More

    ಕುತಂತ್ರ ನಂಬದಿರಿ: ಅನ್ನದಾತರಿಗಾಗಿ ವಿಪಕ್ಷ ಏನನ್ನೂ ಮಾಡಿಲ್ಲ; ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

    ನವದೆಹಲಿ: ‘ಕೃಷಿ ಕಾಯ್ದೆಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳು ಮಾಡುತ್ತಿರುವ ರಾಜಕೀಯಕ್ಕೆ ರೈತರು ಬಲಿಯಾಗಬಾರದು. ಕೃಷಿ ಕಾಯ್ದೆಗಳ ಪೂರ್ವಾಪರ ಅರಿತು ಬೆಂಬಲ ಸೂಚಿಸಿ. ಇವು ರೈತ ಸಮು ದಾಯದ ಪರ ಇವೆ ಎಂದು ಕೋಟಿ ಬಾರಿ ಹೇಳಲೂ ನಾನು ಸಿದ್ಧ’- ಇದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನುಡಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ಶುಕ್ರವಾರ ರೈತ ರೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆ ಅಡಿ ಒಂಬತ್ತು ಕೋಟಿಗೂ ಹೆಚ್ಚು ರೈತರಿಗೆ 18,000 ಕೋಟಿ ರೂಪಾಯಿಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿತರಿಸಿದರು. ಆರು ರಾಜ್ಯಗಳ ರೈತರೊಂದಿಗೆ ವಿಡಿಯೊ ಕಾನ್ಪರೆನ್ಸ್ ಮೂಲಕ ಸಂವಾದವನ್ನೂ ನಡೆಸಿದರು.

    ವ್ಯಾಪಕ ವಿರೋಧಕ್ಕೆ ಕಾರಣವಾಗಿರುವ ಮೂರು ಹೊಸ ಕೃಷಿ ಕಾನೂನುಗಳನ್ನು ಪ್ರಬಲವಾಗಿ ಸಮರ್ಥಿಸಿಕೊಂಡ ಅವರು, ರೈತರ ಪರವಾಗಿ ದೊಡ್ಡ ದೊಡ್ಡ ಭಾಷಣ ಮಾಡುತ್ತಿರುವವರು ಅಧಿಕಾರದಲ್ಲಿದ್ದಾಗ ಕೃಷಿಕರಿಗಾಗಿ ಏನನ್ನೂ ಮಾಡಿಲ್ಲ. ಈಗ ಮೊಸಳೆ ಕಣ್ಣೀರು ಸುರಿಸುತ್ತ ರೈತರ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು. ರೈತರ ಜಮೀನನ್ನು ಕಾರ್ಪೆರೇಟ್ ಸಂಸ್ಥೆಗಳು ಕಬಳಿಸುತ್ತವೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ರೈತರ ಜತೆಗೆ ಯಾವುದೇ ವಿಷಯದಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ‘ರೈತ ದಿನಾಚರಣೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೇಂದ್ರ ಸಚಿವರಾದ ಅಮಿತ್ ಷಾ, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್ ಮತ್ತು ಸ್ಮೃತಿ ಇರಾನಿ ವಿವಿಧ ಭಾಗಗಳಿಂದ ವಿಡಿಯೊ ಕಾನ್ಪರೆನ್ಸ್ ಮೂಲಕ ಹಾಜರಾಗಿದ್ದರು.

    ಅಟಲ್ ಪುತ್ಥಳಿ ಅನಾವರಣ

    ಕುತಂತ್ರ ನಂಬದಿರಿ: ಅನ್ನದಾತರಿಗಾಗಿ ವಿಪಕ್ಷ ಏನನ್ನೂ ಮಾಡಿಲ್ಲ; ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

    ವಿಜಯಪುರದ ಕಿರಣಾ ಬಜಾರ್​ನಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 6.5 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಶುಕ್ರವಾರ ಅನಾವರಣ ಗೊಳಿಸಿದರು. 4 ಕ್ವಿಂಟಾಲ್ ತೂಕದ ಪುತ್ಥಳಿಗೆ ತಗುಲಿರುವ ವೆಚ್ಚ 9 ಲಕ್ಷ ರೂಪಾಯಿ.

    ದೇಶದಲ್ಲಿ ಶೇಕಡ 80ರಷ್ಟಿರುವ ರೈತರು ಹಿಂದಿನ ಸರ್ಕಾರಗಳ ನೀತಿಗಳಿಂದಾಗಿ ಬಡವರಾಗುತ್ತಲೇ ಹೋಗುತ್ತಿದ್ದಾರೆ. ಹೀಗಾಗಿ ಅವರ ಕಲ್ಯಾಣ ಸಾಧಿಸಲು ಕೃಷಿ ಕ್ಷೇತ್ರದ ಸುಧಾರಣೆ ಅತ್ಯಗತ್ಯವಾಗಿದೆ.

    | ನರೇಂದ್ರ ಮೋದಿ ಪ್ರಧಾನಿ

    ಎಲ್ಲಕ್ಕೂ ಒಂದೇ ಉತ್ತರ-ಹೌದು!

    ಕನಿಷ್ಠ ಬೆಂಬಲ ಬೆಲೆಗೆ ರೈತರು ಫಸಲನ್ನು ಮಾರಲು ಸಾಧ್ಯವೇ? ಮಾರುಕಟ್ಟೆಯಲ್ಲಿ ಬೆಳೆ ಮಾರಾಟಃ ಆಗುತ್ತದೆಯೇ? ನಿಮ್ಮ ಫಸಲನ್ನು ರಫ್ತು ಮಾಡಬಹುದೇ? ವ್ಯಾಪಾರಿಗೆ ನಿಮ್ಮ ಸರಕನ್ನು ಖರೀದಿಸುವರೆ? ಎಂಬ ಪ್ರಶ್ನೆಗಳನ್ನು ರೈತರಿಗೆ ಕೇಳಿದ ಮೋದಿ, ಇವೆಲ್ಲದಕ್ಕೂ ಹೌದು ಎಂಬುದೇ ಉತ್ತರ ಎಂದು ಹೇಳಿದರು. ಕೃಷಿ ಕ್ಷೇತ್ರದಲ್ಲಿ ತರಲಾಗುತ್ತಿರುವ ಸುಧಾರಣೆಗಳಿಂದ ಇದೆಲ್ಲ ಸಾಧ್ಯ ಎಂದು ನುಡಿದರು. ರೈತ ಉತ್ಪಾದನೆ ಸಂಸ್ಥೆ (ಎಫ್​ಪಿಒ) ಮೂಲಕ ಉತ್ಪನ್ನವನ್ನು ಬೇರೆ ರಾಜ್ಯಗಳಲ್ಲೂ ಬೆಳೆ ಮಾರಾಟ ಮಾಡಲು ಸಾಧ್ಯ. ಬೆಳೆಯ ಮೌಲ್ಯವರ್ಧಿಸಿ ಬಿಸ್ಕತ್, ಚಿಪ್ಸ್, ಜಾಮ್ ಮತ್ತಿತರ ಉತ್ಪನ್ನಗಳ ಜಾಲದ ಭಾಗವಾಗಲು ರೈತರು ಬಯಸಿದರೆ ಅದೂ ಸಾಧ್ಯ ಎಂದು ಪ್ರಧಾನಿ ಹೇಳಿದರು.

    ರೈತರಿಗೆ ದೀದಿಯಿಂದಲೇ ಅನ್ಯಾಯ: ಮಮತಾ ಬ್ಯಾನರ್ಜಿ ಸರ್ಕಾರ ಪಶ್ಚಿಮ ಬಂಗಾಳದ ರೈತರಿಗೆ ಲಾಭವನ್ನು ತಡೆ ಹಿಡಿಯುವ ಮೂಲಕ ಕೊಳಕು ರಾಜಕೀಯ ಮಾಡುತ್ತಿದೆ. ಪಶ್ಚಿಮ ಬಂಗಾಳದ 70 ಲಕ್ಷಕ್ಕೂ ಅಧಿಕ ಅನ್ನದಾತರು ಕೇಂದ್ರದ ನೇರ ನಗದು ವರ್ಗಾವಣೆ ಯೋಜನೆಯ ಅನುಕೂಲ ಪಡೆಯಲು ಅಲ್ಲಿನ ಸರ್ಕಾರವೇ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಮೋದಿ ಹೇಳಿದರು.

    ನೋವು-ನಲಿವು ಹಂಚಿಕೊಂಡ ರೈತರು

    ಆರು ರಾಜ್ಯಗಳ ರೈತರು ಪ್ರಧಾನಿ ಜೊತೆ ನಡೆಸಿದ ಆನ್​ಲೈನ್ ಸಂವಾದದ ವೇಳೆ ಅಹವಾಲುಗಳನ್ನು ಹೇಳಿಕೊಂಡರು. ಕೇಂದ್ರದ ಯೋಜನೆಗಳಿಂದ ಆದ ಪ್ರಯೋಜನದ ಬಗ್ಗೆ ಸಂತಸವನ್ನೂ ಹಂಚಿಕೊಂಡರು. ಕಳೆದ ವರ್ಷ ಸೋಯಾಬೀನ್ ಮತ್ತು ತೊಗರಿ ಬೆಳೆಗಳಿಗೆ ಅಪಾರ ಹಾನಿಯಾಗಿ ತುಂಬಾ ನಷ್ಟವಾಗಿತ್ತು. ಆದರೆ, ಪಿಎಂ ಫಸಲ್ ಬಿಮಾ ಯೋಜನೆಯಿಂದಾಗಿ ಪರಿಹಾರ ಸಿಕ್ಕಿ ಬದುಕುಳಿಯಲು ಸಾಧ್ಯವಾಯಿತು ಎಂದು ಮಹಾರಾಷ್ಟ್ರದ ಲಾತೂರ್​ನ ರೈತರು ವಿವರಿಸಿದರು. ಒಡಿಶಾದ ನವಪಾದ, ಹರಿಯಾಣದ ಫತೇಬಾದ್, ಮಧ್ಯಪ್ರದೇಶದ ಧಾರ್, ತಮಿಳುನಾಡಿನ ಕೃಷ್ಣಗಿರಿ, ಉತ್ತರ ಪ್ರದೇಶದ ಮಹಾರಾಜಗಂಜ್​ನ ರೈತರು ಸಂವಾದದಲ್ಲಿ ಭಾಗಿಯಾಗಿದ್ದರು.

    ಮೋದಿ ಭಾಷಣದ ಮುಖ್ಯಾಂಶ

    • ಪ್ರತಿಪಕ್ಷಗಳು ಎಪಿಎಂಸಿ ಬಗ್ಗೆ ಮಾತನಾಡುತ್ತಿವೆ. ಆದರೆ ಕೇರಳದಲ್ಲಿ ಎಪಿಎಂಸಿಗಳೇ ಅಸ್ತಿತ್ವದಲ್ಲಿಲ್ಲ. 70ವರ್ಷ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಅಧಿಕಾರದಲ್ಲಿತ್ತು. ಅಲ್ಲಿ ಯಾಕೆ ಎಪಿಎಂಸಿಯನ್ನು ಅನುಷ್ಠಾನಗೊಳಿಸಿರಲಿಲ್ಲ?
    • ಹಳ್ಳಿಗಳಲ್ಲಿರುವ ರೈತರ ಜೀವನ ಸುಗಮಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡಲು ನಾವು ಪ್ರಯತ್ನಿಸಿದ್ದೇವೆ.
    • ಎಂ.ಎಸ್. ಸ್ವಾಮಿನಾಥನ್ ಸಮಿತಿಯ ವರದಿಯನ್ನು ನಮ್ಮ ಸರ್ಕಾರ ಅನುಷ್ಠಾನಗೊಳಿಸಿದೆ. ಕನಿಷ್ಠ ಬೆಂಬಲ ಬೆಲೆಯ (ಎಂಎಸ್​ಪಿ) ವ್ಯಾಪ್ತಿಯನ್ನು ವಿಸ್ತರಿಸಿದ್ದೇವೆ. ಇದನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ.
    • ಬೇಸಾಯದ ವೆಚ್ಚ ಕಡಿಮೆ ಮಾಡಿ ರೈತರ ಆದಾಯ ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಮಣ್ಣು ಆರೋಗ್ಯ ಕಾರ್ಡ್, ಬೇವುಲೇಪಿತ ಯೂರಿಯಾ, ಮಿಲಿಯಾಂತರ ಸೌರ ಪಂಪ್​ಗಳು ಮೊದಲಾದವನ್ನು ಜಾರಿಗೊಳಿಸಲಾಗಿದೆ.
    • ಪ್ರಧಾನಮಂತ್ರಿ ಕೃಷಿ ವಿಮೆ ಯೋಜನೆಯಿಂದ ಕೋಟ್ಯಂತರ ಅನ್ನದಾತರಿಗೆ ಅನುಕೂಲವಾಗುತ್ತಿದೆ.

    1.10 ಲಕ್ಷ ಕೋಟಿ ರೂಪಾಯಿ ಪಾವತಿ: ಪಿಎಂ-ಕಿಸಾನ್​ಯೊಜನೆ ಆರಂಭವಾದಾಗಿನಿಂದ ಇದುವರೆಗೆ 1,10,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ರೈತರಿಗೆ ಪಾವತಿಸಲಾಗಿದೆ. ಅರ್ಹ ರೈತ ಕುಟುಂಬಗಳಿಗೆ ಪ್ರತಿ ವರ್ಷ 6,000 ರೂಪಾಯಿಯನ್ನು ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗುತ್ತದೆ.

    ವಾಜಪೇಯಿಗೆ ಗಣ್ಯರ ನಮನ

    ಕುತಂತ್ರ ನಂಬದಿರಿ: ಅನ್ನದಾತರಿಗಾಗಿ ವಿಪಕ್ಷ ಏನನ್ನೂ ಮಾಡಿಲ್ಲ; ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ
    ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ದಿನದ ನಿಮಿತ್ತ ‘ಸಂಸತ್ತಿನಲ್ಲಿ ಅಟಲ್ ಬಿಹಾರಿ ವಾಜಪೇಯಿ: ಒಂದು ಸ್ಮರಣೆ’ ಕೃತಿಯನ್ನು ಸಂಸತ್ತಿನ ಸೆಂಟ್ರಲ್ ಹಾಲ್​ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಲೋಕಸಭೆ ಕಾರ್ಯಾಲಯ ಪ್ರಕಟಿಸಿರುವ ಈ ಪುಸ್ತಕದಲ್ಲಿ ವಾಜಪೇಯಿ ಸಂಸತ್ತಿನಲ್ಲಿ ಮಾಡಿರುವ ಕೆಲವು ಪ್ರಮುಖ ಭಾಷಣಗಳೂ ಇವೆ. ವಾಜಪೇಯಿ ಜನ್ಮದಿನವನ್ನು ‘ಉತ್ತಮ ಆಡಳಿತದ ದಿನ’ವನ್ನಾಗಿಯೂ ಆಚರಿಸಲಾಗಿದೆ.

    ‘ಸದೈವ ಅಟಲ್’ ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಭೇಟಿ ನೀಡಿದ್ದರು ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ. ವಾಜಪೇಯಿಯವರ ದೂರದರ್ಶಿ ನಾಯಕತ್ವದಿಂದ ದೇಶ ಅಭೂತಪೂರ್ವ ಬೆಳವಣಿಗೆ ಸಾಧಿಸಿತು ಎಂದು ಮೋದಿ ಟ್ವೀಟ್​ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಸಂಪುಟದ ಸದಸ್ಯರು, ವಿರೋಧ ಪಕ್ಷಗಳ ನಾಯಕರು ಸೇರಿ ಹಲವು ಗಣ್ಯರು ವಾಜಪೇಯಿಗೆ ನಮಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts