More

    ಪ್ರೊ ಕಬಡ್ಡಿ ಲೀಗ್‌ನಲ್ಲಿ ಇಂದು ಬೆಂಗಳೂರು ಬುಲ್ಸ್-ದಬಾಂಗ್ ಡೆಲ್ಲಿ ಸೆಮಿಫೈನಲ್

    ಬೆಂಗಳೂರು: ಪ್ಲೇಆಫ್​ ಹಂತಕ್ಕೇರಲು ಕೊನೇಕ್ಷಣದಲ್ಲಿ ಪರದಾಡಿದ್ದರೂ, ಎಲಿಮಿನೇಟರ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿ ಬೀಗಿರುವ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ ಸೆಮಿಫೈನಲ್ ಹಣಾಹಣಿಯಲ್ಲಿ ಬುಧವಾರ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ. ಲೀಗ್ ಹಂತದ ಅಗ್ರಸ್ಥಾನಿ ಪಟನಾ ಪೈರೇಟ್ಸ್ ಮತ್ತು ಯುಪಿ ಯೋಧಾ ತಂಡಗಳ ನಡುವೆ ದಿನದ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.

    ಲೀಗ್ ಹಂತದಲ್ಲಿ ಆಡಿದ 22 ಪಂದ್ಯಗಳಲ್ಲಿ 12ರಲ್ಲಿ ಗೆದ್ದು, 6 ಸೋಲು ಮತ್ತು 4 ಟೈನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದ ದಬಾಂಗ್ ಡೆಲ್ಲಿ ತಂಡಕ್ಕೆ ಪವನ್ ಶೆರಾವತ್ ಪಡೆ ಕಠಿಣ ಸವಾಲಾಗಲಿದೆ. ಯಾಕೆಂದರೆ ಲೀಗ್ ಹಂತದಲ್ಲಿ ಡೆಲ್ಲಿ ವಿರುದ್ಧದ 1 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಬುಲ್ಸ್ ತಂಡ ಮತ್ತೊಂದರಲ್ಲಿ ಟೈ ಸಾಧಿಸಿತ್ತು. ಪವನ್ ಶೆರಾವತ್‌ಗೆ ರೈಡರ್‌ಗಳಾದ ಭರತ್ ಮತ್ತು ಚಂದ್ರನ್ ರಂಜಿತ್‌ರಿಂದ ಉತ್ತಮ ಬೆಂಬಲ ಲಭಿಸುತ್ತಿದೆ. ಡಿೆಂಡಿಂಗ್‌ನಲ್ಲಿ ಮಹೇಂದರ್‌ಗೆ ಸೌರಭ್ ನಂದಲ್ ಮತ್ತು ಅಮನ್ ಉತ್ತಮ ಸಾಥ್ ನೀಡುತ್ತಿದ್ದಾರೆ.

    ಡೆಲ್ಲಿ ತಂಡಕ್ಕೆ ಯುವ ರೈಡರ್ ನವೀನ್ ಕುಮಾರ್ ಪ್ರಮುಖ ಶಕ್ತಿಯಾಗಿದ್ದಾರೆ. ಪವನ್-ನವೀನ್ ನಿರ್ವಹಣೆಯೇ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಇದೆ. ಅನುಭವಿಗಳಾದ ಮಂಜೀತ್ ಚಿಲ್ಲರ್, ಜೋಗಿಂದರ್ ನರ್ವಾಲ್ ಮತ್ತು ಸಂದೀಪ್ ನರ್ವಾಲ್ ಕೂಡ ಡೆಲ್ಲಿಗೆ ಬಲ ತುಂಬುತ್ತಿದ್ದಾರೆ. 2018ರ ಆವೃತ್ತಿಯ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಗೆದ್ದರೆ 3ನೇ ಬಾರಿ ಫೈನಲ್‌ಗೇರಿದಂತಾಗಲಿದೆ. ಈ ಮುನ್ನ 2015ರಲ್ಲಿ ಮೊದಲ ಬಾರಿ ಫೈನಲ್‌ಗೇರಿದಾಗ ರನ್ನರ್‌ಅಪ್ ಆಗಿತ್ತು.

    ಪಟನಾ-ಪ್ರದೀಪ್ ಮುಖಾಮುಖಿ
    ಲೀಗ್ ಹಂತದಲ್ಲಿ ಆಡಿದ 22 ಪಂದ್ಯಗಳಲ್ಲಿ 16ರಲ್ಲಿ ಗೆದ್ದು, 5 ಸೋಲು, 1 ಟೈನೊಂದಿಗೆ ಸುಲಭವಾಗಿ ಅಗ್ರಸ್ಥಾನವನ್ನು ಅಲಂಕರಿಸಿದ್ದ ಪಟನಾ ಪೈರೇಟ್ಸ್ ತಂಡಕ್ಕೆ ಈ ಹಿಂದೆ 3 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲು ನೆರವಾಗಿದ್ದ ಪ್ರದೀಪ್ ನರ್ವಾಲ್ ಒಳಗೊಂಡ ಯುಪಿ ಯೋಧಾ ತಂಡದ ಸವಾಲು ಎದುರಾಗಲಿದೆ. ಟೂರ್ನಿಯ ದುಬಾರಿ ಆಟಗಾರರೂ ಆಗಿರುವ ಪ್ರದೀಪ್ ಎಲಿಮಿನೇಟರ್‌ನಲ್ಲಿ ಭರ್ಜರಿ ನಿರ್ವಹಣೆ ತೋರಿಸಿ, ಪುಣೇರಿ ಪಲ್ಟಾನ್ ವಿರುದ್ಧ ಸುಲಭ ಗೆಲುವಿಗೆ ನೆರವಾಗಿದ್ದರು. ಲೀಗ್ ಹಂತದ 2 ಮುಖಾಮುಖಿಗಳಲ್ಲಿ ಅತ್ಯಂತ ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿದ್ದ ಪಟನಾ-ಯೋಧಾ ತಂಡಗಳು ತಲಾ 1ರಲ್ಲಿ ಅಲ್ಪ ಅಂತರದ ಗೆಲುವು ಕಂಡಿದ್ದವು. ಹೀಗಾಗಿ ಈ ಸಲವೂ ಫೈನಲ್‌ಗೇರಲು ನಿಕಟ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

    11 ವರ್ಷದ ಕ್ರಿಕೆಟಿಗನ ಚಿಕಿತ್ಸೆಗೆ ಕನ್ನಡಿಗ ಕೆಎಲ್ ರಾಹುಲ್ ನೆರವಿನ ಹಸ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts