More

    ಕೋಟಿ ರೂ. ಸಾಲದಲ್ಲಿ ಮುಳುಗಿದವನಿಗೆ ಖೋಟಾ ನೋಟು ಕೊಟ್ಟು ವಂಚಿಸಿದ್ರು..!

    ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಗುತ್ತಿಗೆದಾರನಿಗೆ ಸಾಲ ಕೊಡಿಸುವುದಾಗಿ 1 ಕೋಟಿ ರೂ. ಖೋಟಾ ನೋಟು ಕೊಟ್ಟು ಸರ್ವಿಸ್ ಚಾರ್ಜ್ ನೆಪದಲ್ಲಿ 27 ಲಕ್ಷ ರೂ. ದೋಚಿದ್ದ ಮೂವರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

    ಆರ್.ಟಿ. ನಗರದ ದಿಣ್ಣೂರು ಮುಖ್ಯರಸ್ತೆ ಮನ್ನಾ ಶರಣ (35), ಆರ್. ವಿಷ್ಣುರಾಜನ್ (26) ಮತ್ತು ರಾಮಮೂರ್ತಿನಗರದ ಪ್ರವೀಣ್‌ಕುಮಾರ್ (40) ಬಂಧಿತರು. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಪಿ. ಕೃಷ್ಣಕಾಂತ್ ತಿಳಿಸಿದ್ದಾರೆ.

    ಜಯನಗರ 4ನೇ ಟಿ ಬ್ಲಾಕ್‌ನ 34ನೇ ಕ್ರಾಸ್‌ನಲ್ಲಿರುವ ಜೆ.ಎನ್. ಪ್ರಾಜೆಕ್ಟ್ ಪಾಲುದಾರ ಎನ್. ಪಾರ್ಥಸಾರಥಿ, ಬಾಣಸವಾಡಿಯ ಖಾಸಗಿ ಬ್ಯಾಂಕ್‌ನಲ್ಲಿ 1.75 ಕೋಟಿ ರೂ. ಸಾಲ ಪಡೆದಿದ್ದಾರೆ. ಕೋವಿಡ್ ಲಾಕ್‌ಡೌನ್ ಪರಿಣಾಮ ಸಾಲ ಮರು ಪಾವತಿಗೆ ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಇತ್ತ ರಿಯಲ್ ಎಸ್ಟೇಟ್ ಏಜೆಂಟ್‌ಗಳಾದ ಮನ್ನಾ ಶರಣ, ವಿಷ್ಣು, ಆಶಾಲತಾ ರಾವ್, ಲಕ್ಷ್ಮಣ್ ರಾವ್, ತುಷಾರ್ ಗ್ಯಾಂಗ್‌ಗೆ ಗುತ್ತಿಗೆದಾರ ಪಾರ್ಥಸಾರಥಿ ಪರಿಚಯವಾಗಿದೆ. ಸಹಕಾರ ಬ್ಯಾಂಕ್‌ನಲ್ಲಿ ಸುಲಭವಾಗಿ 4 ಕೋಟಿ ರೂ. ಸಾಲ ಕೊಡಿಸುವುದಾಗಿ ಪಾರ್ಥಸಾರಥಿಗೆ ನಂಬಿಸಿ ಅವರ ಕಡೆಯಿಂದ ದಾಖಲೆ ಪತ್ರಗಳು ಮತ್ತು ಶೇ.6 ಸರ್ವಿಸ್ ಚಾರ್ಜ್ ಕೊಡಬೇಕೆಂದು 21 ಲಕ್ಷ ರೂ.ಗೆ ಚೆಕ್ ಮತ್ತು 1 ಲಕ್ಷ ರೂ. ನಗದು ಪಡೆದುಕೊಂಡಿದ್ದರು.

    ಇದಾದ ಮೇಲೆ ಪಾರ್ಥಸಾರಥಿಗೆ 13 ಕೋಟಿ ರೂ. ಹಣವಿದ್ದು, ಪೂರ್ತಿಯಾಗಿ ಪಡೆದುಕೊಂಡರೆ ಶೇ.5ರಷ್ಟು ವಿನಾಯಿತಿ ನೀಡುವುದಾಗಿ ನಂಬಿಸಿದ್ದ. ಅಲ್ಲದೆ, ಶೇ.2 ಸ್ಟ್ಯಾಂಪ್ ಡ್ಯೂಟಿ ಕಟ್ಟಬೇಕೆಂದು ತಾಕೀತು ಮಾಡಿದ್ದರು. ಅಷ್ಟೊಂದು ಹಣ ಬೇಡ ಎಂದಾಗ ಪಾರ್ಥಸಾರಥಿಗೆ ಬೆದರಿಕೆ ಒಡ್ಡಿ ಒಪ್ಪಿಸಿದ್ದರು. ಕೊನೆಗೆ ಡಿ.21ರ ಬೆಳಗ್ಗೆ ಹಣ ಸಿದ್ದವಾಗಿದೆ ಎಂದು ಹೇಳಿ ಆರೋಪಿಗಳು ಕಚೇರಿಗೆ ಕರೆಸಿಕೊಂಡು 1 ಕೋಟಿ ರೂ. ಮೌಲ್ಯದ ಖೋಟಾ ನೋಟು ಬ್ಯಾಗ್‌ಗೆ ತುಂಬಿ ಬೀಗ ಹಾಕಿ ಕೊಟ್ಟಿದ್ದರು. ಉಳಿದ ಹಣ ನೀವು ಮನೆಗೆ ಹೋಗುತ್ತಿದಂತೆ 12 ಕೋಟಿ ರೂ. ತಲುಪಿಸುತ್ತೆವೆ.

    ಸದ್ಯ 26 ಲಕ್ಷ ರೂ. ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದರು. ಗುತ್ತಿಗೆದಾರ ಮನೆಗೆ ಹೋಗಿ ಎಷ್ಟು ಹೊತ್ತಾದರೂ ಹಣ ತೆಗೆದುಕೊಂಡು ಬಾರದೆ ಇದ್ದಾಗ ಅನುಮಾನ ಬಂದು ಬ್ಯಾಗ್‌ನಲ್ಲಿ ಕೊಟ್ಟಿದ್ದ 1 ಕೋಟಿ ರೂ. ಅನ್ನು ಪರಿಶೀಲನೆ ನಡೆಸಿದಾಗ ಕಟ್ ಮೇಲೆ 1 ಅಸಲಿ ನೋಟು ಹಾಕಿ ಉಳಿದವನ್ನು ನಕಲಿ ನೋಟು ಹಾಕಿರುವುದು ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಕೂಡಲೇ ಜಯನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಇನ್‌ಸ್ಪೆಕ್ಟರ್ ಆರ್. ಮಂಜುನಾಥ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.

    ಕಲರ್ ಜೆರಾಕ್ಸ್, ನಕಲಿ ಚಿನ್ನ:
    ವಂಚನೆ ಮಾಡುವ ಉದ್ದೇಶಕ್ಕೆ ಆರೋಪಿಗಳು 500 ರೂ. ಮತ್ತು 100 ರೂ. ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿ ಕೊಟ್ಟಿದ್ದರು. ಅಲ್ಲದೆ, 6 ಕೆಜಿ ನಕಲಿ ಚಿನ್ನದ ಬಿಸ್ಕೆತ್ ಸಹ ಸಿದ್ದಪಡಿಸಿಕೊಂಡು ಮೋಸ ಮಾಡಲು ಹೊಂಚು ಹಾಕಿದ್ದರು. ಆರೋಪಿಗಳಿಂದ 1 ಜಾಗ್ವಾರ್ ಕಾರು, 1 ಮಹೇಂದ್ರ ಕಾರು, 6 ಕೆಜಿ ನಕಲಿ ಚಿನ್ನದ ಬಿಸ್ಕೆತ್, 1 ಕೋಟಿ ರೂ. ಮೌಲ್ಯದ ನಕಲಿ ನೋಟು, 20 ಲಕ್ಷ ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts