More

    ಖಾಕಿ ಮಾನ ತೆಗೆದ ಪರೀಕ್ಷೆ ಗೋಲ್​ಮಾಲ್​!

    ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾನ್​ಸ್ಟೇಬಲ್​ಗಳೇ ಅಕ್ರಮಕ್ಕೆ ಸಹಕರಿಸುತ್ತಿರುವುದು ಭಾನುವಾರ ರಾಜ್ಯಾದ್ಯಂತ ನಡೆದ ಕೆಎಸ್​ಆರ್​ಪಿ ಪೇದೆ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲಿ ಬಯಲಾಗಿದೆ. ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆ (ಸಿಎಆರ್/ಡಿಎಆರ್) ಹುದ್ದೆಗಳ ನೇಮಕಾತಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಅರ್ಜಿ ಸಲ್ಲಿಸುವ ಮೂಲಕ ಬೇರೆಯವರಿಂದ ಪರೀಕ್ಷೆ ಬರೆಸಿದ ಆರೋಪದಲ್ಲಿ ಶೃಂಗೇರಿ ಠಾಣೆಯ ಪೇದೆ ನಾಗಪ್ಪ ತಕ್ಕಣ್ಣನವರ್ ಮತ್ತು ಅಂಕಲಗಿ ಪೊಲೀಸ್ ಠಾಣೆಯ ಪೇದೆ ಅಡಿವೆಪ್ಪ ಯಲ್ಲಪ್ಪ ಯರಗುದ್ರಿ ಬಂಧಿಸಲಾಗಿತ್ತು. ತನಿಖೆ ಮುಂದುವರಿಸಿದ ಪೊಲೀಸರು ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದಾಗಲೇ ಮಹಾಂತೇಶ್ ನಂದಿ (24) ಮತ್ತು ಗುರುನಾಥ್ ವಡ್ಡರ್ ಎಂಬುವರು ಸಿಕ್ಕಿಬಿದ್ದಿದ್ದಾರೆ.

    ಬಸವನಗುಡಿ ಬಾಲಕಿಯರ ಪಿ.ಯು. ಕಾಲೇಜಿನ ಕೇಂದ್ರದಲ್ಲಿ ಗೋಕಾಕ್​ನ ವಿಜಯ್ ಪುಡಬಂಗಿ ಎಂಬಾತನ ಹೆಸರಿನಲ್ಲಿ ಪರೀಕ್ಷೆ ಬರೆದು ಪರಾರಿಯಾಗಿದ್ದ ಆರೋಪಿ ಸೋಮಯ್ಯ ಹಿರೇಮಠ, ಆತನನ್ನು ಕರೆತಂದಿದ್ದ ಲಕ್ಷ್ಮಣ ಪರಣ್ಣವರ್ ಎಂಬುವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬೆಂಗಳೂರಿನ ಇಂದಿರಾನಗರದ ಕೆಎಸ್​ಇಇ ಶಾಲೆಯ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬೆಳಗಾವಿ ಮೂಲದ ಹನುಮಂತ ಗಂಗಪ್ಪ ಬಿಲ್ಲೂರ್ ಎಂಬಾತ ಸಿಕ್ಕಿ ಬಿದ್ದಿದ್ದು, ದಸ್ತಗಿರಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಮಾಹಿತಿ ನೀಡಿದ್ದಾರೆ.

    ಪರೀಕ್ಷೆ ಬರೆಯದಂತೆ ಕಾಯಂ ನಿಷೇಧ: ಬೇರೆಯವರಿಂದ ಪರೀಕ್ಷೆ ಬರೆಸಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದ ಗೋಕಾಕ್​ನ ಮಂಜು ನಿಂಗಪ್ಪ ಕಟ್ಟೀಕರ್ ಹಾಗೂ ರೋಹನ್ ಶಂಕರ್ ಜೋಡೆಟ್ಟಿ ಎಂಬುವರನ್ನು ಪಿಎಸ್​ಐ ಮತ್ತು ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಕಾಯಂ ಆಗಿ ನಿಷೇಧಗೊಳಿಸಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪೌಲ್ ಆದೇಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts