More

    ನಿರೀಕ್ಷೆಗಳನ್ನು ಸಾಧಿಸುವುದೇ ಮೋದಿ ಸರ್ಕಾರದ ಗುರುತು; ಮೋದಿ ಆಡಳಿತಕ್ಕೆ ಏಳು ವರ್ಷ

    ದೇಶದ ಯಾವುದೇ ಮೂಲೆಯ ನ್ಯಾಯಬೆಲೆ ಅಂಗಡಿಗೆ ತೆರಳಿದರೂ ತನ್ನ ಹಕ್ಕಿನ ಧಾನ್ಯವನ್ನು ಪಡೆಯಲು ಅನುವಾಗುವಂತೆ ‘ಒಂದು ದೇಶ ಒಂದು ಪಡಿತರ ಯೋಜನೆ’ ಜಾರಿ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಇದರಿಂದ 81 ಕೋಟಿಗೂ ಅಧಿಕ ಜನರಿಗೆ ಅನುಕೂಲವಾಗಿದೆ.

    ನಿರೀಕ್ಷೆಗಳನ್ನು ಸಾಧಿಸುವುದೇ ಮೋದಿ ಸರ್ಕಾರದ ಗುರುತು; ಮೋದಿ ಆಡಳಿತಕ್ಕೆ ಏಳು ವರ್ಷ

    ದೇಶವಷ್ಟೆ ಅಲ್ಲ, ಇಡೀ ವಿಶ್ವವೇ ಈ ಕ್ಷಣದಲ್ಲಿ ಕರೊನಾ ಕಪಿಮುಷ್ಠಿಯಲ್ಲಿದೆ. ಒಮ್ಮೊಮ್ಮೆ ಗೆದ್ದೇಬಿಟ್ಟೆವು, ಹೊರಬಂದೆವು ಎನ್ನುವಷ್ಟರಲ್ಲಿ ಪರಾವಲಂಬಿ ವೈರಸ್ ಮತ್ತೊಂದು ರೂಪ ತಳೆದು ಹೊಸ ಸವಾಲು ಒಡ್ಡುತ್ತಿದೆ. ಇದೇ ಸಂದರ್ಭದಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎರಡನೇ ಅವಧಿಯ ಸರ್ಕಾರ ಅಸ್ತಿತ್ವಕ್ಕೆ ಬಂದು (ಮೇ 30ಕ್ಕೆ) ಎರಡನೇ ವರ್ಷ ಹಾಗೂ ಒಟ್ಟಾರೆ ನರೇಂದ್ರ ಮೋದಿಯವರ ಆಡಳಿತಕ್ಕೆ ಏಳು ವರ್ಷವಾಗಲಿದೆ.

    ನಿಜ. ಇದು ಸಂಭ್ರಮಿಸುವ ಕ್ಷಣವಂತೂ ಅಲ್ಲ. ಕರೊನಾ ಸೋಂಕನ್ನು ನಿಭಾಯಿಸುವ ಹಾಗೂ ದೇಶದ ಒಬ್ಬೇ ಒಬ್ಬ ಪ್ರಜೆ ಕರೊನಾದಿಂದ ಮೃತಪಡುವು ದನ್ನು ತಡೆಯುವಷ್ಟು ನಿಯಂತ್ರಣ ಸರ್ಕಾರಕ್ಕೆ(ಗಳಿಗೆ) ದೊರಕುವವರೆಗೂ ಸಂಭ್ರಮಿಸಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಜನರಿಗೆ ಉತ್ತರದಾಯಿಯಾಗಿರಬೇಕು. ಯಾವುದೇ ಪರಿಸ್ಥಿತಿಯಿರಲಿ, ತನ್ನನ್ನು ಜನರು ಆಯ್ಕೆ ಮಾಡಿದ ಉದ್ದೇಶದ ಹಾದಿಯಲ್ಲೆ ಸರ್ಕಾರ ನಡೆಯುತ್ತಿದೆಯೇ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಹೀಗಾಗಿಯೇ ಈ ಬಾರಿ ಕೇಂದ್ರ ಸರ್ಕಾರದ ಎರಡನೇ ವರ್ಷ ಸಂದರ್ಭವನ್ನು ಸಂಭ್ರಮಾಚರಣೆ ಬದಲಿಗೆ, ಜನರಿಗಾಗಿ ಸರ್ಕಾರ ಕೈಗೊಂಡ ಹೆಜ್ಜೆಗಳ ಮೆಲುಕು ಹಾಕಲು, ನೆನಪು ಮಾಡಲು ಮುಂದಾಗಬೇಕು ಎಂದು ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ನಾಯಕತ್ವ ನಿರ್ಧಾರ ಮಾಡಿದೆ.

    2014ರಲ್ಲಿ ಕೇಂದ್ರದಲ್ಲಿ ಅಭೂತಪೂರ್ವವೆಂಬಂತೆ ಸರ್ಕಾರವನ್ನು ಜನರು ಆಯ್ಕೆ ಮಾಡಿದರು. ದೇಶದ ಎಲ್ಲ ರಾಜ್ಯಗಳಿಗಿಂತ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದ ಗುಜರಾತಿನ ನೇತೃತ್ವ ವಹಿಸಿದ್ದ ನರೇಂದ್ರ ಮೋದಿ ತಮ್ಮ ನೇತೃತ್ವ ವಹಿಸಲಿ ಎಂದು ದೇಶದ ಜನ ನಿರ್ಧರಿಸಿದರು. ದೇಶಕಾರ್ಯವನ್ನು ಪಾರದರ್ಶಕವಾಗಿ, ನಿರ್ಧಾರಿತವಾಗಿ, ತ್ವರಿತವಾಗಿ ಮಾಡುವ ಸಲುವಾಗಿ ‘ಪ್ರಧಾನ ಸೇವಕ’ನನ್ನು ನೇಮಕ ಮಾಡಿದರು. ಪ್ರಧಾನಿಯಾಗಿ ನರೇಂದ್ರ ಮೋದಿ 2014ರ ಮೇ 26ರಂದು ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಇನ್ನು ಮೂರು ದಶಕ ಒಂದೇ ಪಕ್ಷದ ಸರ್ಕಾರ ಬರುವುದಿಲ್ಲ ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರ ತಲೆಕೆಳಗಾಯಿತು. ಆದರೆ, ಈ ಮಟ್ಟಿಗಿನ ಜನಾದೇಶ ದೊರಕಬೇಕೆಂದರೆ ಜನರ ನಿರೀಕ್ಷೆಯ ಮೂಟೆ ಎಷ್ಟು ದೊಡ್ಡದಿರಬೇಕೆಂದು ಊಹಿಸುವುದೂ ಕಷ್ಟ. ಇಷ್ಟು ದೊಡ್ಡ ನಿರೀಕ್ಷೆಗೆ ತಕ್ಕಂತೆ ಸಾಧನೆ ತೋರುವ ಸವಾಲನ್ನು ಸರ್ಕಾರ ಕೈಗೆತ್ತಿಕೊಂಡಿತು. ತಕ್ಷಣಕ್ಕೆ ಜನರಿಗೆ ಸಂತಸ ನೀಡುವ ಯೋಜನೆಗಳನ್ನು ಘೊಷಿಸುವುದು ಹೆಗ್ಗಳಿಕೆಯಲ್ಲ. ಆ ಯೋಜನೆಯಿಂದ ದೀರ್ಘಾವಧಿಯಲ್ಲಿ ನಾಗರಿಕರ ಜೀವನಮಟ್ಟ ಸುಧಾರಿಸಲು ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಚುನಾವಣೆ ಗೆಲುವನ್ನು ಮುಂದಿಟ್ಟುಕೊಂಡು ವಿವಿಧ ಸರ್ಕಾರಗಳು ಮಾಡುವ ಅನೇಕ ಯೋಜನೆಗಳು ಅಷ್ಟೇ ಬೇಗ ಭ್ರಮನಿರಸನಗೊಳಿಸುವುದಷ್ಟೆ ಅಲ್ಲದೆ, ದೇಶದ ಬೊಕ್ಕಸಕ್ಕೂ ಕನ್ನ ಹಾಕಿವೆ. ಆದರೆ ಮೋದಿ ಸರ್ಕಾರ ಘೊಷಿಸಿದ ಅನೇಕ ಯೋಜನೆಗಳು ದೂರಗಾಮಿ ಹಾಗೂ ಭವಿಷ್ಯದಲ್ಲಿ ಅಭಿವೃದ್ಧಿಯ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿರುವಂಥವು. ಅಂಥವುಗಳಲ್ಲಿ ಕೆಲವನ್ನು ನೋಡೋಣ.

    ನಮಾಮಿ ಗಂಗೆ: ದೇಶದ ಜನರ ಆರಾಧ್ಯದೈವ ಗಂಗೆ. ದೇಶದ ಶೇಕಡ 40 ಜನಸಂಖ್ಯೆ ಈ ನದಿಯನ್ನು ಅವಲಂಬಿಸಿಯೇ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಗಂಗೆಯನ್ನು ಸ್ವಚ್ಛಗೊಳಿಸುವುದು ದೇಶದ ಆರ್ಥಿಕ ಕಾರ್ಯಸೂಚಿಯೂ ಆಗಿದೆ ಎಂದು ತಿಳಿಸುತ್ತ ಮೋದಿ ನಮಾಮಿ ಗಂಗೆ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಗಾಗಿ -ಠಿ; 20 ಸಾವಿರ ಕೋಟಿ ವಿನಿಯೋಗಿಸುವ ನಿರ್ಧಾರ ಮಾಡಿದ್ದಲ್ಲದೆ, ಪ್ರಸಕ್ತ ನಿರ್ಧಾರದಿಂದ ಗಂಗೆಯ ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.

    ರೈಲ್ವೆಗೆ ಹೊಸರೂಪ: ರೈಲ್ವೆ ಮೊದಲ ಬಾರಿಗೆ ಸಾಂಸ್ಥಿಕ ಸ್ವರೂಪದಲ್ಲಿ ಸುಧಾರಣೆ ಮತ್ತು ಮೂಲಸೌಕರ್ಯ ಬದಲಾವಣೆಗೆ ಆದ್ಯತೆ ನೀಡಿದೆ. ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ, ಪ್ರಯಾಣಿಕರ ಸಹಾಯವಾಣಿ ಸಂಖ್ಯೆ (138), ರಕ್ಷಣಾ ಸಹಾಯವಾಣಿ (182), ಇ-ಕ್ಯಾಟರಿಂಗ್, ಮೊಬೈಲ್ ರಕ್ಷಣಾ ಆಪ್, ಮಹಿಳೆಯರ ರಕ್ಷಣೆಗೆ ಸಿಸಿಟಿವಿ ಕ್ಯಾಮೆರಾ ಮೊದಲಾದ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೈಲ್ವೆ ಭಾರತದ ಆರ್ಥಿಕಾಭಿವೃದ್ಧಿಯ ಲೋಕೋಮೋಟಿವ್ ಆಗಿ ಕೆಲಸ ಮಾಡುತ್ತಿದೆ. ಯಾವ ಅಂಕಿಸಂಖ್ಯೆಗಳೂ ಬೇಡ, ಜನಸಾಮಾನ್ಯರು ಈಗ್ಗೆ ಆರೇಳು ವರ್ಷದ ಹಿಂದಿನ ರೈಲ್ವೆ ನಿಲ್ದಾಣ, ರೈಲಿನ ಸ್ವಚ್ಛತೆ ಕುರಿತು ನೆನಪು ಮಾಡಿಕೊಂಡರೆ ಈಗಿನ ಅಭಿವೃದ್ಧಿಯ ಅರಿವಾಗುತ್ತದೆ.

    ರಸ್ತೆ ಸಾರಿಗೆ ಕ್ಷೇತ್ರದಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲಾಗುತ್ತಿದೆ. ಸುದೀರ್ಘ ಕಾಲದಿಂದ ವಿವಾದಕ್ಕೆ ಸಿಲುಕಿದ್ದ ಮಾರ್ಗಗಳ ಅಡ್ಡಿಗಳನ್ನು ಪರಿಹರಿಸಲಾಗಿದೆ. ‘ಭಾರತ್ ಮಾಲಾ’ ಎಂಬ ಬಹುದೊಡ್ಡ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಭಾರತದ ಗಡಿ ಮತ್ತು ಕರಾವಳಿ ಪ್ರದೇಶಗಳನ್ನು ಜೋಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.

    ಟೀಂ ಇಂಡಿಯಾ ಪರಿಕಲ್ಪನೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ರಚಿಸಲು ಒತ್ತು ನೀಡುತ್ತಿದ್ದಾರೆ. ಪರಂಪರಾಗತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ದೊಡ್ಡಣ್ಣನ ಸಂಬಂಧವಿತ್ತು. ಇಂತಹ ಸಂದರ್ಭಗಳಲ್ಲಿ ರಾಜ್ಯಗಳ ಸ್ಥಳೀಯ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ರಾಜ್ಯಗಳನ್ನು ಮತ್ತಷ್ಟು ಸಬಲೀಕರಿಸಲು ನೀತಿ ಆಯೋಗ ರಚಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಏಕಮುಖ ಸಂವಹನವನ್ನು ತಪ್ಪಿಸುವ ಸಲುವಾಗಿ ಹೊಸ ಆಲೋಚನೆಗಳನ್ನು ಜಾರಿಗೆ ತರಲಾಗುತ್ತಿದೆ. ಕೇಂದ್ರ-ರಾಜ್ಯಗಳ ಸಹಭಾಗಿತ್ವದೊಂದಿಗೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರಗಳಿಗೆ ಸ್ಪಷ್ಟವಾದ ಮಾರ್ಗದರ್ಶನ ನೀಡಲು, ನೀತಿಗಳನ್ನು ರೂಪಿಸಲು ನೀತಿ ಆಯೋಗ ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿ, ಆದ್ಯತೆಗಳನ್ನು ಜಾರಿಗೆ ತರಲು ರಾಜ್ಯಗಳು ಪಾಲ್ಗೊಳ್ಳುವಂತೆ ನೀತಿ ಆಯೋಗ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

    ಬ್ಯಾಂಕಿಂಗ್ ರಂಗಕ್ಕೆ ಬಲ: ಭಾರತದ ಬಹುಪಾಲು ಜನಸಂಖ್ಯೆ ಬ್ಯಾಂಕಿಂಗ್ ಸೌಲಭ್ಯಕ್ಕೆ ಒಳಪಟ್ಟಿಲ್ಲ ಎಂಬುದನ್ನು ಗಮನಿಸಿ, ಈ ಕೊರತೆ ನಿವಾರಿಸಲು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ (2014 ಆಗಸ್ಟ್​ನಲ್ಲಿ) ‘ಪ್ರಧಾನಮಂತ್ರಿ ಜನಧನ ಯೋಜನೆ’ಗೆ ನರೇಂದ್ರ ಮೋದಿ ಚಾಲನೆ ನೀಡಿದರು. ಕೆಲವೇ ತಿಂಗಳಲ್ಲಿ, ಈ ಯೋಜನೆ ದೇಶದ ಲಕ್ಷಾಂತರ ಬಡಜನರ ಜೀವನವನ್ನೇ ಬದಲಾಯಿಸಿತು. ಕೇವಲ ಒಂದೇ ವರ್ಷದ ಅವಧಿಯಲ್ಲಿ 19.72 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಈ ಖಾತೆಗಳಲ್ಲಿ 30 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ಜಮೆಯಾಯಿತು. ಯೋಜನೆ ಘೊಷಣೆಯಾದ ಒಂದೇ ವಾರದಲ್ಲಿ 1,80,96,130 ಖಾತೆಗಳನ್ನು ತೆರೆಯುವ ಮೂಲಕ ‘ಜನಧನ’ ಗಿನ್ನಿಸ್ ದಾಖಲೆ ಪುಸ್ತಕ ಸೇರಿತು.

    ಖಾತೆ ತೆರೆದ ಕೂಡಲೆ ಏನಾಯಿತು? ಎಂದು ಯಾರಾದರೂ ಕೇಳಬಹುದು. ಸರ್ಕಾರ ಕೇಂದ್ರದಿಂದ ಬಿಡುಗಡೆ ಮಾಡುವ ಹಣದಲ್ಲಿ ಅತ್ಯಂತ ಕಡಿಮೆ ಪ್ರಮಾಣ ಜನರನ್ನು ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದನ್ನು ದೇಶದ ಜನರು ಮರೆತಿಲ್ಲ. ಅಂದರೆ ಅಷ್ಟು ಹಣ ಮಧ್ಯವರ್ತಿಗಳ ಪಾಲಾಗುತ್ತಿತ್ತಲ್ಲವೇ? ಈ ಸತ್ಯ ಗೊತ್ತಿದ್ದೂ ಅದನ್ನು ಸರಿಪಡಿಸಲು ಏಕೆ ಮುಂದಾಗಲಿಲ್ಲ? ಜನಧನ ಖಾತೆ, ಆಧಾರ್ ಸಂಖ್ಯೆ ಯೋಜನೆಯ ಪರಿಣಾಮವಾಗಿ, ಸರ್ಕಾರದಿಂದ ಬಿಡುಗಡೆಯಾಗುವ ಪಿಂಚಣಿ, ವಿಧವಾ ವೇತನ, ಅಂಗವಿಕಲರ ವೇತನ ಶೇಕಡ 100ರಷ್ಟು ಪಾರದರ್ಶಕವಾಗಿ ಫಲಾನುಭವಿಗಳನ್ನು ತಲುಪುತ್ತಿದೆ. ಗ್ಯಾಸ್ ಸೇರಿದಂತೆ ಅನೇಕ ಸಬ್ಸಿಡಿಗಳು ಕಳ್ಳಕಾಕರ ಕೈಗಲ್ಲದೆ ಜನರ ಖಾತೆಗೆ ಜಮೆಯಾಗುತ್ತಿವೆ.

    ದೇಶದ ಜನರಿಗೆ ಆಹಾರದ ಹಕ್ಕನ್ನು ನೀಡಲಾಯಿತಾದರೂ, ಅವರು ಹೋದಲ್ಲೆಲ್ಲ ಪಡೆಯುವ ಹಕ್ಕು ನೀಡಲು ಹಿಂದಿನ ಸರ್ಕಾರಗಳು ಮರೆತವು. ಅಲೆಮಾರಿ, ಅಸಂಘಟಿತ ಹಾಗೂ ವಲಸೆ ಕಾರ್ವಿುಕರ ಕುರಿತು ದೊಡ್ಡ ದನಿಯಲ್ಲಿ ಮಾತನಾಡುವ ಪಕ್ಷಗಳು ಅಂದು ಈ ಬಗ್ಗೆ ಯೋಚಿಸಲಿಲ್ಲ. ದೇಶದ ಯಾವುದೇ ಮೂಲೆಯ ನ್ಯಾಯಬೆಲೆ ಅಂಗಡಿಗೆ ತೆರಳಿದರೂ ತನ್ನ ಹಕ್ಕಿನ ಧಾನ್ಯವನ್ನು ಪಡೆಯಲು ಅನುವಾಗುವಂತೆ ‘ಒಂದು ದೇಶ ಒಂದು ಪಡಿತರ ಯೋಜನೆ’ ಜಾರಿ ಮಾಡಿದ್ದು ಮೋದಿ ಸರ್ಕಾರ. ಇದರಿಂದ 81 ಕೋಟಿಗೂ ಅಧಿಕ ಜನರಿಗೆ ಅನುಕೂಲವಾಗಿದೆ.

    ವಿಶೇಷ ಸ್ಥಾನಮಾನ ರದ್ದು: ಜಮ್ಮು-ಕಾಶ್ಮೀರ ಎಂದ ಕೂಡಲೇ ಸಮಸ್ಯೆ, ಭಯೋತ್ಪಾದನೆ, ಹಿಂದೂಗಳ ಮಾರಣಹೋಮ ನೆನಪಾಗುತ್ತಿತ್ತು. ಸಂವಿಧಾನದ 370ನೇ ಪರಿಚ್ಛೇದವನ್ನು ಜಮ್ಮು-ಕಾಶ್ಮೀರದಿಂದ ತೆರವುಗೊಳಿಸುವುದು ಅಸಾಧ್ಯವಾದ ಮಾತು ಎಂದೇ ದೇಶದ ಮಹಾನ್ ಪಂಡಿತರು ನಂಬಿದ್ದರು. ಇದೊಂದು ‘ಶಾಶ್ವತ ವ್ಯವಸ್ಥೆ’ ಎಂದು ಕೆಲವರು ನಂಬಿದ್ದರೆ, ಈ ಕಾನೂನಿನ ಅನ್ವಯವನ್ನು ತೆರವುಗೊಳಿಸಿದರೆ ಇಡೀ ದೇಶವೇ ಹೊತ್ತಿ ಉರಿಯುತ್ತದೆ ಎಂಬ ಭ್ರಮೆಯನ್ನು ಸೃಷ್ಟಿಸಿದ್ದರು. ಬಿಜೆಪಿಯ ಘೊಷಿತ ಕಾರ್ಯಸೂಚಿಯಂತೆಯೇ ಈ ವಿಧಿಯನ್ನು ಜಮ್ಮು-ಕಾಶ್ಮೀರದಿಂದ ತೆರವುಗೊಳಿಸಲಾಯಿತು. ಗೃಹಸಚಿವ ಅಮಿತ್ ಷಾ ಅವರ ನಿರ್ಧಾರಕ ನಾಯಕತ್ವದಲ್ಲಿ, ದೇಶದ ಇತರೆಡೆ ಇರಲಿ, ಜಮ್ಮು-ಕಾಶ್ಮೀರದಲ್ಲೂ ಹಿಂಸಾಚಾರವಾಗದಂತೆ ಪ್ರಕ್ರಿಯೆಗಳು ನಡೆದುಹೋದವು. ‘ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಧ್ವಜ, ಇಬ್ಬರು ಮುಖ್ಯಸ್ಥರು ಇರುವಂತಿಲ್ಲ’ ಎನ್ನುತ್ತಲೇ ಪ್ರಾಣತ್ಯಾಗ ಮಾಡಿದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ನಿಜಕ್ಕೂ ಸದ್ಗತಿ ದೊರಕಿತು. ಇವುಗಳ ಜತೆಗೆ ಐತಿಹಾಸಿಕ ಜಿಎಸ್​ಟಿ ಕಾಯ್ದೆ ಜಾರಿ, ಅಸಂಘಟಿತ ವಲಯಕ್ಕೂ ನಿವೃತ್ತಿ ನಂತರ ಪಿಂಚಣಿ ನೀಡುವ ‘ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ’, ‘ಪ್ರಧಾನ ಮಂತ್ರಿ ಶ್ರಮಯೋಗಿ ಮಾನಧನ್ ಯೋಜನೆ’ಗಳು ನಿಜವಾದ ಜನಕಲ್ಯಾಣ ಉದ್ದೇಶ ಹೊತ್ತ ಕಾರ್ಯಗಳು.

    ಕರೊನಾ ಸಂಕಷ್ಟದ ನಿರ್ವಹಣೆ: ಕರೊನಾ ಸಮಯದಲ್ಲಿ ದೇಶದ ಜನರು, ಸದೃಢ ನಾಯಕತ್ವದ ಮಹತ್ವವನ್ನು ಅರಿತಿದ್ದಾರೆ. ಈ ಹಿಂದೆ ಮಹಾಮಾರಿಗಳು ಆವರಿಸಿದ ಸಂದರ್ಭದಲ್ಲಿ ಭಾರತ ಅತ್ಯಂತ ಕಡೆಯಲ್ಲಿ ಗಣನೆ ಆಗುತ್ತಿತ್ತು. ಅಭಿವೃದ್ಧಿ ಹೊಂದಿದ ದೇಶಗಳತ್ತ ಕೈಚಾಚಿ ಕೂರುತ್ತಿದ್ದ ನಿರ್ಲಕ್ಷಿತ ಭಾರತ ಈಗಿಲ್ಲ. ಹೌದು, ಕರೊನಾ ಎದುರಾದ ಸಂದರ್ಭದಲ್ಲಿ ದೇಶದಲ್ಲಿ ಒಂದೂ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ, ಮೇಡ್ ಇನ್ ಇಂಡಿಯಾ ವೆಂಟಿಲೇಟರ್​ಗಳು ಕಣ್ಣಿಗೇ ಕಾಣುತ್ತಿರಲಿಲ್ಲ, ಸಾಮಾನ್ಯ ಉತ್ಪನ್ನವಾದ ಸ್ಯಾನಿಟೈಸರ್ ಕೂಡ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಪ್ರಧಾನಿ ನೀಡಿದ ಕರೆಗೆ ಓಗೊಟ್ಟ ಕೈಗಾರಿಕೆಗಳು ಯಾವ ಮಟ್ಟಿಗೆ ಪಿಪಿಇ ಕಿಟ್ ಉತ್ಪಾದಿಸಿದವು ಎಂದರೆ ಕೇವಲ ಒಂದೇ ವರ್ಷದ ಅವಧಿಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಪಿಪಿಇ ಕಿಟ್ ತಯಾರಿಕಾ ದೇಶವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಅಭಿವೃದ್ಧಿ ಹೊಂದಿದ ದೇಶಗಳೂ ಮೂಗಿನ ಮೇಲೆ ಬೆರಳಿಡುವಂತೆ ಒಂದು ಸಂಪೂರ್ಣ ಸ್ವದೇಶಿ ಹಾಗೂ ಪಾಲುದಾರಿಕೆಯಲ್ಲಿ ಮತ್ತೊಂದು ಲಸಿಕೆ ಅಭಿವೃದ್ಧಿಪಡಿಸಲಾಗಿದೆ.

    ವಿಶ್ವದಲ್ಲೇ ಅತಿದೊಡ್ಡ ಲಸಿಕಾ ಕಾರ್ಯಕ್ರಮವನ್ನು ದೇಶ ಈಗ ನಡೆಸುತ್ತಿದೆ. ಬಹುಶಃ 2021ರ ಡಿಸೆಂಬರ್ ವೇಳೆಗೆ ದೇಶದ ಶೇಕಡ 60ರಷ್ಟು ನಾಗರಿಕರು ಲಸಿಕೆ ಪಡೆಯುವ ನಿರೀಕ್ಷೆಯಿದ್ದು, ಅದರಿಂದ ಸಾಮೂಹಿಕ ರೋಗನಿರೋಧಕತೆ ಮೂಡಿ ಕರೊನಾ ಕರಿನೆರಳಿನಿಂದ ಹೊರಬರುವ ಮುನ್ಸೂಚನೆ ಇದೆ. ಇಷ್ಟೆಲ್ಲ ಸಾಧ್ಯವಾಗಿದ್ದು ಸದೃಢ ನಾಯಕತ್ವದಿಂದ ಎಂಬುದನ್ನು ಭಾರತೀಯರು ಮರೆಯುವುದಿಲ್ಲ.

    (ಲೇಖಕರು ಬಿಎಂಟಿಸಿ ಉಪಾಧ್ಯಕ್ಷರು, ಬಿಜೆಪಿ ಮುಖಂಡರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts