More

    ರಸ್ತೆ ವಿಸ್ತರಣೆಗೆ ಕಟ್ಟಡಗಳ ತೆರವು

    ಬಾಳೆಹೊನ್ನೂರು: ಪಟ್ಟಣದ ಜೇಸಿ ವೃತ್ತದಿಂದ ರೋಟರಿ ವೃತ್ತದವರೆಗೆ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ಕಟ್ಟಡಗಳನ್ನು ಗುರುವಾರ ಬಿ.ಕಣಬೂರು ಗ್ರಾಪಂನಿಂದ ಪೊಲೀಸ್ ಬಂದೋಬಸ್ತ್​ನಲ್ಲಿ ತೆರವುಗೊಳಿಸಲಾಯಿತು.

    ಬೆಳಗ್ಗೆ ಎರಡು ಹಿಟಾಚಿಗಳನ್ನು ತಂದು ಪೊಲೀಸರ ರಕ್ಷಣೆಯಲ್ಲಿ ಕಟ್ಟಡಗಳನ್ನು ಕೆಡವಲು ಮುಂದಾದರು. ಈ ವೇಳೆ ಜೇಸಿ ವೃತ್ತದ ಬಳಿಯಿರುವ ಸುರೇಂದ್ರ ಪೈಎಂಬುವವರು ತೀವ್ರ ಪ್ರತಿರೋಧ ಒಡ್ಡಿ ಕಟ್ಟಡ ಕೆಡವಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಜನಪ್ರತಿನಿಧಿಗಳು, ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಒಪ್ಪಲಿಲ್ಲ. ಅಧಿಕಾರಿಗಳು ಹಿಟಾಚಿ ಮೂಲಕ ಕಟ್ಟಡ ಕೆಡವಲು ಆರಂಭಿಸಿದರು. ಈ ವೇಳೆಗೆ ಕಟ್ಟಡದಲ್ಲಿದ್ದ ಕೆಲವು ಅಂಗಡಿಯವರು ತಕ್ಷಣವೇ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸಿದರು.

    ಮೊದಲ ಕಟ್ಟಡ ನೆಲಕ್ಕುರುಳುತ್ತಿದ್ದಂತೆ ಜೇಸಿ ವೃತ್ತದಿಂದ ಕೆಳಭಾಗದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳ ಮಾಲೀಕರು, ವ್ಯಾಪಾರಿಗಳು ತಕ್ಷಣವೇ ಎಚ್ಚೆತ್ತು ಅಂಗಡಿಗಳಲ್ಲಿದ್ದ ವಸ್ತುಗಳು, ಪೀಠೋಪಕರಣ, ವಿವಿಧ ಯಂತ್ರಗಳನ್ನು ವಾಹನಗಳ ಮೂಲಕ ಗಡಿಬಿಡಿಯಲ್ಲಿ ಬೇರೆಡೆಗೆ ಸಾಗಿಸಿದರು. ಹಲವು ಕಟ್ಟಡಗಳ ಹೆಂಚು, ಮರದ ಸಾಮಗ್ರಿಗಳು, ಶೆಟರ್ಸ್ ಬಾಗಿಲು, ಅಂಗಡಿ ಒಳಗಿದ್ದ ಇಂಟಿರಿಯರ್ ಡೆಕೋರೆಟ್​ಗಳು ಕಟ್ಟಡ ತೆರವಿನಿಂದಾಗಿ ಹಾನಿಯಾಗಿ ನಷ್ಟ ಅನುಭವಿಸುವಂತಾಯಿತು.

    ತೆರವು ಕಾರ್ಯಾಚರಣೆ ವೇಳೆ ಗ್ರಾಪಂ ಅಧ್ಯಕ್ಷೆ ಅಂಬುಜಾ, ಉಪಾಧ್ಯಕ್ಷ ಮಹೇಶ್ ಆಚಾರ್ಯ, ಪಿಡಿಒ ಸೋಮಶೇಖರ್, ಸದಸ್ಯರಾದ ಬಿ.ಜಗದೀಶ್ಚಂದ್ರ, ರವಿಚಂದ್ರ, ಮಹಮ್ಮದ್ ಜುಹೇಬ್, ಕೆ.ಪ್ರಭಾಕರ್, ಜಂಶೀದ್ ಅಹ್ಮದ್, ಇಬ್ರಾಹಿಂ ಶಾಫಿ, ಕೋಕಿಲಮ್ಮ, ಶಶಿಕಲಾ ಇತರೆ ಸದಸ್ಯರು ಹಾಜರಿದ್ದರು.

    ವ್ಯಾಪಾರಿಗಳ ಆಕ್ರೋಶ: ಗ್ರಾಪಂನವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಟ್ಟಡಗಳನ್ನು ದಿಢೀರ್ ಆಗಿ ತೆರವುಗೊಳಿಸುತ್ತಿದ್ದಾರೆ. ಅಂಗಡಿ ವಸ್ತುಗಳು, ಪೀಠೋಪಕರಣಗಳನ್ನು ತೆಗೆಯಲು ಸಾಧ್ಯವಾಗದೆ ನಷ್ಟವಾಗಿದೆ ಎಂದು ಹಲವು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ವಿಸ್ತರಣೆಗೆ ನಮ್ಮ ವಿರೋಧವಿಲ್ಲ. ಒಂದು ವಾರ ಕಾಲಾವಕಾಶ ನೀಡಿದ್ದರೆ ಎಲ್ಲ ವ್ಯಾಪಾರಿಗಳೂ ಸಹಕರಿಸುತ್ತಿದ್ದರು ಎಂದು ಹೆಸರು ಹೇಳಲಿಚ್ಛಿಸದ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.

    ನಿಗದಿತ ಸಮಯದಲ್ಲಿ ಕಾಮಗಾರಿ ಮುಕ್ತಾಯ: ಪಟ್ಟಣದ ಮುಖ್ಯರಸ್ತೆಯ ಮಧ್ಯದಿಂದ ತಲಾ 33 ಅಡಿಗಳ ರಸ್ತೆ ವಿಸ್ತರಣೆ, ಬಾಕ್ಸ್ ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿ ಎರಡು ವರ್ಷದ ಹಿಂದೆಯೇ ಆರಂಭಗೊಂಡಿದ್ದು, ಜೇಸಿ ವೃತ್ತದಿಂದ ರೋಟರಿ ವೃತ್ತದವರೆಗೆ ರಸ್ತೆ ವಿಸ್ತರಣೆಗೆ ಹಲವು ಕಟ್ಟಡದವರು ತೆರವುಗೊಳಿಸಿರಲಿಲ್ಲ. ಹತ್ತಾರು ಬಾರಿ ಮೌಖಿಕವಾಗಿ ಮನವಿ ಮಾಡಿದ್ದರೂ ಸ್ಪಂದಿಸಿರಲಿಲ್ಲ. ಕಟ್ಟಡಗಳು ರಸ್ತೆಗೆ ಹೊಂದಿಕೊಂಡಿದ್ದರಿಂದ ಮಾಲೀಕರಿಗೆ ನೋಟಿಸ್ ನೀಡಿಲ್ಲ. ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಕ್ತಾಯಗೊಳಿಸದಿದ್ದರೆ ಅನುದಾನ ವಾಒಸ್ ಹೋಗುತಿತ್ತು. ಗುತ್ತಿಗೆದಾರರು ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರರಿಗೆ ಪ್ರತಿದಿನಕ್ಕೆ 18 ಸಾವಿರ ರೂ. ದಂಡ ವಿಧಿಸಲಾಗುತಿತ್ತು. ಅನಿವಾರ್ಯವಾಗಿ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಫೆ.12ರೊಳಗೆ ರೋಟರಿ ವೃತ್ತದವರೆಗೆ ರಸ್ತೆಬದಿಯ ಎಲ್ಲ್ಲ ಕಟ್ಟಡ ತೆರವುಗೊಳಿಸಲಾಗುವುದು ಎಂದು ಬಿ.ಕಣಬೂರು ಪಿಡಿಒ ಕೆ.ಎಸ್.ಸೋಮಶೇಖರ್ ತಿಳಿಸಿದರು.

    ಎರಡು ವರ್ಷದಿಂದ ನನೆಗುದಿಗೆ: ಪಟ್ಟಣದ ಕೊಪ್ಪ ರಸ್ತೆಯ ಅರಣ್ಯ ಇಲಾಖೆ ಮುಂಭಾಗದಿಂದ ರೋಟರಿ ವೃತ್ತದವರೆಗೆ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ವಿಸ್ತರಣೆ ಮಾಡಲು 9 ಕೋಟಿ ರೂ. ಮಂಜೂರಾಗಿದ್ದು 2019ರಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಅಂದು ಆರಂಭಗೊಂಡ ಕಾಮಗಾರಿಯು ಅರಣ್ಯ ಇಲಾಖೆ ಮುಂಭಾಗದಿಂದ ಜೇಸಿ ವೃತ್ತದವರೆಗೆ ಸಂಪೂರ್ಣವಾಗಿ ಮುಕ್ತಾಯಗೊಂಡಿತ್ತು. ಜೇಸಿ ವೃತ್ತದಿಂದ ರೋಟರಿ ವೃತ್ತದವರೆಗೆ ವಿಸ್ತರಿಸಲು ಹಲವು ಕಟ್ಟಡಗಳ ಮಾಲೀಕರು ಸಹಕರಿಸಿರಲಿಲ್ಲ. ಕಟ್ಟಡ ತೆರವುಗೊಳಿಸದಿದ್ದರಿಂದ ಕಾಮಗಾರಿ ಕುಂಟುತ್ತ ಸಾಗಿತ್ತು.

    ಈ ಬಗ್ಗೆ ಶಾಸಕ ಟಿ.ಡಿ.ರಾಜೇಗೌಡ, ಬಿ.ಕಣಬೂರು ಗ್ರಾಪಂ ಆಡಳಿತ ವರ್ಗ ಹಲವಾರು ಬಾರಿ ಕಟ್ಟಡ ಮಾಲೀಕರಿಗೆ ಕಟ್ಟಡಗಳನ್ನು ತೆರವುಗೊಳಿಸುವಂತೆ ಕೋರಿದ್ದರು. ಆದರೂ ಕಟ್ಟಡ ಮಾಲೀಕರು ಒಪ್ಪಿರಲಿಲ್ಲ. ಗ್ರಾಪಂಗೆ ಕಳೆದ ವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿ ಹೊಸ ಆಡಳಿತ ವರ್ಗ ಅಧಿಕಾರಕ್ಕೆ ಬಂದಿದ್ದು, ಸೋಮವಾರ ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರು ಅಂಗಡಿಮುಂಗಟ್ಟುಗಳಿಗೆ ತೆರಳಿ ಮಾಲೀಕರಿಗೆ, ವ್ಯಾಪಾರಿಗಳಿಗೆ ಅಂಗಡಿಗಳನ್ನು ಖಾಲಿ ಮಾಡುವಂತೆ ಸೂಚಿಸಿದ್ದರು. ಇಲ್ಲದಿದ್ದರೆ ಗುರುವಾರ ತೆರವುಗೊಳಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಅಂಗಡಿಯವರು ತೆರವುಗೊಳಿಸಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts