More

    ಮಕ್ಕಳಿಗೆ ಮೊಬೈಲ್ ಗೀಳು ಅಂಟಿದೆಯೇ? ಹಾಗಿದ್ದರೆ ಚೆಸ್ ಕಲಿಸಿ

    ಮಕ್ಕಳು ಕೀರ್ತಿವಂತರಾದರೆ, ಅಪ್ಪ-ಅಮ್ಮನಿಗಾಗುವ ಸಂತೋಷಕ್ಕೆ ಸರಿಸಾಟಿ ಯಾವುದೂ ಇಲ್ಲ. ಗೌರವದ ಬದುಕಿಗಾಗಿ ಜೀವನಪೂರ್ತಿ ಹೋರಾಟವನ್ನೇ ನಡೆಸಿದ ರಮೇಶ್ ಬಾಬು-ನಾಗಲಕ್ಷ್ಮೀ ದಂಪತಿ ಪಾಲಿಗೆ ವೈಶಾಲಿ-ಪ್ರಜ್ಞಾನಂದ ಚೆಸ್ ಸಾಧನೆ ಧನ್ಯತೆ ಮೂಡಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.

    Savyasachiಹುಡುಗಿ ತುಂಬ ಸೈಲೆಂಟ್. ಬೇರೆ ಮಕ್ಕಳಂತೆ ತಂಟೆ-ತರಲೆ, ಆಟದ ಮೇಲೆ ಗಮನ… ಯಾವುದೂ ಇಲ್ಲ. ಅಕ್ಕಪಕ್ಕದ ಮನೆ ಮಕ್ಕಳೆಲ್ಲ ಆಟವಾಡಿಕೊಂಡು ದಿನವಿಡೀ ಬೀದಿಯಲ್ಲಿದ್ದರೆ, ಈ ಹುಡುಗಿ ಯಾವಾಗಲೂ ಟಿವಿಯ ಮುಂದೆ. ಕಾರ್ಟೂನ್​ಗಳೆಂದರೆ ಆಕೆಗೆ ಪಂಚಪ್ರಾಣ. ಚಿಕ್ಕವಳಲ್ವಾ.. ನೋಡಿಕೊಳ್ಳಲಿ ಎಂದು ಕೆಲವು ದಿನ ಅಪ್ಪ-ಅಮ್ಮ ಸುಮ್ಮನಿದ್ದರು. ಆದರೆ, ಕಾರ್ಟೂನ್​ಗಳನ್ನು ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎಂಬಷ್ಟು ಟಿವಿಯಲ್ಲೇ ಮುಳುಗಿದಾಗ ಯೋಚನೆ ಶುರುವಾಗಿತ್ತು. ಇಷ್ಟು ಸಣ್ಣ ವಯಸ್ಸಲ್ಲೇ ಟಿವಿ ಹುಚ್ಚು ಹಿಡಿಸಿಕೊಂಡರೆ ಕಣ್ಣಿನ ಗತಿಯೇನು? ತಲೆ ಕೆಡುವುದಿಲ್ಲವೇ ಎಂದು ಅಪ್ಪ-ಅಮ್ಮನಿಗೆ ಆತಂಕ. ಹೇಗಾದರೂ, ಕಾರ್ಟೂನ್ ನೋಡುವ ಗೀಳು ತಪ್ಪಿಸಬೇಕು… ಹೇಗೆ.. ಹೇಗೆ.. ಎಂದು ಯೋಚಿಸುತ್ತಿರುವಾಗ ಚೆನ್ನೈನ ಹೆಚ್ಚಿನ ಪಾಲಕರಂತೆ ಇವರಿಗೂ ಪರಿಹಾರವಾಗಿ ಕಂಡಿದ್ದು ಚದುರಂಗ. ಹೌದು, ಚೆಸ್ ಕಲಿತರೆ ಏನಾದರೂ ಬದಲಾವಣೆ ಕಾಣಬಹುದು, ಮಿದುಳು ಚುರುಕಾದೀತು, ಏಕಾಗ್ರತೆ ಬರಬಹುದು. ಯಾವುದಕ್ಕೂ ಟ್ರೖೆ ಮಾಡೋಣ ಎಂದು ಚೆಸ್ ಕ್ಲಾಸ್​ಗೆ ಸೇರಿಸಿದರು.

    ಗೊತ್ತಿದ್ದೋ.. ಗೊತ್ತಿಲ್ಲದೆಯೋ.. ಜೀವನದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಬಹುದೊಡ್ಡ ಬದಲಾವಣೆಗೆ ಕಾರಣವಾಗಿ ಬಿಡುವುದು ಹೀಗೆ. ಅಪ್ಪ-ಅಮ್ಮನಿಗೆ ಚೆಸ್ ಆಟದ ಗಂಧ-ಗಾಳಿ ಗೊತ್ತಿಲ್ಲ. ಸ್ವತಃ ಯಾವತ್ತೂ ಆಡಿದವರಲ್ಲ. ಮಧ್ಯಮ ವರ್ಗದ ಬದುಕಿನ ದಿನನಿತ್ಯದ ಹೋರಾಟದಲ್ಲಿ ಇಂಥದ್ದಕ್ಕೆಲ್ಲ ಅವರ ಬಳಿ ವ್ಯವಧಾನವೂ ಇಲ್ಲ. ಆದರೆ, ಕೆಲವೊಮ್ಮೆ ಮಕ್ಕಳ ಸಲುವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಅಚ್ಚರಿಯ ತಿರುವಿಗೆ ಕಾರಣವಾಗಿ ಬಿಡುತ್ತವೆ.

    ವೈಶಾಲಿ ಹೆಸರಿನ ಆ ಪುಟ್ಟ ಹುಡುಗಿಯನ್ನು ಚೆಸ್ ಕಲಿಯಲು ಬ್ಲೂಮ್್ಸ ಎಂಬ ಚೆಸ್ ಶಾಲೆಗೆ ಸೇರಿಸುವಾಗ ಈ ನಿರ್ಧಾರ ತಮ್ಮ ಭಾಗ್ಯದ ಬಾಗಿಲನ್ನೇ ತೆರೆಯಲಿದೆ ಎಂದು ರಮೇಶ್ ಬಾಬು ಮತ್ತು ನಾಗಲಕ್ಷ್ಮೀ ದಂಪತಿಗೆ ಗೊತ್ತಿರಲಿಲ್ಲ. ಪೋಲಿಯೊ ಪೀಡಿತರಾಗಿ ಅಂಗವೈಕಲ್ಯದ ವಿರುದ್ಧ ಸೆಣಸುತ್ತಲೇ ಬದುಕು ಕಟ್ಟಿಕೊಂಡವರಾದ ರಮೇಶ್ ಬಾಬು ತಮಿಳುನಾಡಿನ ಸಹಕಾರ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್. ನಾಗಲಕ್ಷ್ಮಿ ಗೃಹಿಣಿ. ಕ್ರೀಡೆಗಳ ಬಗ್ಗೆ, ಕ್ರೀಡಾ ಸಾಧನೆಗಳ ಬಗ್ಗೆ ಹೆಚ್ಚೇನೂ ಮಾಹಿತಿ, ಆಸಕ್ತಿ ಎರಡೂ ಈ ದಂಪತಿಗಿರಲಿಲ್ಲ. ಸದಾ ಟಿವಿಯಲ್ಲಿ ಮುಳುಗಿರುವ ಮಗಳನ್ನು ಕಾರ್ಟೂನ್ ಗುಂಗಿನಿಂದ ಆಚೆ ತರಬೇಕು ಎಂಬ ಉದ್ದೇಶವಷ್ಟೇ ಅವರಿಬ್ಬರದಾಗಿತ್ತು. ಆದರೆ, ವೈಶಾಲಿ ಮೊದಲ ದಿನದಿಂದಲೇ ಚೆಸ್ ಇಷ್ಟ ಪಡುತ್ತ, ಖುಷಿಯಿಂದ ಆಡತೊಡಗಿದಾಗ ಬಾಬು ದಂಪತಿಗೂ ಖುಷಿ. ಅಷ್ಟೇ ಅಲ್ಲ, ಅವರ ಚಿಕ್ಕ ಮಗ ಪ್ರಜ್ಞಾನಂದನೂ ಅಕ್ಕನನ್ನು ನೋಡಿ ಚೆಸ್ ಆಡತೊಡಗಿದ್ದ. ಈ ಹೊತ್ತಿಗೆ ಭಾರತದ ಖ್ಯಾತನಾಮ ಚೆಸ್ ಗ್ರಾಂಡ್​ವಾಸ್ಟರ್​ಗಳಲ್ಲಿ ಒಬ್ಬರಾದ ಆರ್.ಬಿ. ರಮೇಶ್ ಅವರ ಚೆಸ್ ಗುರುಕುಲ ಅಕಾಡೆಮಿಗೆ ಸೇರಿದ್ದ ಮಕ್ಕಳನ್ನು ಶಾಲೆ ಮುಗಿಯುತ್ತಿದ್ದಂತೆ ಚೆಸ್ ತರಗತಿಗೆ ಕರೆದುಕೊಂಡು ಹೋಗುವ ಕೆಲಸ ನಾಗಲಕ್ಷ್ಮಿಯದಾಗಿತ್ತು. ದೇವರು ಯಾವ ಮಕ್ಕಳಿಗೆ ಯಾವ ಪ್ರತಿಭೆ ಕೊಟ್ಟಿರುತ್ತಾನೆಂಬುದು ಬೆಳಕಿಗೆ ಬರುವವರೆಗೂ ತಿಳಿದಿರುವುದಿಲ್ಲ. ಇಬ್ಬರೂ ಮಕ್ಕಳು ಚದುರಂಗವನ್ನು ಅದೆಷ್ಟು ಹಚ್ಚಿಕೊಂಡರೆಂದರೆ, ಅಕ್ಕ-ತಮ್ಮ ಒಟ್ಟಿಗಿದ್ದರೆ ಸದಾ ಕಾಲ ಚೆಸ್ ಕುರಿತೇ ಮಾತು, ಅದೇ ಆಟ. ಕೆಲವೇ ದಿನಗಳಲ್ಲಿ ಇಬ್ಬರೂ ಟೂರ್ನಿಗಳಲ್ಲಿ ಆಡಲು ತೊಡಗಿದರು. ಯಾವಾಗಲೂ ಹಾಗೆ, ಒಂದು ಸಣ್ಣ ಆಸೆ-ಆಸಕ್ತಿ ಪ್ರಯತ್ನಶೀಲತೆಯತ್ತ ಹುರಿದುಂಬಿಸುತ್ತದೆ. ಒಂದು ಸಣ್ಣ ಗೆಲುವು ದೊಡ್ಡ ಗೆಲುವಿಗೆ ಹಂಬಲಿಸುವಂತೆ ಮಾಡುತ್ತದೆ. ಯಶಸ್ಸಿನ ಪಯಣಕ್ಕೆ ಯಾವತ್ತೂ ಡೆಡ್ ಎಂಡ್ ಎನ್ನುವುದು ಇರುವುದಿಲ್ಲ. ಒಂದರಿಂದ ಮತ್ತೊಂದು, ಮತ್ತೊಂದರಿಂದ ಮಗದೊಂದು ಮೈಲಿಗಲ್ಲು ಸಾಧಕನ ಪಯಣದಲ್ಲಿ ಸ್ವಾಗತಕ್ಕೆ ಸಿದ್ಧವಿರುತ್ತದೆ. ನಿತ್ಯ ಮಕ್ಕಳನ್ನು ಚೆಸ್ ಅಕಾಡೆಮಿಗೆ ಕರೆದೊಯ್ಯುತ್ತಿದ್ದ ಅಮ್ಮ ನಾಗಲಕ್ಷ್ಮಿ, ಕೆಲವೇ ತಿಂಗಳಲ್ಲಿ ಟೂರ್ನಿಗಳ ಸಲುವಾಗಿ ಬೇರೆ ಬೇರೆ ಊರುಗಳಿಗೆ ಕರೆದುಕೊಂಡು ಹೋಗಬೇಕಾಯಿತು. ಒಂದೆರಡು ವರ್ಷಗಳಲ್ಲಿ ಕೋಲ್ಕತ್ತ, ದೆಹಲಿ… ಹೀಗೆ ದೂರದ ರಾಜ್ಯಗಳಿಗೂ ಪ್ರಯಾಣ ಶುರುವಾಯಿತು. ಆಟದಲ್ಲಿ ಮಕ್ಕಳ ಪ್ರೌಢಿಮೆ ಹೆಚ್ಚಿದಂತೆಲ್ಲ ಅವಕಾಶಗಳು ಹೆಚ್ಚುತ್ತಲೇ ಹೋಯಿತು. ನಾಗಲಕ್ಷ್ಮಿ ಮಕ್ಕಳಿಬ್ಬರನ್ನು ಕರೆದುಕೊಂಡು ವಿದೇಶಗಳಿಗೆ ತೆರಳುವ ದಿನವೂ ಬೇಗನೆ ಬಂದೇ ಬಿಟ್ಟಿತು. ಚದುರಂಗ ಆ ಮಕ್ಕಳಿಬ್ಬರ ಭವಿಷ್ಯ ರೂಪಿಸಿದ್ದಲ್ಲದೆ, ಆ ಕುಟುಂಬದ ದಿಕ್ಕನ್ನೇ ಬದಲಾಯಿಸಿತ್ತು.

    ಇದು ಭಾರತದ ಚೆಸ್ ಅಕ್ಕ-ತಮ್ಮ ಜೋಡಿ ವೈಶಾಲಿ- ಪ್ರಜ್ಞಾನಂದರ ಕಥೆ. ಚೆಸ್​ನಲ್ಲಿ ಗ್ರಾಂಡ್​ವಾಸ್ಟರ್ ಪದವಿಗೇರುವುದೆಂದರೆ ಬಹುದೊಡ್ಡ ಸಾಧನೆ. ಹಾಗಿರುವಾಗ ಒಂದೇ ಕುಟುಂಬದಲ್ಲಿ ಇಬ್ಬಿಬ್ಬರು ಗ್ರಾಂಡ್​ವಾಸ್ಟರ್​ಗಳಾಗುವುದಂತೂ ಕನಸಿನ ಮಾತು. ಆದರೆ, ನಾಗಲಕ್ಷ್ಮೀ -ಬಾಬು ಕುಟುಂಬದಲ್ಲೀಗ ಇಬ್ಬಿಬ್ಬರು ಗ್ರಾಂಡ್​ವಾಸ್ಟರ್​ಗಳು. ಇವರಿಬ್ಬರೂ ಚೆಸ್ ಜಗತ್ತಿನ ಪ್ರಪ್ರಥಮ ಅಕ್ಕ-ತಮ್ಮ ಗ್ರಾಂಡ್​ವಾಸ್ಟರ್ ಜೋಡಿ. 10ನೇ ವಯಸ್ಸಿನಲ್ಲೇ ಅತ್ಯಂತ ಕಿರಿಯ ಇಂಟರ್​ನ್ಯಾಷನಲ್ ಮಾಸ್ಟರ್ ಎನಿಸಿದ್ದ ಪ್ರಜ್ಞಾನಂದ, 12ನೇ ವಯಸ್ಸಿನಲ್ಲಿ ವಿಶ್ವದ 2ನೇ ಕಿರಿಯ ಗ್ರಾಂಡ್​ವಾಸ್ಟರ್ ಎನಿಸಿದ್ದರು. ಪ್ರಗ್ಗು ಈ ಸಾಧನೆ ಮಾಡಿದ್ದು 2018ರಲ್ಲಿ. ಕಳೆದ ವರ್ಷ ಅಂದರೆ, 2023ರಲ್ಲಿ 22 ವರ್ಷದ ವೈಶಾಲಿಯೂ ಕೊನೆರು ಹಂಪಿ ಮತ್ತು ದ್ರೋಣವಲ್ಲಿ ಹರಿಕ ಬಳಿಕ ಗ್ರಾಂಡ್​ವಾಸ್ಟರ್ ಪಟ್ಟಕ್ಕೇರಿದ ಭಾರತದ ಮೂರನೇ ಮಹಿಳೆಯಾಗಿ ದಾಖಲೆ ಮಾಡಿದರು.

    ಹಾಗೆ ನೋಡಿದರೆ, ಈ ಅಕ್ಕತಮ್ಮನ ಪಾಲಿಗೆ 2023 ಬಹಳ ವಿಶೇಷ. ವೈಶಾಲಿ ಗ್ರಾಂಡ್​ವಾಸ್ಟರ್ ಆಗಿದ್ದು ಒಂದು ಖುಷಿಯಾದರೆ, ಪ್ರಜ್ಞಾನಂದ ದೊಡ್ಡ ರೀತಿಯಲ್ಲಿ ಚೆಸ್ ಜಗತ್ತನ್ನು ನಿಬ್ಬೆರಗಾಗಿಸಿದ್ದು ಇನ್ನೊಂದು ಕಾರಣ. ಫಿಡೆ ಚೆಸ್ ವಿಶ್ವಕಪ್​ನಲ್ಲಿ ಪ್ರಜ್ಞಾನಂದ ಫೈನಲ್ ಪ್ರವೇಶಿಸುವ ಮೂಲಕ ದೊಡ್ಡ ರೋಮಾಂಚನಕ್ಕೆ ಕಾರಣರಾದರು. 5 ಬಾರಿಯ ವಿಶ್ವಚಾಂಪಿಯನ್, ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಬಿಟ್ಟರೆ ಬೇರಾವ ಭಾರತೀಯರೂ ಇಂಥ ಸಾಧನೆ ಮಾಡಿರಲಿಲ್ಲ. ಅಜರ್ ಬೈಜಾನ್​ನ ಬಾಕುವಿನಲ್ಲಿ ಕಳೆದ ವರ್ಷ ಜುಲೈ- ಆಗಸ್ಟ್​ನಲ್ಲಿ ನಡೆದ ಟೂರ್ನಿಯ ಕ್ವಾರ್ಟರ್​ಫೈನಲ್​ನಲ್ಲಿ ಭಾರತದ ಮತ್ತೋರ್ವ ಗ್ರಾಂಡ್​ವಾಸ್ಟರ್ ಅರ್ಜುನ್ ಎರಿಗೇಸಿ ಅವರನ್ನು ಸೋಲಿಸಿದ ಪ್ರಜ್ಞಾನಂದ, ಸೆಮಿಫೈನಲ್​ನಲ್ಲಿ ಇಟಲಿ ಮೂಲದ ಅಮೆರಿಕದ ಗ್ರಾಂಡ್​ವಾಸ್ಟರ್ ಫಾಬಿಯೊ ಕರುವಾನರಿಗೆ ನೀರು ಕುಡಿಸುವ ಮೂಲಕ ಫೈನಲ್​ಗೆ ದಾಪುಗಾಲಿಟ್ಟರು. ಫೈನಲ್​ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್​ಸೆನ್ ವಿರುದ್ಧ ಜಿದ್ದಾಜಿದ್ದಿ ಹೋರಾಟ ನಡೆಸಿದ ಪ್ರಜ್ಞಾನಂದ ಕೊನೆಗೂ 2ನೇ ಟೈಬ್ರೇಕರ್​ನಲ್ಲಿ ಶರಣಾಗುವ ಮೂಲಕ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟರು. ಪ್ರಜ್ಞಾನಂದ ಟ್ರೋಫಿ ಗೆಲ್ಲದಿದ್ದರೂ ಇಡೀ ಚೆಸ್ ಸಮುದಾಯದ ಹೃದಯ ಗೆದ್ದಿದ್ದರು. ಅವರ ಭರ್ಜರಿ ಆಟಕ್ಕೆ ಇಡೀ ದೇಶ ಸಂಭ್ರಮ ಪಟ್ಟಿತು. ಟೂರ್ನಿ ಮುಗಿಸಿಕೊಂಡು ಚೆನ್ನೈಗೆ ಮರಳಿದಾಗ ವಿಮಾನನಿಲ್ದಾಣದಲ್ಲಿ ಕ್ರಿಕೆಟಿಗರಿಗೆ ಸಿಗುವಂಥ ಭವ್ಯ ಸ್ವಾಗತ ದೊರಕಿತ್ತು. ಪ್ರಧಾನಿ ನರೇಂದ್ರ ಮೋದಿ ಖುದ್ದು ಪ್ರಜ್ಞಾನಂದರನ್ನು ಭೇಟಿ ಮಾಡಿ ಬೆನ್ನು ತಟ್ಟಿದರು.

    ಚೆಸ್ ಜಗತ್ತಿನಲ್ಲಿ ಬಾಬ್ಬಿ ಫಿಷರ್, ಕಾಪೋವ್, ಕಾಸ್ಪರೋವ್, ವಿಶ್ವನಾಥನ್ ಆನಂದ್​ರಂತೆ ದೀರ್ಘಕಾಲ ಚಾಂಪಿಯನ್​ಗಳಾಗಿ ಮೆರೆದವರು ಕೆಲವೇ ಮಂದಿ. ಆನಂದ್ ಬಳಿಕ ವಿಶ್ವ ಚಾಂಪಿಯನ್ ಆಗಿ ಪ್ರಾಬಲ್ಯ ಸಾಧಿಸಿರುವವರು ಕಾರ್ಲ್​ಸೆನ್. ಇಂಥ ಪ್ರಮುಖ ಆಟಗಾರನನ್ನು ಪ್ರಜ್ಞಾನಂದ 2022ರಲ್ಲಿ ಕೆಲವೇ ತಿಂಗಳ ಅಂತರದಲ್ಲಿ ಮೂರು ಬಾರಿ ಸೋಲಿಸಿದ್ದರು. ವೃತ್ತಿಜೀವನದಲ್ಲಿ ಈವರೆಗೆ 13 ಮುಖಾಮುಖಿಯಲ್ಲಿ 5 ಬಾರಿ ಕಾರ್ಲ್​ಸೆನ್​ರನ್ನು ಸೋಲಿಸಿದ ಖ್ಯಾತಿ ಪ್ರಜ್ಞಾನಂದರದು. ಹಾಗೆ ನೋಡಿದರೆ, 2013ರಲ್ಲಿ ವೈಶಾಲಿ ಕೂಡ ಆನ್​ಲೈನ್ ಪಂದ್ಯವೊಂದರಲ್ಲಿ ಕಾರ್ಲ್​ಸೆನ್​ರನ್ನು ಸೋಲಿಸಿದ್ದರು. ಅಕ್ಕ-ತಮ್ಮ ಜೋಡಿಯ ಈ ಸಾಧನೆ ಅಪರೂಪದಲ್ಲಿ ಅಪರೂಪ. ಇನ್ನೇನು ಏಪ್ರಿಲ್ ತಿಂಗಳು ಬಂದರೆ ಕೆನಡಾದ ಟೊರಾಂಟೊದಲ್ಲಿ ನಡೆಯುವ ವಿಶ್ವ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಪ್ರಜ್ಞಾನಂದ ಪಾಲ್ಗೊಳ್ಳಲಿದ್ದಾರೆ. ವಿಶ್ವ ಚಾಂಪಿಯನ್ ಕಾರ್ಲ್​ಸೆನ್ ಈ ಟೂರ್ನಿಯಿಂದ ಹಿಂದೆ ಸರಿದಿರುವರಾದರೂ, ವಿಶ್ವ ನಂ.2 ಫಾಬಿಯೊ ಕರುವಾನ, ವಿಶ್ವ ನಂ. 3 ಅಮೆರಿಕದ ಹಿಕಾರು ನಕಮುರ, ವಿಶ್ವ ನಂ.6 ಇರಾನಿನ ಅಲ್ರೆಝಾ ಫಿರೌಜಾ, ವಿಶ್ವ ನಂ. 7 ರಷ್ಯಾದ ಇಯಾನ್ ನೆಪೊಮ್ನಿಯಾಚಿ ಸಹಿತ ವಿವಿಧ ವಿಶ್ವ ಟೂರ್ನಿಗಳಲ್ಲಿ ಉನ್ನತ ಸ್ಥಾನಗಳಿಸಿ ಅರ್ಹತೆ ಗಳಿಸಿರುವ 8 ಪ್ರಮುಖರು ಇಲ್ಲಿ ಆಡಲಿದ್ದಾರೆ. ಭಾರತದಿಂದ ಪ್ರಜ್ಞಾನಂದ ಜತೆ ಗುಜರಾತಿನ ವಿದಿತ್ ಸಂತೋಷ್ ಮತ್ತು ತಮಿಳುನಾಡಿನ ಗುಕೇಶ್ ಡಿ. ಸಹ ಕಣದಲ್ಲಿರುವುದು ವಿಶೇಷ. ಇನ್ನು ಮಹಿಳೆಯರ ಕ್ಯಾಂಡಿಡೇಟ್ಸ್ ಟೂರ್ನಿಗೆ ವೈಶಾಲಿ ಅರ್ಹತೆ ಗಳಿಸಿದ್ದು, ಪ್ರತಿಷ್ಠಿತ ಟೂರ್ನಿಯಲ್ಲಿ ಅಕ್ಕ-ತಮ್ಮ ಇಬ್ಬರೂ ಸ್ಪರ್ಧಿಸುತ್ತಿರುವುದು ಮತ್ತೊಂದು ದಾಖಲೆ.

    ಜಾಗತಿಕ ಮಟ್ಟದಲ್ಲಿ ಪ್ರಜ್ಞಾನಂದ-ವೈಶಾಲಿ ಜೋಡಿ ಯಶಸ್ಸಿಗೆ ಅವರಿಬ್ಬರ ಆಟದ ಶೈಲಿಯೂ ಕಾರಣ. ವೈಶಾಲಿ ಅಂತಮುಖಿ, ಯಾವುದೇ ವಿಷಯ ತಲೆಗೆ ಹಚ್ಚಿಕೊಳ್ಳುವುದು ಬೇಗ. ಪ್ರಗ್ಗು ಹಾಗಲ್ಲ, ಸದಾ ವಾಚಾಳಿ, ತರಲೆ, ತಮಾಷೆಗಳ ಪ್ಯಾಕೇಜ್. ಆಟದಲ್ಲಿ ಪ್ರಜ್ಞಾನಂದ ರಕ್ಷಣಾತ್ಮಕವಾಗಿ ಬಹಳ ಗಟ್ಟಿ. ಎದುರಾಳಿಯ ಎಂಥ ಆಕ್ರಮಣವನ್ನೂ ನೈಪುಣ್ಯದಿಂದ ಕಟ್ಟಿಹಾಕುವ ಛಾತಿ. ಇನ್ನೇನು ಫಲಿತಾಂಶ ಅಸಾಧ್ಯ, ಡ್ರಾ ಮಾಡಿಕೊಳ್ಳೋಣ ಎಂದು ಎದುರಾಳಿ ಆಹ್ವಾನಿಸಿದರೂ, ಇವರು ಒಪು್ಪವುದಿಲ್ಲ. ಎಷ್ಟೇ ಕಷ್ಟವಾಗಲಿ, ಸೋಲಿನ ಅಂಚಿನಿಂದಲೂ ಪವಾಡಸದೃಶ ನಡೆಯೊಂದನ್ನು ಹುಡುಕಿ ಗೆದ್ದೇ ತೀರುವ ಛಲ ಅವರದು. ಇದಕ್ಕೆ ಹೋಲಿಸಿದರೆ ವೈಶಾಲಿ

    ಆಟದಲ್ಲಿ ಆಕ್ರಮಣಶೀಲತೆ ಜಾಸ್ತಿ. ಸ್ವಭಾವತಃ ಸೂಕ್ಷ್ಮವಾಗಿದ್ದರೂ, ಆಟದಲ್ಲಿ ಎದುರಾಳಿಯ ಮೇಲೆ ದಿಢೀರ್ ಆಕ್ರಮಣ ನಡೆಸಿ ಕಕ್ಕಾಬಿಕ್ಕಿಗೊಳಿಸುವುದು ಅವರ ಛಾತಿ. ಇಂಥ ವಿಭಿನ್ನ ಶೈಲಿಯ ಆಟವನ್ನು ಪರಸ್ಪರ ಆಡುತ್ತ ಮೊನಚುಗೊಳಿಸಿಕೊಂಡಿರುವುದು ಟೂರ್ನಿಗಳಲ್ಲಿ ಇಬ್ಬರಿಗೂ ನೆರವಾಗಿದೆ.

    ಮಕ್ಕಳು ಕೀರ್ತಿವಂತರಾದರೆ, ಅಪ್ಪ-ಅಮ್ಮನಿಗಾಗುವ ಸಂತೋಷಕ್ಕೆ ಸರಿಸಾಟಿ ಯಾವುದೂ ಇಲ್ಲ. ಗೌರವದ ಬದುಕಿಗಾಗಿ ಜೀವನಪೂರ್ತಿ ಹೋರಾಟವನ್ನೇ ನಡೆಸಿದ ರಮೇಶ್ ಬಾಬು-ನಾಗಲಕ್ಷ್ಮೀ ದಂಪತಿ ಪಾಲಿಗೆ ವೈಶಾಲಿ-ಪ್ರಜ್ಞಾನಂದ ಚೆಸ್ ಸಾಧನೆ ಧನ್ಯತೆ ಮೂಡಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.

    ಹಾಗೆ ನೋಡಿದರೆ, ಭಾರತೀಯ ಚೆಸ್​ಗಿದು ಸುವರ್ಣ ಕಾಲ ಎನ್ನಬಹುದು. ಭಾರತದ ಮೊಟ್ಟಮೊದಲ ಹಾಗೂ ಏಕೈಕ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಪ್ರೇರಣೆಯಿಂದ ಸದ್ಯ ದೇಶದಲ್ಲಿ ಪ್ರತಿಭಾವಂತರ ಮಹಾಪೂರವೇ ಸೃಷ್ಟಿಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ 2758 ಫೀಡೆ ರೇಟಿಂಗ್ ಅಂಕ ಗಳಿಸುವ ಮೂಲಕ 17 ವರ್ಷದ ಗುಕೇಶ್ ವಿಶ್ವ ನಂ.8 ಶ್ರೇಯಾಂಕಕ್ಕೇರಿದ್ದರು. ತನ್ಮೂಲಕ 1986ರಿಂದ ಸತತ 37 ವರ್ಷ ಭಾರತದ ನಂ.1 ಆಗಿದ್ದ ಆನಂದ್​ರನ್ನು ಬದಿಗೊತ್ತಿ ದೇಶದ ನಂ.1 ಎನಿಸಿದ್ದರು. ಸದ್ಯ ಆನಂದ್ 2748 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪ್ರಜ್ಞಾನಂದ (2743) 2ನೇ ಸ್ಥಾನದಲ್ಲಿದ್ದಾರೆ. ವಿದಿತ್ ಸಂತೋಷ್, ಅರ್ಜುನ್ ಎರಗೇಸಿ, ಗುಕೇಶ್, ಪಿ ಹರಿಕೃಷ್ಣ, ನಾರಾಯಣನ್, ನಿಹಾಲ್ ಸರಿನ್, ಅರವಿಂದ್ ಚಿದಂಬರಂ, ರೌನಕ್ ಸಾಧ್ವಾನಿ, ಅಭಿಮನ್ಯು ಪುರಾಣಿಕ್, ಆರ್ಯನ್ ಚೋಪ್ರಾ, ಪರಿಮಾರ್ಜನ್ ನೇಗಿ,

    ಪ್ರಣವ್ ವಿ., ಮುರಳಿ ಕಾರ್ತಿಕೇಯನ್ ಹೀಗೆ ಪ್ರತಿಭಾವಂತರ ದಂಡೇ ವಿಶ್ವ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ತರುತ್ತಿದೆ. ಕ್ರಿಕೆಟ್, ಟೆನಿಸ್, ಫುಟ್​ಬಾಲ್​ನಂಥ ದೈಹಿಕ ಶ್ರಮದ ಆಟದಲ್ಲಿ ಎಷ್ಟೇ ಶ್ರೇಷ್ಠರೆನಿಸಿದರೂ ನಿವೃತ್ತಿ ಎನ್ನುವುದಿರುತ್ತದೆ. ಸದಾಕಾಲ ಆಡಿಕೊಂಡೇ ಇರುವುದು ಸಾಧ್ಯವಿಲ್ಲ. ಆದರೆ, ಚೆಸ್ ಹಾಗಲ್ಲ. ಬೌದ್ಧಿಕ ಚಾತುರ್ಯದ ಈ ಆಟದಲ್ಲಿ 10-12ನೇ ವಯಸ್ಸಿನಲ್ಲೇ ವಿಶ್ವ ಚಾಂಪಿಯನ್ ವಿರುದ್ಧ ಸೆಣಸಬಹುದು. ವಯಸ್ಸಿನ ನಿರ್ಬಂಧವಿಲ್ಲದೆ 50- 60ನೇ ವಯಸ್ಸಿನಲ್ಲೂ ಆಡುತ್ತಲೇ ಇರಬಹುದು. ಆಟದ ಯಶಸ್ಸು ಒಂದೆಡೆಯಾದರೆ, ಶಿಸ್ತು, ಏಕಾಗ್ರತೆ, ಸೂಕ್ಷ್ಮಗ್ರಹಿಕೆ, ಸಮಯಪಾಲನೆಯನ್ನು ಕಲಿಸುವ ಈ ಆಟ ವ್ಯಕ್ತಿತ್ವದ ಮೇಲೆ ಬೀರುವ ಪ್ರಭಾವ ಅಗಾಧ. ವಿದ್ಯಾರ್ಥಿಗಳಿರಲಿ, ಯಾವುದೇ ಕ್ಷೇತ್ರದಲ್ಲಿ ತೊಡಗಿರಲಿ, ಚೆಸ್ ಹವ್ಯಾಸ ರೂಢಿಸಿಕೊಂಡರೆ ಅದರಿಂದಾಗುವ ಸಕಾರಾತ್ಮಕ ಲಾಭಗಳು ಒಂದೆರಡಲ್ಲ. ಒಂದೆರಡು ದಶಕ ಕೆಳಗೆ ಟಿವಿಗೆ ಅಂಟಿಕೊಂಡಿರುತ್ತಿದ್ದ ಮಕ್ಕಳು ಈಗ ಮೊಬೈಲ್​ನಲ್ಲಿ ಮುಳುಗಿರುತ್ತಾರೆ. ಈ ಕಾಲದ ಮಕ್ಕಳು ಕೂಡ ಮೊಬೈಲ್ ಕೈಗಿತ್ತರೆ ಅಳು ನಿಲ್ಲಿಸುತ್ತವೆ, ಊಟ ಮಾಡುತ್ತವೆ. ಇದನ್ನು ತಪ್ಪಿಸೇಕೆಂದರೆ, ಅಂಥ ಮಕ್ಕಳಿಗೆ ಚೆಸ್ ಕಲಿಸಿ.

    (ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts