More

    ಪ್ರಧಾನಿ ಮೋದಿ ನೇತೃತ್ವದಲ್ಲಿ ಮಧ್ಯರಾತ್ರಿ ಬಿಜೆಪಿ ಸಭೆ: ಕಾಂಗ್ರೆಸ್​​ ಮೇಲೆ ಒತ್ತಡ ಹೇರಲು ಹಳೇ ತಂತ್ರದ ಮೊರೆ

    ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇದ್ದು, ಆಡಳಿತರೂಢ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಪಕ್ಷದ ಪ್ರಮುಖ ನಾಯಕರು ಗುರುವಾರ ಮಧ್ಯರಾತ್ರಿ ಸಭೆ ನಡೆಸಿ, ಮೊದಲ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

    ಲೋಸಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಇನ್ನೂ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಮುಳುಗಿರುವ ವಿಪಕ್ಷ ಮೈತ್ರಿಕೂಟ ಇಂಡಿಯಾ ಮೇಲೆ ಒತ್ತಡ ಹಾಕಲು ಬಿಜೆಪಿ ಈ ನಡೆ ಅನುಸರಿಸಲಿದೆ ಎಂದು ಮೂಲಗಳು ತಿಳಿಸಿವೆ.

    ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಷಾ, ಪಕ್ಷದ ಅಧ್ಯಕ ಜೆಪಿ ನಡ್ಡಾ ಮತ್ತು ರಾಜನಾಥ್​ ಸಿಂಗ್​ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿ, ಕೇಂದ್ರ ಚುನಾವಣಾ ಸಮಿತಿಯ 550ಕ್ಕೂ ಹೆಚ್ಚಿನ ಸದಸ್ಯರು ರಚಿಸಿದ ಪಟ್ಟಿಗಳ ಮೇಲೆ ಗಮನ ಹರಿಸಿದೆ ಎಂದು ಹೇಳಲಾಗಿದೆ. ಅಮಿತ್ ಷಾ ಮತ್ತು ನಡ್ಡಾ ಜತೆ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿದರೆ, ಕೇಂದ್ರ ಚುನಾವಣಾ ಸಮಿತಿಯ ಇತರ ಸದಸ್ಯರು ಬಿಜೆಪಿ ಕಚೇರಿಯಲ್ಲಿ ನಿರೀಕ್ಷಿತ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿದರು.

    ಹಿರಿಯ ನಾಯಕರಾದ ದೇವೇಂದ್ರ ಫಡ್ನಾವಿಸ್, ಪ್ರಕಾಶ್ ಜಾವಡೇಕರ್, ಮನ್ಸುಖ್ ಭಾಯಿ ಮಾಂಡವಿಯಾ, ಪುಷ್ಕರ್ ಧಾಮಿ, ಪ್ರಮೋದ್ ಸಾವಂತ್, ಭೂಪೇಂದ್ರ ಯಾದವ್, ಜ್ಯೋತಿರಾದಿತ್ಯ ಸಿಂಧಿಯಾ, ಕೇಶವ್ ಮೌರ್ಯ, ಯೋಗಿ ಆದಿತ್ಯನಾಥ್ ಮತ್ತು ಇತರರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಧ್ಯರಾತ್ರಿ ನಡೆದ ಸಭೆಯಲ್ಲಿ ಭಾಗವಹಿಸಿದರು. ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ, ಕೇರಳ, ತೆಲಂಗಾಣ, ರಾಜಸ್ಥಾನ, ಗೋವಾ, ಗುಜರಾತ್ ಮತ್ತು ಇತರ ರಾಜ್ಯಗಳ ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಆಯ್ಕೆ ಮಾಡುವುದರ ಮೇಲೆ ಈ ಸಭೆ ಗಮನ ಹರಿಸಿದೆ ಎಂದು ಮೂಲಗಳು ತಿಳಿಸಿವೆ.

    ಪ್ರತಿ ಕ್ಷೇತ್ರಕ್ಕೆ ಅಗ್ರ ಮೂರು ಅಭ್ಯರ್ಥಿಗಳನ್ನು ಹೆಸರಿಸುವ ಕಿರುಪಟ್ಟಿಗಳನ್ನು ರಚಿಸಲಾಗಿದೆ ಮತ್ತು ಮಾರ್ಚ್ 10ಕ್ಕಿಂತ ಮುಂಚಿತವಾಗಿಯೇ ಲೋಕಸಭೆಯ ಶೇಕಡಾ 50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲು ಬಿಜೆಪಿ ಆಶಿಸುತ್ತಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ದಿನಾಂಕ ಘೋಷಣೆಯಾಗುವ ವಾರಗಳ ಮೊದಲು ಬಿಜೆಪಿ 164 ಅಭ್ಯರ್ಥಿಗಳನ್ನು ಘೋಷಿಸಿತ್ತು. ಇದು ಬಿಜೆಪಿಯ ಗೇಮ್ ಪ್ಲಾನ್ ಸಹ ಆಗಿತ್ತು. ಈ ಬಾರಿಯು ಇದೇ ಪ್ಲಾನ್​ ಮುಂದುವರಿಲಿದೆ ಎಂದು ಹೇಳಲಾಗಿದೆ.

    ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲು ಕಾಂಗ್ರೆಸ್ ಆಶಿಸುತ್ತಿದೆ. ಇಂದು ಸಂಜೆ ಮುಂಬೈನಲ್ಲಿ ಮಹಾ ವಿಕಾಸ್ ಅಘಾಡಿ ನಾಯಕರು ಭೇಟಿಯಾಗುವ ನಿರೀಕ್ಷೆಯಿದೆ. ಬಿಜೆಪಿಯ ಮೊದಲ ಹಂತದ ತಂತ್ರವು ಕಾಂಗ್ರೆಸ್ ಮೇಲೆ ಮಾನಸಿಕ ಒತ್ತಡ ಉಂಟುಮಾಡುವುದಾಗಿದೆ. ಮುಂಚಿತವಾಗಿ ಪಟ್ಟಿ ಬಿಡುಗಡೆ ಮಾಡಿದರೆ, ಮತದಾರರ ಮುಂದೆ ಕಾಂಗ್ರೆಸ್​ನ ಅಸಮರ್ಥತೆಯನ್ನು ಬಿಂಬಿಸುತ್ತದೆ ಎಂದು ಬಿಜೆಪಿ ನಿರೀಕ್ಷೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಮಕ್ಕಳಿಗೆ ಮೊಬೈಲ್ ಗೀಳು ಅಂಟಿದೆಯೇ? ಹಾಗಿದ್ದರೆ ಚೆಸ್ ಕಲಿಸಿ

    ಈ ಸಿನಿಮಾದಲ್ಲಿ ನಟಿಸಿದ್ದೇ ನಾನು ಮಾಡಿದ ದೊಡ್ಡ ತಪ್ಪು! ನಟಿ ಕಿರಣ್​ ರಾಥೋಡ್ ಪಶ್ಚಾತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts