More

    ಪೊಲೀಸ್​ ಕಾನ್ಸ್​ಟೆಬಲ್​ಗೆ ವಿಷದ ಇಂಜೆಕ್ಷನ್ ಚುಚ್ಚಿದ ಖದೀಮರು: ಚಿಕಿತ್ಸೆ ಫಲಿಸದೇ ದುರಂತ ಸಾವು

    ಥಾಣೆ: ಖದೀಮರು ಹಾಗೂ ಮಾದಕ ವ್ಯಸನಿಗಳ ಗುಂಪೊಂದು ವಿಷಕಾರಿ ಪದಾರ್ಥವನ್ನು ಇಂಜೆಕ್ಟ್​ ಮಾಡಿದ ಪರಿಣಾಮ ಇಪ್ಪತ್ತರ ಹರೆಯದ ಪೊಲೀಸ್​ ಕಾನ್​​ಸ್ಟೆಬಲ್​ ಆಸ್ಪತ್ರೆಗೆ ದಾಖಲಾದ ಮೂರು ದಿನಗಳ ಬಳಿಕ ಕೊನೆಯುಸಿರೆಳೆದಿದ್ದಾರೆ.

    ಮೃತ ಕಾನ್ಸ್​ಟೇಬಲ್​ನನ್ನು ವಿಶಾಲ್​ ಪವಾರ್​ ಎಂದು ಗುರುತಿಸಲಾಗಿದೆ. ಥಾಣೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆರೋಪಿಗಳು ಮಾತುಂಗ ಬಳಿಯ ರೈಲು ಹಳಿಗಳ ಮೇಲೆ ಪವಾರ್​ಗೆ ವಿಷವುಣಿಸಿದ್ದರು ಎಂದು ತಿಳಿದುಬಂದಿದೆ. ಪವಾರ್​ ಅವರನ್ನು ವ್ರೋಲಿಯ ಲೋಕಲ್​ ಆರ್ಮ್ಸ್​ ಡಿವಿಷನ್​-3ಗೆ ಪೋಸ್ಟಿಂಗ್​ ಮಾಡಲಾಗಿತ್ತು.

    ವರದಿಗಳ ಪ್ರಕಾರ ಸಿವಿಲ್​ ಡ್ರೆಸ್​ನಲ್ಲಿದ್ದ ಕಾನ್‌ಸ್ಟೆಬಲ್ ಪವಾರ್ ತಮ್ಮ ಕರ್ತವ್ಯಕ್ಕೆ ಹಾಜರಾಗಲು ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಾತ್ರಿ 9.30ರ ಸುಮಾರಿಗೆ ಮಾತುಂಗಾ ಮತ್ತು ಸಿಯಾನ್ ನಡುವೆ ರೈಲು ನಿಧಾನವಾಗುತ್ತಿದ್ದಂತೆ ಹಳಿಗಳ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಪವಾರ್ ಕೈಗೆ ಬಲವಾಗಿ ಹೊಡೆದಿದ್ದಾನೆ. ಆ ಸಮಯದಲ್ಲಿ ಪವಾರ್​ ಬಾಗಿಲಲ್ಲಿ ನಿಂತಿದ್ದರು.

    ರೈಲಿನ ನಿಧಾನಗತಿಯಲ್ಲಿದ್ದಿದ್ದರಿಂದ ಪವಾರ್ ತಕ್ಷಣ ಕೆಳಗಿಳಿದು ಕಳ್ಳನನ್ನು ಹಿಂಬಾಲಿಸಿದ್ದಾರೆ. ಸ್ವಲ್ಪ ದೂರ ಕ್ರಮಿಸಿದ ನಂತರ, ಖದೀಮರು ಮತ್ತು ಮಾದಕ ವ್ಯಸನಿಗಳ ಗುಂಪು ಪವಾರ್​ ಅವರನ್ನು ಸುತ್ತುವರೆದಿದೆ. ಈ ವೇಳೆ ಪವಾರ್ ವಿರೋಧಿಸಿದಾಗ ಆತನನ್ನು ಜೋರಾಗಿ ತಳ್ಳಿದ್ದಾರೆ. ಪವಾರ್​ ಕೆಳಗೆ ಬಿದ್ದಾಗ, ಖದೀಮರಲ್ಲಿ ಒಬ್ಬ ಪವಾರ್ ಬೆನ್ನಿಗೆ ವಿಷಕಾರಿ ಪದಾರ್ಥವನ್ನು ಚುಚ್ಚಿದ್ದಾನೆ. ಈ ವೇಳೆ ಇತರರು ಪವಾರ್​ನನ್ನು ಬಿಡಿಸಿಕೊಳ್ಳದಂತೆ ಹಿಡಿದಿದ್ದರು. ಅಲ್ಲದೆ, ಪವಾರ್​ ಬಾಯಿಗೆ ಡ್ರಗ್ಸ್​ ಸಹ ಹಾಕಿದ್ದಾರೆ ಎಂದು ತಿಳಿದುಬಂದಿದೆ.

    ವಿಷಕಾರಿ ಪದಾರ್ಥ ಇಂಜೆಕ್ಟ್​ ಮಾಡಿದ್ದರಿಂದ ಪವಾರ್ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡರು. ಮರುದಿನ ಬೆಳಗ್ಗೆ ಅವರಿಗೆ ಪ್ರಜ್ಞೆ ಮರಳಿತು. ಹೇಗೋ ಮನೆಗೆ ತೆರಳಿದರು. ಆದರೆ, ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಕುಟುಂಬಸ್ಥರು ಸೋಮವಾರ ಥಾಣೆ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಳೀಯ ಕೊಪ್ರಿ ಪೊಲೀಸ್ ಠಾಣೆಯು ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 392 (ದರೋಡೆ), 394 (ದರೋಡೆ ಸಮಯದಲ್ಲಿ ಗಾಯಗೊಳಿಸುವುದು) ಮತ್ತು 328 (ವಿಷಕಾರಿ ಪದಾರ್ಥಗಳನ್ನು ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

    ಚಿಕಿತ್ಸೆಯ ಸಮಯದಲ್ಲಿ ಪವಾರ್​ ಸ್ಥಿತಿಯು ಹದಗೆಟ್ಟಿತು. ಕೊನೆಗೆ ಚಿಕಿತ್ಸೆ ಫಲಿಸದೆ ಬುಧವಾರ ನಿಧನರಾದರು ಎಂದು ಸೆಂಟ್ರಲ್ ರೈಲ್ವೆಯ ಉಪ ಪೊಲೀಸ್ ಆಯುಕ್ತ ಮನೋಜ್ ಪಾಟೀಲ್ ತಿಳಿಸಿದ್ದಾರೆ. ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಕೊಪ್ರಿ ಪೊಲೀಸ್ ಠಾಣೆಯಿಂದ ದಾದರ್ ಜಿಆರ್‌ಪಿಗೆ ವರ್ಗಾಯಿಸಲಾಗಿದೆ. ಐಪಿಸಿ ಸೆಕ್ಷನ್ 302 (ಕೊಲೆ) ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಆರೋಪಿಗಳನ್ನು ಬಂಧಿಸಲು ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ಪಾಟೀಲ್ ತಿಳಿಸಿದ್ದಾರೆ. (ಏಜೆನ್ಸೀಸ್​)

    ಬಿರಿಯಾನಿಯಲ್ಲಿ ಬೆಕ್ಕಿನ ಮಾಂಸ ಬಳಕೆ!? ಶಾಕಿಂಗ್​ ವಿಡಿಯೋ ವೈರಲ್, ರಹಸ್ಯ ಭೇದಿಸಿದ ಪ್ರಾಣಿ ಪ್ರಿಯ

    ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ: ಧೋನಿ ವಿರುದ್ಧ ಅಸಮಾಧಾನ ಹೊರಹಾಕಿದ ಇರ್ಫಾನ್​ ಪಠಾಣ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts