More

    ಭಕ್ತಿಯೆಂಬ ಶಕ್ತಿಯಿಂದ ಭಗವಂತನನ್ನು ಒಲಿಸಿಕೊಳ್ಳಿ

    ಚಿತ್ರದುರ್ಗ: ಭಕ್ತಿಗೆ ಮಾತ್ರ ಭಗವಂತನನ್ನು ಒಲಿಸಿಕೊಳ್ಳುವ ಶಕ್ತಿ ಇದೆ ಎಂದು ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀ ಸುಬುಧೇಂದ್ರ ತೀರ್ಥ ಪಾದಂಗಳವರು ಸಲಹೆ ನೀಡಿದರು.

    ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದ ಕೃಷ್ಣಮಾನ್ಯ ಪ್ರಶಸ್ತಿ ಪುರಸ್ಕೃತ ಗುರುರಾಜ ಸೇವಾ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ವಿಶೇಷ ಆಶೀರ್ವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪೂಜೆ-ಪುನಸ್ಕಾರ, ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯ ನಮ್ಮೆಲ್ಲರನ್ನು ಸತ್ಪ್ರಜೆಗಳನ್ನಾಗಿಸಿ ಸನ್ಮಾರ್ಗದಲ್ಲಿ ಮುನ್ನಡೆಸುತ್ತದೆ. ಧರ್ಮದ ರಕ್ಷಣೆಗೆ ಕಂಕಣ ತೊಟ್ಟರೆ ಪರಮಾತ್ಮ ನಮ್ಮನ್ನು ರಕ್ಷಿಸುತ್ತಾನೆ. ಆದ್ದರಿಂದ ಉತ್ತಮ ಹಾದಿಯಲ್ಲಿ ಸಾಗುವವರು ಯಾರಿಗೂ ಅಂಜುವ ಅಗತ್ಯವಿಲ್ಲ ಎಂದು ತಿಳಿಸಿದರು.

    ದೇವರು ಸಾಕಷ್ಟು ಕೊಟ್ಟಾಗ ಅದನ್ನು ಪರೋಪಕಾರಕ್ಕೆ ಬಳಸಬೇಕೆ ಹೊರತು ದುಷ್ಕೃತ್ಯಗಳಿಗಲ್ಲ. ಇರುವಷ್ಟು ದಿನ ಜನೋಪಯೋಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪುಣ್ಯಭೂಮಿಯಾದ ಭಾರತ ಮತ್ತು ನಾಡಿಗೆ ಕೊಡುಗೆ ನೀಡಬೇಕು. ಮನುಷ್ಯನ ಜನ್ಮ ಸಾರ್ಥಕವಾಗಲು ಸತ್ಕಾರ್ಯಗಳಲ್ಲಿ ನಿರತರಾಗಬೇಕು ಎಂದು ಸಲಹೆ ನೀಡಿದರು.

    ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಮಂಗಳವಾದ್ಯಗಳೊಂದಿಗೆ ರಾಘವೇಂದ್ರ ಸ್ವಾಮಿ ಒಳಗೊಂಡು ಇತರೆ ದೇವರ ಮೂರ್ತಿಗಳಿಗೆ ವಿವಿಧ ಪೂಜಾ ಸೇವೆಗಳು ಸಾಂಗವಾಗಿ ನೆರವೇರಿದವು. ಗುರುಗಳ ಅಮೃತ ಹಸ್ತದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಸಂಸ್ಥಾನ ಪೂಜೆ ಜರುಗಿತು. ಇದಕ್ಕೂ ಮೊದಲು ಪವಮಾನ ಹೋಮ ಹಾಗೂ ಪೂರ್ಣಾಹುತಿ ನಡೆಯಿತು. ಮಂತ್ರಾಕ್ಷತೆಯೊಂದಿಗೆ ಭಕ್ತಗಣಕ್ಕೆ ಶ್ರೀಗಳು ಆಶೀರ್ವದಿಸಿದರು. ನಂತರ ಮುದ್ರಧಾರಣೆ ಮಾಡಿದರು.

    ರಾಘವೇಂದ್ರ ಸ್ವಾಮಿ ಮೂರ್ತಿಗೆ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅನೇಕ ಭಕ್ತರು ಸ್ವಾಮಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು. ಇದೇ ವೇಳೆ ಭಕ್ತರಿಗಾಗಿ ವೆಶ್ವಾನರ ಯಜ್ಞ ನೆರವೇರಿತು.

    ವಿದ್ವಾನ್ ಬೆ.ನಾ.ವಿಜಯೀಂದ್ರಾಚಾರ್ಯ, ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಎನ್.ವಾದಿರಾಜ್ ಆಚಾರ್ ಪ್ರವಚನ ನೀಡಿದರು.

    ವಿಪ್ರಶ್ರೀ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ: ವೈದ್ಯ ಡಾ.ಎಸ್.ಮುಕುಂದರಾವ್, ವಕೀಲ ಪಿ.ಎಸ್.ಮಂಜುನಾಥ್, ಹೋಟೆಲ್ ಉದ್ಯಮಿ ಜಿ.ಎ.ದೀಪಾನಂದ, ಅಂಜನ ನೃತ್ಯ ಕಲಾ ಕೇಂದ್ರದ ಡಾ.ನಂದಿನಿ ಶಿವಪ್ರಕಾಶ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

    ಸಂಘದ ಅಧ್ಯಕ್ಷ ಎನ್.ವೇದವ್ಯಾಸಾಚಾರ್ಯ, ಅಖಿಲ ಭಾರತ ಮಧ್ವ ಮಂಡಳಿ ಅಧ್ಯಕ್ಷ ಎಸ್.ಎನ್.ಪ್ರಾಣೇಶ್, ಕಾರ್ಯದರ್ಶಿ ಗೋವಿಂದಮೂರ್ತಿ, ವೆಂಕಟೇಶ್‌ಭಟ್, ಪಿ.ಎ.ಪಾರ್ಥಸಾರಥಿ, ರಂಗಾರಾವ್ ಮಿಟ್ಟಿ ಇತರರಿದ್ದರು.

    * ಬಾಕ್ಸ್ *
    ಶತಮಾನೋತ್ಸವ ಆಚರಿಸಲಿ
    ಗುರುರಾಜ ಸೇವಾ ಸಂಘವು ಧರ್ಮ ಮತ್ತು ಸುಜ್ಞಾನಕ್ಕಾಗಿ ಸ್ಥಾಪಿತವಾಗಿದೆ ಎಂಬುದಕ್ಕೆ ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬಂದಿರುವುದೇ ಸಾಕ್ಷಿಯಾಗಿದೆ. ನಿಷ್ಕಲ್ಮಶ ಮನಸ್ಸು ಹಾಗೂ ನಿಸ್ವಾರ್ಥತೆಯಿಂದ ಕಟ್ಟಿದ ಸಂಘ ಪ್ರಗತಿ ಪಥದಲ್ಲಿ ಮುನ್ನಡೆಯುತ್ತದೆ ಎಂಬುದಕ್ಕೆ ಪದಾಧಿಕಾರಿಗಳ ಪರಿಶ್ರಮ ಕಾರಣವಾಗಿದೆ. ಉತ್ತಮ ಕಾರ್ಯಚಟುವಟಿಕೆಯೊಂದಿಗೆ ಶತಮಾನೋತ್ಸವ ಆಚರಿಸಲಿ ಎಂದು ಸುಬುಧೇಂದ್ರ ಶ್ರೀಗಳು ಆಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts