಯಾಟರಿ ರಿಪೇರಿ: ದೇವನಹಳ್ಳಿಯ ವಿಜಯಪುರ, ಹೊಸಕೋಟೆ ತಾಲೂಕಿನ ಸೂಲಿಬೆಲೆ ಸೇರಿ ಹಲವು ಠಾಣೆಗಳಲ್ಲಿ ವಿದ್ಯುತ್ ಕೈಕೊಟ್ಟ ಸಂದರ್ಭದಲ್ಲಿ ಪರ್ಯಾಯವಾಗಿ ಬಳಸುವ ಯುಪಿಎಸ್ ಬ್ಯಾಟರಿಗಳು ಕೆಟ್ಟು ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೆ ಅವುಗಳನ್ನು ರಿಪೇರಿ ಮಾಡಿಸಿಲ್ಲ. ಇದರಿಂದಾಗಿ ವಿದ್ಯುತ್ ಕೈ ಕೊಟ್ಟಾಗ ಬ್ಯಾಟರಿಗಳು ಇದ್ದರೂ ಪ್ರಯೋಜನಕ್ಕೆ ಬರದಂತಾಗಿದೆ. ಇನ್ನು ಕೆಲವು ಠಾಣೆಗಳಲ್ಲಿ ಯುಪಿಎಸ್ ಬ್ಯಾಟರಿಗಳನ್ನೇ ಒದಗಿಸಿಲ್ಲ. ಇದರಿಂದಾಗಿ ವಿದ್ಯುತ್ ಕಡಿತಗೊಂಡಾಗ ಇಡೀ ಠಾಣೆಯ ಸಿಬ್ಬಂದಿ ಕತ್ತಲೆಯಲ್ಲಿರುವಂತಾಗುತ್ತಿದೆ. ಇದರಿಂದ ಪೊಲೀಸರು ವಿದ್ಯುತ್ ಬರುವುದನ್ನೇ ಕಾಯ್ದುಕುಳಿತುಕೊಳ್ಳುವಂತಾಗಿದೆ. ವಿದ್ಯುತ್ ಕೈಕೊಟ್ಟ ವೇಳೆ ಠಾಣೆಗಳಲ್ಲಿನ ಎಲ್ಲ ಕೆಲಸಗಳು ಸ್ತಬ್ಧಗೊಳ್ಳುತ್ತವೆ. ತುರ್ತು ಪರಿಸ್ಥಿತಿಯಲ್ಲಿ ವಿವಿಧ ಅಹವಾಲುಗಳನ್ನು ಹೊತ್ತುತರುವ ಸಾರ್ವಜನಿಕರು ಕಂಗಾಲಾಗುವಂತಾಗಿದೆ. ಪೊಲೀಸರು ಅಸಹಾಯಕರಾಗಿ ನಿಲ್ಲುವಂತಾಗಿದೆ. ಒಮ್ಮೆ ಬ್ಯಾಟರಿ ರಿಪೇರಿಗೆ ಬಂದರೆ ಸಾವಿರಾರು ರೂಪಾಯಿ ಖರ್ಚು ಬರುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಅವರಿಂದ ಸರ್ಕಾರಕ್ಕೆ ಪತ್ರ ಬರೆದು ಅಲ್ಲಿಂದ ಹಣ ಬಿಡುಗಡೆಯಾಗುವವರೆಗೆ ಕಾಯಬೇಕು. ಆದರೆ ಈ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹೆಸರೇಳಲಿಚ್ಛಿಸದ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಕರೆಂಟ್ ಬಿಲ್ ಕಟ್ಟಿಲ್ಲ: ಜಿಲ್ಲೆಯ ಹಲವು ಠಾಣೆಗಳು ಬೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎನ್ನಲಾಗಿದೆ. ಒಂದೊಂದು ಠಾಣೆಗಳಿಂದಲೂ ಸಾವಿರಾರು ರೂಪಾಯಿ ಬಾಕಿ ಬರಬೇಕಿದೆ. ನಿಯಮದ ಪ್ರಕಾರ ವಿದ್ಯುತ್ ಬಿಲ್ ಕಟ್ಟದ ಕಾರಣ ಠಾಣೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು, ಠಾಣೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿಲ್ಲ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೊಬೈಲ್ ಟಾರ್ಚ್, ಮೊಂಬತ್ತಿ ಬೆಳಕು: ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಭಾಗದಲ್ಲಿ ಹೆಚ್ಚು ಸಮಯ ವಿದ್ಯುತ್ ಕಡಿತ ಕಂಡುಬರುತ್ತಿದೆ. ಯುಪಿಎಸ್ ಸೌಕರ್ಯವಿಲ್ಲದ ಠಾಣೆಗಳಲ್ಲಿ ಪೊಲೀಸರು ಮೊಬೈಲ್ ಟಾರ್ಚ್ ಜತೆಗೆ ಮೊಂಬತ್ತಿ ಬೆಳಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

    ಜಿಲ್ಲೆಯ ಯಾವ್ಯಾವ ಠಾಣೆಗಳಲ್ಲಿ ಯುಪಿಎಸ್ ಬ್ಯಾಟರಿ ರಿಪೇರಿಯಾಗಬೇಕಿದೆ ಎಂಬುದನ್ನು ಪರಿಶೀಲಿಸಲಾಗುವುದು. ಯುಪಿಎಸ್ ಇಲ್ಲದ ಠಾಣೆಗಳಿಗೆ ತಕ್ಷಣ ವ್ಯವಸ್ಥೆ ಮಾಡಲಾಗುವುದು, ಠಾಣೆಗಳಿಂದ ವಿದ್ಯುತ್ ಬಿಲ್ ಬಾಕಿ ಇರುವ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
    ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts