More

    ಯಾರು ಲಿಂಗಾಯತ ವಿರೋಧಿ? ಸಂಸದ ಜಿಗಜಿಣಗಿಗೆ ಕಾಂಗ್ರೆಸ್ ಅಭ್ಯರ್ಥಿ ಆಲಗೂರ ಸಾಲು ಸಾಲು ಪ್ರಶ್ನೆ?

    ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಪ್ರಮುಖ ಹುದ್ದೆಗಳ ಅವಕಾಶ ತಪ್ಪಿಸಿದ್ದು ಯಾರು? ಗಾಣಿಗ-ಪಂಚಮಸಾಲಿ ಸಮುದಾಯದ ಮಧ್ಯೆ ಬಿರುಕು ಮೂಡಿಸಿದವರು ಯಾರು? ಇಂಡಿಯಲ್ಲಿ ದಯಾಸಾಗರ ಪಾಟೀಲರಿಗೆ ಮತ್ತು ಬಸವನಬಾಗೇವಾಡಿಯಲ್ಲಿ ಅಪ್ಪುಗೌಡ ಮನಗೂಳಿಗೆ ಟಿಕೆಟ್ ತಪ್ಪಿಸಿದ್ದು ಯಾರು? ರವಿಕಾಂತ ಪಾಟೀಲರ ರಾಜಕೀಯ ಭವಿಷ್ಯ ಅಡಗಿಸಿದವರು ಯಾರು? ಲಿಂಗಾಯತ ನಾಯಕ ಎಂ.ಬಿ. ಪಾಟೀಲರ ಮನೆ ಮೇಲೆ ಕಲ್ಲು ಎಸೆಯಲು ಪ್ರೇರೇಪಿಸಿದ್ದು ಯಾರು….?

    ಹೀಗೆ ಸಾಲು ಸಾಲು ಪ್ರಶ್ನೆಗಳ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ, ಜಿಲ್ಲಾ ರಾಜಕಾರಣದಲ್ಲಿ ಯಾರು ಲಿಂಗಾಯತ ನಾಯಕರನ್ನು ಹತ್ತಿಕ್ಕಿದ್ದಾರೆ? ಮತ್ತಿನ್ನಾರು ಬೆಳೆಸಿದ್ದಾರೆಂಬುದನ್ನು ಅರಿಯದಷ್ಟು ಲಿಂಗಾಯತ ಸಮುದಾಯದ ನಾಯಕರು ಮುಗ್ದರಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

    ಆರು ಬಾರಿ ಸಂಸದರಾಗಿ, ಕೇಂದ್ರದಲ್ಲಿ ಮಂತ್ರಿಯಾಗಿ, ಶಾಸಕರಾಗಿ ಸುದೀರ್ಘ ಆಡಳಿತ ನೀಡಿದ ರಮೇಶ ಜಿಗಜಿಣಗಿ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಚಲಾಯಿಸುವುದನ್ನು ಬಿಟ್ಟು ಜಾತಿ-ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಪ್ರಯತ್ನ ನಡೆಸಿದ್ದಾರೆ. ತಮ್ಮನ್ನು ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸಲು ಹೊರಟಿರುವುದು ಜಿಗಿಜಿಣಗಿ ಅವರ ಕೀಳು ಮಟ್ಟದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದರು.

    ರಾಜು ಆಲಗೂರ ವಿಜೇತರಾದರೆ ಲಿಂಗಾಯತ ಸಮುದಾಯಕ್ಕೆ ತೊಂದರೆಯಾಗಲಿದೆ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿಕೆ ಗಮನಿಸಿದರೆ ಸೋಲಿತ ಭೀತಿ ಎಷ್ಟರಮಟ್ಟಿಗೆ ಅವರಿಸಿದೆ ಎಂಬುದು ಗೊತ್ತಾಗಲಿದೆ. ಲಿಂಗಾಯತ ಸಮುದಾಯದ ಬಿಎಲ್‌ಡಿಇ ಸಂಸ್ಥೆಯಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿರುವ ನಾನು ಆ ಸಮುದಾಯದವರಲ್ಲೇ ಒಬ್ಬನಾಗಿ ಬೆಳೆದಿದ್ದೇನೆ. ನನ್ನನ್ನು ಮನೆಯ ಮಗನಂತೆ ಕಂಡಿದ್ದಾರೆ. ಅತ್ಯಂತ ಸುಂಸ್ಕೃತ ಕುಟುಂಬದಿಂದ ಬಂದ ನಾನು ಲಿಂಗಾಯತ ಸಮುದಾಯದ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದು ತೋರಿಸಿ ಕೊಟ್ಟರೆ ಆ ಕ್ಷಣವೇ ಚುನಾವಣೆ ಕಣದಿಂದ ಹಿಂದೆ ಸರಿಯುತ್ತೇನೆ. ಹಾಗೊಂದು ವೇಳೆ ಸಾಬೀತು ಪಡಿಸುವಲ್ಲಿ ವಿಫಲರಾದರೆ ಕಣದಿಂದ ಹಿಂದೆ ಸರಿಯಲು ತಾವು ಸಿದ್ದರಿದ್ದೀರಾ? ಎಂದು ಸವಾಲೆಸೆದರು.

    ಲಿಂಗಾಯತ ಸಮುದಾಯವನ್ನು ಹಣಿದಿರುವುದೇ ಜಿಗಜಿಣಗಿ. ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಸಿಗಬೇಕಾದ ಹಲವು ಉನ್ನತ ಸ್ಥಾನಮಾನಗಳಿಗೆ ಕೊಕ್ಕೆ ಹಾಕಿದರು. ಅಪ್ಪುಗೌಡ ಪಾಟೀಲ ಮನಗೂಳಿ, ದಯಾಸಾಗರ ಪಾಟೀಲರಿಗೆ ಟಿಕೆಟ್ ಸಿಗದಂತೆ ನೋಡಿಕೊಂಡರು. ಈ ಹಿಂದೆ ರವಿಕಾಂತ ಪಾಟೀಲರನ್ನೂ ಹಣಿದಿರುವುದು ಯಾರು ಎಂಬುದು ಆ ಸಮುದಾಯಕ್ಕೆ ಗೊತ್ತಿದೆ. ಅಷ್ಟೇ ಏಕೆ ತಮ್ಮದೇ ದಲಿತ ಸಮುದಾಯಕ್ಕೆ ಇವರು ಯಾವ ಕೊಡುಗೆ ನೀಡಿದ್ದಾರೆ? ಎಂದರು.

    ವ್ಯಕ್ತಿಗತ ರಾಜಕಾರಣ ಮಾಡುವ, ಹೊಂದಾಣಿಕೆ ಮತ್ತು ಅನುಕೂಲಸಿಂಧು ರಾಜಕಾರಣ ಮಾಡುವ ಜಿಗಜಿಣಗಿ ಅವರ ಬಗ್ಗೆ ಹೇಳಲು ಅನೇಕ ವಿಷಯಗಳಿವೆ. ಅದನ್ನು ಹೊರಹಾಕುವ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ. ಹೊಲಸು ರಾಜಕಾರಣ ನನ್ನದಲ್ಲ ಎಂದರು.

    ಕಾಂಗ್ರೆಸ್ ಯಾವುದೇ ಜಾತಿ, ಮತ, ಪಂಥಗಳಿಗೆ ಸೀಮಿತವಲ್ಲ. ಎಲ್ಲರನ್ನೂ ಸಹೋದರರಂತೆ ಒಂದೇ ಕುಟುಂಬದ ಸದಸ್ಯರಂತೆ ಕರೆದೊಯ್ಯುವ ಪಕ್ಷ. ಇಂಥ ಪಕ್ಷದ ಅನೇಕ ನಿಷ್ಠಾವಂತ ಕಾರ್ಯಕರ್ತರು ಒಡಹುಟ್ಟಿದ ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ. ಲಿಂಗಾಯತ ನಾಯಕರೆಲ್ಲರೂ ನನ್ನನ್ನು ತಮ್ಮ ಮನೆಯ ಸದಸ್ಯನಂತೆ ಕಾಣುತ್ತಿದ್ದಾರೆ ಎಂದರು.

    ಡಾ.ಬಾಬು ರಾಜೇಂದ್ರ ನಾಯಕ ಮಾತನಾಡಿ, ಶೂನ್ಯ ಸಾಧಕ ರಮೇಶ ಜಿಗಜಿಣಗಿಗೆ ಸೋಲಿನ ಭೀತಿ ಕಾಡುತ್ತಿದೆ. ಜಗಳ ಹಚ್ಚುವ ರಾಜಕಾರಣ ಮುಂದುವರಿಸಿರುವ ಜಿಗಜಿಣಗಿ ಈಗಲೇ ಜಾತಿ ರಾಜಕಾರಣ ಮುಂದುವರಿಸಿದ್ದಾರೆ. ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಸಾಮರಸ್ಯ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟವನ್ನು ಕದಡುವ ಪ್ರಯತ್ನ ಮಾಡಬಾರದು ಎಂದರು.

    ಲಿಂಗಾಯತ ನಾಯಕ ಎಂ.ಆರ್. ಪಾಟೀಲ ಮಾತನಾಡಿ, ಜಿಗಜಿಣಗಿ ಸಣ್ಣತನದ ರಾಜಕಾರಣ ಆರಂಭಿಸಿದ್ದಾರೆ. ಒಡೆದು ಆಳುವ ನೀತಿ ಕೈಬಿಡಬೇಕು. ಹತಾಶೆಯಿಂದ ಇಂಥ ಮಾತು ಹೇಳುವುದು ಜಿಗಜಿಣಗಿಗೆ ಭೂಷಣವಲ್ಲ. ಆಲಗೂರ ಅವರಿಗೆ ಎಲ್ಲ ಲಿಂಗಾಯತ ಸಮುದಾಯ ಬೆಂಬಲ ಸೂಚಿಸುತ್ತೇವೆ ಎಂದರು.

    ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತ ಯಾಚಿಸುವ ಬದಲು ಜಾತಿ ವಿಚಾರ ಮುನ್ನೆಲೆಗೆ ತರುತ್ತಿರುವುದು ನೋಡಿದರೆ ಜಿಗಜಿಣಗಿ ಅವರಿಗೆ ಸೋಲಿನ ಭೀತಿ ಕಾಡುತ್ತಿರುವುದು ಗೊತ್ತಾಗುತ್ತದೆ. ಗಾಣಿಗ ಹಾಗೂ ಪಂಚಮಸಾಲಿ ಸಮುದಾಯವನ್ನು ಒಡೆದಾಳುವ ಜಿಗಜಿಣಗಿ ಅವರ ಆಟ ಇನ್ಮುಂದೆ ನಡೆಯಲ್ಲ ಎಂದರು.
    ಮುಖಂಡರಾದ ಅರವಿಂದ ಮಸಳಿ, ಡಾ.ಗಂಗಾಧರ ಸಂಬಣ್ಣಿ, ರುಕ್ಸಾನಾ ಉಸ್ತಾದ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts