More

    ರಿಷಭ್​ ಪಂತ್​ ಮದ್ಯಪಾನ ಮಾಡಿದ್ದರೆ 200 ಕಿಮೀ ದೂರದ ತನಕ ಹೇಗೆ ಹೋದ್ರು ಎಂದು ಪ್ರಶ್ನಿಸಿದ ಪೊಲೀಸರು..!

    ಉತ್ತರಾಖಂಡ: ಶುಕ್ರವಾರ ಮುಂಜಾನೆ ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಭ್ ಪಂತ್ ಅವರು ಅತಿವೇಗದಲ್ಲಿ ಕಾರು ಚಾಲನೆ ಮಾಡುತ್ತಿರಲಿಲ್ಲ; ಮದ್ಯಪಾನವೂ ಮಾಡಿರಲಿಲ್ಲ ಎಂದು ಉತ್ತರಾಖಂಡ್ ಪೊಲೀಸರು ಶನಿವಾರ ಹೇಳಿದ್ದಾರೆ. ಘಟನೆಯ ನಂತರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಪಂತ್​ ಕಾರು ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ ಎಂದು ಬೆಳಕಿಗೆ ಬಂದಿದೆ. ಇದಾದ ಬಳಿಕ ಅನೇಕರು ರಿಷಭ್​ ಪಂತ್​ ಗಾಡಿ ಚಲಾಯಿಸುವಾಗ ಮದ್ಯಪಾನ ಮಾಡಿದ್ದರೇ ಎಂದೂ ಪ್ರಶ್ನಿಸಿದ್ದರು.

    ಈ ಬಗ್ಗೆ ಪೊಲೀಸರೇ ಉತ್ತರ ನೀಡಿದ್ದು ಕುತೂಹಲಕಾರಿ ಬೆಳವಣಿಗೆ. ಹರಿದ್ವಾರದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಅಜಯ್ ಸಿಂಗ್, “ನಾವು ಉತ್ತರ ಪ್ರದೇಶ ಗಡಿಯಿಂದ ನರ್ಸನ್‌ನಲ್ಲಿ ಅಪಘಾತ ಸ್ಥಳದವರೆಗೆ ಇರುವ ಎಂಟರಿಂದ 10 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದೇವೆ. ಪಂತ್​ ಕಾರು ಗಂಟೆಗೆ 80 ಕಿಮೀ ವೇಗದ ಮಿತಿಯನ್ನು ದಾಟಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಗಾಳಿಯಲ್ಲಿ ತೇಲಿದ ಕಾರಣ ಹೆಚ್ಚಿನ ವೇಗ ಎಂದು ಎನಿಸುತ್ತಿದೆ. ನಮ್ಮ ತಾಂತ್ರಿಕ ತಂಡವೂ ಅಪಘಾತದ ಸ್ಥಳವನ್ನು ಪರಿಶೀಲಿಸಿದೆ. ಕ್ರಿಕೆಟಿಗ ಅತಿವೇಗದಲ್ಲಿ ವಾಹನ ಚಾಲನೆ ಮಾಡಿರುವುದಕ್ಕೆ ಯಾವ ಪುರಾವೆಯೂ ನಮಗೆ ಕಂಡುಬಂದಿಲ್ಲ’ ಎಂದಿದ್ದಾರೆ.

    “ಅವರು ಕುಡಿದಿದ್ದರೆ, ದೆಹಲಿಯಿಂದ 200 ಕಿಮೀ ದೂರದ ತನಕ ವಾಹನ ಹೇಗೆ ಚಲಾಯಿಸುತ್ತಿದ್ದರು? ಇಷ್ಟು ದೂರದವರೆಗೆ ಯಾವುದೇ ಅಪಘಾತವನ್ನು ಮಾಡದೇ ಹೇಗೆ ಬಂದದ್ದು? ರೂರ್ಕಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಸಹ ಅವರು ಸಂಪೂರ್ಣವಾಗಿ ನಾರ್ಮಲ್​ ಆಗಿದ್ದಾರೆ ಎಂದು ಹೇಳಿದ್ದಾರೆ. ನಶೆಯಲ್ಲಿ ಇಲ್ಲದಿದ್ದ ಕಾರಣ ಅವರು ಯಶಸ್ವಿಯಾಗಿ ಕಾರಿನಿಂದ ಹೊರಬರಲು ಸಾಧ್ಯವಾಯಿತು. ಯಾರಾದರೂ ಕುಡಿದಿದ್ದರೆ ಕಾರಿನಿಂದ ಇಳಿಯಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಪೊಲೀಸ್​ ಅಧಿಕಾರಿ ರಿಷಭ್​ ಪಂತ್​ರನ್ನು ಸಮರ್ಥಿಸಿದ್ದಾರೆ.

    ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಮಾತನಾಡಿ, ಪಂತ್​ ಅವರಿಗೆ ಮಂಪರು ಕವಿದ ಕಾರಣ ಅಪಘಾತ ಸಂಭವಿಸಿದೆ. ಎಂದಿದ್ದಾರೆ. ಹೆಸರು ಹೇಳಲು ಇಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಸಿಸಿಟಿವಿ ದೃಶ್ಯಗಳಲ್ಲಿ, ಕಾರು ಹೆಚ್ಚಿನ ವೇಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯುತ್ತಿದೆ. ಯಾರಿಗೂ ತೊಂದರೆ ಆಗಿಲ್ಲ. ಆದ್ದರಿಂದ, ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದಿದ್ದಾರೆ. ಅಪಘಾತದಿಂದ ಬಚಾವಾದ ಪಂತ್​ ಸ್ವತಃ ಪೊಲೀಸರಿಗೆ ತನಗೆ ಮಂಪರು ಹತ್ತಿತ್ತು ಎಂದು ಹೇಳಿದ್ದನ್ನು ರಾಜ್ಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts