More

    ತ್ಯಾಜ್ಯ ನಿರ್ವಹಣೆಗೆ ಪೈಪ್ ಕಾಂಪೋಸ್ಟ್

     ಹೇಮನಾಥ್ ಪಡುಬಿದ್ರಿ
    ಮೂಲದಲ್ಲೇ ಹಸಿ ತ್ಯಾಜ್ಯ ಸಂಸ್ಕರಿಸುವ ತಂತ್ರಜ್ಞಾನಕ್ಕೆ ಒತ್ತು ನೀಡುವ ಪ್ರಯತ್ನಕ್ಕೆ ಕಾಪು ಪುರಸಭೆ ಮುಂದಾಗಿದೆ.
    ಸುಮಾರು 7200ರಷ್ಟು ವಸತಿ ಹೊಂದಿರುವ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ 5 ಟನ್ ಹಸಿ ಹಾಗೂ 5 ಟನ್ ಘನತ್ಯಾಜ್ಯ ಸಂಗ್ರಹವಾಗುತ್ತಿದ್ದು, ಸೂಕ್ತ ಸ್ಥಳಾವಕಾಶವಿಲ್ಲದೆ ಅದನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಜನರಿಗೆ ಅರಿವು ಮೂಡಿಸಿ ಪೈಪ್ ಕಾಂಪೋಸ್ಟ್ ತಂತ್ರಜ್ಞಾನಕ್ಕೆ ಪ್ರೇರೇಪಿಸುವ ಯೋಜನೆಗೆ ಮನ ಮಾಡಿರುವ ಕಾಪು ಪುರಸಭೆ, ಈಗಾಗಲೇ 10 ಮನೆಗಳಲ್ಲಿ ಇದನ್ನು ಅನುಷ್ಠಾನಿಸಿದೆ. ಪುರಸಭೆಯ ಮೂವರು ಸಿಬ್ಬಂದಿ ದಿನಕ್ಕೆ 10 ಮನೆಗಳಿಗೆ ಭೇಟಿ ನೀಡಿ ಪೈಪ್ ಕಾಂಪೋಸ್ಟ್ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ಲಭ್ಯವಾಗುತ್ತಿದೆ. ಈ ತಿಂಗಳಲ್ಲಿ 300 ಹಾಗೂ 3 ತಿಂಗಳೊಳಗೆ 3000 ಮನೆಗಳಲ್ಲಿ ಯೋಜನೆ ಅನುಷ್ಠಾನಿಸುವ ಪ್ರಯತ್ನ ನಡೆದಿದೆ. ಇದಲ್ಲದೆ ಪುರಸಭೆ ವ್ಯಾಪ್ತಿಯ 34 ಹೋಟೆಲ್‌ನವರಿಗೂ ಯೋಜನೆ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಪುವಿನಲ್ಲಿರುವ 11 ವಸತಿ ಸಂಕೀರ್ಣಗಳಲ್ಲೂ ಯೋಜನೆ ಅನುಷ್ಠಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಯಲಿದೆ.

    ತ್ಯಾಜ್ಯ ವಿಲೇವಾರಿಯೇ ಸಮಸ್ಯೆ: ಪುರಸಭೆ ವ್ಯಾಪ್ತಿಯಲ್ಲಿ ಸೂಕ್ತ ಸರ್ಕಾರಿ ಜಮೀನು ಕೊರತೆಯಿಂದ ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿ 66ರ ಕಾಪು ರುದ್ರಭೂಮಿ ಬಳಿ ಪ್ರತ್ಯೇಕಿಸಿ ಶೇಖರಿಸಿಡಲಾಗುತ್ತಿದೆ. ಒಂದೂವರೆ ವರ್ಷದಿಂದ 500 ಟನ್‌ಗೂ ಅಧಿಕ ಪ್ರಮಾಣದ ತ್ಯಾಜ್ಯ ಇಲ್ಲಿ ಸಂಗ್ರಹವಾಗಿದೆ. ಪರಿಣಾಮ ದೇವಸ್ಥಾನ, ಶಾಲೆ ಹೊಂದಿರುವ ಈ ಭಾಗದಲ್ಲಿ ಸಾಕಷ್ಟು ತೊಂದರೆಗಳಾಗುತ್ತಿವೆ. ಈ ಹಿಂದೆ ಶೇಖರಣೆಯಾದ ತ್ಯಾಜ್ಯ ಎಲ್ಲೆಂದರಲ್ಲಿ ಸಾಗಿಸಿ ವಿಲೇವಾರಿ ಮಾಡುವ ಪರಿಸ್ಥಿತಿ ಎದುರಾಗಿತ್ತು. ಅದನ್ನು ಮನಗಂಡ ಜಿಲ್ಲಾಡಳಿತ ಕಾಪು ಪುರಸಭೆಗೆ ಘನತ್ಯಾಜ್ಯ ಸಂಸ್ಕರಣೆ ಘಟಕ ನಿರ್ಮಾಣಕ್ಕಾಗಿ ಎಲ್ಲೂರು ಗ್ರಾಪಂ ವ್ಯಾಪ್ತಿಯ ಉಳ್ಳಾಲ ಕಾಡು ಪ್ರದೇಶದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿತ್ತು. ಅಲ್ಲಿ ಆವರಣ ಗೋಡೆ ನಿರ್ಮಾಣ ಪ್ರಗತಿಯಲ್ಲಿದ್ದು, ಎರಡು ತಿಂಗಳೊಳಗೆ ಅದು ಪೂರ್ಣಗೊಳ್ಳಲಿದೆ. ಬಳಿಕ ಅತ್ಯಾಧುನಿಕ ರೀತಿಯಲ್ಲಿ ಘನತ್ಯಾಜ್ಯ ಸಂಸ್ಕರಣೆ ಘಟಕ ನಿರ್ಮಾಣವಾಗಲಿದೆ.

    ಘನತ್ಯಾಜ್ಯ ಸಾಗಾಟ, ದುಬಾರಿ ವೆಚ್ಚ: ಬೆಳಗಾವಿ, ಬಾಗಲಕೋಟೆ, ಕಲಬುರಗಿ ಮತ್ತು ಗುಜರಾತ್‌ನಲ್ಲಿನ ಸಿಮೆಂಟ್ ಉತ್ಪಾದನಾ ಘಟಕಗಳಲ್ಲಿ ಘನತ್ಯಾಜ್ಯವನ್ನು ಸಿಮೆಂಟ್ ಉತ್ಪಾದನೆಗೆ ಮರುಬಳಕೆ ಮಾಡಲಾಗುತ್ತಿದೆ. ಹತ್ತಿರದಲ್ಲಿ ಸಿಮೆಂಟ್ ಘಟಕವಿಲ್ಲದೆ ದೂರದ ಬೆಳಗಾವಿ ಘಟಕಕ್ಕೆ ಘನತ್ಯಾಜ್ಯ ಸಾಗಿಸಬೇಕಾದ ಪರಿಣಾಮ ಸಾಗಾಣಿಕೆಗೆ ದುಬಾರಿ ವೆಚ್ಚ ಭರಿಸಬೇಕಾಗುತ್ತದೆ. ಇದು ಪುರಸಭೆಗೆ ಹೊರೆಯಾಗಲಿದೆ.

    ಮನೆಯ ಲಭ್ಯ ಸ್ಥಳ, ಕಡಿಮೆ ಖರ್ಚು: ಮನೆಯಲ್ಲಿ ಲಭ್ಯವಿರುವ ಕಡಿಮೆ ಸ್ಥಳದಲ್ಲಿಯೇ ಕಡಿಮೆ ವೆಚ್ಚದಲ್ಲಿ ಪೈಪ್ ಕಾಂಪೋಸ್ಟ್ ಘಟಕ ಅನುಷ್ಠಾನಿಸಬಹುದು. ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಸಿಮೆಂಟ್ ಅಥವಾ ಪಿವಿಸಿ 2 ಪೈಪುಗಳನ್ನು ಬಳಸಿ ಕೇವಲ 600 ರೂ. ವೆಚ್ಚದಲ್ಲಿ ಪೈಪ್ ಕಾಂಪೋಸ್ಟ್ ಸಿದ್ಧಪಡಿಸಬಹುದು. ಪೈಪ್‌ನಲ್ಲಿ ಸುರಿಯುವ ಹಸಿತ್ಯಾಜ್ಯಕ್ಕೆ ಬೆಲ್ಲ, ಸೆಗಣಿ ಹಾಗೂ ಮಣ್ಣು ಬೆರೆಸಿದಲ್ಲಿ ಉತ್ತಮ. ಪೈಪ್‌ನಲ್ಲಿ ಕೊಳೆತು 40 ದಿನಗಳಲ್ಲಿ ಕಾಂಪೋಸ್ಟ್ ಸಿದ್ಧವಾಗುವ ಮೂಲಕ ಬಳಕೆಗೆ ಯೋಗ್ಯವಾಗಲಿದೆ.

    ಪುರಸಭೆಯ ಗ್ರಾಮೀಣ ಪ್ರದೇಶಗಳಿಂದ ತ್ಯಾಜ್ಯ ಸಂಗ್ರಹಿಸಿ ತಂದು ನಗರ ಪ್ರದೇಶದಲ್ಲಿ ಸಮಸ್ಯೆಯಾಗುವುದನ್ನು ತಪ್ಪಿಸಲು ಜನರಿಗೆ ಮನದಟ್ಟು ಮಾಡಿ ಪೈಪ್ ಕಾಂಪೋಸ್ಟ್ ಅನುಷ್ಠಾನಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಹಸಿ ತ್ಯಾಜ್ಯ ಸಂಗ್ರಹ ಪ್ರಮಾಣ ಕಡಿಮೆಗೊಳಿಸಲಾಗುತ್ತಿದೆ. ಯಾರಿಗೂ ಒತ್ತಡ ಹೇರದೆ, ಮೂರು ತಿಂಗಳಲ್ಲಿ ಸುಮಾರು 3000 ಮನೆಗಳಲ್ಲಿ ಪೈಪ್ ಕಾಂಪೋಸ್ಟ್ ಅನುಷ್ಠಾನಿಸುವ ಪ್ರಯತ್ನ ನಮ್ಮದಾಗಿದೆ. 2019 ಅ.10ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿರುವ ಘನತ್ಯಾಜ್ಯ ನಿರ್ವಹಣಾ ಮಾದರಿ ಉಪನಿಯಮಗಳನ್ನು ಜಾರಿ ಮಾಡಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆಯಂತೆ ಬಯೋಮೆಥನೇಶನ್ ಮತ್ತು ಕಾಂಪೋಸ್ಟಿಂಗ್‌ನಂಥ ಕೊಳೆಯಬಹುದಾದ ತ್ಯಾಜ್ಯ ವಿಕೇಂದ್ರಿಕೃತ ಸಂಸ್ಕರಣಾ ಘಟಕ ಅಳವಡಿಕೆ ಮತ್ತು ಯುಕ್ತ ತ್ಯಾಜ್ಯ ಉತ್ಪಾದಕರಿಗೆ ಪ್ರಶಸ್ತಿ ನೀಡುವ ಕಾರ್ಯ ನಗರ ಸ್ಥಳೀಯ ಸಂಸ್ಥೆ ಮಾಡಲಿದೆ.
    -ವೆಂಕಟೇಶ ನಾವಡ, ಕಾಪು ಪುರಸಭೆ ಮುಖ್ಯಾಧಿಕಾರಿ

    ಮನೆಯಲ್ಲಿ ತೋಟವಿದ್ದು, 10 ದಿನಗಳ ಹಿಂದಷ್ಟೇ ಪೈಪ್ ಕಾಂಪೋಸ್ಟ್ ಅಳವಡಿಸಲಾಗಿದೆ. ಹಸಿ ತ್ಯಾಜ್ಯ ಸಂಗ್ರಹಕ್ಕೆ ಸಾಕಷ್ಟು ಸಮಸ್ಯೆಗಳಿವೆ. ಎಲ್ಲರೂ ಪೈಪ್ ಕಾಂಪೋಸ್ಟ್ ಅಳವಡಿಸಿದಲ್ಲಿ ಅವರಿಗೂ ಹಾಗೂ ಪುರಸಭೆಗೂ ಅನುಕೂಲವಾಗಲಿದೆ. ಮನೆಗಳಲ್ಲಿನ ಗಿಡ ಮರಗಳಿಗೂ ಉತ್ತಮ ಗೊಬ್ಬರ ಲಭ್ಯವಾಗಲಿದೆ.
    ಶಾಬು ಸಾಹೇಬ್, ಕಾಪು ಪುರಸಭೆ ಕುಡ್ತಿಮಾರ್ ವಾರ್ಡ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts