More

    ಶಿಕ್ಷಣದ ಮಹತ್ವ ತಿಳಿಸಲಿದೆ ಮಹನೀಯರ ಆದರ್ಶ

    ಪಿರಿಯಾಪಟ್ಟಣ: ಸಮಾಜ ಸುಧಾರಣೆಗೆ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ಮಹನೀಯರ ಆದರ್ಶಗಳಿಂದ ತಿಳಿದುಕೊಳ್ಳಬಹುದಾಗಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.

    ತಾಲೂಕು ಆಡಳಿತ ವತಿಯಿಂದ ಪಟ್ಟಣದ ಶ್ರೀದೇವರಾಜಅರಸು ಭವನದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಪ್ರತಿಯೊಬ್ಬ ಮಹನೀಯರೂ ವಿದ್ಯೆಯ ಮಹತ್ವವನ್ನು ತಮ್ಮದೇ ಆದ ದೃಷ್ಟಿಕೋನಗಳ ಮೂಲಕ ಸಾಬೀತುಪಡಿಸಿದ್ದಾರೆ ಎಂದರು. ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯದಲ್ಲಿ ಬರುವ ಪಾತ್ರಗಳು ಮತ್ತು ಸನ್ನಿವೇಶಗಳು ಪ್ರತಿಯೊಬ್ಬರ ಜೀವನದಲ್ಲಿ ಶಿಸ್ತುಬದ್ಧ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿವೆ ಎಂದರು.

    ರಾವಣನು ಒಬ್ಬ ಮಹಾನ್ ವಿದ್ವಾಂಸನಾಗಿದ್ದರೂ ತನ್ನ ದುರ್ಬುದ್ಧಿಯಿಂದಾಗಿ ಸೀತೆಯನ್ನು ಅಪರಿಸುವಂತಹ ದುಷ್ಕೃತ್ಯಕ್ಕೆ ಮುಂದಾಗಿ ಶ್ರೀರಾಮನಿಂದ ಅಂತ್ಯ ಕಾಣುತ್ತಾನೆ. ಸೀತೆಯನ್ನು ಬಿಡಿಸಿಕೊಂಡು ಬರುವ ಕಥೆ ಅತ್ಯಂತ ರೋಚಕವಾದ ವಿಚಾರಗಳನ್ನು ನಮ್ಮ ಮುಂದೆ ಇಡುತ್ತದೆ ಎಂದರು.

    ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನ ಕಾಮಗಾರಿ ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿರುವುದಕ್ಕೆ ಮಾಜಿ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವೆಂಕಟೇಶ್, ನನ್ನ ಅವಧಿಯಲ್ಲಿ ಏನೇನು ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಪಾಯ ಹಾಕಿದ್ದೆನೋ ಅವನ್ನು ಮುಂದುವರಿಸುವ ಯೋಗ್ಯತೆ ಮಾಜಿ ಶಾಸಕರಿಗೆ ಇರಲಿಲ್ಲವೇ ಎಂದು ಟೀಕಿಸಿದರು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ ಎಲ್ಲ ಕಾಮಗಾರಿಗಳನ್ನು ಹಂತ ಹಂತವಾಗಿ ಸಂಪೂರ್ಣಗೊಳಿಸುವುದಾಗಿ ತಿಳಿಸಿದರು.

    ಎಪಿಎಂಸಿ ಸಹಾಯಕ ಕಾರ್ಯದರ್ಶಿ ಚಲುವರಾಯಿ ಮಾತನಾಡಿ, ಇಡೀ ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ಕಟ್ಟಿ ಕೊಟ್ಟಂತಹ ಮಹಾನ್ ಚೇತನ ವಾಲ್ಮೀಕಿ ಮಹರ್ಷಿ ಆಗಿದ್ದಾರೆ ಎಂದರು. ವಾಲ್ಮೀಕಿ ತಮ್ಮ ವಿರಚಿತ ಮಹಾಕಾವ್ಯ ರಾಮಾಯಣದಲ್ಲಿ ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿದ್ದಾರೆ ಎಂದರು.

    ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಾಲ್ಮೀಕಿ ನಾಯಕ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಸಿಲ್ದಾರ್ ಕುಂಇ ಅಹಮದ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಆರ್.ನಿರೂಪಾ, ಕೆಪಿಸಿಸಿ ಸದಸ್ಯರಾದ ನಿತಿನ್ ವೆಂಕಟೇಶ್, ಅನಿಲ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್‌ಕುಮಾರ್, ಬಿಇಒ ಬಸವರಾಜ್, ಲೋಕೋಪಯೋಗಿ ಇಲಾಖೆ ಎಇಇ ವೆಂಕಟೇಶ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಪುರಸಭೆ ಮುಖ್ಯಾಧಿಕಾರಿ ಕೆ.ಯು.ಮುತ್ತಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಪುಟ್ಟಯ್ಯ, ಮುಖಂಡರಾದ ಚರಪುರ ಶ್ರೀನಿವಾಸ, ಲೋಕೇಶ್, ಪಿ.ಎಸ್.ಹರೀಶ್, ಎ.ಕೆ.ಗೌಡ, ರಾಮಚಂದ್ರ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts