More

    ಕವಿಯ ಆತ್ಮಾವಲೋಕನದ ಸಾಧನ ಕಾವ್ಯ

    ಬೆಳಗಾವಿ: ಕವಿಗೆ ಕಾವ್ಯವೆನ್ನುವುದು ಆತ್ಮಾವಲೋಕನದ ಸಾಧನ. ಕಾವ್ಯದ ಮೂಲಕ ಕವಿ ತನ್ನನ್ನು ತಾನೇ ಕಂಡುಕೊಳ್ಳಲು ಸಾಧ್ಯ ಎಂದು ಸಾಹಿತಿ, ಪ್ರಾಧ್ಯಾಪಕ ಡಾ. ಹರೀಶ ಬಿ. ಕೋಲಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

    ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮತ್ತು ತೇಜಸ್ವಿ ಪ್ರಕಾಶನ ಸವದತ್ತಿ ಇವರ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಉಡಿಕೇರಿಯ ಶಿಕ್ಷಕ ಶಿವಾನಂದ ಉಳ್ಳಿಗೇರಿ ಅವರ ಚೊಚ್ಚಲ ಕವನ ಸಂಕಲನ ‘ಅವ್ವ ಮತ್ತು ಆಲದಮರ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯುವ ಕವಿ ಶಿವಾನಂದ ಉಳ್ಳಿಗೇರಿ ಸಂಯಮದ ಬರವಣಿಗೆಯಿಂದ ತಮ್ಮ ಅಂತರಂಗ ತೆರೆದಿಟ್ಟಿದ್ದಾರೆ ಎಂದರು.

    ಇದೊಂದು ಜೀವನಪ್ರೀತಿ ತುಂಬಿದ ಕೃತಿಯಾಗಿದೆ. ವೈಜ್ಞಾನಿಕ ಮತ್ತು ವೈಚಾರಿಕ ಸ್ಪರ್ಶದಿಂದ ಕೂಡಿದ ಕವನಗಳ ಮೂಲಕ ಉಳ್ಳಿಗೇರಿ ಅವರು ಭರವಸೆ ಮೂಡಿಸುವ ಕವಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಬೇಂದ್ರೆ, ಮಧುರಚೆನ್ನ, ಪುತಿನ ಅವರಂತಹ ಅನೇಕ ಹಿರಿಯ
    ಕವಿಗಳು ಸಂಯಮದ ಬರವಣಿಗೆಗೆ ಹೆಸರಾದವರು. ಸಂಯಮ ಕಾವ್ಯದಲ್ಲಿ ಪರಿವರ್ತನೆ ತರಬಲ್ಲದು. ಉಳ್ಳಿಗೇರಿ ಅವರ ಮುಕ್ತಕಗಳ ಮಾದರಿಯ ಕವನಗಳಲ್ಲಿ ಮುಗ್ಧತೆ ಮತ್ತು ಆಶಾಭಾವ ಎದ್ದು ಕಾಣುತ್ತದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎಲ್.ಎಸ್. ಶಾಸ್ತ್ರಿ, ಹಿರಿಯ ಕವಿಗಳ ಕಾವ್ಯದ ಅಧ್ಯಯನ ಮೂಲಕ ಕಾವ್ಯದ ಗುಣ ಲಕ್ಷಣಗಳನ್ನು ಅರಿತು ಬರೆಯುವಂತೆ ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಖ್ಯಗ್ರಂಥಾಲಯಾಧಿಕಾರಿ ಜಿ. ರಾಮಯ್ಯ ಮತ್ತು ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಕವಿ ನಾಗೇಶ ನಾಯಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ವೇಳೆ ಕವಿ ಉಳ್ಳಿಗೇರಿ ಅವರನ್ನು ಸನ್ಮಾನಿಸಲಾಯಿತು.

    ಶಿವನಪ್ಪ ಹೊಸುಪ್ಪಾರ, ಸಂತೋಷ ಚೀಟಿನ, ಐ.ಜಿ. ಗೂಳಪ್ಪನವರ, ನಾಗೇಶ ಬಡಿಗೇರ, ಮಂಜುಳಾ ತೇಗೂರ, ಡಾ. ಪಿ.ಜಿ.ಕೆಂಪಣ್ಣವರ, ಗುರುಸಿದ್ದಯ್ಯ ಹಿರೇಮಠ, ಎಂ.ಎ.ಪಾಟೀಲ, ಆನಂದ ಪುರಾಣಿಕ, ಡಾ. ಹೇಮಾವತಿ ಸೊನೊಳಿ, ಸಿ.ಕೆ.ಜೋರಾಪುರ ಮತ್ತಿತರರಿದ್ದರು. ಸುನಂದಾ ಮುಳೆ ನಾಡಗೀತೆ ಹಾಡಿದರು. ಚುಸಾಪ ಕಾರ್ಯಾಧ್ಯಕ್ಷೆ ದೀಪಿಕಾ ಚಾಟೆ ಸ್ವಾಗತಿಸಿದರು. ಅಧ್ಯಕ್ಷ ಅಶೋಕ ಮಳಗಲಿ ನಿರೂಪಿಸಿದರು. ದಳವಾಯಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts