More

    5 ಗ್ಯಾರಂಟಿಗಳ ವಾರಂಟಿ 10 ವರ್ಷಕ್ಕೆ ಹೆಚ್ಚಿಸು ದೇವ್ರೇ….

    ಶೃಂಗೇರಿ: ಫ್ಯಾನ್, ಕುಕ್ಕರ್‌ಗೆ ಒಂದು ವರ್ಷದ ವಾರಂಟಿ ನೀಡುತ್ತಾರೆ. ರಾಜ್ಯದ ಜನತೆ ಕಾಂಗ್ರೆಸ್‌ಗೆ ಐದು ವರ್ಷಗಳ ವಾರಂಟಿ ನೀಡಿದ್ದಾರೆ. ಸರ್ಕಾರದ ಐದು ಗ್ಯಾರಂಟಿಗಳಿಗೆ ಐದು ವರ್ಷದ ವಾರಂಟಿ. ಅದು ಹತ್ತು ವರ್ಷಗಳ ವಾರಂಟಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

    ಮಂಗಳವಾರ ಶ್ರೀ ಶಾರದಾಂಬೆ ದೇವಾಲಯದಲ್ಲಿ ದೇವಿ ದರ್ಶನ ಪಡೆದು, ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.
    ಎಲ್ಲರಿಗೂ ಅವರವರ ಧರ್ಮದ ಬಗ್ಗೆ ಅಪಾರ ನಂಬಿಕೆ ಇರುತ್ತದೆ. ದೇಗುಲಕ್ಕೆ ಬಂದು ಪೂಜೆ ಸಲ್ಲಿಸುವುದು ಶಾಂತಿ ಹಾಗೂ ನೆಮ್ಮದಿಗಾಗಿ. ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡು ನಾವು ಬದುಕಬೇಕು. ನಾನು, ನನ್ನ ಅಜ್ಜನ ಜತೆ ರಂಭಾಪುರಿ ಶ್ರೀಗಳು, ಧರ್ಮಸ್ಥಳ, ಶಾರದಾಂಬೆ, ಗೌರಿಗದ್ದೆ ವಿನಯ್ ಗುರೂಜಿ, ಕುಕ್ಕೆ ಸುಬ್ರಹ್ಮಣ್ಯ, ಇಡಗುಂಜಿ, ಕೊಲ್ಲೂರಿಗೆ ಭೇಟಿ ನೀಡಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ. ನನ್ನ ಪಕ್ಷ, ಸರ್ಕಾರ, ಜನರ ಪರವಾಗಿ ಪ್ರಾರ್ಥಿಸುತ್ತಿದ್ದೇನೆ. ನಾಡು ಸುಭಿಕ್ಷೆಯಾಗಿ, ಒಳ್ಳೆಯ ಆಡಳಿತ ಮಾಡುವ ಶಕ್ತಿ ದೇವರು ನಮಗೆ ಕೊಟ್ಟಿದ್ದಾರೆ. ಎಲ್ಲರ ಆಶೀರ್ವಾದ ಪಡೆದ ಬಳಿಕ ಧರ್ಮ ಯುದ್ಧ ಪ್ರಾರಂಭಿಸುತ್ತೇನೆ ಎಂದರು.
    ನಾವು ಮಾಡುವ ಪ್ರಯತ್ನ ವಿಫಲವಾಗಬಹುದು. ಆದರೆ ನಾವು ಮಾಡುವ ಪ್ರಾರ್ಥನೆ ಸಫಲವಾಗುತ್ತದೆ. ಎಲ್ಲ ದೇವರೂ ನಾವು ಬೇಡಿದ್ದನ್ನು ನಡೆಸಿಕೊಟ್ಟಿದ್ದಾರೆ. ಇದಕ್ಕಿಂತ ನಮಗೆ ಇನ್ನೇನು ಭಾಗ್ಯ ಬೇಕು? ನಮಗೆ ಎಲ್ಲವೂ ದೊರಕಿದ್ದು ನಮ್ಮ ಪ್ರಾರ್ಥನೆಯ ಫಲ.ನಮಗೆ ಜನಸೇವೆ ಮಾಡುವ ಅವಕಾಶ ಸಿಕ್ಕಿದ್ದು ಬಜೆಟ್‌ನಲ್ಲಿ ಐದು ಗ್ಯಾರಂಟಿಗೆ ಹಣ ಇಟ್ಟು ಬಡವರ ಸೇವೆ ಮಾಡುತ್ತಿದ್ದೇವೆ. ಈ ಸೇವೆ ನಿರಂತರವಾಗಿರಲಿ ಎಂದು ಸದಾ ಭಗವಂತನನ್ನು ಪ್ರಾರ್ಥನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
    ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದು ಹೇಳಿದರೆ ಕಪಾಳಕ್ಕೆ ಹೊಡೆಯಿರಿ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿಕೆ ವಿವಾದ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್, ಹೊಡಿ, ಬಡಿ, ಕಪಾಳಕ್ಕೆ ಹೊಡೆ ಅಂತ ನಾಡಭಾಷೆಯಲ್ಲಿ ಅವರು ಹೇಳಿರಬೇಕು. ಅದೇನು ದೊಡ್ಡದಲ್ಲ. ಈ ವಿಷಯಯದ ಕುರಿತು ಬೇರೆ ಪಕ್ಷದವರೇ ಮಾತನಾಡಿ ಶಿವರಾಜ್ ತಂಗಡಗಿ ಅವರನ್ನು ಲೀಡರ್ ಮಾಡುತ್ತಿದ್ದಾರೆ ಎಂದು ಹೇಳಿದರು.
    ನಾನು ರಾಜ್ಯದ ಬಗ್ಗೆ ಮಾತನಾಡುತ್ತೇನೆ. ಗ್ರಾಮಾಂತರ ಮಾತನಾಡಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ದೇವೇಗೌಡರ ಸೊಸೆ ಇದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಅಂದಿಗೂ ಇಂದಿಗೂ ಬಹಳಷ್ಟು ವ್ಯಾತ್ಯಾಸವಿದೆ. ಅಂದೂ ಇದೇ ಸಿದ್ದರಾಮಯ್ಯ ಅವರ ಸರ್ಕಾರವಿತ್ತು. ಅಂದಿನ ಶಕ್ತಿ ಸೇವೆ. ಡಿ.ಕೆ.ಸುರೇಶ್ ಸೇವೆ ಇಂದಿಗೂ ಇದೆ. ಅವರು ಎಂಪಿ ಮಾತ್ರವಲ್ಲ, ಪ್ರತಿ ಗ್ರಾಪಂ ವ್ಯಾಪ್ತಿಯ ಜನತೆಗೆ ಅವರ ಸೇವೆ ಗೊತ್ತು ಎಂದು ಡಿಸಿಎಂ ಹೇಳಿದರು.
    ಸಚಿವ ಶಿವಾರಾಜ್ ತಂಗಡಗಿ ಹೇಳಿಕೆ ವಿರೋಧಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ನಿಲುವಾಗಿಲು, ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಶ್ರೇಯಸ್ ಕವಿಲುಕೊಡಿಗೆ, ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್ ಸಂಪೇಕೊಳಲು, ಪ್ರಧಾನ ಕಾರ್ಯದರ್ಶಿಗಳಾದ ವಿಕಾಶ್ ಹಾಲ್ಮಕ್ಕಿ, ಶರತ್‌ಕುಮಾರ್, ಪದಾಧಿಕಾರಿ ಸಚಿನ್ ಗುಬ್ಬಗೋಡು ಇತರರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಾಹನಕ್ಕೆ ಮುತ್ತಿಗೆ ಹಾಕಲು ತೆಕ್ಕೂರ್ ಸರ್ಕಲ್ ಬಳಿ ನಡೆಸಲು ಸಿದ್ಧರಾಗಿದ್ದರು. ತಕ್ಷಣ ಪೋಲಿಸರು ಅವರನ್ನು ಬಂಧಿಸಿದ್ದರಿಂದ ಕಾರ್ಯಕರ್ತರ ಪ್ರಯತ್ನ ವಿಫಲವಾಯಿತು.
    ತಾಲೂಕು ಕಾಂಗ್ರೆಸ್ ವಕ್ತಾರ ಉಮೇಶ್ ಪೊದುವಾಳ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ಸೌಮ್ಯಾ ವಿಜಯ್‌ಕುಮಾರ್, ಕೆ.ಸಿ.ವೆಂಕಟೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts