More

    ಬಳ್ಳಾರಿ ಜಿಲ್ಲಾ ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ

    ಹೀರಾನಾಯ್ಕ ಟಿ. ಬಳ್ಳಾರಿ
    ನಗರದಲ್ಲಿ 40 ಎಕರೆ ಪ್ರದೇಶದಲ್ಲಿ ಜಿಲ್ಲಾ ಕ್ರೀಡಾಂಗಣ ಸೇರಿ ವಿವಿಧ ಒಳಾಂಗಣ (ಹಾಕಿ, ಬ್ಯಾಡ್ಮಿಂಟನ್, ಮಲ್ಟಿ ಜಿಮ್, ಅಂತಾರಾಷ್ಟ್ರೀಯ ಮಟ್ಟದ ಈಜುಕೋಳ) ಗಳನ್ನು ನಿರ್ಮಿಸಲಾಗಿದ್ದು, ಇನ್ನಷ್ಟು ಮೂಲ ಸೌಲಭ್ಯಗಳು ಬೇಕಿದೆ.

    ಈ ಪೈಕಿ 10 ಎಕರೆ ಪ್ರದೇಶವನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಬಳಸಿಕೊಳ್ಳಲಾಗಿದ್ದು, ಸಿಂಥೆಟಿಕ್ ಟ್ರಾೃಕ್ ನಿರ್ಮಿಸಿರುವುದು ಬಿಟ್ಟರೆ ಕ್ರೀಡಾಂಗಣದಲ್ಲಿ ಮತ್ತೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಸಿಂಥೆಟಿಕ್ ಟ್ರಾೃಕ್ ಸುತ್ತಲೂ ಸ್ವಚ್ಛತೆ ಕಣ್ಮರೆ ಆಗಿದೆ. ಎಲ್ಲೆಡೆ ಕಸ ಹಾಗೇ ಬಿಡಲಾಗಿದೆ. ಇದರಿಂದಾಗಿ ನಿತ್ಯ ವಾಯುವಿಹಾರಕ್ಕೆ ಬರುವವರು, ಕ್ರೀಡಾಪಟುಗಳು ಅನೇಕ ಬಾರಿ ಅವರೇ ಸ್ವಚ್ಛ ಮಾಡಿಕೊಂಡಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಕಚೇರಿಗಳ ಗಾಜಿನ ಕಿಟಕಿಗಳನ್ನು ಒಡೆದು ಹಾಕಲಾಗಿದೆ. ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೇನೂ ಕೊರತೆ ಇಲ್ಲ. ರಾಷ್ಟ್ರ ಮತ್ತು ಅಂತಾರಾಷ್ಟ್ಟ್ರಿಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಕೆಲ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಕ್ರೀಡಾಪಟುಗಳು ಹೆಚ್ಚಿನ ತರಬೇತಿ ಪಡೆಯಲು ಬೇರೆ ಕಡೆ ಹೋಗುತ್ತಿದ್ದಾರೆ. ಜಿಲ್ಲಾ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ 20 ಎಕರೆ ಪ್ರದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಬೇಕು ಎನ್ನುವ ಉದ್ದೇಶಕ್ಕಾಗಿ ಜಾಗ ಮೀಸಲಿಡಲಾಗಿದೆ. ಆದರೆ, ಈ ವರೆಗೆ ಈ ಕನಸು ನನಸಾಗಿಲ್ಲ. ಅನೇಕ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.

    ಬಳ್ಳಾರಿ ಜಿಲ್ಲಾ ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ
    ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಡಾ.ಪುನೀತ್ ರಾಜ್‌ಕುಮಾರ್ ಪ್ರತಿಮೆ ಹಾಗೂ ಕೆರೆಯ ಚಿತ್ರಣ.

    ದುಬಾರಿಯಾದ ಈಜುಕೊಳ
    ನಗರದ ಜನತೆಗಾಗಿ ಅಂತಾರಾಷ್ಟ್ರೀಯಮಟ್ಟದ ಈಜುಕೋಳ ನಿರ್ಮಿಸಲಾಗಿದೆ. ಬೇಸಿಯಿಂದಾಗಿ ಈಜುಕೋಳಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಇಲ್ಲಿನ ಪ್ರವೇಶ ಶುಲ್ಕ ನೋಡಿ ಬಡವರ ಮಕ್ಕಳು, ಸಾಮಾನ್ಯರು ನಿರಾಸೆಯಿಂದ ಮನೆಗೆ ಹೋಗುವುದುಂಟು. 6 ರಿಂದ 14 ವರ್ಷದ ಮಕ್ಕಳಿಗೆ ಪ್ರತಿ ತಿಂಗಳಿಗೆ 700 ರೂ. ಪುರುಷ-ಮಹಿಳೆಯರಿಗೆ 1250 ರೂ. ದರ ನಿಗದಿ ಮಾಡಲಾಗಿದೆ. ಹಾಗಾಗಿ ಬಡಮಕ್ಕಳಿಗೆ ಈಜುಕೋಳ ಗಗನಕುಸುಮವಾಗಿದೆ. ಮಲ್ಟಿ ಜಿಮ್‌ಗೆ ಪ್ರತಿ ತಿಂಗಳು 500 ರೂ. ದರ ನಿಗದಿ ಮಾಡಲಾಗಿದೆ. ಬ್ಯಾಡ್ಮಿಂಟನ್‌ಗೆ 800 ರೂ. ಪ್ರತಿ ತಿಂಗಳು ಪಾವತಿಸಬೇಕಾಗಿದೆ.

    ಫುಟ್ಬಾಲ್ ಗ್ರೌಂಡ್‌ನಲ್ಲಿ ಕಾಣದ ಕಾಲ್ಚೆಳಕ
    ಬಳ್ಳಾರಿಯ ಬಿಡಿಎಎ ಮೈದಾನದಲ್ಲಿ ನಿರ್ಮಿಸಿರುವ ಅಂತಾರಾಷ್ಟ್ರೀಯ ಫುಟ್‌ಬಾಲ್ ಕ್ರೀಡಾಂಗಣದಲ್ಲಿ 3 ವರ್ಷಗಳಿಂದ ಯಾವುದೇ ಪಂದ್ಯ ನಡೆದಿಲ್ಲ. ಕೋವಿಡ್ ಮಹಾಮಾರಿ ಬಂದ ನಂತರ ಯಾವುದೇ ಪಂದ್ಯಗಳನ್ನು ಆಯೋಜಿಸಲಾಗಿಲ್ಲ. ರಾಷ್ಟ್ರಮಟ್ಟದ ಪಂದ್ಯಾವಳಿಗಳು ನಡೆದ ಈ ಕ್ರೀಡಾಂಗಣ ಬಿಕೋ ಎನ್ನುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಫುಟ್‌ಬಾಲ್ ಕ್ರೇಜ್ ಹೆಚ್ಚಿದೆ. ಕ್ರೀಡಾಂಗಣ ಇದ್ದರೂ ಸರಿಯಾಗಿ ಸದ್ಬಳಕೆ ಆಗುತ್ತಿಲ್ಲ.

    ಬಳ್ಳಾರಿ ಜಿಲ್ಲಾ ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ
    ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಈಜುಕೋಳ.

    ಬೋಟಿಂಗ್ ವ್ಯವಸ್ಥೆ ಆಗಿಲ್ಲ
    ಜಿಲ್ಲಾ ಕ್ರೀಡಾಂಗಣದಲ್ಲಿ 3 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಲಾಗಿದ್ದು, ಅಲ್ಲಿ ಬೋಟಿಂಗ್ ವ್ಯವಸ್ಥೆ ಇನ್ನೂ ಆಗಿಲ್ಲ. ಬಳ್ಳಾರಿ ಉತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ್ದ ಅಶ್ವಿನಿ ಪುನಿತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಕೆರೆಗೆ ಕರ್ನಾಟಕ ರತ್ನ ದಿ.ಪುನೀತ್‌ರಾಜ್‌ಕುಮಾರ್ ಪ್ರತಿಮೆ ಅನಾವರಣಗೊಳಿಸಿದ್ದರು. ಇದು ರಾಜ್ಯದಲ್ಲೇ ಅತಿ ಎತ್ತರದ 23 ಅಡಿ ಎತ್ತರದ ಪ್ರತಿಮೆ ಇದಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರು, ಅಪ್ಪು ಅಭಿಮಾನಿಗಳು ಇಲ್ಲಿ ಭೇಟಿಕೊಟ್ಟು ಹೋಗುತ್ತಾರೆ. ಇಲ್ಲಿನ ಕೆರೆಯಲ್ಲಿ ಪ್ರವಾಸಿಗರಿಗಾಗಿ ಬೋಟಿಂಗ್ ವ್ಯವಸ್ಥೆ ಮಾಡಬೇಕು ಎನ್ನುವ ಕೂಗು ಇದೆ. ಆದರೆ, ಈ ವರೆಗೆ ಸರಿಯಾಗಿ ನಿರ್ವಹಣೆ ಆಗದೆ ಬೋಟಿಂಗ್ ವ್ಯವಸ್ಥೆ ಇಲ್ಲದಂತಾಗಿದೆ.

    ಬಳ್ಳಾರಿ ಜಿಲ್ಲಾ ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ
    ಬಳ್ಳಾರಿಯ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಫುಟ್‌ಬಾಲ್ ಗ್ರೌಂಡ್‌ನ ನೋಟ.

    ಬಳ್ಳಾರಿ ಜಿಲ್ಲೆಯ ಕ್ರೀಡಾಪಟುಗಳಿಗಾಗಿ ಮಲ್ಟಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಆಗಬೇಕು ಎನ್ನುವ ಕೂಗು ಇದೆ. ಅದರ ಬಗ್ಗೆ ಪ್ರಸ್ತಾವನೆ ಸಲ್ಲುವ ಚಿಂತನೆ ನಡೆದಿದೆ. ಪ್ರಸ್ತುತ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಕ್ರೀಡಾಪಟುಗಳಿಗೆ ಸಹಕಾರಿಯಾಗಿದೆ. ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ.
    ಹರಿಸಿಂಗ್ ರಾಠೋಡ, ಸಹಾಯಕ ನಿರ್ದೇಶಕ, ಕ್ರೀಡಾ ಇಲಾಖೆ

    2016ರಿಂದ ಸ್ವಿಮ್ಮಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದೇನೆ. ನೂರಾರು ಈಜುಪಟುಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
    ರಜನಿ ಲಕ್ಕ, ಸ್ವಿಮ್ಮಿಂಗ್ ಕೋಚ್

    ಬಳ್ಳಾರಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಆಗಬೇಕಿದೆ. ಅದಕ್ಕೆ ಜನಪ್ರತಿನಿಧಿಗಳ ಸಹಕಾರ ಅಗತ್ಯ. ಕ್ರಿಕೆಟ್ ಕ್ರೀಡಾಂಗಣ ಆಗಬೇಕು. ಈಜುಕೋಳದಲ್ಲಿ ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರವೇಶ ಶುಲ್ಕವನ್ನು ಇಳಿಕೆ ಮಾಡಬೇಕು.
    ಸತ್ಯನಾರಾಯಣರಾವ್, ನಿವೃತ್ತ ದೈಹಿಕ ಶಿಕ್ಷಕ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts