More

    ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

    ಬೆಂಗಳೂರು: ಇದು ಎಲ್ಲರೂ ಎಚ್ಚರಿಕೆ ವಹಿಸಲೇಬೇಕಾದ ಸಂಗತಿ. ಏಕೆಂದರೆ ಮನೆ ಮುಂದೆ ಇರುವ ಕಸವೇ ಕಳ್ಳತನಕ್ಕೆ ದಾರಿ ಆಗಬಹುದು. ಹಾಗೆ ಕಸ ಇದ್ದ ಕಾರಣಕ್ಕೆ ಕೆಲವು ಮನೆಯವರು ಚಿನ್ನಾಭರಣ ಕಳೆದುಕೊಂಡಂಥ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಅಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

    ಈ ಕಳ್ಳರು ಮನೆಯ ಬಾಗಿಲ ಮುಂಭಾಗ ಬಿದ್ದಿರುವಂತಹ ಕಸ ಮತ್ತು ದಿನಪತ್ರಿಕೆಗಳನ್ನು ಗಮನಿಸಿ ಅಂಥ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದರು. ಆನೇಕಲ್ ತಾಲೂಕು ಚಂದಾಪುರದ ಸೂರ್ಯ ಸಿಟಿ ನಿವಾಸಿ ಗಣೇಶ (23), ಚಿಕ್ಕಬಾಣವಾರದ ಲೋಹಿತ್ (37), ನಾಯಂಡನಹಳ್ಳಿಯ ಗಂಗೊಂಡನಹಳ್ಳಿ ನಿವಾಸಿ ಶೇಖ್ ಸಲ್ಮಾನ್ (26) ಮತ್ತು ಶೇಖ್ ಇಸ್ಮಾಯಿಲ್(33) ಬಂಧಿತರು. ಆರೋಪಿಗಳಿಂದ ಒಟ್ಟು 15.95 ಲಕ್ಷ ರೂ. ಬೆಲೆಬಾಳುವ 216.5 ಗ್ರಾಂ ತೂಕದ ಚಿನ್ನಾಭರಣಗಳು, 3019.28 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ದುಬಾರಿ ಬೆಲೆಯ 4 ವಾಚ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ನ. 14ರಂದು ವಿ.ಪಿ.ದಿನೇಶ್ ಎಂಬುವರು ಬೆಳಗಿನ ಜಾವ 6 ಗಂಟೆ ಸುಮಾರಿನಲ್ಲಿ ಮನೆಗೆ ಬೀಗ ಹಾಕಿಕೊಂಡು ಕುಟುಂಬಸಮೇತ ಚೆನ್ನೈಗೆ ಹೋಗಿದ್ದು, ನ.17ರಂದು ರಾತ್ರಿ 9 ಗಂಟೆಗೆ ಮನೆಗೆ ವಾಪಸ್ ಬಂದಾಗ ಮನೆಯ ಬಾಗಿಲ ಬೀಗ ಒಡೆದಿರುವುದು ಕಂಡುಬಂದಿದೆ. ಮನೆ ಒಳಗೆ ಹೋಗಿ ನೋಡಿದಾಗ ದೇವರ ಮನೆಯಲ್ಲಿದ್ದ ಬೆಳ್ಳಿಯ ವಸ್ತುಗಳು, ಬೆಡ್‌ರೂಮ್​ನಲ್ಲಿದ್ದ ಚಿನ್ನದ ಡೈಮಂಡ್ ರಿಂಗ್, ಟಿವಿ ಕಳ್ಳತನ ಆಗಿರುವುದು ಕಂಡು ಬಂದಿದೆ. ತಕ್ಷಣ ಅವರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಇದನ್ನೂ ಓದಿ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ದೇವೇಗೌಡರ ಹೆಸರಿಡಿ: ಟಿ.ಎ. ಶರವಣ ಒತ್ತಾಯ

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಒಂದು ವಿಶೇಷ ತಂಡ ರಚಿಸಿದ್ದು, ಈ ತಂಡ ಕೃತ್ಯ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ ಹಳೆಯ ಕನ್ನಕಳವು ಆರೋಪಿ ಗಣೇಶ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಆತ ನೀಡಿದ ಮಾಹಿತಿ ಮೇರೆಗೆ ಇನ್ನುಳಿದ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    7 ಪ್ರಕರಣಗಳು ಪತ್ತೆ: ಆರೋಪಿಗಳು ಮನೆಯ ಮುಂಭಾಗ ಎರಡ್ಮೂರು ದಿನಗಳಿಂದ ಬಿದ್ದಿರುವ ದಿನಪತ್ರಿಕೆ, ಕಸ ಗಮನಿಸಿ ಹಾಗೂ ಬೀಗ ಹಾಕಿರುವ ಮನೆಗಳನ್ನು ನೋಡಿಕೊಂಡು ಮನೆಯಲ್ಲಿ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಬಾಗಿಲಿನ ಬೀಗ ಒಡೆದು ಕಳ್ಳತನ ಮಾಡುತ್ತಿದ್ದುದ್ದು, ವಿಚಾರಣೆಯಿಂದ ಗೊತ್ತಾಗಿದೆ.

    ಆರೋಪಿಗಳ ಬಂಧನದಿಂದ ಕೋಣನಕುಂಟೆ ಪೊಲೀಸ್ ಠಾಣೆಯ ಮೂರು ಪ್ರಕರಣಗಳು, ವಿದ್ಯಾರಣ್ಯಪುರ, ಅನ್ನಪೂರ್ಣೇಶ್ವರಿನಗರ, ಜ್ಞಾನಭಾರತಿ ಹಾಗೂ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ಸೇರಿ ಒಟ್ಟು 7 ಮನೆಗಳ ಕನ್ನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

    ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

    ಮನೆಯವರೆಲ್ಲ ದೂರದ ಊರಿಗೆ ಹೊರಟಾಗ ಪಾಲಿಸಬೇಕಾದ ಮುನ್ನೆಚ್ಚರಿಕೆ

    ಸಾರ್ವಜನಿಕರು ತಾವು ನೆಲೆಸಿರುವಲ್ಲಿಂದ ಊರಿಗೆ ಅಥವಾ ದೂರದ ಸ್ಥಳಕ್ಕೆ ಹೋಗುವಾಗ ಹಾಗೂ ಹಾಗೆ ಮನೆಯವರೆಲ್ಲರೂ ಮೂರ್ನಾಲ್ಕು ದಿನಗಳ ಮಟ್ಟಿಗೆ ಮನೆಯಲ್ಲಿ ಇರದ ಪರಿಸ್ಥಿತಿ ಇದ್ದಾಗ ಕೆಲವ ಮುನ್ನೆಚ್ಚರಿಕೆಗಳನ್ನು ಪಾಲಿಸಲೇಬೇಕು. ಇಲ್ಲವಾದಲ್ಲಿ ಕಳ್ಳತನ ಮಾಡುವವರಿಗೆ ಮನೆಯಲ್ಲಿ ಯಾರೂ ಇಲ್ಲ ಎಂಬ ಸುಳಿವು ಮನೆಯ ಬಾಗಿಲಲ್ಲೇ ಸಿಕ್ಕಿ ಬಿಡಬಹುದು. ಹೀಗಾಗಿ ಕೆಲವು ದಿನಗಳ ಮಟ್ಟಿಗೆ ಮನೆ ಬಾಗಿಲು ಹಾಕಿ ಹೋಗಬೇಕಾದಾಗ ಈ ಕೆಳಗಿನ ಕೆಲವು ಮುಂಜಾಗ್ರತೆಗಳನ್ನು ಕೈಗೊಳ್ಳಿ.

    – ನಾವು ಇಷ್ಟು ದಿನ ಮನೆಯಲ್ಲಿ ಇರುವುದಿಲ್ಲ ಎಂಬುದನ್ನು ದಿನಪತ್ರಿಕೆ ಹಂಚುವ ಹುಡುಗರಿಗೆ ಮೊದಲೇ ತಿಳಿಸಿ, ಅಷ್ಟು ದಿನಗಳ ಪಟ್ಟಿಗೆ ಪತ್ರಿಕೆ ಹಾಕುವುದು ಬೇಡ ಎಂದು ಹೇಳಿ.
    – ಮನೆ ಬಾಗಿಲಿಗೇ ಹಾಲಿನ ಪೊಟ್ಟಣ ತರಿಸಿಕೊಳ್ಳುತ್ತಿದ್ದರೆ ಅವರಿಗೂ ಇದೇ ರೀತ ಮಾಹಿತಿ ನೀಡಿ.
    – ಮೂರ್ನಾಲ್ಕು ದಿನಗಳ ಮಟ್ಟಿಗೆ ಮನೆ ಬಿಟ್ಟು ಇರಬೇಕಾದ ಸಂದರ್ಭವಿದ್ದರೆ ಮನೆ ಬಾಗಿಲ ಬಳಿ ಕಸ ಸಂಗ್ರಹ ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸಿ. ಕೆಲಸದವರು ಇದ್ದರೆ ಅವರಿಗೆ ದಿನಾ ಬಂದು ಬಾಗಿಲ ಬಳಿ ಗುಡಿಸಿ ಹೋಗಲು ಹೇಳಿ.
    – ಅಕ್ಕಪಕ್ಕದ ಮನೆಯವರ ಬಳಿ ನಿಮ್ಮ ಮನೆಯ ಕುರಿತು ಸ್ವಲ್ಪ ನಿಗಾ ಇರಿಸಿಲು ಮನವಿ ಮಾಡಿಕೊಳ್ಳಿ.
    – ಡೋರ್ ಲಾಕ್ ತುಂಬಾ ಭದ್ರವಾಗಿರುದಾಗಿದ್ದಲ್ಲಿ ಚಿಲಕ ಪ್ರತ್ಯೇಕ ಬೀಗ ಹಾಕದೆ ಇರುವುದು ಉತ್ತಮ.
    – ನಿಮ್ಮ ವ್ಯಾಪ್ತಿಯ ಠಾಣೆಯ ಗಸ್ತು ಪೊಲೀಸರಿಗೆ ಮಾಹಿತಿ ತಿಳಿಸಿರಿ

    ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

    ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts