More

    ಪ್ರೀತಿಯೆಂಬ ವಿಷ…: ಆ ಕ್ಷಣ ಅಂಕಣ..

    ಪ್ರೀತಿಯೆಂಬ ವಿಷ…: ಆ ಕ್ಷಣ ಅಂಕಣ..ಮೂವತ್ತೆರಡು ವರ್ಷದ ಪ್ರಕಾಶ್ ಸರ್ಕಾರಿ ಕಚೇರಿಯೊಂದರಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆಂಧ್ರದ ಕರಾವಳಿ ಮೂಲದವನಾಗಿದ್ದ ಆತನಿಗೆ ತಾನು ಕೆಲಸ ಮಾಡುತ್ತಿದ್ದ ರಾಯಲಸೀಮಾ ಪ್ರಾಂತದ ಜೀವನ ಇಷ್ಟವಾಗದೆ ತನ್ನ ಊರಿನ ಸಮೀಪ ವರ್ಗ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಏತನ್ಮಧ್ಯೆ ತರಬೇತಿ ಕಾರ್ಯಕ್ರಮವೊಂದಕ್ಕೆ ಹೋದಾಗ ಅವನಿಗೆ ಅದೇ ಊರಿನ 28 ವರ್ಷ ವಯಸ್ಸಿನ ಶಾಲಾ ಶಿಕ್ಷಕಿ ರಾಧಾ ಪರಿಚಯವಾದಳು. ಮೊದಲ ಭೇಟಿಯಲ್ಲಿಯೇ ಇಬ್ಬರಿಗೂ ಪ್ರೇಮಾಂಕುರವಾಯಿತು. ಇಬ್ಬರೂ ಕಚೇರಿ ಕೆಲಸ ಮುಗಿದ ಬಳಿಕ ಸರೋವರವೊಂದರ ಬಳಿ ಭೇಟಿ ಮಾಡುತ್ತಾ ಪ್ರೇಮಸಲ್ಲಾಪ ಮಾಡುತ್ತಿದ್ದರು. ಕೆಲವು ತಿಂಗಳು ಕಳೆದ ಬಳಿಕ ರಾಧಾ ಮದುವೆಯ ಪ್ರಸ್ತಾಪ ಮಾಡಿದಳು. ‘ನಾವಿಬ್ಬರೂ ಬೇರೆ ಬೇರೆ ಪ್ರಾಂತಗಳಿಗೆ ಸೇರಿದವರು, ನಮ್ಮ ಆಚಾರ ವಿಚಾರಗಳು ಬೇರೆಯಾದ್ದರಿಂದ ನಮ್ಮ ಮದುವೆಯ ಬಗ್ಗೆ ಹಿರಿಯರೊಡನೆ ಮಾತನಾಡಲು ನನಗೆ ಅಂಜಿಕೆ’ ಎಂದ. ‘ಇಷ್ಟು ದಿನ ಪ್ರೀತಿಸಿ ಮದುವೆಯಾಗದಿದ್ದರೆ ಹೇಗೆ?’ ಎಂದು ಕೋಪಿಸಿಕೊಂಡ ರಾಧಾ, ‘ನಾವಿಬ್ಬರೂ ನಮ್ಮ ಮಾತಾಪಿತರನ್ನು ಒಪ್ಪಿಸೋಣ, ಅವರೊಪ್ಪದಿದ್ದರೆ ರಿಜಿಸ್ಟರ್ಡ್ ಮದುವೆಯಾಗೋಣ’ ಎಂದಳು. ‘ಇನ್ನು ಸ್ವಲ್ಪ ದಿನ ಹೋಗಲಿ, ನನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ಮಾತಾಪಿತರೊಂದಿಗೆ ಮಾತನಾಡುವೆ’ ಎಂದು ಪ್ರಕಾಶ್ ಅವಳ ಪ್ರಸ್ತಾವನೆಗೆ ಅಲ್ಲಿಯೇ ಬ್ರೇಕ್ ಹಾಕಿದ.

    ಹೀಗೆಯೇ ನಾಲ್ಕು ವರ್ಷಗಳು ಕಳೆದವು. ಇಬ್ಬರ ಮನೆಗಳಲ್ಲಿಯೂ ಅವರ ವಿವಾಹಕ್ಕಾಗಿ ಒತ್ತಡಗಳು ಹೆಚ್ಚುತ್ತಾ ಹೋದವು. ಕಡೆಗೊಮ್ಮೆ ಅವರಿಬ್ಬರಿಗೂ ತಂತಮ್ಮ ಮನೆಗಳಲ್ಲಿ ತಮ್ಮ ಪ್ರೇಮದ ಬಗ್ಗೆ ತಿಳಿಸಲೇಬೇಕಾದ ಅನಿವಾರ್ಯತೆಯುಂಟಾಯಿತು. ಪ್ರಕಾಶ್​ನ ಮಾತಾಪಿತರು ಆರಂಭದಲ್ಲಿ ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದರೂ ಆತ ತನ್ನ ಅಣ್ಣ ಅತ್ತಿಗೆಯರ ಸಹಾಯದಿಂದ ಅವರನ್ನು ಒಪ್ಪಿಸಿದ. ರಾಧಾಳ ಮನೆಯವರಿಗಾದರೋ ಎರಡನೇ ಮಗಳ ವಿವಾಹ ನಿರಾಯಾಸದಿಂದ ಸರ್ಕಾರಿ ನೌಕರನ ಜತೆ ಆಗುತ್ತಿರುವುದೆಂದು ಸಂತಸವಾಗಿತ್ತು. ಅವರು ಕೂಡಲೇ ಸಮ್ಮತಿಯಿತ್ತರು.

    ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆಯೆಂದು ಪ್ರಕಾಶ್ ಯೋಚಿಸಿದಾಗ ಅವನ ಮಾತಾಪಿತರು ಸಣ್ಣ ತಕರಾರೆತ್ತಿದರು. ‘ನೀನೇನೋ ಪರವೂರಿನ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಲು ಒಪ್ಪಿರುವೆ. ಆದರೆ, ಇಬ್ಬರ ಜಾತಕ ಹೊಂದಿಸದೆ ಮದುವೆ ಮಾಡಲು ನಾವು ತಯಾರಿಲ್ಲ್ಲ ಎಂದರು. ಹೀಗಾಗಿ ಪ್ರಕಾಶ್ ರಾಧಾಳ ಜಾತಕ ತರಿಸಿದ. ರಾಧಾಳ ಮಾತಾಪಿತರೂ ಪ್ರಕಾಶ್​ನ ಜಾತಕವನ್ನು ಪಡೆದರು. ಎರಡು ಕುಟುಂಬಗಳೂ ಜಾತಕಗಳನ್ನು ಹೋಲಿಸಲು ತಮ್ಮ ತಮ್ಮ ಜ್ಯೋತಿಷಿಗಳಿಗೆ ಕೊಟ್ಟರು. ರಾಧಾಳ ಕಡೆಯ ಜ್ಯೋತಿಷಿ, ‘ಈ ಸಂಬಂಧ ನಿಮ್ಮ ಮಗಳಿಗೆ ಆಗಿ ಬರುವುದಿಲ್ಲ, ದಯವಿಟ್ಟು ಈ ಸಂಬಂಧವನ್ನು ಬಿಡಿ’ ಎಂದ. ಗಾಬರಿಯಾದ ಅವರು ಕಾರಣವನ್ನು ಕೇಳಿದಾಗ, ‘ಪ್ರಕಾಶನ ಕುಂಡಲಿಯಲ್ಲಿ ದೋಷವಿದ್ದು ರಾಧಾ ಅವನನ್ನು ಮದುವೆಯಾದರೆ ಒಂದೇ ವರ್ಷದಲ್ಲಿ ವಿಧವೆಯಾಗುತ್ತಾಳೆ’ ಎಂದು ಜ್ಯೋತಿಷಿ ಹೇಳಿದರು.

    ಹೌಹಾರಿದ ಅವರು ಕೂಡಲೇ ಪ್ರಕಾಶ್​ನ ಸಂಬಂಧವನ್ನು ತ್ಯಜಿಸಲು ರಾಧಾಳಿಗೆ ಸೂಚಿಸಿ ತಾವು ಅವಳಿಗಾಗಿ ಬೇರೊಬ್ಬ ಉತ್ತಮ ವರನನ್ನು ನೋಡುವುದಾಗಿ ಹೇಳಿದರು. ದಿಗ್ಭಾ›ಂತಳಾದ ರಾಧಾ ಪ್ರಕಾಶ್​ನ ಬಳಿ ನಡೆದ ವಿಷಯವನ್ನು ತಿಳಿಸಿದಳು. ‘ಅಸಲಿಗೆ ಹೇಳಬೇಕೆಂದರೆ ನನಗೆ ಜ್ಯೋತಿಷ ಶಾಸ್ತ್ರದಲ್ಲಿ ಸ್ವಲ್ಪವೂ ನಂಬಿಕೆಯಿಲ್ಲ. ಆದರೆ, ನನ್ನ ಕುಟುಂಬದ ಬಲವಂತಕ್ಕೆ ನಾನು ಜಾತಕಗಳನ್ನು ಹೊಂದಿಸಿ ನೋಡಲು ಒಪ್ಪಿದ್ದು. ಇವೇ ಜಾತಕಗಳನ್ನು ನೋಡಿದ ನಮ್ಮ ಜ್ಯೋತಿಷಿ ಎರಡೂ ಜಾತಕಗಳು ಕೂಡುತ್ತವೆ ಎಂದಿರುವಾಗ ನಿಮ್ಮ ಜ್ಯೋತಿಷಿ ಎಲ್ಲಿಯೋ ತಪ್ಪಿರಬೇಕು’ ಎಂದ. ‘ನಿನ್ನ ಮಾತುಗಳಿಗೆ ನನ್ನದಂತೂ ಒಪ್ಪಿಗೆಯಿದೆ. ಆದರೆ, ನನ್ನನ್ನು ಲಗ್ನವಾದರೆ ನಿನ್ನ ಪ್ರಾಣಕ್ಕೇ ಕುತ್ತು ಎಂದಿರುವಾಗ ನನಗೆ ಹೆದರಿಕೆಯಾಗಿದೆ’ ಎಂದಳು. ‘ನೋಡು ರಾಧಾ, ನನಗೆ ಎಲ್ಲಿಯವರೆಗೆ ಆಯುಸ್ಸನ್ನು ಭಗವಂತನು ಕರುಣಿಸಿರುವನೋ ಅಲ್ಲಿಯವರೆಗೆ ನಾನು ಬದುಕಿರುತ್ತೇನೆ. ಬೇರೆ ದೇಶಗಳಲ್ಲಿ, ಧರ್ಮಗಳಲ್ಲಿ ಕುಂಡಲಿಗಳನ್ನು ಹೊಂದಿಸದೇ ಮದುವೆ ಮಾಡಿಕೊಳ್ಳುವುದಿಲ್ಲವೇ? ಜ್ಯೋತಿಷಿಯ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡದೇ ನಾವು ಲಗ್ನವಾಗೋಣ’ ಎಂದ.

    ಈ ಸಲಹೆಗೆ ರಾಧಾ ಒಪ್ಪದಾಗ ಪ್ರಕಾಶ್, ‘ಹಾಗಾದರೆ ಒಂದು ಕೆಲಸ ಮಾಡೋಣ. ಹೈದರಾಬಾದಿನಲ್ಲಿರುವ ಜ್ಯೋತಿಷಿಯೊಬ್ಬರಿಗೆ ಎರಡೂ ಕುಂಡಲಿಗಳನ್ನು ಕಳಿಸಿ ಅವರ ಅಭಿಪ್ರಾಯ ಕೇಳೋಣ’ ಎಂದ. ರಾಧಾ ಇದಕ್ಕೊಪ್ಪಿದಾಗ ಇಬ್ಬರ ಜಾತಕಗಳನ್ನು ಹೈದರಾಬಾದಿಗೆ ಕಳುಹಿಸಿದರು. ಒಂದು ವಾರದಲ್ಲಿ ಉತ್ತರಿಸಿದ ಆ ಜ್ಯೋತಿಷಿ, ‘ರಾಧಾಳ ಕುಂಡಲಿಯಲ್ಲಿ ಸ್ವಲ್ಪ ದೋಷವಿದ್ದು ಅವಳಿಗೆ ಸಂತಾನಭಾಗ್ಯವಿಲ್ಲ, ಇದಲ್ಲದೆ, ಅವಳನ್ನು ಲಗ್ನವಾದರೆ ಪ್ರಕಾಶನ ನೌಕರಿ ಹೋಗಬಹುದು’ ಎಂದ.

    ಈ ಭವಿಷ್ಯ ಕೇಳಿದಕೂಡಲೇ ಪ್ರಕಾಶ್​ಗೆ ತೀರಾ ಆತಂಕವಾಯಿತು. ಒಬ್ಬ ಜ್ಯೋತಿಷಿ ರಾಧಾಳನ್ನು ಲಗ್ನವಾದರೆ ತನ್ನ ಪ್ರಾಣ ಹೋಗುತ್ತ್ತದೆ ಎಂದರೆ ಇನ್ನೊಬ್ಬ ಜ್ಯೋತಿಷಿ ತನ್ನ ಕೆಲಸವೇ ಹೋಗುತ್ತದೆ ಎಂದು ಹೇಳುತ್ತಿದ್ದಾನೆ. ಮುಂದೇನು ಮಾಡುವುದು ಎಂದು ಅವನ ಮನಸ್ಸು ತುಮುಲದಲ್ಲಿ ಹೊಯ್ದಾಡತೊಡಗಿತು.

    ಮುಂದಿನ ವಾರ ಇಬ್ಬರೂ ಪ್ರೇಮಿಗಳು ಸರೋವರದ ದಡದಲ್ಲಿ ಕುಳಿತು ಏನು ಮಾಡುವುದೆಂದು ಯೋಚಿಸತೊಡಗಿದರು. ‘ನಾವಿಬ್ಬರೂ ಆರು ವರ್ಷ ಪ್ರೀತಿಸಿದ್ದೇವೆ. ಎಲ್ಲ ವಿಧಗಳಲ್ಲಿಯೂ ಒಂದಾಗಿದ್ದೇವೆ. ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲು ನನಗಿಷ್ಟವಿಲ್ಲ. ಏಳೇಳು ಜನ್ಮದಲ್ಲಿ ನೀನೇ ನನ್ನ ಪತಿಯೆಂದು ತೀರ್ವನಿಸಿರುವೆ. ಒಂದು ವೇಳೆ ನಮ್ಮ ಮದುವೆ ಆಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂದಳು ರಾಧಾ. ‘ನಾನೂ ನಿನ್ನ ಹೊರತಾಗಿ ಬೇರೊಬ್ಬಳನ್ನು ಮದುವೆಯಾಗಲು ಸಾಧ್ಯವಿಲ್ಲ, ನಾನೂ ನಿನ್ನೊಡನೆ ಆತ್ಮಹತ್ಯೆ ಮಾಡಿಕೊಳ್ಳುವೆ, ಬಾ ಇದೇ ಸರೋವರದಲ್ಲಿಯೇ ಧುಮುಕಿ ಜೀವ ತ್ಯಾಗ ಮಾಡೋಣ’ ಎಂದ ಪ್ರಕಾಶ್. ‘ಇಲ್ಲ, ನನಗೆ ಈಜಾಡಲು ಬರುವುದರಿಂದ ನಾನು ನೀರಿಗೆ ಹಾರಿದರೆ ಸಾಯುವುದಿಲ್ಲ, ಬೇರೊಂದು ಮಾರ್ಗವನ್ನೇ ಹುಡುಕಬೇಕು’ ಎಂದಳು ರಾಧಾ.

    ಅವಳ ಮಾತನ್ನು ಅನುಮೋದಿಸಿದ ಪ್ರಕಾಶ್, ‘ಹಾಗಾದರೆ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳೊಣ. ಈ ಜನ್ಮದಲ್ಲಿ ಸತಿಪತಿಗಳಾಗದಿದ್ದರೇನಂತೆ ಮುಂದಿನ ಜನ್ಮದಲ್ಲಿ ಒಟ್ಟಾಗೋಣ’ ಎಂದ. ಇಬ್ಬರೂ ಮುಂದಿನ ಭಾನುವಾರದಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು. ಶನಿವಾರದಂದು ರಾಧಾ ತನ್ನ ಊರಿನ ಅಂಗಡಿಯೊಂದರಿಂದ ಒಂದು ಬಾಟಲ್ ಕೀಟನಾಶಕವನ್ನು ಖರೀದಿಸಿ ಅದನ್ನು ತನ್ನ ಮನೆಯಲ್ಲಿಟ್ಟಳು. ಭಾನುವಾರ ಸಂಜೆ ಅವರಿಬ್ಬರೂ ರಾಧಾಳ ಮನೆಯ ಬಳಿಯಲ್ಲಿದ್ದ ಕಾಡೊಂದರ ಬಳಿ ಸೇರಿದರು. ತಮ್ಮ ಜೀವನದ ಕಡೆಯ ಕ್ಷಣಗಳೆಂದು ಇಬ್ಬರೂ ಸೆಲ್ಪಿಗಳನ್ನು ತೆಗೆದುಕೊಂಡರು. ಅನಂತರ ಕ್ರಿಮಿನಾಶಕವನ್ನು ಎರಡು ಪ್ಲಾಸ್ಟಿಕ್ ಗ್ಲಾಸುಗಳಲ್ಲಿ ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿದರು. ಚಿಯರ್ಸ್ ಎಂದು ಹೇಳುತ್ತಾ ಇಬ್ಬರೂ ಗ್ಲಾಸುಗಳನ್ನು ಗಂಟಲಿಗೇರಿಸಿದರು.

    10 ನಿಮಿಷಗಳ ಬಳಿಕವೂ ಇಬ್ಬರ ದೇಹಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ತಾವು ಸೇವಿಸಿದ ವಿಷವು ಪರಿಣಾಮ ಬೀರಲು ಇನ್ನೂ ಸಮಯ ತೆಗೆದುಕೊಳ್ಳಬಹುದೆಂದು ಇಬ್ಬರೂ ಊಹಿಸಿ ಮನೆಗಳಿಗೆ ತೆರಳಿದರು. ರಾಧಾ ಹತ್ತಿರದಲ್ಲಿಯೇ ಇದ್ದ ತನ್ನ ಮನೆಯ ಹೊಸ್ತಿಲಿಗೆ ಬರುತ್ತಿದ್ದಂತೆ ವಾಂತಿಯಾಗತೊಡಗಿತು. ಗಾಬರಿಯಾದ ಅವಳ ಕುಟುಂಬದವರು ಕೂಡಲೇ ಆಂಬುಲೆನ್ಸ್​ಗೆ ಕರೆಮಾಡಿ ಅವಳನ್ನು ಆಸ್ಪತ್ರೆಗೆ ಸೇರಿಸಿದರು. ಏತನ್ಮಧ್ಯೆ ಪ್ರಕಾಶನಿಗೆ ಯಾವುದೇ ಪರಿಣಾಮವಾಗದೆ ಆತ ಬಸ್​ಸ್ಟಾಂಡಿಗೆ ಹೋಗಿ 8 ಕಿ.ಮೀ ದೂರದಲ್ಲಿದ್ದ ತನ್ನ ಮನೆಗೆ ತೆರಳುವ ಬಸ್ ಹತ್ತಿದ. ಆದರೆ, ಮಾರ್ಗಮಧ್ಯದಲ್ಲಿ ಆತ ವಾಂತಿಮಾಡಿಕೊಳ್ಳತೊಡಗಿದಾಗ ಬಸ್ಸಿನಲ್ಲಿದ್ದವರು ಕೂಡಲೇ ಅಸ್ಪತ್ರೆಗೆ ಸೇರಿಸಿದರು. ಇಬ್ಬರೂ ಪ್ರೇಮಿಗಳನ್ನು ಪರೀಕ್ಷಿಸಿದ ಬೇರೆ ಬೇರೆ ವೈದ್ಯರು ವಿಷಪ್ರಾಶನ ಪ್ರಕರಣಗಳಾಗಿದ್ದ ಕಾರಣ ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ನೀಡಿದರು. ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ರಾಧಾ ಮತ್ತು ಪ್ರಕಾಶ್​ನ ಮೇಲೆ ಆತ್ಮಹತ್ಯೆಗೆ ಯತ್ನದ ಪ್ರಕರಣಗಳು ದಾಖಲಾದವು.

    ಅದೇ ರಾತ್ರಿ ರಾಧಾಳ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಅವಳನ್ನು ದೊಡ್ಡಾಸ್ಪತ್ರೆಗೆ ಸೇರಿಸಬೇಕೆಂದರು. ಹೀಗಾಗಿ, ಅವಳನ್ನು ನೆರೆಯ ಜಿಲ್ಲೆಯ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಸೇರಿಸಲಾಯಿತು. ಒಂದೇ ದಿನದ ಶುಶ್ರೂಷೆಯ ನಂತರ ಪ್ರಕಾಶ್ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ. ಆದರೆ, ಎರಡು ದಿನಗಳ ನಂತರ ರಾಧಾಳ ದೇಹಸ್ಥಿತಿ ವಿಷಮಗೊಂಡಿತು. ಆಕೆ ಜೀವನ್ಮರಣಗಳ ನಡುವೆ ತೂಗುಯ್ಯಾಲೆಯಲ್ಲಿದ್ದಳು. ಆಕೆ ಯಾವುದೇ ಕ್ಷಣದಲ್ಲಾದರೂ ಸಾಯಬಹುದು ಎಂದಾಗ ಪೊಲೀಸರು ಅವಳ ಮರಣಪೂರ್ವ ಹೇಳಿಕೆಯನ್ನು ಪಡೆದರು.

    ರಾಧಾ ಹೀಗೆಂದಳು: ‘ನಾನು ಮತ್ತು ಪ್ರಕಾಶ್ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಒಟ್ಟಾಗಿ ವಿಷವನ್ನು ಸೇವಿಸಿದೆವು. ನಾನು ನನ್ನ ಗ್ಲಾಸಿನಲ್ಲಿದ್ದ ಅಷ್ಟೂ ವಿಷವನ್ನು ಒಂದೇ ಗುಟುಕಿನಲ್ಲಿ ಕುಡಿದೆ. ಆದರೆ, ಪ್ರಕಾಶ್ ವಿಷ ಕುಡಿಯುವಾಗ ಕೆಮ್ಮು ಬಂದಂತೆ ಮಾಡಿ ಬಾಯಲ್ಲಿದ್ದ ವಿಷವನ್ನು ಹೊರಗೆ ಉಗುಳಿದ. ತಾನು ಸಾಯದೇ ನಾನೊಬ್ಬಳೇ ಸಾಯಬೇಕೆಂಬ ದುರುದ್ದೇಶದಿಂದಲೇ ಪ್ರಕಾಶ್ ಹೀಗೆ ಮಾಡಿದ್ದಾನೆ. ನನ್ನ ಸಾವಿಗೆ ಅವನೇ ಕಾರಣ’ ಎಂದಳು. ಈ ಹೇಳಿಕೆ ಕೊಟ್ಟ ಕೆಲ ಗಂಟೆಗಳ ನಂತರ ಆಕೆ ಅಸುನೀಗಿದಳು. ರಾಧಾ ಕೊಟ್ಟ ಹೇಳಿಕೆಯಮೇರೆಗೆ ಪ್ರಕಾಶ್​ನ ವಿರುದ್ಧ ಕೊಲೆ ಪ್ರಕರಣ ದಾಖಲಾಯಿತು. ಈ ಸುದ್ದಿಯನ್ನು ಅದು ಹೇಗೋ ತಿಳಿದುಕೊಂಡ ಆತ ಪರಾರಿಯಾದ.

    ಕಡೆಗೂ ಆತನನ್ನು ಪೊಲೀಸರು ಬಂಧಿಸಿದಾಗ ಆತ ಹೀಗೆ ಹೇಳಿದ: ‘ನಾನು ರಾಧಾಳನ್ನು ಮದುವೆಯಾದರೆ ನನ್ನ ಸಾವು ಸಂಭವಿಸುತ್ತದೆಯೆಂದು ತಿಳಿದು ಆಘಾತವಾಗಿತ್ತು. ನಾನು ಅವಳನ್ನು ಮದುವೆಯಾಗಿ ಸಾಯುವ ಬದಲು ಬೇರೊಬ್ಬಳನ್ನು ಮದುವೆಯಾಗಿ ಸುಖವಾಗಿರುವುದು ಸರಿ ಎಂದು ನಿರ್ಧರಿಸಿದೆ. ಇದರ ಮೇರೆಗೆ ಅವಳಿಗೆ ವಿಷ ತರಲು ಹೇಳಿದೆ. ಆದರೆ ಅದನ್ನು ಸೇವಿಸುವ ಸಮಯದಲ್ಲಿ ನಾನು ಒಂದು ಗುಟುಕನ್ನಷ್ಟೇ ಕುಡಿದಿದ್ದು ಸತ್ಯ’. ಪ್ರಕಾಶ್ ತನ್ನ ಪ್ರೇಯಸಿಯ ಕೊಲೆ ಮಾಡಿಲ್ಲ, ಆದರೆ, ಅವಳ ಆತ್ಮಹತ್ಯೆಗೆ ಪ್ರಚೋದಿಸಿದ ಎನ್ನುವ ಆರೋಪದ ಬಗ್ಗೆ ನ್ಯಾಯಾಲಯದ ತೀರ್ವನವೇನೆಂಬುದು ತಿಳಿದಿಲ್ಲ. ‘ಆತ್ಮಸಂರಕ್ಷಣೆಯು ಪ್ರೀತಿಯ ವೈರಿ’ ಎಂದು ಯುಗಾಂಡಾದ ಕಾದಂಬರಿಗಾರ್ತಿ ರೋಕ್ಸಾನ್ನಾ ಅಲಿಬಾ ಕಾಜಿಬ್ವೇ ಹೇಳಿದಂತೆ ತಾನು ಬದುಕುಳಿಯಬೇಕೆಂಬ ಅಪೇಕ್ಷೆಯಿಂದಲೇ ಪ್ರಕಾಶ್ ಹಾಗೆ ವರ್ತಿಸಿ ಜ್ಯೋತಿಷಿಯ ಮಾತುಗಳನ್ನು ಅದಲುಬದಲಾಗಿಸಿದ.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

    ಎಂಬಿಬಿಎಸ್​ ವಿದ್ಯಾರ್ಥಿನಿ ಮೇಲೆ ಅಪ್ಪ-ಮಗನ ಅತ್ಯಾಚಾರ; ಇಸ್ಲಾಂ ಧರ್ಮಕ್ಕೆ ಮತಾಂತರಿಸಲೂ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts