More

    ಪಿಎಂ ವಿಶ್ವಕರ್ಮ ಯೋಜನೆ ವರದಾನ

    ಶಿವಮೊಗ್ಗ: ವೃತ್ತಿ ಕೌಶಲ ಹೊಂದಿ ಸ್ವಂತ ಉದ್ಯೋಗ ನಡೆಸಲು ಬಯಸುವವರಿಗೆ ಪಿಎಂ ವಿಶ್ವಕರ್ಮ ಯೋಜನೆ ವರದಾನವಾಗಿದೆ. ಈ ಯೋಜನೆಯಡಿ ತರಬೇತಿ, ಅಗತ್ಯ ಉಪಕರಣಗಳು ಹಾಗೂ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಹೇಳಿದರು.

    ಎಂಎಸ್‌ಎಂಇ, ಜಿಲ್ಲಾಡಳಿತದಿಂದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಮಂಗಳವಾರ ಪಿಎಂ ವಿಶ್ವಕರ್ಮ ಯೋಜನೆ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕುಶಲಕರ್ಮಿಗಳ ಜೀವನ ಮಟ್ಟ ಸುಧಾರಣೆ ಹಾಗೂ ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದರು.
    ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಅಮರನಾಥ್ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆ ಕುಶಲಕರ್ಮಿಗಳ ಅಭಿವೃದ್ಧಿ ನಿಟ್ಟಿನಲ್ಲಿ ಉತ್ತಮ ಯೋಜನೆಯಾಗಿದೆ. ಸಾಲ ಪಡೆಯುವ ಫಲಾನುಭವಿಗಳು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು ಎಂದು ಸಲಹೆ ನೀಡಿದರು.
    ಸಕಾಲದಲ್ಲಿ ಸಾಲ ಮರುಪಾವತಿ ಮಾಡುವುದರಿಂದ ಸಿಬಿಲ್ ಸ್ಕೋರ್ ಹೆಚ್ಚುತ್ತದೆ. ಇದರಿಂದ ಬ್ಯಾಂಕ್‌ಗಳು ಮುಂದೆ ನಿಮಗೆ ಸಾಲ ನೀಡುವಾಗ ಅನುಕೂಲವಾಗುತ್ತದೆ. ಸಕಾಲದ ಮರುಪಾವತಿಯಿಂದ ಬೇರೆಯವರಿಗೂ ಆರ್ಥಿಕ ನೆರವು ನೀಡಲು ಬ್ಯಾಂಕ್‌ಗಳಿಗೆ ಸಹಾಯವಾಗುತ್ತದೆ. ಈಗಾಗಲೇ ಪಿಎಂ ಸ್ವನಿಧಿ ಹೆಚ್ಚು ಜನಪ್ರಿಯ ಹಾಗೂ ಜನಪರವಾದ ಯೋಜನೆಯಾಗಿದೆ. ಇದು ಅತ್ಯಂತ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆಯೂ ಹೆಚ್ಚು ಜನರನ್ನು ತಲುಪಲಿದೆ ಎಂದರು.
    ಎಂಎಸ್‌ಎಂಇ ಜಂಟಿ ನಿರ್ದೇಶಕ ಡಾ.ಕೆ.ಸಾಕ್ರಟೀಸ್, ಉಪ ನಿರ್ದೇಶಕ ಗೋಪಿನಾಥ್ ರಾವ್, ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ಜಿ.ಸುರೇಶ್, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ವಿವಿಧ ಬ್ಯಾಂಕ್‌ಗಳ ಸಿಬ್ಬಂದಿ ಭಾಗವಹಿಸಿದ್ದರು.
    ಏನಿದು ಯೋಜನೆ?: ಕುಶಲಕರ್ಮಿಗಳನ್ನು ಉತ್ತೇಜಿಸಲು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. ಇದರಲ್ಲಿ 18 ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಗುರುತಿಸಲಾಗಿದೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಂಡ ಕುಶಲಕರ್ಮಿಗಳಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಕೌಶಲ ಬೆಳೆಸಲು ಫಲಾನುಭವಿ ಬಯಸಿದ ವೃತ್ತಿಯಲ್ಲಿ ಐದು ದಿನ ತರಬೇತಿ ನೀಡಲಾಗುವುದು. ಪ್ರಮಾಣಪತ್ರವೂ ಸಿಗಲಿದೆ. ತರಬೇತಿ ಅವಧಿಯಲ್ಲಿ ಶಿಷ್ಯವೇತನ ನೀಡಲಾಗುತ್ತದೆ. ತರಬೇತಿ ಪಡೆದವರಿಗೆ ಸ್ವಯಂ ಉದ್ಯೋಗ ಆರಂಭಿಸಲು ಶೇ.5 ಬಡ್ಡಿ ದರದಲ್ಲಿ ಮೊದಲ ಹಂತದಲ್ಲಿ ಒಂದು ಲಕ್ಷ ರೂ. ಸಾಲವನ್ನು ಬ್ಯಾಂಕ್‌ನಿಂದ ನೀಡಲಾಗುತ್ತದೆ. ಅದನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದರೆ ಎರಡನೇ ಹಂತದಲ್ಲಿ ಎರಡು ಲಕ್ಷ ರೂ.ವರೆಗೂ ಸಾಲ ನೀಡಲಾಗುತ್ತದೆ. ತರಬೇತಿ ಮುಗಿದ ಬಳಿಕ ವೃತ್ತಿ ಆರಂಭಿಸಲು ಅನುಕೂಲವಾಗುವಂತೆ 15 ಸಾವಿರ ರೂ. ಮೌಲ್ಯದ ವಿವಿಧ ಉಪಕರಣಗಳನ್ನು ನೀಡಲಾಗುತ್ತದೆ ಎಂದು ಆರ್.ಗಣೇಶ್ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts