More

    ಅಪಾರ ಪ್ರಮಾಣದಲ್ಲಿ ಸುಡುತ್ತಿವೆ ಪ್ಲಾಸ್ಟಿಕ್

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್
    ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕಾದ ಗ್ರಾಮ ಪಂಚಾಯಿತಿಯೇ ತಾವು ಸಂಗ್ರಹಿಸಿದ ಪ್ಲಾಸ್ಟಿಕ್ ಸಹಿತ ತ್ಯಾಜ್ಯದ ರಾಶಿಗೆ ಬೆಂಕಿ ಕೊಟ್ಟರೆ ಹೇಗಾಗಬೇಡ? ಇಂಥದೊಂದು ಸ್ಥಿತಿ ಬೆಳ್ಮಣ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ.

    ಬೆಳ್ಮಣ್ ಗ್ರಾಮ ಪಂಚಾಯಿತಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಬದಲು ತಾವೇ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ತ್ಯಾಜ್ಯ ನಿರ್ವಹಣಾ ಘಟಕದ ಸಮೀಪವೇ ಬೆಂಕಿ ಹಾಕುತ್ತಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಮನೆ ಹಾಗೂ ಅಂಗಡಿಗಳಿಂದ ಹಸಿ ಹಾಗೂ ಒಣ ಕಸ ಸಂಗ್ರಹಿಸಿ ನಿರ್ವಹಣಾ ಘಟಕಕ್ಕೆ ಕೊಂಡೊಯ್ಯಬೇಕಾದ ಸ್ಥಳೀಯಾಡಳಿತ ಹೇರಳ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ರಾಶಿ ಹಾಕಿ ಬೆಂಕಿ ಕೊಡುತ್ತಿದೆ. ಇದರಿಂದ ಪರಿಸರದಲ್ಲಿ ವಾಸನೆ ಹರಡಿದ್ದು ಸ್ಥಳೀಯರಲ್ಲಿ ರೋಗ ಭೀತಿ ಹರಡಿದೆ.

    ಪೇಟೆ ಹಾಗೂ ಮನೆಗಳಿಂದ ಸಂಗ್ರಹಿಸಿದ ಕಸವನ್ನು ಸರಿಯಾಗಿ ನಿರ್ವಹಿಸದೆ ಕಸ ವಿಲೇವಾರಿ ವಾಹನದ ಮೂಲಕ ಡಂಪ್ ಮಾಡಿ ದೊಡ್ಡ ರಾಶಿಯಾದ ಮೇಲೆ ಬೆಂಕಿ ಹಾಕಿ ಸುಡಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಸಿ ಹಾಗೂ ಒಣ ಕಸವನ್ನು ಒಟ್ಟಿಗೇ ಸುರಿಯುತ್ತಿದ್ದು ಇಡೀ ಪರಿಸರ ವಾಸನೆ ಬೀರುತ್ತಿದೆ. ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿ ಹಾಗೂ ಕೋಳಿ ತ್ಯಾಜ್ಯವನ್ನೂ ಸುರಿದು ಒಣಗಿದ ಬಳಿಕ ಬೆಂಕಿ ಕೊಡಲಾಗುತ್ತಿದೆ. ಹಿಂದೊಮ್ಮೆ ಕಸಕ್ಕೆ ಹಾಕಿದ ಬೆಂಕಿ ಸಮೀಪದ ಗುಡ್ಡ ಪ್ರದೇಶಕ್ಕೆ ಹರಡಿ ಗಿಡ ಮರಗಳು ಸುಟ್ಟು ಕರಕಲಾಗಿತ್ತು.

    ಪಾಳು ಬಿದ್ದ ಕಸ ವಿಲೇವಾರಿ ಘಟಕ: ಹಸಿ ಹಾಗೂ ಒಣ ಕಸ ಬೇರ್ಪಡಿಸಿ ಸಂಗ್ರಹಿಸಿಡಲು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲಾಗಿದ್ದು ಅದರಂತೆ ಬೆಳ್ಮಣ್ ಗ್ರಾಮ ಪಂಚಾಯಿತಿಯ ಜಂತ್ರ ಪರಿಸರದಲ್ಲಿ ಸ್ವಚ್ಚ ಭಾರತ್ ಮಿಷನ್ ಗ್ರಾಮೀಣ ಯೋಜನೆ ಅಡಿ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಘಟಕ 2017ರಲ್ಲಿ ನಿರ್ಮಾಣಗೊಂಡಿದೆ. ಆದರೆ ಗ್ರಾಮ ಪಂಚಾಯಿತಿ ಇಲ್ಲಿಯ ಘಟಕದಲ್ಲಿ ತ್ಯಾಜ್ಯ ಬೇರ್ಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಇದರಿಂದ 14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಘಟಕ ಪಾಳು ಬಿದ್ದಿದೆ.

    ಪಂಚಾಯಿತಿ ವಠಾರವೇ ವಿಲೇವಾರಿ ಘಟಕ: ಜಂತ್ರ ಪರಿಸರದಲ್ಲಿ ಸುಸಜ್ಜಿತ ತ್ಯಾಜ್ಯ ನಿರ್ವಹಣಾ ಘಟಕವಿದ್ದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಬೆಳ್ಮಣ್ ಗ್ರಾಪಂ ಕಟ್ಟಡದ ಹಿಂಭಾಗದ ಹಳೇ ಕಟ್ಟಡವೇ ತ್ಯಾಜ್ಯ ನಿರ್ವಹಣಾ ಘಟಕವಾಗಿ ಮಾರ್ಪಟ್ಟಿದೆ. ಪಂಚಾಯಿತಿಯ ಹಿಂಭಾಗ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಮೂಟೆಗಳಲ್ಲಿ ಕಂಡುಬರುತ್ತಿದೆ. ಹೇರಳ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಜಂತ್ರದಲ್ಲಿ ಸುರಿದು ಬೆಂಕಿ ಹಚ್ಚಲಾಗುತ್ತಿದೆ. ಪ್ಲಾಸ್ಟಿಕ್ ಸುಡಬಾರದು, ಎಲ್ಲೆಂದರಲ್ಲಿ ಬಿಸಾಡಬಾರದು ಎಂದು ಜನರಿಗೆ ಮಾಹಿತಿ ನೀಡಬೇಕಾಗಿದ್ದ ಸ್ಥಳೀಯಾಡಳಿತವೇ ಪ್ಲಾಸ್ಟಿಕ್ ಸುಡುತ್ತಿರುವ ಬಗ್ಗೆ ಆಕ್ಷೇಪಗಳು ಕೇಳಿಬಂದಿವೆ.

    ಮನೆ, ಅಂಗಡಿಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೆ ಜಂತ್ರದ ರುದ್ರಭೂಮಿ ಬಳಿಯಿರುವ ನಿರ್ವಹಣಾ ಘಟಕದ ಬಳಿಯಲ್ಲೇ ರಾಶಿ ಹಾಕಿ ಬೆಂಕಿ ಹಾಕಲಾಗುತ್ತಿದೆ. ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.
    ಸರ್ವಜ್ಞ ತಂತ್ರಿ, ಸ್ಥಳೀಯ ನಿವಾಸಿ

    ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಬೆಂಕಿ ಹಾಕಿ ಸುಡುವುದು ನಿಜಕ್ಕೂ ತಪ್ಪು. ಈ ಬಗ್ಗೆ ಸ್ಥಳೀಯ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಗಮನಕ್ಕೆ ತರುತ್ತೇನೆ.
    ರೇಶ್ಮಾ ಉದಯ್ ಶೆಟ್ಟಿ, ಜಿಪಂ ಸದಸ್ಯೆ ಬೆಳ್ಮಣ್

    ತ್ಯಾಜ್ಯ ವಸ್ತುಗಳನ್ನು ವ್ಯಾಪಕ ಪ್ರಮಾಣದಲ್ಲಿ ತಂದು ಇಲ್ಲಿ ಸುರಿಯುತ್ತಾರೆ. ಬಳಿಕ ಬೆಂಕಿ ಹಾಕಿ ಸುಡುವುದರಿಂದ ಇಡೀ ಪರಿಸರ ಪ್ಲಾಸ್ಟಿಕ್ ವಾಸನೆಯಿಂದ ಕೂಡಿರುತ್ತದೆ. ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೂಡಲೇ ಸ್ಥಳಿಯಾಡಳಿತ ಎಚ್ಚೆತ್ತುಕೊಳ್ಳಬೇಕು.
    ಸುಂದರಿ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts