More

    ಕಳ್ಳರ ಖಾತೆಗೆ ರೈತರ ಹಣ; ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 52 ಕೋಟಿ ರೂ. ಲೂಟಿ

    ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಸಣ್ಣ ಹಾಗೂ ಅತಿಸಣ್ಣ ರೈತರ ಆದಾಯ ಹೆಚ್ಚಿಸುವ ಜತೆಗೆ ಕೃಷಿ ಕಾರ್ಯಕ್ಕೆ ನೆರವಾಗಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪಿಎಂ ಕಿಸಾನ್ ಸಮ್ಮಾನ್’ ಯೋಜನೆಯ ಕೋಟ್ಯಂತರ ರೂಪಾಯಿ ಈಗ ಸೈಬರ್ ಕಳ್ಳರ ಪಾಲಾಗುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಚಿತ್ರದುರ್ಗದ ರೈತರ ಹೆಸರಿನಲ್ಲಿ ನಕಲಿ ದಾಖಲೆ ನೀಡಿ, ಸುಮಾರು 52 ಕೋಟಿ ರೂ.ಗಳನ್ನು ಅಕ್ರಮವಾಗಿ ಪಡೆದಿರುವುದು ಸರ್ಕಾರದ ಆಂತರಿಕ ತನಿಖೆ ವೇಳೆ ಬಯಲಾಗಿದೆ. ಕಿಸಾನ್ ಸಮ್ಮಾನ್ ಪೋರ್ಟಲ್ ಮೂಲಕ 1.35 ಲಕ್ಷ ಖಾತೆ ತೆರೆದಿರುವ ವಂಚಕರು, ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿನ ಬ್ಯಾಂಕ್ ಖಾತೆಗಳ ಮೂಲಕ ಹಣ ಡ್ರಾ ಮಾಡಿದ್ದಾರೆ.

    ಕೇಂದ್ರ ಸರ್ಕಾರದಿಂದ ರೈತನ ಬ್ಯಾಂಕ್ ಖಾತೆಗೆ ಪ್ರತಿ ವರ್ಷ ನೇರವಾಗಿ 6 ಸಾವಿರ ರೂ. ಹಾಗೂ ರಾಜ್ಯ ಸರ್ಕಾರದ 4 ಸಾವಿರ ರೂ. ಸೇರಿ 10 ಸಾವಿರ ರೂ. ಜಮೆ ಮಾಡಲಾಗುತ್ತದೆ. ಇದರ ಮೇಲೆ ಕಣ್ಣಿಟ್ಟಿರುವ ಸೈಬರ್ ಖದೀಮರು ಕರ್ನಾಟಕದ ರೈತರ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಕೋಟ್ಯಂತರ ರೂ. ಲಪಟಾಯಿಸಿರುವ ವಿಚಾರ ಕೇಂದ್ರ ಕೃಷಿ ಮಂತ್ರಾಲಯದ ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿಗಳನ್ನು ಪತ್ತೆ ಮಾಡುವಂತೆ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಕೇಂದ್ರ ಕೃಷಿ ಮಂತ್ರಾಲಯದ ಪ್ರಾದೇಶಿಕ ಕಚೇರಿ ಆಯುಕ್ತ ಎಸ್.ಎಂ. ದೀಪಜ ಅವರು ಕೇಂದ್ರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು, ಸೈಬರ್ ಕ್ರೖೆಂ ತಜ್ಞರ ನೆರವು ಪಡೆಯುವ ಮುಖಾಂತರ ಖದೀಮರ ಬೇಟೆ ಆರಂಭಿಸಿದ್ದಾರೆ.

    ವಂಚನೆ ಹೇಗೆ?

    ಸದ್ಯ ಚಿತ್ರದುರ್ಗ ಜಿಲ್ಲೆಯಲ್ಲಿನ ಅಕ್ರಮ ಬೆಳಕಿಗೆ ಬಂದಿದೆ. 2020ರ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ 1,60,530 ರೈತರು ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 1,35,912 ಆನ್​ಲೈನ್​ನಲ್ಲಿಯೇ ನೋಂದಣಿ ಆಗಿದೆ. ಅದರಲ್ಲಿ 87,212 ರೈತರಿಗೆ ಅನುದಾನ ತಲುಪಿದೆ. ಫಲಾನುಭವಿಗಳು ಚಿತ್ರದುರ್ಗದ ಭೂ ವಿವರವನ್ನು ಅಪ್​ಲೋಡ್ ಮಾಡಿದ್ದಾರೆ. ಆಧಾರ್ ನಂಬರ್, ರೈತರ ವಿಳಾಸ ಬೇರೆ ರಾಜ್ಯದ್ದಾಗಿದೆ. ಪಿಎಂ ಕಿಸಾನ್ ಸಮ್ಮಾನ್​ನ ಪೋರ್ಟಲ್​ನಿಂದ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ಜಾಡು ಬೆನ್ನತ್ತಿದ್ದಾಗ ಪಶ್ಚಿಮ ಬಂಗಾಳದ ಉತ್ತರ ದಿನಾಜ್​ಪುರ ಜಿಲ್ಲೆ, ಬಿಹಾರದ ಪುರಿನಾ ಜಿಲ್ಲೆಗಳ ಬ್ಯಾಂಕ್​ಗಳ ವಿಳಾಸ ಪತ್ತೆಯಾಗಿದೆ. ಬಹುತೇಕ ಬ್ಯಾಂಕ್ ಖಾತೆ ಐಎಫ್​ಎಸ್​ಸಿ ಸಂಖ್ಯೆ ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಕ್ಕೆ ಸೇರಿದ್ದು, ಕೆಲ ಬ್ಯಾಂಕ್ ಶಾಖೆಗಳು ಮಾತ್ರ ಕರ್ನಾಟಕದಲ್ಲಿವೆ.

    ಪಹಣಿ ಕದ್ದು ಕೃತ್ಯ

    ಆನ್​ಲೈನ್​ನಲ್ಲಿ ಸಿಗುವ ರೈತರ ಪಹಣಿ ವಿವರವನ್ನು ಸೈಬರ್ ಕಳ್ಳರು ಎಗರಿಸಿದ್ದಾರೆ. ಅದನ್ನೇ ಪಿಎಂ ಕಿಸಾನ್ ಸಮ್ಮಾನ್ ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ನಕಲಿ ಆಧಾರ್ ಮತ್ತು ವಿಳಾಸದ ದಾಖಲೆ ಸೃಷ್ಟಿಸಿಕೊಂಡು ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಬ್ಯಾಂಕ್ ಖಾತೆ ತೆರೆದು, ಆ ವಿವರಗಳನ್ನು ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಿ ಅರ್ಜಿ ಪೂರ್ಣಗೊಳಿಸಿ ಹಣ ಪಡೆದಿದ್ದಾರೆ.

    52.32 ಕೋಟಿ ಅಕ್ರಮ!

    ಚಿತ್ರದುರ್ಗ ಜಿಲ್ಲೆ ರೈತರ ಹೆಸರಿನಲ್ಲಿ ಆನ್​ಲೈನ್​ನಲ್ಲಿ ನೋಂದಣಿ ಮಾಡಿರುವ 1,35,912 ಅರ್ಜಿಗಳ ಪೈಕಿ 87,212 ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ. ಬಹುತೇಕ ಖಾತೆಗಳು ನಕಲಿ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಪ್ರಕಾರ, 87,212 ಮಂದಿಗೆ ಒಂದು ಕಂತಿಗೆ 17.44 ಕೋಟಿ ರೂ.ನಂತೆ ಒಟ್ಟು 3 ಕಂತಿನಲ್ಲಿ ಹಣ ಪಡೆದಿದ್ದಾರೆ. ಅಂದಾಜು 52.32 ಕೋಟಿ ರೂ. ವಂಚನೆ ಆಗಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ, ದೇಶದಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸಲ್ಲಿಸಿ 1364 ಕೋಟಿ ರೂ. ಅನುದಾನ ಪಡೆದಿದ್ದಾರೆ ಎಂದು ತಿಳಿಸಿತ್ತು.

    ಪಿಎಂ ಕಿಸಾನ್ ಸಮ್ಮಾನ್

    ದೇಶದಲ್ಲಿ 11.17 ಕೋಟಿ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಮಾಡಿದ್ದಾರೆ. ಈ ಪೈಕಿ 9.5 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2020ರ ಡಿಸೆಂಬರ್​ನಲ್ಲಿ 18 ಸಾವಿರ ಕೋಟಿ ರೂ. ಜಮೆಯಾಗಿದೆ. ಕರ್ನಾಟಕದಲ್ಲಿ 58 ಲಕ್ಷ ರೈತರು ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ. ಉಳಿದ ರೈತರ ಆಧಾರ್, ಬ್ಯಾಂಕ್ ಖಾತೆ ವಿವರ, ಹೆಸರು ಇನ್ನಿತರ ತಾಂತ್ರಿಕ ಸಮಸ್ಯೆಯಿಂದ ಅನುದಾನದಿಂದ ವಂಚಿತರಾಗಿದ್ದಾರೆ.

    ಅರ್ಜಿ ಸಲ್ಲಿಕೆ ಹೇಗೆ?

    ರೈತರು, ತನ್ನ ಹೆಸರಿನಲ್ಲಿರುವ ಭೂಮಿಯ ಪಹಣಿ, ಆಧಾರ್ ಕಾರ್ಡ್, ಜನ್​ಧನ್ ಬ್ಯಾಂಕ್ ಖಾತೆ ವಿವರವನ್ನು ಅಟಲ್ ಕಚೇರಿ ಅಥವಾ ನೆಮ್ಮದಿ ಕೇಂದ್ರದಲ್ಲಿ ಸಲ್ಲಿಸಿ ರೈತನೆಂದು ಘೋಷಣೆ ಮಾಡುವ ಮೂಲಕ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಪೋರ್ಟಲ್​ನಲ್ಲಿ ರೈತರೇ ಆನ್​ಲೈನ್​ನಲ್ಲಿ ದಾಖಲೆ ಅಪ್​ಲೋಡ್ ಮಾಡಿ ನೋಂದಣಿ ಮಾಡಿಕೊಳ್ಳುವ ಅವಕಾಶವೂ ಇದೆ. ಆನ್​ಲೈನ್ ಸೇವೆಯನ್ನೇ ದುರುಪಯೋಗಪಡಿಸಿಕೊಂಡಿರುವ ಸೈಬರ್ ಕಳ್ಳರು, ಅಜ್ಞಾತ ಸ್ಥಳದಲ್ಲಿ ಕುಳಿತು ರಾಜ್ಯದ ರೈತರ ಹೆಸರಿನಲ್ಲಿ ನೋಂದಣಿ ಮಾಡಿ ಕೋಟ್ಯಂತರ ರೂ. ಅನುದಾನ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts