More

    ಪೊಲೀಸರೂ ಮಾಡ್ತಾರೆ ವಸ್ತು ಪ್ರದರ್ಶನ; ಆದ್ರೆ ಇಲ್ಲಿದೆ ಸಣ್ಣ ಟ್ವಿಸ್ಟ್​..!

    ಬೆಂಗಳೂರು: ಸಾಮನ್ಯವಾಗಿ ನಮ್ಮೂರ ಜಾತ್ರೆಗಳಲ್ಲಿ ವಸ್ತುಪ್ರದರ್ಶನಗಳನ್ನು ನೋಡಿರುತ್ತೇವೆ. ಅಲ್ಲಿ ತರಹೇವಾರಿ ತಿಂಡಿ ತಿನಸುಗಳು, ಅದ್ಭುತ ಆಫರ್​ ಕೊಡುವ ಕಂಪೆನಿಗಳು, ಬಗೆ ಬಗೆಯ ಆಟ ಆಡುವವರು ಎಲ್ಲರೂ ಸ್ಟಾಲ್​ ಹಾಕಿರುತ್ತಾರೆ. ಮಾಮೂಲಿ ಜನರ ರೀತಿಯಲ್ಲೇ ಪೊಲೀಸರೂ ಸ್ಟಾಲ್​ ಹಾಕುತ್ತಾರೆ ಎಂದರೆ ನಂಬುತ್ತೀರಾ? ನಂಬಲೇ ಬೇಕು!

    ಆದರೆ ಇವರ ವಸ್ತುಪ್ರದರ್ಶನಕ್ಕೂ ಮಾಮೂಲಿ ವಸ್ತು ಪ್ರದರ್ಶನಕ್ಕೂ ಭಾರೀ ವ್ಯತ್ಯಾಸವಿದೆ. ಇವರ ವಸ್ತುಪ್ರದರ್ಶನದಲ್ಲಿ ಜನರಿಗೆ ಕಳೆದುಕೊಂಡ ವಸ್ತುಗಳನ್ನು ಹಿಂದಿರುಗಿಸಲಾಗುತ್ತೆ.

    ಪೊಲೀಸರೂ ಮಾಡ್ತಾರೆ ವಸ್ತು ಪ್ರದರ್ಶನ; ಆದ್ರೆ ಇಲ್ಲಿದೆ ಸಣ್ಣ ಟ್ವಿಸ್ಟ್​..!

    ಅದೇ ರೀತಿ ಈಗ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ವಸ್ತುಪ್ರದರ್ಶನವನ್ನು ಆಯೋಜಿಸಿದ್ದರು. ಅದರಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ ದರೋಡೆ, ಸುಲಿಗೆ, ಕಳ್ಳತನ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಸುಮಾರು 15.36 ಕೋಟಿ ರೂ. ಮೌಲ್ಯದ ಕಳವು ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಆ ವಸ್ತುಗಳನ್ನು ಪ್ರದರ್ಶಿಸಿದರು.

    ಈ ಕಾರ್ಯಕ್ರಮ ಬುಧವಾರ ಎಚ್‌ಎಎಲ್ ಠಾಣೆ ವ್ಯಾಪ್ತಿಯ ಪೊಲೀಸ್ ವಸತಿ ಗೃಹಗಳ ಮೈದಾನದಲ್ಲಿ ನಡೆದಿದ್ದು, ಅಲ್ಲಿ ವಶಕ್ಕೆ ಪಡೆದ ವಸ್ತುಗಳ ಪ್ರದರ್ಶನ ಮಾಡಿ ಮಾಲೀಕರಿಗೆ ಕಳವು ವಸ್ತುಗಳ ಹಿಂದಿರುಗಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್‌ರೆಡ್ಡಿ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮೇಶ್ವರ ರಾವ್ ಮಾಲೀಕರಿಗೆ ವಸ್ತುಗಳನ್ನು ಹಸ್ತಾಂತರ ಮಾಡಿದರು.

    ವೈಟ್‌ಫೀಲ್ಡ್ ವಿಭಾಗದ ವೈಟ್‌ಫೀಲ್ಡ್, ಕಾಡುಗೋಡಿ, ಮಹದೇವಪುರ, ಕೆ.ಆರ್.ಪುರ, ಮಾರತ್ತಹಳ್ಳಿ, ಎಚ್‌ಎಎಲ್, ಬೆಳ್ಳಂದೂರು, ವರ್ತೂರು ಹಾಗೂ ಸೈಬರ್ ಠಾಣೆಗಳಲ್ಲಿ ಒಂದು ವರ್ಷದಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳಲ್ಲಿ ನೂರಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ ಕಳವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.

    ಬಂಧಿತರಿಂದ 1.88 ಕೋಟಿ ರೂ. ಮೌಲ್ಯದ 3 ಕೆ.ಜಿ. 787 ಗ್ರಾಂ ಚಿನ್ನಾಭರಣ, 4.4 ಲಕ್ಷ ರೂ. ಮೌಲ್ಯದ 4 ಕೆ.ಜಿ. 478 ಗ್ರಾಂ ಬೆಳ್ಳಿ, 24 ಲಕ್ಷ ರೂ. ಮೌಲ್ಯದ ವಜ್ರಗಳು, 1.41 ಕೋಟಿ ರೂ. ಮೌಲ್ಯದ ವಿವಿಧ ಕಂಪನಿಯ 200 ಮೊಬೈಲ್‌ಗಳು, 67.40 ಲಕ್ಷ ರೂ. ಮೌಲ್ಯದ 96 ಲ್ಯಾಪ್‌ಟಾಪ್‌ಗಳು, 2.32 ಕೋಟಿ ರೂ. ಮೌಲ್ಯದ ವಿವಿಧ ಕಂಪನಿಯ 313 ದ್ವಿಚಕ್ರ ವಾಹನಗಳು, 94 ಲಕ್ಷ ರೂ. ಮೌಲ್ಯದ 15 ಕಾರುಗಳು, 1 ಜೆಸಿಬಿ, 1.91 ಕೋಟಿ ರೂ. ನಗದು ಅನ್ನು ಕಳೆದೊಂದು ವರ್ಷದಲ್ಲಿ ವಶಕ್ಕೆ ಪಡೆಯಲಾಗಿತ್ತು.

    ಇನ್ನು ಮಾದಕ ವಸ್ತು ಮಾರಾಟಗಾರರ ವಿರುದ್ಧ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದು, 41 ಪ್ರಕರಣಗಳಲ್ಲಿ 92.95 ಲಕ್ಷ ರೂ. ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಕಳವು ವಸ್ತು ಪ್ರದರ್ಶನ ಮತ್ತು ಮಾಲೀಕರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಿಭಾಗದ ಪೊಲೀಸರಿಗೆ ಬಹುಮಾನ ಕೂಡ ವಿತರಿಸಲಾಯಿತು. ಈ ವೇಳೆ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ತುರ್ತು ಸಂದರ್ಭದಲ್ಲಿ ೧೧೨ ಗೆ ಕರೆ ಮಾಡಿ:‘ಯಾವುದಾದರೂ ತುರ್ತು ಸಂದರ್ಭ ಹಾಗೂ ಅವಘಢ ನಡೆದಾಗ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಹೋಗಿ ಸಮಯ ವರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ. ಬದಲಿಗೆ ತಕ್ಷಣ ೧೧೨ಗೆ ಕರೆ ಮಾಡಿದರೆ ದೂರು ದಾಖಲಾಗುತ್ತದೆ. ಜತೆಗೆ ನಿಮ್ಮ ಮಾಹಿತಿಯ ವಾಯ್ಸ ರೆಕಾರ್ಡ್ ಆಗುತ್ತದೆ. ಅಪರಾಧ ತಡೆಗಟ್ಟಲು ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯ. ತಮ್ಮ ಸುತ್ತ-ಮುತ್ತಲು ಯಾವುದೇ ಘಟನೆ ನಡೆದರೂ ತಕ್ಷಣ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದರೆ ಕ್ಷಣಾರ್ಧದಲ್ಲಿ ಹೊಯ್ಸಳ ಪೊಲೀಸರು ಆಗಮಿಸಿ ಮುಂದೆ ಆಗುವ ಅನಾಹುತ ತಪ್ಪಿಸುತ್ತಾರೆ’ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

    ಅಪರಿಚಿತ ಮೇಸೆಜ್ ಬಗ್ಗೆ ಎಚ್ಚರಿಕೆ ಇರಲಿ:
    ಇತ್ತೀಚೆಗೆ ಮೊಬೈಲ್‌ಗಳಿಗೆ ಅಪರಿಚಿತ ಸಂಖ್ಯೆಗಳಿಂದ ಲಾಟರಿ, ನಗದು ಬಹುಮಾನ ಬಂದಿದೆ ಎಂದೆಲ್ಲ ಸಂದೇಶಗಳನ್ನು ಕಳುಹಿಸಿ ವಂಚನೆ ಮಾಡುತ್ತಿದ್ದಾರೆ. ಅಂತಹ ಅಪರಿಚಿತ ಸಂಖ್ಯೆಗಳ ಸಂದೇಶಗಳನ್ನು ನಿರ್ಲಕ್ಷಿಸಿ. ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ದಾಖಲೆಗಳನ್ನು ಕಳುಹಿಸಬೇಡಿ ಎಂದು ಸಲಹೆ ನೀಡಿದರು.

    ಅಲ್ಲದೆ, ಕೋಟ್ಯಂತರ ರೂ. ಮನೆಗಳನ್ನು ನಿರ್ಮಿಸುವ ಸಾರ್ವಜನಿಕರು, ಅದಕ್ಕೆ ಬೇಕಾದ ಸುರಕ್ಷತೆಗಳನ್ನು ಮಾಡಿಕೊಳ್ಳಿ. ಉತ್ತಮ ಬೀಗ, ಡೋರ್ ಲಾಕರ್‌ಗಳನ್ನು ಹಾಕಿಸಿಕೊಳ್ಳಿ. ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಿದರೆ ಅಪರಾಧ ತಡೆಗಟ್ಟಲು ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts